ಭಾರತ ಚಿತ್ರರಂಗದ ದೈತ್ಯ ಪ್ರತಿಭೆ ಪ್ರಭುದೇವಾ. ಅವರ ತಂದೆ ಮೂಗೂರು ಸುಂದರಂ ಕೂಡಾ ಅದೇ ತೂಕದ ವ್ಯಕ್ತಿ. ದಕ್ಷಿಣ ಭಾರತದ ಮೂವರು ಮುಖ್ಯಮಂತ್ರಿಗಳಿಗೆ ಡ್ಯಾನ್ಸ್ ಹೇಳಿಕೊಟ್ಟವರು. ಸಾವಿರಾರು ಸಿನಿಮಾಗಳಿಗೆ ನೃತ್ಯ ನಿರ್ದೇಶನ ಮಾಡಿದವರು. ಮುತ್ತಿನಂಥಾ ಮೂವರು ಮಕ್ಕಳನ್ನು ಚಿತ್ರರಂಗದ ಮುಕುಟಗಳನ್ನಾಗಿಸಿದವರು. ಸದ್ಯ ಹುಟ್ಟಿದ ಊರಿಗೆ ವಾಪಾಸು ಬಂದು, ನೆಲದ ಸೇವೆಯಲ್ಲಿ ತೊಡಗಿದ್ದಾರೆ. ಇಂಥ ಸುಂದರಂ ಮಾಸ್ಟರ್ ಮೊನ್ನೆ ನಮ್ಮ ಹೆಮ್ಮೆಯ, ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಅವರ ಮನೆಗೆ ಭೇಟಿ ನೀಡಿದ್ದರು. ಯಾಕೆ? ಏನು ಅನ್ನೋದನ್ನೆಲ್ಲಾ ಸ್ವತಃ ಜಿ.ಕೆ. ಬರೆದಿದ್ದಾರೆ. ಓದಿಬಿಡಿ…
ಒಂದು ದೃಶ್ಯವನ್ನು ಕಲ್ಪಿಸಿ ನೋಡಿ : ಮಗ ‘ಪದ್ಮಶ್ರೀ’ ಪುರಸ್ಕಾರ ಪಡೆಯಲು ರಾಷ್ಟ್ರಪತಿಗಳ ಮುಂದೆ ನಿಂತಿದ್ದಾನೆ, ಆತನ ಹಿಂದೆ ಜನ್ಮಕೊಟ್ಟ ತಂದೆ ಬರಿಗೈಲಿ ನಿಂತಿದ್ದಾನೆ! ಮಗನ ಹೆಸರು : ಪ್ರಭುದೇವ, ತಂದೆಯ ಹೆಸರು : ಮೂಗೂರು ಸುಂದರಂ. ಇದು ಐದಾರು ವರ್ಷಗಳ ಹಿಂದಿನ ಕಥೆ. ‘ಪದ್ಮಶ್ರೀ’ ಪುರಸ್ಕಾರಕ್ಕೆ ಮಗ ಪ್ರಭುದೇವ್ ಅರ್ಹನಲ್ಲ ಅಂತಲ್ಲ, ಆದರೆ ಅವರ ತಂದೆ ಮೂಗೂರು ಸುಂದರಂ ಸ್ವತಃ ಲೆಜೆನ್ಡ್. ಯಾವ ತಕ್ಕಡಿಯಲ್ಲಿ ಹಾಕಿ ತೂಗಿದರೂ ಮಗನಿಗಿಂತಲೂ ಹೆಚ್ಚು ತೂಗತ್ತೆ ತಂದೆಯ ಸಾಧನೆ…
ಮೊನ್ನೆ ದಿಢೀರನೇ ನಮ್ಮ ‘ಅಮ್ಮನ ಮನೆ’ಗೆ ಬಂದಿಳಿದ ಈ ಲೆಜೆಂಡ್ ಸಾಧಕನನ್ನು ನೋಡಿ ಆಶ್ಚರ್ಯವಾಯಿತು. ನನ್ನ ಮಿತ್ರ ದೇವಾನಂದ ಅವರ ಜತೆ ಬಂದಿದ್ದರು ಮೂಗೂರು ಸುಂದರಂ. ಕಾರಣ ಕೇಳಿದರೆ ದೇವಾನಂದ ಹೇಳಿದರು : ‘ನಿಮ್ಮನ್ನು ನೋಡ್ಬೇಕಂತೆ. ಹಠ ಹಿಡಿದು ಬಂದಿದ್ದಾರೆ…’ – ನನ್ಗೆ ಆಶ್ಚರ್ಯವೋ ಆಶ್ಚರ್ಯ! ನಾನು ಸಾಮಾನ್ಯವಾಗಿ ಕನ್ನಡ ಚಿತ್ರರಂಗದ ಇಂಥಾ ಲೆಜೆನ್ಡ್’ಗಳನ್ನು ಹುಡುಕಿಕೊಂಡು ಅವರವರ ಮನೆ ಬಾಗಿಲಿಗೆ ಹೋಗಿದ್ದೇನೆ. ಆದರೆ, ಈಗ ಈ ಲೆಜೆನ್ಡ್ ನನ್ನನ್ನೇ ಹುಡುಕಿಕೊಂಡು ಬಂದಿದ್ದಾರೆಂದರೆ ಆಶ್ಚರ್ಯವಾಗದಿರುತ್ತದೆಯೇ?
ಒಂದು ವಾರ್ಮ್ ವೆಲ್ಕಮ್. ಶಾಲು ಹೊದಿಸಿ, ಮೈಸೂರು ಪೇಟಾ ತೊಡಿಸಿ, ‘ಶುಭಂ’ ಪುಸ್ತಕವನ್ನು ಕೈಗಿಟ್ಟು ಅಪ್ಪಿಕೊಂಡು ಬಿಟ್ಟೆ. ಆಗ ಈ ಲೆಜೆನ್ಡ್ ಹೇಳಿದ ಮಾತೇನು ಗೊತ್ತೇ? ‘ಗಣೇಶ್ ಅವರೇ, ನನ್ನ ಈ ಅರವತ್ತು ವರ್ಷಗಳ ವೃತ್ತಿ ಬದುಕಿನಲ್ಲಿ ನೂರಾರು ಪುರಸ್ಕಾರಗಳನ್ನು, ಸಾವಿರಾರು ಸನ್ಮಾನಗಳನ್ನು ಪಡೆದಿರಬಹುದು. ಆದರೆ ನೀವು ನೀಡಿದ ಈ ಗೌರವವಿದೆಯಲ್ಲಾ, ಅವೆಲ್ಲಕ್ಕಿಂತಲೂ ಹೆಚ್ಚು. ನಾನು ಧನ್ಯನಾಗಿದ್ದೇನೆ. ಥ್ಯಾಂಕ್ಯೂ ಗಣೇಶ್’ಜೀ…’ – ಏನು ಹೇಳಲಿ ಈ ಸಾಧಕನ ಔದಾರ್ಯಕ್ಕೆ?
ದಕ್ಷಿಣ ಭಾರತದ ಮೂವರು ಮುಖ್ಯಮಂತ್ರಿಗಳಿಗೆ ನೃತ್ಯ ನಿರ್ದೇಶಿಸಿದ ಕ್ರೆಡಿಟ್ ಇವರದ್ದು! ಆಶ್ಚರ್ಯವಾಯಿತೇ? ಇದು ನಿಜ. ತಮಿಳು ಚಿತ್ರರಂಗದ ಎಂ.ಜಿ.ಆರ್, ಜಯಲಲಿತಾ ಮತ್ತು ತೆಲುಗು ಚಿತ್ರರಂಗದ ಎನ್.ಟಿ.ಆರ್.ಅವರಿಗೆ ನೃತ್ಯ ನಿರ್ದೇಶಿಸಿದ್ದು ಸುಳ್ಳಲ್ಲ. ಈ ಮೂವರೂ ಮುಂದೆ ಆಯಾ ರಾಜ್ಯದ ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿದವರು! ಮೆಗಾಸ್ಟಾರ್ ಚಿರಂಜೀವಿ ಮತ್ತು ಡಾ|ರಾಜಕುಮಾರ್ ಅವರಿಗೆ ನೃತ್ಯ ಗುರುವಾಗಿದ್ದವರು ಈ ಮೂಗೂರು ಸುಂದರಂ. ‘ಹಾವಿನ ಹೆಡೆ’ಯ ‘ಬಿಸಿ ಬಿಸಿ ಕಜ್ಜಾಯ’ ಹಾಡನ್ನು ಮರೆಯೋದುಂಟಾ? 1961ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಸುಂದರಂ ಅವರಿಗೀಗ 85ರ ಹರೆಯ. ಹಿರಿಯಮಗ ರಾಜುಸುಂದರಂ, ನಡುವಿನ ಮಗ ಪ್ರಭುದೇವ, ಕಿರಿಯಮಗ ಪ್ರಸಾದ್ ಸುಂದರಂ ಕೂಡಾ ಚಿತ್ರರಂಗದ ಅವಿಭಾಜ್ಯ ಅಂಗವಾಗಿದ್ದಾರೆ.
ಈಗಲೂ ತಾವೇ ಡ್ರೈವ್ ಮಾಡುತ್ತಾ ಮೈಸೂರು ಸುತ್ತುವ ಸುಂದರಂ ಅವರು ಇದೀಗ ಟಿ.ನರಸೀಪುರದ ಮೂಗೂರಿನಲ್ಲಿ ನೆಲೆಸಿದ್ದಾರೆ. 30 ಎಕರೆ ಜಮೀನಿನಲ್ಲಿ ಉತ್ತುಬಿತ್ತಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಈ 85ರ ಹರೆಯದ ಕಲಾತಪಸ್ವಿ ಆರೋಗ್ಯವಂತರಾಗಿದ್ದಾರೆ. ಮುಂಜಾನೆ ರಾಗಿಗಂಜಿ ಕುಡಿದು ತೋಟಕ್ಕೆ ಹೊರಟರೆಂದರೆ ಹಿಂದಿರುಗುವುದು ಮಧ್ಯಾನ್ಹ ಮೂರಕ್ಕೆ! ತೋಟದಲ್ಲಿ ಟ್ರಾಕ್ಟರ್ ಓಡಿಸುವ ಕೆಲಸ ಕೂಡಾ ಇವರದ್ದೇ! ತೆಂಗು, ಮಾವು, ವ್ಯವಿಧ್ಯಮಯ ತರಕಾರಿ ಬೆಳೆದಿರುವ ಸುಂದರಂ ಆ ಅರಮನೆಯಂಥಾ ಬಂಗಲೆಯಲ್ಲಿ ತಮ್ಮ ಪ್ರೀತಿಯ ಹೆಂಡತಿಯ ಜತೆ ಸಂತೃಪ್ತ ಬದುಕು ನಡೆಸಿದ್ದಾರೆ.
ಸುಮಾರು 2000 ಸಿನಿಮಾಗಳಿಗೆ ನೃತ್ಯ ನಿರ್ದೇಶಿಸಿರುವ ಮೂಗೂರು ಸುಂದರಂ ಅವರನ್ನು ಹುಡುಕಿಕೊಂಡು ಹತ್ತಾರು ಪ್ರಶಸ್ತಿಗಳು ಬಂದಿವೆ. ಮನೆ ತುಂಬಾ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳ ರಾಶಿಯೇ ಇದೆ! ಆದರೆ ‘ಪದ್ಮ’ ಪುರಸ್ಕಾರವಿನ್ನೂ ಲಭ್ಯವಾಗಿಲ್ಲ. ಮಕ್ಕಳ ಸಾಧನೆಯ ಬಗ್ಗೆ ಹೆಮ್ಮೆ ಹೊಂದಿರುವ ಈ ಅಪ್ಪನಿಗೊಂದು ‘ಪದ್ಮಶ್ರೀ’ ಪುರಸ್ಕಾರ ಈ ವರ್ಷವಾದರೂ ಲಭ್ಯವಾಗುವುದೋ ಕಾದು ನೋಡಬೇಕಾಗಿದೆ. ಹಾಗೆ ನೋಡಿದರೆ ‘ಪದ್ಮಭೂಷಣ’ಕ್ಕೂ, ‘ಪದ್ಮವಿಭೂಷಣ’ಕ್ಕೂ ಇವರು ಅರ್ಹರೇ. ಕೇಂದ್ರ ಸರ್ಕಾರ ಇವರ ಸಾಧನೆಯನ್ನು ಗುರುತಿಸಿ ಈ ಮೂರರಲ್ಲಿ ಯಾವ ಪ್ರಶಸ್ತಿ ಕೊಟ್ಟರೂ ಆ ಪ್ರಶಸ್ತಿಗೆ ಗೌರವ ಸಿಗುವುದರಲ್ಲಿ ಅನುಮಾನವಿಲ್ಲ…ನಿಮ್ಮದೊಂದು ಶುಭ ಹಾರೈಕೆ ಈ ಲೆಜೆನ್ಡ್’ಗಿರಲಿ…