prakash raj prakash rai cinibuzz arun kumar g

ತಮ್ಮ ಅದ್ಭುತ ನಟನೆಯ ಮೂಲಕ ಸಿನಿಮಾ ಜಗತ್ತಿನಲ್ಲಿ ತಮ್ಮದೇ ಆದ ಸ್ಥಾನ ಪಡೆದು, ಆ ಮೂಲಕ ಕರ್ನಾಕದ ಹೆಮ್ಮೆ ಅನ್ನಿಸಿಕೊಂಡವರು ಪ್ರಕಾಶ್‌ ರೈ. ಪ್ರಕಾಶ್‌ ರೈ ಎನ್ನುವ ಈ ಮಹಾನ್‌ ನಟ ಕಳೆದ ಕೆಲವು ವರ್ಷಗಳಿಂದ ಸಮಾಜ ಪರಿವರ್ತನೆಯ ಪಣತೊಟ್ಟು ನಿಂತಿದ್ದಾರೆ. ಕ್ಯಾಮೆರಾ ಮುಂದೆ ನಟಿಸಿ ಬೇಜಾರಾದಾಗೆಲ್ಲ ರೈ ಪ್ರವರ್ತಕನ ಪಾತ್ರದಲ್ಲಿ ಅಲ್ಲಲ್ಲಿ ಕಾಣಸಿಗುತ್ತಾರೆ.

ಇಲ್ಲಿ ಗೌರಿಯವರ ಎದೆಯಲ್ಲಿ ಢಂ ಅಂತಾ ಗುಂಡು ಸಿಡಿದು ಗುಬ್ಬಿಯಂತಹ ಜೀವ ಹಾರಿಹೋಯಿತು. ಅಷ್ಟರಲ್ಲಾಗಲೇ ಊರಿಡೀ ಉಗಿಸಿಕೊಂಡು ಇಮೇಜು ಕೆಡಿಸಿಕೊಂಡು ಚಿಂತಾಜನಕರಾಗಿದ್ದ ಪ್ರಕಾಶ್ ರೈ ಎದ್ದು ನಿಂತರು. ʻನಾನು ಗೌರಿʼ ಎಂದರು.. ಜಸ್ಟ್ ಆಸ್ಕಿಂಗ್ ಎನ್ನುವ ಅಭಿಯಾನ ಆರಂಭಿಸಿದರು. ನಟನೆಯಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದ ರೈ, ಗೌರಿ ಹತ್ಯೆ ಪ್ರಕರಣದಲ್ಲಿ ಅಂತರಾಷ್ಟ್ರೀಯ ಮಟ್ಟದ ಐಕಾನ್ ಆಗಿ ಹೋದರು. ಒಬ್ಬ ಹೆಸರುವಾಸಿ ನಟ ಸಾಮಾಜಿಕ ಸ್ಥಿತ್ಯಂತರಗಳಿಗೆ ಸ್ಪಂದಿಸಿದರೆ ಮೀಡಿಯಾಗಳಲ್ಲಿ ಅದು ದೊಡ್ಡ ಸುದ್ದಿಯಾಗುವುದು ಸಹಜ. ಇಲ್ಲಿ ಆಗಿದ್ದೂ ಅದೇ.

ಪ್ರಕಾಶ್ ರೈ ಈ ಹಿಂದೆ ಇದೊಳ್ಳೆ ರಾಮಾಯಣ ಸೇರಿದಂತೆ ಎರಡು, ಮೂರು ಸಿನಿಮಾ ನಿರ್ದೇಶಿಸಿದ್ದರು. ನಿರ್ಮಾಣದಲ್ಲಿ ಕೂಡಾ ಭಾಗಿಯಾಗಿದ್ದರು. ಆ ಸಿನಿಮಾಗಳಿಗೆ ದುಡಿದ ಕೆಲವಾರು ಮಂದಿಗೆ  ರೈ ಕಾಸು ಕೊಡದೇ ಯಾಮಾರಿಸಿದ್ದು ನಿಜ. ಪ್ರಕಾಶ್ ರೈ ಈಗೆಲ್ಲಾ ಕೈಲಾಗದವರ ಬಗ್ಗೆ ಮಾತಾಡುತ್ತಾರೆ. ಬಿಡುವಾದಾಗಲೆಲ್ಲ ಸಮಾನತೆಯ ಕುರಿತಾಗಿ ಪ್ರವಚನ ನೀಡುತ್ತಾರೆ. ಇದೇ ಪ್ರಕಾಶ್ ರೈ ಕಾವೇರಿ ವಿವಾದದ ಸಮಯದಲ್ಲಿ ಟೀವಿ ನಿರೂಪಕಿಯೊಬ್ಬರು ಪ್ರಶ್ನೆ ಕೇಳಿದ್ದೇ ತಪ್ಪು ಎನ್ನುವಂತೆ ಮೈಕು ಕಿತ್ತಾಕಿ, ಆ ಹುಡುಗಿ ಬೆಚ್ಚಿಬೀಳುವಂತೆ ರಂಪ ಮಾಡಿದ್ದರು. ಇಂಥ ಹಿನ್ನೆಲೆಯ ಪ್ರಕಾಶು ದೇಶವನ್ನು ಬದಲು ಮಾಡ್ತೀನಿ ಅಂತಾ ಹೊರಟಿರೋದನ್ನು ಯಾರು ತಾನೆ ನಂಬಲು ಸಾಧ್ಯ? ಹೀಗಾಗಿಯೇ ಪ್ರಕಾಶ್‌ ರೈ ಯಾವ ಎಲೆಕ್ಷನ್ನಿಗೆ ಕಂಟೆಸ್ಟ್‌ ಮಾಡಿದರೂ ಗೆಲುವು ದಕ್ಕುತ್ತಿಲ್ಲ.

ಪ್ರಳಯಾಂತಕ ಪ್ರಕಾಶ್‌ ರೈಗೇ ಪಂಗನಾಮ!

ಕಳೆದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಬೆಂಗಳೂರಿನಲ್ಲಿ ತಿರುಗಾಡಿದ ಪ್ರಕಾಶ್‌ ರೈಗೆ ಎಲೆಕ್ಷನ್‌ ನಲ್ಲಿ ಗೆಲ್ಲಿಸುವ ಭರವಸೆ ನೀಡಿ ಕೆಲವರು ಉಂಡೆ ನಾಮ ತಿಕ್ಕಿದ್ದು ಬರೋಬ್ಬರಿ ಎಂಟು ಕೋಟಿ ರುಪಾಯಿಗಳನ್ನು. ಲೋಕಸಭಾ ಚುನಾವಣೆಯಲ್ಲಿ ಗೆದ್ದು ಪಾರ್ಲಿಮೆಂಟಿಗೆ ಕಾಲಿಡುವ ಕನಸು ಕಂಡಿದ್ದ ಪ್ರಕಾಶ್‌ ರೈ, ಕಳೆದು ಕೊಂಡ ದುಡ್ಡನ್ನು ಮತ್ತೆ ಸಂಪಾದಿಸಲು ಸಾಕಷ್ಟು ಸಿನಿಮಾಗಳನ್ನು ಒಪ್ಪಿಕೊಂಡರು. ಹಿಂದೊಮ್ಮೆ ತಮಿಳುನಾಡು ಚಿತ್ರರಂಗದ ಎಲೆಕ್ಷನ್‌ ಗೆ ಸ್ಪರ್ಧಿಸಿ, ಅಲ್ಲೂ ಸೋಲುಂಡಿದ್ದ ಪ್ರಕಾಶ್‌ ರೈ ಕಡೆಯದಾಗಿ ಆಂಧ್ರದಲ್ಲೂ ಅದೃಷ್ಟ ಪರೀಕ್ಷೆಗೆ ಮುಂದಾದರು.

ಯಾರಾದರೂ ನನ್ನ ಮೇಲೆ ಕಲ್ಲು ತೆಗೆದು ಎಸೆದರೆ, ಅದನ್ನು ಬಳಸಿಕೊಂಡು ನಾನು ಮನೆ ಕಟ್ಟಿಕೊಳ್ತೀನಿ.. ನನಗೆ ಬೆಂಕಿ ಹಚ್ಚಲು ಬಂದರೆ, ಅದನ್ನೇ ತೆಗೆದುಕೊಂಡು ದೀಪ ಮಾಡಿಕೊಳ್ತೀನಿ…. ನನ್ನ ವಿರುದ್ಧ ಯಾರು ಯಾವುದೇ ಆಯುಧವನ್ನು ಪ್ರಯೋಗಿಸಿದರೂ ಅದನ್ನು ಬಳಸಿಕೊಂಡು ಬದುಕುವ ಕಲೆ ನನಗಿದೆ.  ಈ ಕುರಿತು ನಾನೊಂದು ಕವಿತೆ ಬರೆದಿದ್ದೀನಿ…ʼ ಅಂತಾ ಪ್ರಕಾಶ್‌ ರೈ ಹೇಳಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಬದುಕಲು ಹೋಗಿ ಸೋಲನ್ನೂ ಕಾಣುತ್ತಿರುತ್ತಾರೆ.

ಮೇಲಿಂದ ಮೇಲೆ ಇಷ್ಟೆಲ್ಲಾ ಏಟು ತಿಂದಮೇಲೂ ಧಿಮಾಕಿನ ಮಾತಾಡುವ ಪ್ರಕಾಶ್‌ ರೈ ದಶಕಕ್ಕೆ ಮುಂಚೆ ಇದಕ್ಕಿಂತಾ ಅಪ್ಪನಾಗಿ ಅಬ್ಬರಿಸುತ್ತಿದ್ದರು. ಭಾರತದ ಚಿತ್ರರಂಗಕ್ಕೆ ತಾನೊಬ್ಬನೇ ಅನಭಿಶಕ್ತ ದೊರೆ, ಒಂದೇ ದಿನದಲ್ಲಿ ನಾಲ್ಕು ರಾಜ್ಯ ಸುತ್ತುವ ಭೂಪ ಅನ್ನೋ ಅಹಮ್ಮಿತ್ತು. ಈ ದೌಲತ್ತಿನಲ್ಲೇ ರೈ ಸಾಕಷ್ಟು ಅಭಾಸಗಳನ್ನೂ ಸೃಷ್ಟಿಸಿಕೊಂಡಿದ್ದರು. ಸಮಯಕ್ಕೆ ಸರಿಯಾಗಿ ಶೂಟಿಂಗಿಗೆ ಹಾಜರಾಗುತ್ತಿರಲಿಲ್ಲ. ಕಾಲ್‌ ಶೀಟ್‌ ಕೊಟ್ಟು, ಚಿತ್ರೀಕರಣಕ್ಕೆ ಹೋಗದೇ ಸೂಪರ್‌ ಸ್ಟಾರುಗಳನ್ನು ಕಾಯಿಸುತ್ತಿದ್ದರು. ನಿರ್ಮಾಪಕ, ನಿರ್ದೇಶಕರನ್ನು ಇನ್ನಿಲ್ಲದಂತೆ ಸತಾಯಿಸುತ್ತಿದ್ದರು. ನೋಡುವ ತನಕ ನೋಡಿ ಪ್ರಕಾಶ್‌ ರೈ ಅರಾಜಕ ಬುದ್ದಿಯನ್ನು ಸಹಿಸಿಕೊಳ್ಳಲಾರದೆ ಆಂಧ್ರದ ಮೂವೀ ಆರ್ಟಿಸ್ಟ್ ಅಸೋಸಿಯೇಷನ್ ಈತನನ್ನು ಬ್ಯಾನ್‌ ಮಾಡಿ ಹೊರಕ್ಕಟ್ಟಿತ್ತು. ʻʻಯಾವ ʼಮಾʼ(ಮೂವೀ ಆರ್ಟಿಸ್ಟ್ ಅಸೋಸಿಯೇಷನ್) ನನಗೆ ನಿಷೇಧ ಹೇರಿತ್ತೋ? ಅದೇ ಸಂಸ್ಥೆಯ ಅಧ್ಯಕ್ಷನ ಖುರ್ಚಿಯಲ್ಲಿ ಒಂದು ದಿನ ಕೂರುತ್ತೀನಿʼʼ ಅಂತಾ ಪ್ರಕಾಶ್‌ ರೈ ಶಪಥ ಮಾಡಿದ್ದರು. ಅದರಂತೆ ಈ ಸಲದ ಆಂಧ್ರದ ಪ್ರತಿಷ್ಟಿತ  ಮೂವೀ ಆರ್ಟಿಸ್ಟ್ ಅಸೋಸಿಯೇಷನ್ ಚುನಾವಣೆಯಯಲ್ಲಿ ಸ್ಪರ್ಧಿಸಿದ್ದರು ಕೂಡಾ. ಕಳೆದ ವಾರ ಎಲೆಕ್ಷನ್‌ ರಿಸಲ್ಟ್‌ ಹೊರಬಿದ್ದಿದೆ.

ಪ್ರಕಾಶ್‌ ರೈ  274 ಮತಗಳನ್ನು ಪಡೆದು ಹೀನಾಯವಾಗಿ ಸೋತಿದ್ದಾರೆ. ಪ್ರತಿಸ್ಪರ್ಧಿ ವಿಷ್ಣು ಮಂಚು 381 ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದಾರೆ. ತಮಿಳುನಾಡಿನ ಹಣೇಬರಹವೋ ಏನೋ ಅಲ್ಲಿನ ಸೂಪರ್‌ ಸ್ಟಾರ್‌ ಗಳಿಂದ ಹಿಡಿದು, ವಿಲನ್ನುಗಳ ತನಕ ಬಹುತೇಕರು ನೆರೆಯ ರಾಜ್ಯದಿಂದ ಹೋಗಿ ಜಾಗ ಹಿಡಿದವರೇ. ಆಂಧ್ರದ ಸ್ಥಿತಿ ಹಾಗಿಲ್ಲ. ರಾಜಕಾರಣದಂತೆ ಸಿನಿಮಾದಲ್ಲೂ ಗುಂಪುಗಾರಿಕೆ ಅನ್ನೋದು ಮೊದಲಿನಿಂದ ಭದ್ರವಾಗಿ ಬೇರೂರಿದೆ. ನಾಲ್ಕಾರು ಹೀರೋಗಳು, ಅವರ ಮಕ್ಕಳು, ಮೊಮ್ಮಕ್ಕಳದ್ದೇ ಅಲ್ಲಿ ಆಳ್ವಿಕೆ. ಅಲ್ಲಿ ಹೀರೋಗಳೇ ಸ್ವಂತ ಥೇಟರುಗಳನ್ನು ಹೊಂದಿದ್ದಾರೆ. ಹೊರಗಿನಿಂದ ಬಂದವರನ್ನು ಅಷ್ಟು ಸುಲಭಕ್ಕೆ ಒಳಕ್ಕೆ ಬಿಟ್ಟುಕೊಳ್ಳುವುದಿಲ್ಲ.

ಪ್ರಕಾಶ್‌ ರೈ ನಟನಾಗಿಯೇನೋ ಅಲ್ಲಿ ಉತ್ತಮ ಹೆಸರು ಗಿಟ್ಟಿಸಿಕೊಂಡಿದ್ದು ನಿಜ. ಹಾಗಂತಾ ಅಧಿಕಾರ ಹಿಡಿಯುವ ಪ್ರಯತ್ನ ಮಾಡಿದರೆ, ಅಲ್ಲಿನ ಜನ ಸುಮ್ಮನೆ ಬಿಡುತ್ತಾರಾ? ಹೀಗಾಗಿ ರೈ ಎಲೆಕ್ಷನ್ನಿಗೆ ನಿಂತ ದಿನದಿಂದಲೂ ʼಈತ ಹೊರಗಿನವನುʼ ಅಂತಲೇ ಬಿಂಬಿಸಿದರು. ಇರುವುದರಲ್ಲೇ ರೈಗೆ ಹಿಂದಿನಿಂದ ಸಪೋರ್ಟು ನೀಡಿದ್ದು ಮೆಗಾಸ್ಟಾರ್‌ ಚಿರಂಜೀವಿ ಮತ್ತು ಸಹೋದರರು. ಚಿರು ಮತ್ತು ಪವನ್‌ ಕಲ್ಯಾಣ್‌ ಪ್ರತ್ಯಕ್ಷವಾಗಿ ಬಂದು ಪ್ರಕಾಶ್‌ ರೈ ಪರ ಪ್ರಚಾರ ಮಾಡಲಿಲ್ಲ. ಚಿರು ಸಹೋದರ ನಾಗಬಾಬು ಮಾತ್ರ ಬಹಿರಂಗವಾಗಿ ರೈಗೆ ಬೆಂಬಲ ನೀಡಿದ್ದ.

ಪ್ರಕಾಶ್‌ ರೈ ಎದುರು ಅಧ್ಯಕ್ಷಗಿರಿಗೆ ಸ್ಪರ್ಧೆ ನೀಡಿದ್ದಿದ್ದು ತೆಲುಗಿನ ಸಮರಸಿಂಹರೆಡ್ಡಿ ಮೋಹನ್‌ ಬಾಬು ಪುತ್ರ ವಿಷ್ಣು ಮಂಚು. ನಾಗಾರ್ಜುನ ಸೇರಿದಂತೆ ಒಂದಷ್ಟು ಜನ ಸೀನಿಯರ್‌ ಗಳು ಕೂಡಾ ಪ್ರಕಾಶ್‌ ರೈಗೆ ಹಿಂದೆ ನಿಂತು ಸಪೋರ್ಟು ಮಾಡಿದ್ದು ನಿಜ. ರೈ ಸೈಲೆಂಟಾಗಿದ್ದು, ಪ್ರಾಮಾಣಿಕವಾಗಿ ಪ್ರಚಾರ ಮಾಡಿದ್ದಿದ್ದರೆ ಬಹುಶಃ ಗೆಲ್ಲುವ ಸಾಧ್ಯತೆ ಇತ್ತೋ ಏನೋ? ಈ ಸಲವಾದರೂ ಗೆಲುವು ಕಾಣಬೇಕು ಅಂತಾ ಬಯಸಿದ್ದ ರೈ ಓವರ್‌ ಆಕ್ಟಿಂಗ್‌ ಮಾಡಿದ್ದೇ ಮುಳುವಾದಂತೆ ಕಾಣುತ್ತಿದೆ. ʻʻಸಂಗೀತ ಜ್ಞಾನಿ ಇಳಯರಾಜಾ ಅವರ ಕೈ ಕಾಲು ಹಿಡಿದು ಕರೆದುಕೊಂಡು ಬಂದು, ದೊಡ್ಡ ಪ್ರೋಗ್ರಾಂ ಮಾಡಿ, ಅದರಿಂದ ಬಂದ ಹಣದಿಂದ ತೆಲುಗು ಸಿನಿಮಾ ಇಂಡಸ್ಟ್ರಿಯ ಎಲ್ಲರಿಗೂ ಹೆಲ್ತ್‌ ಇನ್ಷೂರೆನ್ಸ್‌ ಮಾಡಿಸಿಬಿಡ್ತೀನಿ, ಹಾಗೆ ಮಾಡಿಬಿಡ್ತೀನಿ ಹೀಗೆ ಮಾಡಿಬಿಡ್ತೀನಿ. ಇಲ್ಲೀತನಕ ಅಧಿಕಾರ ಹಿಡಿದವರೆಲ್ಲಾ ಏನೂ ಕಿಸಿದಿಲ್ಲ… ನಾನು ಬಂದು ಕ್ರಾಂತಿ ಮಾಡ್ತೀನಿʼ ಅಂತಾ ವಿಪರೀತ ಮಾತಾಡಿದರು.

ಇವನದ್ದು ಅತಿಯಾಯ್ತು ಅಂತಾ ತೀರ್ಮಾನಿಸಿದ ಮೋಹನ್‌ ಬಾಬು ರೊಚ್ಚಿಗೆದ್ದು ಮಗನ ಪರ ಪ್ರಚಾರಕ್ಕಿಳಿದರು. ʻಎಲ್ಲಿಂದಲೋ ಬಂದವನುʼ ಅಂತಾ ಮೂದಲಿಸಿದರು. ಹಲೋ ಗುರು ಪ್ರೇಮಂ ಕೋಸಮೆ ಎಂಬ ಚಿತ್ರದಲ್ಲಿ ನಟಿಸುವ ಸಂದರ್ಭದಲ್ಲಿ ಕಾಮಿಡಿ ನಟ ಸಪ್ತಗಿರಿ ಮೇಲೆ ರೈ ಕೈ ಮಾಡಿದ್ದನ್ನು ಅಲ್ಲಿನವರು ಇನ್ನೂ ಮರೆತಿಲ್ಲ. ʻಎಲ್ಲಿಂದಲೋ ಬಂದು ಒಬ್ಬ ಕಲಾವಿದನ ಮೇಲೆ ಕೈ ಮಾಡಿದ್ದವನನ್ನು ನಾವ್ಯಾಕೆ ಗೆಲ್ಲಿಸಬೇಕುʼ ಅಂತಾ ಕೂಡಾ ಕೆಲವರು ತೀರ್ಮಾನಿಸಿದರು.

ಅಂತಿಮವಾಗಿ ಪ್ರಕಾಶ್‌ ರೈ ಸೋತು ಮುಖಭಂಗ ಅನುಭವಿಸಿದ್ದಾರೆ. ʼಹೌದು ನಾನು ಹೊರಗಿನವನುʼ ಅಂತಾ ತಾವೇ ಹೇಳಿಕೆ ಕೊಟ್ಟು ʻಮಾʼದ ಸದಸ್ಯತ್ವಕ್ಕೂ ರಾಜೀನಾಮೆ ಕೊಟ್ಟು ಹೊರಬಂದಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಓ ಮೈ ಲವ್ ಚಿತ್ರಕ್ಕೆ ಏನಾಯ್ತೋ ಕಾಣೆ ಹಾಡಿನ ಚಿತ್ರೀಕರಣ..

Previous article

ಪ್ರಮೋದ ಹೆಸರಲ್ಲಿ ಪ್ರಮಾದ!

Next article

You may also like

Comments

Leave a reply

Your email address will not be published.