ಪ್ರಭಾಸ್‌ ಅಭಿನಯದ ರಾಧೆ ಶ್ಯಾಮ್‌ ಸಿನಿಮಾದಲ್ಲಿ ಆತ ದೊಡ್ಡ ಜ್ಯೋತಿಷಿಯಾಗಿರುತ್ತಾನೆ. ಯಾರದ್ದೇ ಹಸ್ತ ರೇಖೆಗಳನ್ನು ನೋಡಿ ಅವರ ಭವಿಷ್ಯವನ್ನು ಕರಾರುವಕ್ಕಾಗಿ ತೆರೆದಿಡುತ್ತಾನೆ. ಈತ ಕೊಟ್ಟ ಮುನ್ಸೂಚನೆಗಳೆಲ್ಲಾ ಚಾಚೂ ತಪ್ಪದೆ ನಿಜವಾಗುತ್ತಿರುತ್ತವೆ. ಜ್ಯೋತಿಷ್ಯವೆನ್ನುವುದು ವಿಜ್ಞಾನವನ್ನು ಮೀರಿದ್ದು ಅಂತಾ ಹೇಳಲು ಹೊರಟ ಸಿನಿಮಾವದು. ದುರಂತವೆಂದರೆ ಈ ಸಿನಿಮಾ ಬಕ್ಕ ಬೋರಲು ಬಿದ್ದಿದೆ. ಇನ್ನೂ ಆಶ್ಚರ್ಯವೆಂದರೆ, ಈಗ ಪ್ರಭಾಸನ ಭವಿಷ್ಯದ ಕುರಿತಾಗಿ ಜ್ಯೋತಿಷಿಯೊಬ್ಬ ಸೂಚನೆ ನೀಡಿದ್ದಾನೆ.

ಹೈದರಾಬಾದಿನಲ್ಲಿ ವೇಣು ಸ್ವಾಮಿ ಎಂಬ ಜ್ಯೋತಿಷಿಯಿದ್ದಾನೆ. ರಾಜಕೀಯ ಮತ್ತು ಸಿನಿಮಾ ವಲಯಗಳಲ್ಲಿ ಈತನಿಗೆ ಒಂದು ರೀತಿಯಲ್ಲಿ ಸ್ಟಾರ್‌ ವರ್ಚಸ್ಸಿದೆ. ಈತ ಹೇಳಿದ್ದೆಲ್ಲಾ ನಿಜವಾಗುತ್ತದೆ ಎನ್ನುವ ವಾತಾವರಣ ಅಲ್ಲಿದೆ. ಇಂಥ ವೇಣುಸ್ವಾಮಿ ಈಗ ಢಮಾರ್‌ ಅಂತಾ ಬಾಂಬು ಸಿಡಿಸಿದ್ದಾನೆ. ಆತನ ಪ್ರಕಾರ ಪ್ರಭಾಸ್‌ ಮುಂದಿನ ಸಿನಿಮಾಗಳು ದಬ್ಬಾಕಿಕೊಳ್ಳಲಿವೆಯಂತೆ. “ವೃತ್ತಿ ಜೀವನದಲ್ಲಿ ಸಾಕಷ್ಟು ಸವಾಲುಗಳು ಎದುರಾಗಲಿವೆ…’’ ಎಂದೆಲ್ಲಾ ಭವಿಷ್ಯ ನುಡಿದಿದ್ದಾನೆ. ಇದನ್ನು ಕೇಳಿದ ಅಲ್ಲಿನ ನಿರ್ಮಾಪಕರು ಪ್ರಭಾಸ್‌ ಮೇಲೆ ಇನ್ವೆಸ್ಟ್‌ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಒಂದು ವೇಳೆ ಪ್ರಭಾಸ್‌ಗೆ ಆಗದವರು ಯಾರೋ ಸುಪಾರಿ ಕೊಟ್ಟು ಜ್ಯೋತಿಷಿ ಬಾಯಲ್ಲಿ ಹೀಗೆ ಹೇಳಿಸಿರಲಿಕ್ಕೂ ಸಾಕು. ಆದರೆ ಅವೆಲ್ಲ ಮೂಢ ನಂಬಿಕೆಯೇ ಮೆರೆಯುತ್ತಿರುವ ಸಿನಿಮಾದವರಿಗೆ ಅರ್ಥವಾಗಬೇಕಲ್ಲಾ?

ಇದೇ ವೇಣು ಸ್ವಾಮಿ ಸಮಂತಾ ನಾಗಚೈತನ್ಯ ಮದುವೆಯಾದಾಗ ‘ಇನ್ನು ಎಣಿಸಿ ಮೂರು ವರ್ಷಗಳಲ್ಲಿ ಇವರಿಬ್ಬರ ಸಂಬಂಧ ಮುರಿದು ಬೀಳಲಿದೆ. ಪರಸ್ಪರರು ಬೇರೆ ಆಗುತ್ತಾರೆʼ ಅಂತಾ ನಾಸಬಾಯಿ ನುಡಿದಿದ್ದ. ಆತ ಹೇಳಿದಂತೇ ಆಗಿದ್ದು ಸದ್ಯ ವೇಣು ಸ್ವಾಮಿಯ ವರ್ಚಸ್ಸು ಹೆಚ್ಚಿಸಿದೆ.

ಅದೇನು ದುರಾದೃಷ್ಟವೋ ಗೊತ್ತಿಲ್ಲ. ಬಾಹುಬಲಿ ಸಿನಿಮಾದ ಸೂಪರ್‌ ಸಕ್ಸಸ್‌ ನಂತರ ಪ್ರಭಾಸನ ನಸೀಬೇ ನೆಟ್ಟಗಿದ್ದಂತಿಲ್ಲ. ಇದೇ ಪ್ರಭಾಸ್‌ ಅಭಿನಯಿಸಿದ್ದ ಸಾಹೋ ಸಿನಿಮಾ ಶೋಚನೀಯ ಸೋಲು ಕಂಡಿತ್ತು. ಈಗ ರಾಧೆ ಶ್ಯಾಮ್‌ ಕೂಡಾ ಫ್ಲಾಪ್‌ ಆಗಿದೆ. ಇದು ಪ್ರಭಾಸ್ ಆಯ್ಕೆಯಲ್ಲಿನ ದೋಷ ಅನ್ನೋದು ಮೇಲ್ನೋಟಕ್ಕೆ ಕಾಣುತ್ತಿರುವ ಸತ್ಯ. ಇದನ್ನು ಮೀರಿ ಆತನ ಹಣೇಬರಹ ಕೂಡಾ ಕೆಟ್ಟಿದ್ದರೆ ಯಾರೇನು ಮಾಡಲು ಸಾಧ್ಯ?

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಮಗನ ಮದುವೆ ತಯಾರಿಯಲ್ಲಿದ್ದವರು….

Previous article

ಕೆ.ಜಿ.ಎಫ್.‌ ಚಿನ್ನದ ಗಣಿಗಿಂತಾ ಅಪಾಯಕಾರಿ!

Next article

You may also like

Comments

Leave a reply

Your email address will not be published. Required fields are marked *