ನಟಿಯರೆಂದರೆ ಸದಾ ಮೇಕಪ್ಪು ಮಾಡಿಕೊಂಡು ಪೋಸು ಕೊಡುವ, ಬಿಂಕ ಬಿನ್ನಾಣದಿಂದ ನುಲಿಯುವವರೆಂದೇ ಫೇಮಸ್ಸು. ಸಾಮಾನ್ಯವಾಗಿ ಆಗೀಗ ಒಂದಷ್ಟು ಸಮಾಜಸೇವೆ ಅಂತ ಮೇಕಪ್ಪು ಮುಕ್ಕಾಗದಂತೆ ಪೋಸು ಕೊಡುತ್ತಾರಷ್ಟೇ. ಆದರೆ ಒಂದು ಶಾಲೆಯನ್ನು ದತ್ತು ತೆಗೆದುಕೊಂಡು, ತಾನೆಷ್ಟೇ ಬ್ಯುಸಿಯಾಗಿದ್ದರೂ ಮಕ್ಕಳ ಜೊತೆ ಬೆರೆತು, ಇಡೀ ಶಾಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದ ನಟಿಯರು ವಿರಳ. ಆ ವಿರಳವಾದ ಸಾಲಿನಲ್ಲಿ ನಟಿ ಪ್ರಣೀತ ಕೂಡಾ ಇದ್ದಾರೆಂಬುದು ಈ ಹೊತ್ತಿನ ಆಶಾವಾದದ ಸಂಗತಿ.
ಪ್ರಣೀತಾ ಹಾಸನ ಜಿಲ್ಲೆಯ ಆಲೂರಿನ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡಿದ್ದಾರೆ. ಕಳೆದ ವರ್ಷವೇ ಪ್ರಣೀತಾ ಸರ್ಕಾರಿ ಶಾಲೆಗಳು ಸಾಲು ಸಾಲಾಗಿ ಬೀಗ ಜಡಿದುಕೊಳ್ಳುತ್ತಿರೋದನ್ನು ತಡೆಯ ಬೇಕೆಂಬ ಬಗ್ಗೆ ಚಿಂತಿಸಿದ್ದರಂತೆ. ಇದಕ್ಕಾಗಿ ಒಂದು ತಂಡ ಕಟ್ಟಿಕೊಂಡು ಅಕಾಡಕ್ಕಿಳಿದಿರುವ ಪ್ರಣೀತಾ ಇದೀಗ ಈ ಸರ್ಕಾರಿ ಶಾಲೆಯನ್ನು ದತ್ತು ಪಡೆದಿದ್ದಾರೆ. ಇದನ್ನು ಮಾದರಿಯಾಗಿ ರೂಪಿಸಲು ಐದು ಲಕ್ಷ ರೂಪಾಯಿಗಳನ್ನು ಆರಂಭಿಕವಾಗಿ ಮೀಸಲಿಟ್ಟಿದ್ದಾರೆ. ಈಗಾಗಲೇ ಈ ಶಾಲೆಯಲ್ಲಿ ಸುಸಜ್ಜಿತವಾದ ಶೌಚಾಲಯವನ್ನೂ ನಿರ್ಮಾಣ ಮಾಡಿದ್ದಾರೆ.
ಇತ್ತೀಚೆಗೆ ತಾವೇ ಬಿಡುವು ಮಾಡಿಕೊಂಡು ಈ ಶಾಲೆಗೆ ತೆರಳಿದ್ದ ಪ್ರಣೀತಾ ಎಲ್ಲ ತರಗತಿಗಳ ಮಕ್ಕಳಿಗೂ ಪಾಠ ಮಾಡಿದ್ದಾರೆ. ಇದಲ್ಲದೇ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಲು ಶಿಕ್ಷಕ ವರ್ಗವನ್ನೂ ಸನ್ನದ್ಧಗೊಳಿಸಿದ್ದಾರೆ. ಪ್ರಣೀತಾರನ್ನು ನಿಜಕ್ಕೂ ಈ ವಿಚಾರದಲ್ಲಿ ಮೆಚ್ಚಿಕೊಳ್ಳಲೇ ಬೇಕು. ಸಿನಿಮಾ ನಟ ನಟಿಯರೆಲ್ಲರುಗೂ ಪ್ರಣೀತಾ ನಡೆ ಮಾದರಿ. ಇಂಥಾ ಪ್ರಯತ್ನಗಳು ವ್ಯಾಪಕವಾದರೆ ಖಂಡಿತವಾಗಿಯೂ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೇ ಸೆಡ್ಡು ಹೊಡೆಯುವಂತೆ ಬೆಳೆಯೋದು ಕಷ್ಟವೇನಲ್ಲ.
ಇದೀಗ ಪ್ರಣೀತ ಮತ್ತೆ ಈ ಶಾಲೆಗೆ ತೆರಳಿದ್ದಾರೆ. ಈ ಶಾಲೆಯ ಮಕ್ಕಳೊಂದಿಗೇ ಹೋಳಿ ಹಬ್ಬವನ್ನು ಆಚರಿಸಿ ಸಂಭ್ರಮಿಸಿದ್ದಾರೆ. ಶಾಲೆಯ ಗೋಡೆಗಳಿಗೆ ತಾವೇ ಬಣ್ಣ ಬಣ್ಣದ ಚಿತ್ತಾರವನ್ನೂ ಬಿಡಿಸಿದ್ದಾರೆ. ಈ ಮೂಲಕ ನಿಜಕ್ಕೂ ಪ್ರಣೀತಾ ಮಾದರಿ ಕೆಲಸಕ್ಕೆ ಶ್ರೀಕಾರ ಹಾಡಿದ್ದಾರೆ. ಆರಂಭದಲ್ಲಿ ಬೀಗ ಜಡಿಸಿಕೊಳ್ಳುವ ಕಡೇ ಕ್ಷಣದಲ್ಲಿದ್ದ ಈ ಶಾಲೆಯೀಗ ಪ್ರಣೀತಾರ ದೇಖಾರೇಕಿಯಲ್ಲಿ ಮಾದರಿ ಶಾಲೆಯಾಗಿ ಮಾರ್ಪಾಟಾಗಿದೆ.
ಒಂದು ಕಾಲದಲ್ಲಿ ಇಲ್ಲಿಗೆ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದವರೂ ಈಗ ಈ ಶಾಲೆ ರೂಪಾಂತರಗೊಂಡ ಪರಿ ಕಂಡು ಅಚ್ಚರಿಗೊಂಡಿದ್ದಾರೆ. ಯಾರ ಕ್ಷೇತ್ರ ಯಾವುದೇ ಆಗಿದ್ದರೂ ದುಡಿದು ಗಂಟು ಮೂಟೆ ಕಟ್ಟಿಡೋದೇ ಬದುಕಲ್ಲ. ಒಂದಷ್ಟು ಸಾಮಾಜಿಕ ಜವಾಬ್ದಾರಿಗಳೂ ಇರುತ್ತವೆ. ಅದನ್ನು ಹೀಗೂ ನಿರ್ವಹಿಸಬಹುದೆಂಬುದಕ್ಕೆ ಪ್ರಣೀತಾ ಸ್ಫೂರ್ತಿಯಂಥಾ ಉದಾಹರಣೆಯಾಗಿ ನಿಂತಿದ್ದಾರೆ.
No Comment! Be the first one.