ʻಧೂಮಪಾಮ ಮದ್ಯಪಾನ ಆರೋಗ್ಯಕ್ಕೆ ಹಾನಿಕರ. ಆದ್ರೆ ಈ ಹುಡುಗೀರು ಇದಕ್ಕಿಂತಾನೂ ಹಾನಿಕರ.. ದಟ್ಸ್ ವೈ ಐ ಹೇಟ್ ಲವ್ʼ
ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿ ಹೊರಬಂದಮೇಲೂ ವರ್ಚಸ್ಸು ಉಳಿಸಿಕೊಂಡಿರುವ ಕೆಲವೇ ಸ್ಪರ್ಧಿಗಳಲ್ಲಿ ಭುವನ್ ಪೊನ್ನಣ್ಣ ಒಬ್ಬರು. ರಿಯಾಲಿಟಿ ಶೋ, ಸೀರಿಯಲ್ಲು ಮುಗಿಸಿ ʻರಾಂಧವʼ ಸಿನಿಮಾದ ಮೂಲಕ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ಭುವನ್. ಭುವನ್ ಅವರಿಗಿರುವ ಕ್ವಾಲಿಟಿಗಳಿಗೆ ಈ ಹೊತ್ತಿಗೆ ಅವರ ನಟನೆಯ ನಾಲ್ಕಾರು ಸಿನಿಮಾಗಳು ಥೇಟರಿಗೆ ಬರಬಹುದಿತ್ತು; ಕಡೇಪಕ್ಷ ಸೆಟ್ಟೇರಬಹುದಿತ್ತು. ಯಾವ ಕಾರಣಕ್ಕೂ ಆತುರಾತುರವಾಗಿ ಸಿನಿಮಾಗಳನ್ನು ಒಪ್ಪಿಕೊಳ್ಳಬಾರದು. ಯಾವುದೇ ಚಿತ್ರ ಓಕೆ ಎನ್ನುವ ಮುನ್ನ ಅದರಲ್ಲಿನ ಪಾತ್ರ ತನಗೆ ಒಪ್ಪುತ್ತದಾ? ಜನ ಇಂಥಾ ಕತೆಯನ್ನು ಇಷ್ಟಪಡುತ್ತಾರಾ? ಅಂತಾ ಭುವನ್ ಮತ್ತೆಮತ್ತೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಿರುವಂತೆ ಕಾಣುತ್ತಿದೆ. ಈ ಕಾರಣದಿಂದಲೋ ಏನೋ ಭುವನ್ ಒಪ್ಪಿಕೊಳ್ಳುತ್ತಿರುವ ಸಿನಿಮಾಗಳ ಸಂಖ್ಯೆ ಕಡಿಮೆಯಾಗಿದೆ.
ಸದ್ಯ ಭುವನ್ ಹುಟ್ಟುಹಬ್ಬದ ಪ್ರಯುಕ್ತ ʻಪ್ರಣಯರಾಜʼ ಚಿತ್ರದ ಸ್ಟೈಲಿಷ್ ಟೀಸರೊಂದು ಅನಾವರಣಗೊಂಡಿದೆ. ಈ ಸಿನಿಮಾದ ಶೀರ್ಷಿಕೆಯಲ್ಲಿ ಭುವನ್ ಹೆಸರಿಗೆ ಮುನ್ನ Attitude Prince ಎಂಬ ಬಿರುದನ್ನೂ ಸೇರಿಸಲಾಗಿದೆ. ಅದಕ್ಕೆ ತಕ್ಕುದಾಗಿ ಚಿತ್ರದಲ್ಲಿನ ಭುವನ್ ಪಾತ್ರವೂ ಮೂಡಿಬಂದಂತಿದೆ. ಅಪಹರಣಕ್ಕೊಳಗಾದ ಹುಡುಗಿಯ ಮುಂದೆ ವಿಲನ್ನು ʻಎಲ್ಲೇ ನಿನ್ನ ಪ್ರಣಯ ರಾಜ ಬರಲೇ ಇಲ್ಲʼ ಅನ್ನುತ್ತಿದ್ದಂತೇ ʻಐ ಯಾಮ್ ಪ್ರೆಸೆಂಟ್ ಸರ್ʼ ಅಂತಾ ಹೊಸಾ ಲುಕ್ಕಲ್ಲಿ ಎಂಟ್ರಿ ಕೊಡುವ ಹೀರೋ ಎದುರಿಗೆ ಬಂದ ಕೇಡಿಗಳನ್ನು ಕುಕ್ಕಿ ಕೆಡವುತ್ತಾನೆ. ಇವನ ಹೀರೋಯಿಸಮ್ಮಿಗೆ ಫಿದಾ ಆದ ಹುಡುಗಿ ಏಕಾಏಕಿ ʻಐ ಲವ್ ಯೂʼ ಅನ್ನುತ್ತಾಳೆ. ತಕ್ಷಣ ಈತ ʻ ಧೂಮಪಾಮ ಮದ್ಯಪಾನ ಆರೋಗ್ಯಕ್ಕೆ ಹಾನಿಕರ. ಆದ್ರೆ ಈ ಹುಡುಗೀರು ಇದಕ್ಕಿಂತಾನೂ ಹಾನಿಕರ.. ದಟ್ಸ್ ವೈ ಐ ಹೇಟ್ ಲವ್ʼ ಎಂದು ಧಮ್ಮೆಳೆದು ದೀರ್ಘವಾಗಿ ಹೊಗೆ ಬಿಡುತ್ತಾನೆ…
ಇದು ಪ್ರಣಯರಾಜ ಚಿತ್ರದ ಫಸ್ಟ್ ಲುಕ್ ಟೀಸರ್. ಕನ್ನಡ ಚಿತ್ರರಂಗದಲ್ಲಿ ಪ್ರಣಯರಾಜ ಎಂದೇ ಹೆಸರಾದ ಹಿರಿಯ ನಟ ಶ್ರೀನಾಥ್ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಟೀಸರನ್ನು ನೋಡಿದರೆ ಈ ಸಲ ಭುವನ್ ಮತ್ತವರ ತಂಡ ಗೆಲ್ಲಲು ಬೇಕಾದ ಕರಾರುವಕ್ಕಾದ ಪ್ಲಾನು ಮಾಡಿಕೊಂಡೇ ಅಖಾಡಕ್ಕಿಳಿದಂತೆ ಕಾಣುತ್ತಿದೆ. ಈ ಹಿಂದೆ ಗಾಂಚಲಿ ಎನ್ನುವ ಚಿತ್ರವನ್ನು ನೀಡಿದ್ದ ಯುವ ನಿರ್ದೇಶಕ ಸುದರ್ಶನ್ ಚಕ್ರ ರಚಿಸಿ, ನಿರ್ದೇಶಿಸುತ್ತಿರುವ ಎರಡನೇ ಚಿತ್ರ ʻಪ್ರಣಯರಾಜʼ. ಈ ಸಿನಿಮಾಗೆ ರಾಜ ಶಿವಶಂಕರ್ ಛಾಯಾಗ್ರಹಣ, ಸದ್ಯ ಕನ್ನಡದಲ್ಲಿ ಹೊಸ ಬಗೆಯ ಕತ್ತರಿ ಪ್ರಯೋಗದಿಂದ ಹೆಸರು ಮಾಡುತ್ತಿರುವ ಯುಡಿವಿ ವೆಂಕಿ ಸಂಕಲನ, ವಿಕಾಸ್ ರಾಜ್ ವಸಿಷ್ಠ ಸಂಗೀತ, ಕಲಂದರ್ ದೊಡ್ಡಮನೆ ಸಹ ನಿರ್ದೇಶನ, ದಿನೇಶ್ ರಾಜ್ ಸಹಾಯಕ ನಿರ್ದೇಶನವಿದೆ. ಆನಂದ್ ಆಡಿಯೋ ಯೂ ಟ್ಯೂಬ್ ಚಾನೆಲ್ಲಿನಲ್ಲಿ ʻಪ್ರಣಯರಾಜʼನ ಟೀಸರ್ ಹೊರಬಂದಿದೆ. ಲೈಕ್ರಾ ಪ್ರೊಡಕ್ಷನ್ಸ್ ಮತ್ತು ಕೊಲ್ಲೂರು ಮೂಕಾಂಬಿಕಾ ಸಿನೆ ಹೌಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ.
ಪ್ರಣಯರಾಜ ಸಿನಿಮಾದ ಟೀಸರ್ ರೂಪಿಸಲು ಚಿತ್ರತಂಡ ಹಾಕಿರುವ ಎಫರ್ಟ್ ನೋಡಿದರೆ ಈ ಮೂಲಕ ಭುವನ್ ಪೊನ್ನಣ್ಣ ಕನ್ನಡ ಸಿನಿಮಾ ಇಂಡಸ್ಟ್ರಿಯ ಪ್ರಮುಖ ನಾಯಕರ ಪಟ್ಟಿಗೆ ಸೇರುವ ಎಲ್ಲ ಸಾಧ್ಯತೆಗಳೂ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅದು ನಿಜವಾಗಲಿ ಅಂತಾ ಭುವನ್ ಅವರ ಹುಟ್ಟುಹಬ್ಬದ ಈ ಘಳಿಗೆಯಲ್ಲಿ ಮನಸಾರೆ ಹಾರೈಸೋಣ!