ರಾಜ್ ಸೂರ್ಯ ನಿರ್ದೇಶನದ ಲಂಡನ್ ನಲ್ಲಿ ಲಂಬೋದರ ಚಿತ್ರ ಇದೇ ಮಾರ್ಚ್ ಇಪ್ಪತ್ತೊಂಬತ್ತರಂದು ತೆರೆ ಕಾಣುತ್ತಿದೆ. ಈ ಸಿನಿಮಾ ಇದೀಗ ಎಲ್ಲರ ಗಮನ ಸೆಳೆದಿದೆಯಲ್ಲಾ? ಅದರಲ್ಲಿ ಪಕ್ಕಾ ಭಿನ್ನ ಧ್ವನಿ ಹೊಂದಿರೋ ಹಾಡುಗಳ ಪಾತ್ರವೂ ದೊಡ್ಡದಿದೆ. ಕೇಳಿದವರಿಗೆಲ್ಲ ಹೊಸಾ ಫೀಲ್ ಹುಟ್ಟಿಸುತ್ತಿರೋ ಈ ಹಾಡುಗಳನ್ನು ಎರಡು ವರ್ಷಗಳ ಕಾಲ ತಪಸ್ಸಿನಂತೆ ರೂಪಿಸಿರುವವರು ಸಂಗೀತ ನಿರ್ದೇಶಕ ಪ್ರಣವ್ ಅಯ್ಯಂಗಾರ್!
ಬೆಂಗಳೂರಿನಲ್ಲಿರುವ ಪ್ರಣವ್ ಸ್ಟುಡಿಯೋಸ್ ಮಾಲೀಕರೂ ಆಗಿರೋ ಪ್ರಣವ್ ಅಯ್ಯಂಗಾರ್ ಪಾಲಿಗದು ಕನಸಿನ ಕೂಸು. ಈಗಾಗಲೇ ಈ ಸ್ಟುಡಿಯೋ ಮೂಲಕ ಹಲವಾರು ಧಾರಾವಾಹಿಗಳ ಟೈಟಲ್ ಸಾಂಗ್ ಅನ್ನೂ ಪ್ರಣವ್ ರೂಪಿಸಿಕೊಟ್ಟಿದ್ದಾರೆ. ಇದಕ್ಕಾಗಿಯೇ ಆರ್ಯಭಟ ಪ್ರಶಸ್ತಿಯನ್ನೂ ಪಡೆದುಕೊಂಡಿರೋ ಹೆಮ್ಮೆ ಅವರದ್ದು. ನಮ್ಮಮ್ಮ ಶಾರದೆ, ಅರಸಿ ೨, ಅಶ್ವಿನಿ ನಕ್ಷತ್ರ ಮುಂತಾದ ಹತ್ತಕ್ಕೂ ಹೆಚ್ಚು ಜನಪ್ರಿಯ ಧಾರಾವಾಹಿಗಳಿಗೆ ಟೈಟಲ್ ಸಾಂಗ್ ರೂಪಿಸಿರುವ ಪ್ರಣವ್ ಆ ಮೂಲಕವೇ ಕಿರುತೆರೆ ಜಗತ್ತಿನಲ್ಲಿಯೂ ಹೆಜ್ಜೆಗುರುತು ಮೂಡಿಸಿದ್ದಾರೆ.
ಇದರ ಜೊತೆಗೇ ಪ್ರಣವ್ ಜಾಹೀರಾತು ಲೋಕಕ್ಕೂ ಚಿರಪರಿಚಿತರೇ. ಅನೇಕ ಕಾರ್ಪೋರೇಟ್ ಆಡ್, ಡಾಕ್ಯುಮೆಂಟರಿಗಳನ್ನೂ ಕ್ರಿಯೇಟಿವ್ ಆಗಿಯೇ ತಯಾರು ಮಾಡೋ ಮೂಲಕ ಪ್ರಣವ್ ಸ್ಟುಡಿಯೋಸ್ ಸಂಸ್ಥೆಯನ್ನು ಜನಪ್ರಿಯವಾಗಿಸಿದ್ದಾರೆ. ಹೀಗೆ ಪ್ರಣವ್ ಸ್ಟುಡಿಯೋಸ್ ಮೂಲಕ ಕಿರುತೆರೆ, ಜಾಹೀರಾತು ಲೋಕದಲ್ಲಿ ತೊಡಗಿಸಿಕೊಂಡಿರೋ ಪ್ರಣವ್ ಮೂಲತಃ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಸಿಸಿಕೊಂಡಿರುವವರು. ಇದರೊಂದಿಗೆ ಪಾಶ್ಚಾತ್ಯ ಸಂಗೀತದತ್ತಲೂ ಆಸಕ್ತಿ ಹೊಂದಿ ಅದರಲ್ಲಿಯೂ ಛಾಪು ಮೂಡಿಸಿದ್ದಾರೆ. ಅವರೀಗ ಲಂಡನ್ ನಲ್ಲಿ ಲಂಬೋದರ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಪಾದಾರ್ಪಣೆ ಮಾಡೋ ಮೂಲಕ ತಮ್ಮ ಮೂಲ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಸಂಗೀತ ನಿರ್ದೇಶಕನಾಗಬೇಕು ಅನ್ನೋದನ್ನೇ ಪ್ರಧಾನ ಕನಸಾಗಿಸಿಕೊಂಡಿದ್ದ ಪ್ರಣವ್ ಅಯ್ಯಂಗಾರ್ ಮೂಲತಃ ಮೈಸೂರಿನವರು. ಅಲ್ಲಿಯೇ ಶಾಲೇ ಕಾಲೇಜು, ಸಂಗೀತಾಭ್ಯಾಸವನ್ನೆಲ್ಲ ಮುಗಿಸಿಕೊಂಡ ಅವರು ಬೆಂಗಳೂರಿಗೆ ಬಂದು ನೆಲೆಸಿ ಹದಿನಾಲಕ್ಕು ವರ್ಷಗಳು ಕಳೆದಿವೆ. ಪ್ರಣವ ಸ್ಟುಡಿಯೋಸ್ ಮೂಲಕ ಸಂಗೀತದ ಸಾಹಚರ್ಯದಲ್ಲಿಯೇ ತೊಡಗಿಕೊಂಡದ್ದ ಅವರ ಪಾಲಿಗೆ ಸಂಗೀತ ನಿರ್ದೇಶನ ಕನಸು. ಈ ಸಂಬಂಧವಾಗಿ ೨೦೧೦ರಲ್ಲಿಯೇ ಒಂದು ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದರಂತೆ. ಆದರೆ ಆ ನಂತರದಲ್ಲಿ ಧಾರಾವಾಹಿಗಳ ಶೀರ್ಷಿಕೆ ಗೀತೆ ಮತ್ತು ಜಾಹೀರಾತುಗಳನ್ನು ರೂಪಿಸುವ ಕಾರ್ಯದಲ್ಲಿ ಬ್ಯುಸಿಯಾಗಿದ್ದ ಪ್ರಣವ್ ಅವರಿಗೆ ಲಂಡನ್ ನಲ್ಲಿ ಲಂಬೋದರ ಚಿತ್ರದ ಸಂಗೀತ ನಿರ್ದೇಶನ ಮಾಡೋ ಅವಕಾಶ ಕೂಡಿ ಬಂದಿದ್ದು ಈಗ್ಗೆ ಎರಡು ವರ್ಷಗಳ ಹಿಂದೆ.
ಆ ಕ್ಷಣದಿಂದಲೇ ಪ್ರಣವ್ ಲಂಡನ್ ನಲ್ಲಿ ಲಂಬೋದರ ಚಿತ್ರದ ಸಂಗೀತದ ಜವಾಬ್ದಾರಿ ವಹಿಸಿಕೊಂಡು ಕಾರ್ಯಾರಂಭ ಮಾಡಿ ಬಿಟ್ಟಿದ್ದರು. ಅವರ ಮುಂದೆ ಎಲ್ಲ ಹಾಡುಗಳನ್ನೂ ಕೂಡಾ ಭಿನ್ನವಾಗಿಯೇ ರೂಪಿಸುವ ಸ್ಪಷ್ಟವಾದ ಆಕಾಂಕ್ಷೆಯಿತ್ತು. ಆದ್ದರಿಂದಲೇ ಭಿನ್ನವಾದ ಸಂಗೀತ ಮತ್ತು ಸೌಂಡಿಂಗ್ ನೊಂದಿಗೆ ಈ ಸಿನಿಮಾದ ಐದೂ ಹಾಡುಗಳನ್ನವರು ರೂಪಿಸಿದ್ದಾರೆ. ಇದರಲ್ಲಿ ಒಂದು ಹಾಡನ್ನು ನಿರ್ದೇಶಕ ಸಿಂಪಲ್ ಸುನಿ ಬರೆದಿದ್ದರೆ. ಲಂಬೋದರನ ಜರ್ನಿ ಮತ್ತು ಇಂಗ್ಲಿಷ್ ವ್ಯಾಮೋಹ ಸಾರುವ ಹಾಡೊಂದನ್ನು ಖುದ್ದು ಪ್ರಣವ್ ಅವರೇ ಬರೆದಿದ್ದಾರೆ. ಇನ್ನೊಂದು ರೊಮ್ಯಾಂಟಿಕ್ ಹಾಡನ್ನು ನಾಯಕಿ ಶ್ರುತಿ ಪ್ರಕಾಶ್ ಮತ್ತು ದೀಪಕ್ ದೊಡ್ಡೇರಾ ಹಾಡಿದ್ದಾರೆ. ಇನ್ನೊಂದು ಹಾಡನ್ನು ಜಯಂತ್ ಕಾಯ್ಕಿಣಿ ಬರೆದಿದ್ದಾರೆ. ಇದೆಲ್ಲ ಹಾಡುಗಳೂ ಹಿಟ್ ಆಗಿವೆ. ಈ ಮೂಲಕವೇ ಪ್ರಣವ್ ಭರವಸೆಯ ಸಂಗೀತ ನಿರ್ದೇಶಕರಾಗಿ ಹೊರ ಹೊಮ್ಮಿದ್ದಾರೆ.
ಇಂಥಾದ್ದೊಂದು ಗೆಲುವಿಗೆ ಪ್ರೋಗಾಂ ಮಿಕ್ಸಿಂಗ್ ಮಾಡಿರೋ ಹೃದಯ್ ಗೋಸ್ವಾಮಿ, ಅಸಿಸ್ಟೆಂಟ್ ಪ್ರೋಗ್ರಾಮರ್ ಗಳಾದ ವಿಜೇತ್, ನಿಖಿಲ್ ಮುಂತಾದವರ ಶ್ರಮವೂ ಇದೆ. ಇನ್ನುಳಿದಂತೆ ಪ್ರಣವ್ ಮತ್ತು ಶಾಮ್ ಹಿನ್ನೆಲೆ ಸಂಗೀತವನ್ನೂ ನೀಡಿದ್ದಾರೆ. ಈ ಅವಧಿಯಲ್ಲಿ ಲಂಬೋದರನ ಹಾಸ್ಯ ಪ್ರವೃತ್ತಿಗೆ ತಕ್ಕಂತಾ ಸಂಗೀತ ಸೃಷ್ಟಿಸೋ ಕೆಲಸವನ್ನವರು ಭರ್ಜರಿಯಾಗಿ ಎಂಜಾಯ್ ಮಾಡುತ್ತಲೇ ನಿರ್ವಹಿಸಿದ್ದಾರಂತೆ. ಒಟ್ಟಾರೆಯಾಗಿ ಲಂಡನ್ ನಲ್ಲಿ ಲಂಬೋದರ ಒಂದು ವಿಶಿಷ್ಟ ಚಿತ್ರವಾಗಿ ನೆಲೆ ನಿಲ್ಲುತ್ತದೆ, ಅದ್ದೂರಿ ಗೆಲುವು ಪಡೆದುಕೊಳ್ಳುತ್ತದೆ ಎಂಬ ಭರವಸೆ ಪ್ರಣವ್ ಅವರದ್ದು.
No Comment! Be the first one.