ಒಂದೆರಡು ದಿನಗಳಿಂದ ಕನ್ನಡದ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಂತು ಕಾಯುವಂತೆ ಪಡ್ಡೆಹುಲಿ ಚಿತ್ರದ ಟ್ರೇಲರ್ ಮಾಡಿತ್ತು. ಪುನೀತ್ ರಾಜ್ ಕುಮಾರ್ ಅವರ ಪಾತ್ರ ಎಂಥಾದ್ದೆಂಬುದನ್ನು ರಿವೀಲ್ ಮಾಡುತ್ತದೆ ಎಂಬ ಕಾರಣದಿಂದ ಎಲ್ಲರೂ ಪಡ್ಡೆಹುಲಿಯ ಎರಡನೇ ಟ್ರೇಲರಿಗಾಗಿ ಕಾದು ಕೂತಿದ್ದರು. ಇದೀಗ ಆ ಟ್ರೇಲರ್ ಬಿಡುಗಡೆಗೊಂಡಿದೆ.
ಇದು ಪಕ್ಕಾ ಫೋರ್ಸ್ ಹೊಂದಿರೋ ಟ್ರೇಲರ್. ಪಡ್ಡೆಹುಲಿಗೆ ಸಾಥ್ ನೀಡಿರೋ ಅಷ್ಟೂ ಸ್ಟಾರ್ ನಟರು ಧ್ವನಿಯ ಮೂಲಕ,ದೃಶ್ಯದ ಮೂಲಕ ಈ ಟ್ರೇಲರ್ ಅನ್ನು ಮೋಹಕವಾಗಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಯಾವ ಥರದ ಪಾತ್ರದಲ್ಲಿ ನಟಿಸಿದ್ದಾರೆಂಬ ಅಂದಾಜು ಕೂಡಾ ಪ್ರೇಕ್ಷಕರಿಗೆ ಸಿಕ್ಕಿದ್ದು, ಪುನೀತ್ ಈ ಸಿನಿಮಾದೊಳಗೆ ನಡೆಯೋ ರಿಯಾಲಿಟಿ ಶೋ ಒಂದರ ಅತಿಥಿಯಾಗಿ ಆಗಮಿಸಿರಬಹುದಾ ಎಂಬಂಥಾ ಸುಳಿವೂ ಪತ್ತೆಯಾಗಿದೆ!
ಕ್ರೇಜಿಸ್ಟಾರ್ ರವಿಚಂದ್ರನ್, ರಕ್ಷಿತ್ ಶೆಟ್ಟಿ ಮತ್ತು ಪುನೀತ್ ಸ್ಫೂರ್ತಿದಾಯಕ ಮಾತುಗಳ ಮೂಲಕವೇ ಪಡ್ಡೆಹುಲಿಗೆ ಕಿಚ್ಚು ತುಂಬಿಸಿದ್ದಾರೆ. ಎಂ.ರಮೇಶ್ ರೆಡ್ಡಿ ತೇಜಸ್ವಿನಿ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಾಣ ಮಾಡಿರುವ ಚಿತ್ರ ಪಡ್ಡೆಹುಲಿ. ಇದೇ ಏಪ್ರಿಲ್ ಹತ್ತೊಂಬತ್ತರಂದು ಬಿಡುಗಡೆಯಾಗಲಿರೋ ಈ ಚಿತ್ರದಲ್ಲಿ ಮತ್ತೋರ್ವ ಪವರ್ ಫುಲ್ ಸ್ಟಾರ್ ಪಡ್ಡೆಹುಲಿಗೆ ಜೊತೆಯಾಗಿ ನಟಿಸಲಿದ್ದಾರೆಂಬ ಬಗ್ಗೆ ಸುದ್ದಿಯಾಗಿತ್ತು. ಅವರ್ಯಾರು, ಅವರ ಪಾತ್ರವೇನೆಂಬುದನ್ನು ಈ ಟ್ರೇಲರ್ ಅನಾವರಣಗೊಳಿಸಿದೆ.
ಯಂಗ್ ಟೈಗರ್ ಶ್ರೇಯಸ್ ಈ ಚಿತ್ರದಲ್ಲಿ ಎನರ್ಜಿಟಿಕ್ ಪಾತ್ರವೊಂದಕ್ಕೆ ಜೀವ ತುಂಬಿರೋದಕ್ಕೂ ಈ ಟ್ರೇಲರ್ ಸಾಕ್ಷಿಯೊದಗಿಸಿದೆ. ವಿಶಿಷ್ಟವಾದೊಂದು ಕಾಲೇಜು ಸ್ಟೋರಿ, ಹಾಗೂ ಶ್ರೇಯಸ್ ಮಾಸ್ ಲುಕ್ಕಿನಲ್ಲಿ ಅಬ್ಬರಿಸಿರೋ ಪರಿ ಕಂಡು ಪ್ರೇಕ್ಷಕರು ಬೆರಗಾಗಿದ್ದಾರೆ. ಈ ಮೂಲಕ ನಿರ್ದೇಶಕ ಗುರು ದೇಶಪಾಂಡೆ ಅವರ ಶ್ರಮ ಕೂಡಾ ಸಾರ್ಥಕವಾದಂತಾಗಿದೆ.