ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಭಾಷೆಗಳಲ್ಲಿಯೂ ಮಿಂಚು ಹರಿಸಿದ್ದ ನಟಿ ಪೊರ್ಕಿ ಖ್ಯಾತಿಯ ಪ್ರಣೀತಾ. ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಅನುಭವ ಹೊಂದಿರುವ ಪ್ರಣೀತಾಗೆ ಬಹುಕಾಲದಿಂದಲೂ ಹಿಂದಿ ಭಾಷೆಯ ಸಿನಿಮಾದಲ್ಲಿ ನಟಿಸಬೇಕೆಂಬ ಮಹದಾಸೆ ಹೊಂದಿದ್ದರಂತೆ. ಪ್ರಣೀತಾ ಅವರ ಕನಸು ಸದ್ಯ ನನಸಾಗಲಿದೆ. ಹೌದು.. ಅಜಯ್ ದೇವಗನ್ ಮತ್ತು ಸಂಜಯ್ ದತ್ ಕಾಂಬಿನೇಷನ್ನಿನ ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಪ್ರಣೀತಾ ನಟಿಸಲಿದ್ದಾರೆ. ಈ ಮೂಲಕ ಅಧಿಕೃತವಾಗಿ ಪ್ರಣೀತಾ ಬಿ ಟೌನಿಗೆ ಎಂಟ್ರಿ ಪಡೆಯಲಿದ್ದಾರೆ. ಅಭಿಷೇಕ್ ದುದೈಯಾ ನಿರ್ದೇಶನದ ಈ ಚಿತ್ರ 1971ರಲ್ಲಿ ನಡೆದ ಭಾರತ ಪಾಕಿಸ್ತಾನ ಯುದ್ಧವನ್ನು ಆಧರಿಸಿದ್ದು, ಅಜಯ್ ದೇವಗನ್ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.
ಬಾಲಿವುಡ್ ನಲ್ಲಿ ಅವಕಾಶ ಸಿಕ್ಕಿರುವ ಕುರಿತು ಪ್ರತಿಕ್ರಿಯಿಸಿರುವ ಪ್ರಣೀತಾ, ‘ಅಜಯ್ ದೇವ್ಗನ್ರಂತಹ ನಟರೊಂದಿಗೆ ನಟಿಸುವುದೇ ಹೆಮ್ಮೆಯ ವಿಚಾರ. ನಾನು ಈ ಚಿತ್ರದಲ್ಲಿ ಅವರ ಪತ್ನಿಯಾಗಿ ಕಾಣಿಸಿಕೊಳ್ಳಲಿದ್ದೇನೆ. ಬಾಲಿವುಡ್ನಿಂದ ಈ ಮೊದಲೇ ನನಗೆ ಸಾಕಷ್ಟು ಆಫರ್ಗಳು ಬಂದಿದ್ದವು. ಹೊಸ ಚಿತ್ರರಂಗಕ್ಕೆ ಎಂಟ್ರಿ ನೀಡುವಾಗ ಬಹಳ ಎಚ್ಚರಿಕೆಯ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಅಜಯ್ ದೇವಗನ್ ಚಿತ್ರದಲ್ಲಿ ನಟಿಸುವ ಅವಕಾಶಕ್ಕಿಂತ ದೊಡ್ಡದು ಇನ್ನೇನಿದೆ’ ಎಂದು ಹೆಮ್ಮೆ ಪಡುತ್ತಾರೆ ಪ್ರಣೀತಾ. ಇನ್ನು, ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ, ಪರಿಣೀತಿ ಚೋಪ್ರಾ, ರಾನಾ ದಗ್ಗುಬಾಟಿ ಸೇರಿ ಅನೇಕರು ಬಣ್ಣ ಹಚ್ಚಿದ್ದಾರೆ. ಅಜಯ್ ದೇವಗನ್ ವಿಂಗ್ ಕಮಾಂಡರ್ ಆಗಿ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದು, 2020 ಆಗಸ್ಟ್14ಕ್ಕೆ ಸಿನಿಮಾ ರಿಲೀಸ್ ಆಗಲಿದೆ.