ಯಂಗ್ ಟೈಗರ್ ಶ್ರೇಯಸ್ ನಾಯಕನಾಗಿ ನಟಿಸಿರುವ ಪಡ್ಡೆಹುಲಿ ಚಿತ್ರ ಇದೇ ತಿಂಗಳ ಹತ್ತೊಂಬತ್ತರಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಈ ಕಡೆ ಘಳಿಗೆಯಲ್ಲಿ ಈ ಸಿನಿಮಾ ಬಗ್ಗೆ ಮತ್ತಷ್ಟು ಕುತೂಹಲ ಹುಟ್ಟುವಂಥಾದ್ದೊಂದು ಸುದ್ದಿಯನ್ನು ನಿರ್ದೇಶಕ ಗುರು ದೇಶಪಾಂಡೆ ಬಿಟ್ಟು ಕೊಟ್ಟಿದ್ದಾರೆ. ಇದು ಶ್ರೇಯಸ್ ಅವರ ಮೊದಲ ಚಿತ್ರ. ಆದರೆ ಅವರಿಗೆ ಈಗಾಗಲೇ ರಕ್ಷಿತ್ ಶೆಟ್ಟಿ, ರವಿಚಂದ್ರನ್ ಮುಂತಾದ ಸ್ಟಾರ್ ನಟರು ಜೊತೆಯಾಗಿದ್ದಾರೆ. ಮತ್ತೋರ್ವ ಸ್ಟಾರ್ ಕೂಡಾ ಪಡ್ಡೆಹುಲಿಗೆ ಸಾಥ್ ನೀಡಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಹರಡಿಕೊಂಡಿತ್ತು. ಅದು ನಾಳೆ ಬಿಡುಗಡೆಯಾಗಲಿರೋ ಎರಡನೇ ಟ್ರೇಲರ್ ಮೂಲಕ ಅನಾವರಣಗೊಳ್ಳಲಿದೆ.
ಅಂದಹಾಗೆ, ಪಡ್ಡೆಹುಲಿಗೆ ಜೊತೆಯಾಗಿರುವ ಮತ್ತೋರ್ವ ಸ್ಟಾರ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಅವರು ಈ ಸಿನಿಮಾದಲ್ಲಿ ಪವರ್ ಫುಲ್ ಆಗಿರೋ ಒಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರಂತೆ. ಒಂದು ಹಾಡಿನ ಮೂಲಕ ಯುವ ಸಮುದಾಯಕ್ಕೆ ಜೋಶ್ ತುಂಬುವ ಗೆಟಪ್ಪಿನಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಪಡ್ಡೆಹುಲಿ ಚಿತ್ರದ ಕಡೇ ಭಾಗದ ಹದಿನೈದು ನಿಮಿಷಗಳ ಕಾಲ ಪುನೀತ್ ಅವರ ಪಾತ್ರವಿರಲಿದೆ. ನಿಜಕ್ಕೂ ಅವರ ಪಾತ್ರವೇನು ಎಂಬ ಒಂದು ಅಂದಾಜು ನಾಳೆ ಪಿಆರ್ಕೆ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿರುವ ಟ್ರೇಲರ್ ಮೂಲಕ ಸಿಗಲಿದೆ.
ಈ ಮೂಲಕ ನಿರ್ದೇಶಕ ಗುರು ದೇಶಪಾಂಡೆ ನಿರ್ಮಾಪಕ ಎಂ ರಮೇಶ್ ರೆಡ್ಡಿಯವರ ಸಂಪೂರ್ಣ ಸಹಕಾರದೊಂದಿಗೆ ಪಡ್ಡೆಹುಲಿಯನ್ನು ಸ್ಟಾರ್ ಮಯವಾಗಿಸಿದ್ದಾರೆ. ಹೀಗೆ ಸ್ಟಾರ್ ನಟರು ನಟಿಸಬೇಕೆಂದರೆ ಕಥೆಯಲ್ಲಿಯೇ ಅದಕ್ಕೆ ಅವಕಾಶ ವಿದ್ದರೆ ಮಾತ್ರವೇ ಸಹಜವಾಗಿ ಮೂಡಿ ಬರುತ್ತೆ. ಪಡ್ಡೆಹುಲಿ ಕಥೆಯೂ ಅದಕ್ಕೆ ತಕ್ಕುದಾಗಿದೆ. ಆದ್ದರಿಂದಲೇ ಪುನೀತ್ ರಾಜ್ ಕುಮಾರ್ ಕೂಡಾ ಪವರ್ ಫುಲ್ ಆಗಿರೋ ಪಾತ್ರವೊಂದರಲ್ಲಿ ನಟಿಸಿದ್ದಾರೆಂಬ ಖುಷಿಯನ್ನು ಗುರು ದೇಶಪಾಂಡೆ ಹಂಚಿಕೊಂಡಿದ್ದಾರೆ.
ರಕ್ಷಿತ್ ಶೆಟ್ಟಿ ಕಾಲೇಜಿನ ಸೀನಿಯರ್ ಆಗಿ ಕಬಡ್ಡಿ ಕಣದಲ್ಲಿ ಪಡ್ಡೆಹುಲಿಗೆ ಜೊತೆಯಾಗಿದ್ದಾರೆ. ಹಾಗಾದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಯಾವ ಪಾತ್ರ ನಿರ್ವಹಿಸಿದ್ದಾರೆಂಬ ಪ್ರಶ್ನೆಗೆ ನಾಳೆ ಉತ್ತರ ಸಿಗಲಿದೆ. ಆದರೆ ಮೊದಲ ಚಿತ್ರದಲ್ಲಿಯೇ ಯಂಗ್ ಟೈಗರ್ ಶ್ರೇಯಸ್ ಅವರಿಗೆ ಸಿಗುತ್ತಿರೋ ಸ್ಟಾರ್ ನಟರ ಬೆಂಬಲ ಕಂಡು ಎಲ್ಲರೂ ಬೆರಗಾಗಿದ್ದಾರೆ. ಅಂಥಾದ್ದೇ ಒಂದು ಬೆರಗು ಪಡ್ಡೆ ಹುಲಿಯನ್ನು ನೋಡಿದ ಪ್ರತಿಯೊಬ್ಬರ ಕಣ್ಣುಗಳಲ್ಲಿಯೂ ಮಿರುಗಲಿದೆ ಎಂಬ ಭರವಸೆ ಚಿತ್ರತಂಡದಲ್ಲಿದೆ.
No Comment! Be the first one.