ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದೇ ಆಗೋದು. ತಪ್ಪು ಯಾರೇ ಮಾಡಿದರೂ ಅದು ತಪ್ಪೇ… ಇರುವ ವ್ಯವಸ್ಥೆ ಬಳಸಿಕೊಂಡು, ಬೇರೊಬ್ಬರ ಮೇಲೆ ಸುಳ್ಳು ಆರೋಪ ಹೊರಿಸಿ ಬಚಾವಾಗಿಬಿಡ್ತೀನಿ ಅಂದುಕೊಂಡರೆ ಅದು ಅದು ಖಂಡಿತ ಆಗದ ಕೆಲಸ. ಯಾಕೆಂದರೆ ಭಾರತದ ಕಾನೂನು ಸರ್ವಶ್ರೇಷ್ಠವಾದದ್ದು.
ಕಳೆದೊಂದು ವಾರದಿಂದ ʻಪ್ರಭುತ್ವʼ ಹೆಸರಿನ ಸಿನಿಮಾ ಕುರಿತಂತೆ ಸಾಕಷ್ಟು ವಿವಾದಗಳೆದ್ದಿವೆ. ನಿರ್ಮಾಪಕ ಮತ್ತು ಹೀರೋ ಒಂದು ಕಡೆ ನಿಂತು ಅದೇ ಚಿತ್ರದ ನಿರ್ದೇಶಕನ ಮೇಲೆ ಸಿಕ್ಕಸಿಕ್ಕ ಹಾಗೆ ಕಲ್ಲೆಸೆಯುತ್ತಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪಡಸಾಲೆಯಲ್ಲೇ ಕುಂತು, ಪತ್ರಿಕಾಗೋಷ್ಟಿ ನಡೆಸಿ, ಸುಳ್ಳುಗಳ ಸಿಡಿಮದ್ದನ್ನು ಎಸೆದಿದ್ದಾರೆ.
ಪ್ರಭುತ್ವ ಸಿನಿಮಾ ಶುರುವಾಗಿದ್ದು 2017ರ ಸುಮಾರಿಗೆ. ಅರಿವು ಮತ್ತು ಕೂಗು ಎಂಬೆರಡು ಸಿನಿಮಾಗಳನ್ನು ನಿರ್ದೇಶಿಸಿದ್ದ ರಂಗನಾಥ್ ಈ ಚಿತ್ರವನ್ನೂ ಆರಂಭಿಸಿದ್ದರು. ಶುರುವಿನಲ್ಲಿ ಎಲ್ಲವೂ ಸರಿಯಾಗೇ ಇತ್ತು. ನಿರ್ಮಾಪಕ ಮೇಘಡಹಳ್ಳಿ ಶಿವಕುಮಾರ್ ಮನೆಮೇಲೆ ಐಟಿ ರೇಡು ನಡೆದ ಮೇಲೆ ಇಲ್ಲಿ ಸಿನಿಮಾ ಶೂಟಿಂಗೂ ಹಳ್ಳ ಹಿಡಿಯಲು ಶುರುವಾಗಿತ್ತು. ಚೂರು ಪಾರು ಕಾಸು ಸಿಕ್ಕಾಗ ಚಿತ್ರೀಕರಣ ನಡೆಸುವ ಹಂತಕ್ಕೆ ಬಂತು. ಈ ಕಾರಣದಿಂದ ಸಿನಿಮಾ ಮುಗಿಯೋ ಹೊತ್ತಿಗೆ ಐದು ವರ್ಷಗಳೇ ಕಳೆದು ಹೋಯ್ತು. ನಿರ್ಮಾಪಕರ ಹಣದ ಸಮಸ್ಯೆ, ಕೊರೋನಾ ಕಾಟ ಎಲ್ಲವೂ ಸೇರಿ ಗಜಗರ್ಭ ಸೇರಿದ್ದ ಪ್ರಭುತ್ವ ಸಿನಿಮಾ ಏಪ್ರಿಲ್ ತಿಂಗಳ 20ಕ್ಕೆ ತೆರೆಗೆ ಬರೋದಾಗಿ ಅನೌನ್ಸ್ ಆಗಿತ್ತು. ಅದಕ್ಕೆ ಅಡ್ಡ ಬಂದಿದ್ದು ಸ್ವತಃ ಇದೇ ಸಿನಿಮಾದ ನಿರ್ದೇಶಕ ಆರ್. ರಂಗನಾಥ ತಂದ ತಡೆಯಾಜ್ಞೆ!
ಐದು ವರ್ಷಗಳ ಕಾಲ ಶ್ರಮಪಟ್ಟು ಕಟ್ಟಿದ ಚಿತ್ರವೊಂದರ ಬಿಡುಗಡೆಗೆ ನಿರ್ದೇಶಕರೇ ಯಾಕೆ ಅಡ್ಡಗಾಲು ಹಾಕಿದರು ಅಂತಾ ನೋಡಿದರೆ ನಿಜಕ್ಕೂ ಅಚ್ಚರಿ ಹುಟ್ಟಿಸುವ ವಿಚಾರ ಎದುರಾಗಿತ್ತು. ಅದೇನೆಂದರೆ, ʻಪ್ರಭುತ್ವʼ ಚಿತ್ರದ ಜಾಹೀರಾತುಗಳಲ್ಲಿ ನಿರ್ದೇಶಕ ರಂಗನಾಥ್ ಅವರ ಹೆಸರನ್ನೇ ಕಿತ್ತು ಹಾಕಿ, ನಿರ್ಮಾಪಕರ ಹೆಸರನ್ನು ಅಂಟಿಸಿಕೊಂಡಿದ್ದರು. ಡೈರೆಕ್ಟರ್ ಮೇಲೆ ಪರ್ಸನಲ್ಲಾಗಿ ನಿರ್ಮಾಪಕರಿಗೆ ಅದೇನೇ ಬೇಸರ, ಮನಸ್ತಾಪಗಳಿದ್ದರೂ ಅದು ತೀರಾ ಈ ಮಟ್ಟಕ್ಕೆ ಇರಬಾರದಿತ್ತು. ಹೆಸರು ತೆಗೆದದ್ದು ಮಾತ್ರವಲ್ಲದೆ, ರಂಗನಾಥ್ ಅವರಿಗೆ ಕಾಲ್ ಮಾಡಿ ಬಾಯಿಗೆ ಬಂದಂತೆ ಬೈಯೋದು, ಹೆದರಿಸೋದನ್ನೆಲ್ಲಾ ಶಿವಕುಮಾರ್ ಅಭ್ಯಾಸ ಮಾಡಿಕೊಂಡುಬಿಟ್ಟಿದ್ದರು. ನೋಡೋ ತನಕ ನೋಡಿದ ರಂಗನಾಥ್ ಸಿನಿಮಾದ ಬಿಡುಗಡೆಗೆ ಸ್ಟೇ ತಂದು ಬಿಟ್ಟರು. ಇದು ಶಿವಕುಮಾರ್ ಮತ್ತು ಅವರ ಸುತ್ತ ಇರೋರಿಗೆ ಸಹಿಸಲು ಆಗಲಿಲ್ಲ. ಆಗ ವಾಣಿಜ್ಯ ಮಂಡಳಿಯಲ್ಲಿ ಕುಂತು ಆಧಾರರಹಿತವಾಗಿ ಇಲ್ಲಸಲ್ಲದ್ದನ್ನೆಲ್ಲಾ ಮಾತಾಡಿಬಿಟ್ಟರು.
ನಿರ್ಮಾಪಕ ಶಿವಕುಮಾರ್ ಇವತ್ತು ರಂಗನಾಥ್ ಮೇಲೆ ಇಷ್ಟೆಲ್ಲಾ ಮಾತಾಡ್ತಿದ್ದಾರಲ್ಲಾ? ರಂಗನಾಥ್ ಏನಾದರೂ ನಿರ್ಮಾಪಕರ ಅಸಲೀ ವರಸೆಗಳ ಬಗ್ಗೆ ಮಾತಾಡಿಬಿಟ್ಟರೆ ಅದು ಬೇರೆಯದ್ದೇ ತಿರುವು ಪಡೆದುಕೊಂಡುಬಿಡುತ್ತದೆ.
ಇನ್ನು ಈ ಚಿತ್ರದ ಹೀರೋ ಚೇತನ್ ಚಂದ್ರ ಕೂಡಾ ನಿರ್ದೇಶಕರ ಮೇಲೆ ಏಳು ಜನ್ಮದಿಂದ ಸೇಡಿಟ್ಟವರಂತೆ ಹರಿಹಾಯುತ್ತಿದ್ದಾರೆ. ರಾಜಧಾನಿ ಎನ್ನುವ ಸಿನಿಮಾದಲ್ಲಿ ಹೀರೋಗಳಲ್ಲಿ ಒಬ್ಬರಾಗಿದ್ದವರು ಚೇತನ್ ಚಂದ್ರ. ಅದೇ ಚಿತ್ರದಿಂದ ಹೆಸರು ಮಾಡಿದ ಯಶ್ ಈಗ ಎಲ್ಲೋ ಇದ್ದಾರೆ. ಆದರೆ ಚೇತನ್ ಚಂದ್ರ ಇನ್ನೂ ಆರಲ್ಲ, ಮೂರಕ್ಕೂ ಏರಿಲ್ಲ. ಅದಕ್ಕೆ ಕಾರಣ ಅವರದ್ದೇ ವ್ಯಕ್ತಿತ್ವ. ಯಾರಾದರೂ ಕರೆದು ಛಾನ್ಸು ಕೊಟ್ಟರೆ ಅವರಿಗೇ ಗುನ್ನ ಪೆಟ್ಟುವುದು ಚೇತನ್ ಚಂದ್ರನ ಹಳೇ ಛಾಳಿ. ಹಿಂದೆ ಸಂಯುಕ್ತ 2 ಎನ್ನುವ ಸಿನಿಮಾವೊಂದು ತೆರೆಗೆ ಬಂದಿತ್ತು. ಆ ಚಿತ್ರದ ನಿರ್ಮಾಪಕ ಡಿ.ಎಸ್. ಮಂಜುನಾಥ್ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ನಟ ಯಶ್ ಅವರನ್ನು ಕರೆದಿದ್ದರು. ಯಶ್ ಕಾರ್ಯಕ್ರಮಕ್ಕೆ ಬಂದು ಚೇತನ್ ಹೊಸ ಹುಡುಗ ಎನ್ನುವಂತೆ ಮಾತಾಡಿಬಿಟ್ಟಿದ್ದರು. ಇಷ್ಟಕ್ಕೇ ಈತನ ಈಗೋ ಹರ್ಟ್ ಆಗಿಬಿಟ್ಟಿತ್ತು. ಚಿತ್ರದ ಪಬ್ಲಿಸಿಟಿಗೇ ಬರದೇ ಆಟಾಡಿಸಿಬಿಟ್ಟಿದ್ದ. ತನ್ನ ಮುಂದೆ ಬಂದವರೆಲ್ಲಾ ದೊಡ್ಡೋರಾದರು. ನಾನಿನ್ನೂ ಏನೂ ಆಗಿಲ್ಲವಲ್ಲ ಎನ್ನುವ ಹತಾಶೆಯಲ್ಲಿ ಚೇತನ್ ಆಗಾಗ ಯಡವಟ್ಟುಮಾಡಿಕೊಳ್ಳುತ್ತಿರುತ್ತಾರೆ. ಈಗ ಪ್ರಭುತ್ವ ವಿಚಾರದಲ್ಲಿ ಆಗಿರೋದೂ ಅದೇ. ಪ್ರೊಡ್ಯೂಸರ್ ಶಿವಕುಮಾರ್ ನಿರ್ದೇಶಕ ರಂಗನಾಥ್ ವಿರುದ್ಧ ಬಾಯಿಗೆ ಬಂದಿದ್ದೆಲ್ಲಾ ಮಾತಾಡುತ್ತಾ ಕುಂತಿದ್ದರೆ, ಕರೆದು ಅವಕಾಶ ಕೊಡಿಸಿದ ಅನ್ನೋ ಕನಿಷ್ಟ ಕೃತಜ್ಞತೆಯೂ ಇಲ್ಲದ ಚೇತನ್ ಅದಕ್ಕೆ ಒಗ್ಗರಣೆ ಹಾಕುತ್ತಿದ್ದಾರೆ.
ಅಸಲಿಗೆ ಟಿ ನರಸೀಪುರ ಭಾಗದಲ್ಲಿ ರಾಜಕಾರಣಿಯೊಬ್ಬರು ನಡೆಸುತ್ತಿದ್ದ ಮರಳು ಮಾಫಿಯಾದ ಸುತ್ತ ಹೆಣೆದ ನೈಜ ಕಥಾನಕ ಈ ಚಿತ್ರದಲ್ಲಿದೆಯಂತೆ. ಈಗ ಚುನಾವಣೆಯ ಸಂದರ್ಭದಲ್ಲಿಯೇ ಯಾಕೆ ರಿಲೀಸ್ ಮಾಡುವ ಪ್ಲಾನು ಮಾಡಿದರು? ಅಸಲಿಗೆ ಈ ಸಿನಿಮಾದಲ್ಲಿ ಯಾವ ರಾಜಕಾರಣಿಯ ಬಗ್ಗೆ ತೋರಿಸಲಾಗಿದೆ? ರಿಲೀಸ್ ಮಾಡುವ ನೆಪದಲ್ಲಿ ಬೇರೇನಾದರೂ ಗಿಮಿಕ್ ಮಾಡುತ್ತಿದ್ದಾರಾ? ಎನ್ನುವಂತಾ ವಿಚಾರಗಳೆಲ್ಲಾ ಅನುಮಾನಕ್ಕೆ ಕಾರಣವಾಗಿವೆ…
ಅದೆಲ್ಲಾ ಏನೇ ಆಗಲಿ, ಬಡಪಾಯಿ ನಿರ್ದೇಶಕನ ಮೇಲೆ ಕೋಟಿಗಟ್ಟಲೆ ಹಣ ತಿಂದ ಅಂತಾ ಆಧಾರ ರಹಿತವಾಗಿ ಆರೋಪ ಮಾಡೋದು ತಪ್ಪಲ್ಲವಾ? ಮಧ್ಯ ನಿಂತು ಬತ್ತಿ ಇಡುತ್ತಿರುವ ಚೇತನ್ ಚಂದ್ರನನ್ನು ನೋಡಿ ಬೇರೆಯವರು ಭಯ ಪಡೋದಿಲ್ಲವಾ?
No Comment! Be the first one.