“ಕಾಲ್‌ ಕೆಜಿ ಪ್ರೀತಿ”, “ಪಂಚತಂತ್ರ” ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡಿರುವ ನಟ ವಿಹಾನ್‌ ಮತ್ತೆ ಬೆಳ್ಳಿತೆರೆಮೇಲೆ ಮಿಂಚಲು ಬರುತ್ತಿದ್ದಾರೆ. ವಿಶೇಷ ಏನೆಂದರೆ, ಈ ಸಲ ವಿಹಾನ್‌ಗೆ ರಕ್ಷಿತ್‌ ಶೆಟ್ಟಿ ಸಾಥ್‌ ನೀಡುತ್ತಿದ್ದಾರೆ. ಅಂದರೆ, ರಕ್ಷಿತ್‌ ಶೆಟ್ಟಿ ಹೋಮ್‌ ಬ್ಯಾನರ್‌ “ಪರಂವಃ‌ ಸ್ಟುಡಿಯೋಸ್‌” ಬ್ಯಾನರ್‌ನಲ್ಲಿ ಮೂಡಿಬರುವ ಚಿತ್ರದಲ್ಲಿ ವಿಹಾನ್‌ ಹೀರೋ!

ಕಳೆದ ಮೂರು ವರ್ಷಗಳ ಹಿಂದೆ ಯೋಗರಾಜ್‌ ಭಟ್‌ ನಿರ್ದೇಶನದಲ್ಲಿನ “ಪಂಚತಂತ್ರ” ಸಿನಿಮಾದಲ್ಲಿ ನಟಿಸಿದ ಬಳಿಕ ಬೇರೆ ಸಿನಿಮಾಗಳತ್ತ ಮುಖ ಮಾಡಿರಲಿಲ್ಲ. ಇದೀಗ ವಿಶೇಷ ಕಥೆಯೊಂದಿಗೆ ಅವರ ಆಗಮನವಾಗುತ್ತಿದೆ. ರೊಮ್ಯಾನ್ಸ್‌ ಡ್ರಾಮಾ ಶೈಲಿಯ ಈ ಚಿತ್ರದ ಪ್ರೀ ಪ್ರೊಡಕ್ಷನ್‌ ಕೆಲಸಗಳೂ ಈಗಾಗಲೇ ಶುರುವಾಗಿವೆ.

ಚಿತ್ರದಲ್ಲಿ ನಾಯಕನಿಗೆ ಮೂರು ಹಂತಗಳಿರಲಿವೆ. ಕಾಲೇಜ್‌ ವಿದ್ಯಾರ್ಥಿ, ಕ್ರಿಕೆಟ್‌ ಆಟಗಾರ ಹಾಗೂ ಬಿಜಿನೆಸ್‌ ಮ್ಯಾನ್‌ ಆಗಿಯೂ ವಿಹಾನ್‌ ಕಾಣಿಸಿಕೊಳ್ಳಲಿದ್ದಾರೆ. ಇದೆಲ್ಲದಕ್ಕೂ ಸೂಟ್‌ ಆಗಲಿದ್ದಾರೆ ಎಂಬ ಕಾರಣಕ್ಕೆ ಚಿತ್ರತಂಡ ವಿಹಾನ್‌ರನ್ನು ಆಯ್ಕೆ ಮಾಡಿದ್ದಾರೆ.

ಹಾಗಾದರೆ ಈ ಚಿತ್ರದ ನಿರ್ದೇಶಕರು ಯಾರು? ಅದಕ್ಕೂ ಇಲ್ಲಿ ಉತ್ತರವಿದೆ. ರಕ್ಷಿತ್‌ ಅವರ ಸೆವೆನ್‌ ಆಡ್ಸ್‌ ಟೀಮ್‌ನಲ್ಲಿ ಬರಹಗಾರರಾಗಿ ಗುರುತಿಸಿಕೊಂಡಿರುವ ಚಂದ್ರಜೀತ್‌ ಬೆಳ್ಳಿಯಪ್ಪ, ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಈ ಮೊದಲು ರಿಷಬ್‌ ಶೆಟ್ಟಿ ಅವರ ಕಥಾಸಂಗಮ ಸಿನಿಮಾದಲ್ಲಿನ “ರೇನ್‌ಬೋ ಲ್ಯಾಂಡ್‌” ಏಪಿಸೋಡ್‌ ಅನ್ನು ಚಂದ್ರಜಿತ್‌ ನಿರ್ದೇಶನ ಮಾಡಿದ್ದರು. ಅದಕ್ಕೂ ಮೊದಲು “ಅವನೇ ಶ್ರೀಮನ್ನಾರಾಯಣ” ಚಿತ್ರದ ಬರವಣಿಗೆಯ ಭಾಗವಾಗಿದ್ದರು.

ಈ ಚಿತ್ರಕ್ಕೆ ನಾಯಕಿಯಾಗಿ ನಮ್ಮನ್ನೆ ಯುವರಾಣಿ ಧಾರಾವಾಹಿ ಮೂಲಕ ಎಲ್ಲರ ಗಮನ ಸೆಳೆದ ಅಂಕಿತಾ ಮರ್‌ ನಟಿಸಲಿದ್ದಾರೆ. ಇತ್ತೀಚೆಗಷ್ಟೇ ಪರಮ್‌ವಾ ಸ್ಟುಡಿಯೋಸ್‌ ತನ್ನ ಅಧಿಕೃತ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ನಲ್ಲಿ ಅವರ ಜನ್ಮದಿನಕ್ಕೆ ಪೋಸ್ಟ್‌ ಹಾಕಿ ಸುಳಿವು ನೀಡಿತ್ತು. ಇದೀಗ ಅವರೇ ನಮ್ಮ ನಾಯಕಿ ಎಂದು ತಂಡ ಅಧಿಕೃತವಾಗಿ ಘೋಷಿಸಿದೆ.

ಹಾಗಾದರೆ ಏನಿದು ಸಿನಿಮಾ? ಸದ್ಯ ಚಿತ್ರೀಕರಣ ಪೂರ್ವ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ತಂಡ, ಆಗಸ್ಟ್‌ ವೇಳೆಗೆ ಚಿತ್ರದ ಶೀರ್ಷಿಕೆ ಘೋಷಣೆ ಮಾಡಿಕೊಳ್ಳುವ ಮೂಲಕ ಸಿನಿಮಾ ಕೆಲಸಗಳಿಗೆ ಚಾಲನೆ ನೀಡಲಿದೆ. ಅದಾದ ಬಳಿಕ ಸೆಪ್ಟೆಂಬರ್‌ನಲ್ಲಿ ಚಿತ್ರದ ಶೂಟಿಂಗ್‌ ಶುರುಮಾಡುವುದು ತಂಡದ ಪ್ಲಾನ್.

ರೊಮ್ಯಾನ್ಸ್‌ ಡ್ರಾಮಾ ಮತ್ತು ಮ್ಯೂಸಿಕಲ್‌ ಲವ್‌ಸ್ಟೋರಿ ಹಿನ್ನಲೆಯ ಈ ಸಿನಿಮಾದಲ್ಲಿ ಕಾಲೇಜು ಜೀವನವೂ ಕಾಣಿಸಲಿದೆ. ತಾಂತ್ರಿಕ ವರ್ಗದ ವಿಚಾರಕ್ಕೆ ಬಂದರೆ, ಅಮೆರಿಕಾದ ನ್ಯೂಯಾರ್ಕ್‌ ಫಿಲಂ ಅಕಾಡೆಮಿಯಲ್ಲಿ ಪದವಿ ಪಡೆದು, ಅಲ್ಲಿಯೇ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿರುವ ಶ್ರೀವಾತ್ಸವನ್‌ ಸೆಲ್ವರಾಜನ್‌ ಈ ಸಿನಿಮಾಕ್ಕೆ ಕ್ಯಾಮರಾ ಹಿಡಿಯಲಿದ್ದಾರೆ. ಇದು ಅವರ ಚೊಚ್ಚಲ ಚಿತ್ರವಾಗಿರಲಿದೆ. ಗಗನ್‌ ಬದೇರಿಯಾ ಸಂಗೀತ ಸಂಯೋಜಿಸಲಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಕೊಲ್ಲುವ ಆಸ್ಪತ್ರೆಗಳ ಕರಾಳ ಚರಿತ್ರೆ ಬಿಚ್ಚಿಟ್ಟ ಚೇಜ಼್!

Previous article

ಎಸ್​.ಆರ್​. ಭೈರಪ್ಪ ಪಾತ್ರದಲ್ಲಿ ಗುರುರಾಜ ಹೊಸಕೋಟೆ!

Next article

You may also like

Comments

Comments are closed.