ಮಂಡ್ಯ ಲೋಕಸಭಾ ಚುನಾವಣಾ ಕಣಕ್ಕೂ ಕನ್ನಡ ಚಿತ್ರರಂಗಕ್ಕೂ ನೇರ ಕನೆಕ್ಷನ್ನು ಸೃಷ್ಟಿಯಾಗಿ ಬಿಟ್ಟಿದೆ. ರಾಜಕಾರಣಿಗಳೂ ಕೂಡಾ ನಟರನೇಕರನ್ನು ಕಣಕ್ಕೆಳೆದು ತಂದು ಆರೋಪ ಪ್ರತ್ಯಾರೋಪಗಳ ಸುರಿಮಳೆಗರೆಯುತ್ತಿದ್ದಾರೆ. ಅದರಲ್ಲಿಯೂ ಸಂಸದ ಶಿವರಾಮೇಗೌಡರು ಅಖಾಡಕ್ಕಿಳಿದಿದ್ದಾರೆಂದ ಮೇಲೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗದಿರಲು ಸಾಧ್ಯವೇ?
ನಿಖಿಲ್ ಕುಮಾರಸ್ವಾಮಿ ಪರವಾಗಿ ಪ್ರಚಾರ ನಡೆಸುತ್ತಿರುವ ಶಿವರಾಮೇಗೌಡರು, ಸುಮಲತಾ ಅಂಬರೀಶ್ ವಿರುದ್ಧ ವಾಗ್ಬಾಣ ಪ್ರಯೋಗ ಮಾಡುತ್ತಲೇ ಅವರ ಬೆಂಬಲಕ್ಕೆ ನಿಂತಿರೋ ದರ್ಶನ್ ಮತ್ತು ಯಶ್‌ಗೂ ಅಮರಿಕೊಂಡಿದ್ದಾರೆ. ಈ ಬರದಲ್ಲಿ ವಿನಾಕಾರಣ ಸ್ಟಾರ್ ನಟರ ನಡುವೆಯೇ ತಂದಿಕ್ಕಿ ಅಭಿಮಾನಿಗಳ ನಡುವೆ ತಂದಿಕ್ಕುವಂಥಾ ಮಾತನ್ನೂ ಆಡಿದ್ದಾರೆ!
ಯಶ್ ಮತ್ತು ದರ್ಶನ್ ಪುನೀತ್ ರಾಜ್ ಕುಮಾರ್ ಅವರಿಗಿಂತಲೂ ದೊಡ್ಡ ನಟರಾ? ಪುನೀತ್ ರಾಜ್ ಕುಮಾರ್ ಅವರೇ ತಮ್ಮ ಪಾಡಿಗೆ ತಾವಿದ್ದಾರೆ. ಹಾಗಿರೋವಾಗ ಇವರೇಕೆ ಪ್ರಚಾರಕ್ಕೆ ಬಂದಿದ್ದಾರೆ ಎಂಬರ್ಥದಲ್ಲಿ ಮಾತಾಡಿದ್ದಾರೆ. ಇದು ದರ್ಶನ್ ಅಭಿಮಾನಿಗಳೂ ಕೆರಳುವಂತೆ ಮಾಡಿದೆ. ಪುನೀತ್ ಇಂಥಾ ಸಹವಾಸವೇ ಬೇಡ ಅಂತ ತಾವಾಯಿತು ತಮ್ಮ ನಟನೆಯಾಯ್ತು ಎಂಬಂತಿದ್ದಾರೆ. ಆದರೆ ಶಿವರಾಮೇಗೌಡರು ವಿನಾಕಾರಣ ಅವರ ಹೆಸರನ್ನು ಎಳೆದು ತಂದಿರೋದರ ಬಗ್ಗೆ ಅಪ್ಪು ಅಭಿಮಾನಿಗಳೂ ಕೂಡಾ ಸಿಟ್ಟಾಗಿದ್ದಾರೆ.
ಶಿವರಾಮೇಗೌಡರ ಇಂಥಾ ಲೂಸ್ ಟಾಕ್‌ಗಳಿಂದ ನಿಖಿಲ್ ಗೆ ಡ್ಯಾಮೇಜ್ ಆಗಬಹುದೇ ಹೊರತು ಲಾಭವೇನಿಲ್ಲ. ಯಾಕೆಂದರೆ, ಇವರ ವಿರುದ್ಧ ಅಂಬಿ ಅಭಿಮಾನಿಗಳಂತೂ ಕೊತ ಕೊತನೆ ಕುದಿಯುತ್ತಿದ್ದಾರೆ. ಒಂದು ಕಾಲದಲ್ಲಿ ಅಂಬಿ ಪದತಲದಲ್ಲಿ ಅಂಬೆಗಾಲಿಟ್ಟು ಕುಕ್ಕರಿಸಿ ಆಶೀರ್ವಾದ ಪಡೆದಿದ್ದ ಶಿವರಾಮೇಗೌಡ ಅಂಬಿ ವಿರುದ್ಧವೇ ಅವಹೇಳನಕಾರಿಯಾಗಿ ಮಾತಾಡಿದ್ದರು. ಅಂತೂ ಇಂಥವರ ದೆಸೆಯಿಂದಲೇ ಮಂಡ್ಯ ಕಣ ಕ್ಷಣ ಕ್ಷಣವೂ ಕಾವೇರಿಸಿಕೊಳ್ಳುತ್ತಿದೆ!
Leave a Reply
You must be logged in to post a comment.