ಸದ್ಯ ಹೀರೋ ಆಗಿ ಚಿತ್ರರಂಗದಲ್ಲಿರುವ, ಭವಿಷ್ಯದಲ್ಲಿ ಸ್ಟಾರ್ ಲೆವೆಲ್ಲಿಗೆ ಹೋಗಿ ನಿಲ್ಲಬಹುದಾದ ಕೆಲವೇ ಹೀರೋಗಳಿದ್ದಾರೆ. ಅವರಲ್ಲಿ ಮುಂಚೂಣಿಯಲ್ಲಿರುವ ಹುಡುಗರ ಪೈಕಿ ನಟ ಪ್ರಮೋದ್ ಪ್ರಮುಖ.
ಮೊದಮೊದಲಿಗೆ ಪ್ರಮೋದ ಕಾಣಸಿಕ್ಕಿದ್ದು ಲಕುಮಿ ಎನ್ನುವ ಸೀರಿಯಲ್ ನಲ್ಲಿ. ಆ ನಂತರ ಗೀತಾ ಬ್ಯಾಂಗಲ್ ಸ್ಟೋರ್ ಸಿನಿಮಾ ಬಂದಾಗ ʻಒಳ್ಳೇ ನಟ ಕನ್ನಡ ಚಿತ್ರರಂಗಕ್ಕೆ ಸಿಕ್ಕಿದʼ ಅಂತಾ ವಿಮರ್ಶಕರು ಬರೆದರು. ಆದರೆ, ಜನ ಮಾತ್ರ ಈ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬರದೇಹೋದರು. ಥೇಟರಿನಲ್ಲಿ ಗೀತಾ ಬ್ಯಾಂಗಲ್ ಸ್ಟೋರ್ ಓಡದಿದ್ದರೂ, ಟೀವಿಯಲ್ಲಿ, ಯೂ ಟ್ಯೂಬಲ್ಲಿ ಮಾತ್ರ ಅಪಾರ ವೀಕ್ಷಣೆ ಪಡೆದು ಸೂಪರ್ ಹಿಟ್ ಆಗಿದೆ!
ಆ ನಂತರ ಪ್ರೀಮಿಯರ್ ಪದ್ಮಿನಿ & ಮತ್ತೆ ಉದ್ಭವ ಸಿನಿಮಾಗಳಲ್ಲೂ ಪ್ರಮೋದ್ ನಟಿಸಿದರು. ಒಳ್ಳೆ ವಾಯ್ಸು, ಹೈಟು, ಅಂದ, ಚೆಂದ ಎಲ್ಲವೂ ಇರುವುದರ ಜೊತೆಗೆ ನಟನೆಯಲ್ಲೂ ಪಳಗಿದ್ದಾರೆ. ಪ್ರಮೋದ್ʼಗೆ ನಿಜಕ್ಕೂ ಈಗ ಟರ್ನಿಂಗ್ ಪಾಯಿಂಟ್ ಸಿಕ್ಕಿದೆ. ಓಟಿಟಿಯಲ್ಲಿ ಬಿಡುಗಡೆಯಾದ ಡಾಲಿ ಧನಂಜಯ ಮತ್ತು ಉಮಾಶ್ರೀ ಪ್ರಧಾನ ಪಾತ್ರದಲ್ಲಿ ನಟಿಸಿರುವ ರತ್ನನ್ ಪ್ರಪಂಚದಲ್ಲಿ ಎಲ್ಲ ಪಾತ್ರಗಳಿಗೂ ಸರಿಗಟ್ಟುವಂತೆ ಅಬ್ಬರಿಸಿದ್ದಾರೆ. ಪ್ರಮೋದ್ ದನಿಯಲ್ಲೇ ಬೇಸು, ಮಾಸುಗಳೆಲ್ಲಾ ಇದ್ದವಲ್ಲಾ? ಅದಿಲ್ಲಿ ಕರಾರುವಕ್ಕಾಗಿ ಕೆಲಸ ಮಾಡಿದೆ.
ಯಾರೆಲ್ಲಾ ದೊಡ್ಡ ಸ್ಟಾರ್ ಗಳಿಗೆ ಕತೆ ಮಾಡಿಟ್ಟುಕೊಂಡು, ವರ್ಷಾನುಗಟ್ಟಲೆ ಕಾದಿದ್ದರೋ, ಅವರೆಲ್ಲಾ ಈಗದನ್ನು ಪ್ರಮೋದ್ʼಗೆ ಹೇಳಲು ಹೋಗುತ್ತಿದ್ದಾರೆ. ಜೊತೆಗೆ ಈ ಹುಡುಗನಿಗಾಗಿಯೇ ಕತೆ ಬರೆಯಲು ಕೂತವರೂ ಇದ್ದಾರೆ. ಇಂಗ್ಲಿಷ್ ಮಂಜ ಹೆಸರಿನ ಪಕ್ಕಾ ರೌಡಿಸಂ ಸಬ್ಜೆಕ್ಟಿನ ಸಿನಿಮಾದ ಶೂಟಿಂಗ್ ಈಗಷ್ಟೇ ಮುಗಿಸಿದ್ದಾರೆ. ಮಾಸ್, ಆಕ್ಷನ್ ಹೀರೋ ಆಗಲು ಬೇಕಿರುವ ಎಲ್ಲ ಅರ್ಹತೆ ಇರುವ ಪ್ರಮೋದ್ ʻಇದೂ ಒಂದಿರಲಿʼ ಅಂತಾ ಅಲಂಕಾರ್ ವಿದ್ಯಾರ್ಥಿ ಎನ್ನುವ ಕಾಮಿಡಿ ಜಾನರಿನ ಸಿನಿಮಾವನ್ನೂ ಒಪ್ಪಿಕೊಂಡಿದ್ದಾರೆ. ಮೊನ್ನೆಯಷ್ಟೇ ಚಿತ್ರ ಶರುವಾಗಿದೆ.
ಮೈಸೂರು, ಮಂಡ್ಯ ಭಾಗದಿಂದ ಬಂದು ಸೂಪರ್ ಸ್ಟಾರ್ʼಗಳಾದ ಸಾಕಷ್ಟು ಜನ ಹೀರೋಗಳಿದ್ದಾರೆ. ಪ್ರಮೋದ್ ಕೂಡಾ ಮದ್ದೂರು ಪ್ರಾಂತ್ಯದಿಂದ ಎದ್ದುಬಂದಿದ್ದಾರೆ. ಇನ್ನೂ ಹೆಸರಿನ ಮುಂದೆ ಯಾವುದೇ ಸ್ಟಾರ್ ಬೋರ್ಡು ಬಿದ್ದಿಲ್ಲ. ಒಪ್ಪಿಕೊಳ್ಳುವ ಮುನ್ನ ಒಂಚೂರು ಎಚ್ಚರ ವಹಿಸಿದರೆ, ಆಯ್ಕೆಯಲ್ಲಿ ಎಲ್ಲೂ ಎಡವದಿದ್ದರೆ ಖಂಡಿತಾ ಪ್ರಮೋದ್ ಭವಿಷ್ಯದ ಸ್ಟಾರ್ ಲಿಸ್ಟಿನಲ್ಲಿರುತ್ತಾರೆ. ತಲೆಯೆತ್ತಿ ನಿಂತ ಹೀರೋಗಳು ಅನುಸರಿಸಿದ ಎಲ್ಲ ಎಚ್ಚರಿಕೆ, ಜಾಣ್ಮೆ, ಪ್ರಜ್ಞೆ ಪ್ರಮೋದ್ ಅವರಲ್ಲೂ ಎದ್ದುಕಾಣುತ್ತಿದೆ. ನಿರೀಕ್ಷೆಗಳೆಲ್ಲಾ ನಿಜವಾಗಲಿ….
Comments