ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ಅಭಿನಯದ ಪ್ರಾರಂಭ ಚಿತ್ರದ ಟೀಸರ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಾಯ್ಸ್ ನೀಡಿದ್ದಲ್ಲದೇ ಚಿತ್ರಕ್ಕೆ ಶುಭಕೋರಿದ್ದಾರೆ. ಇದೇ ತಿಂಗಳ 25ರಂದು `ಪ್ರಾರಂಭ` ಚಿತ್ರದ ಟೀಸರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡಿರುವ ಚಿತ್ರತಂಡ ಪ್ರಚಾರದ ಕೆಲಸಗಳಲ್ಲಿ ನಿರತವಾಗಿದೆ. ಈ ಚಿತ್ರವನ್ನು ಮನು ಕಲ್ಯಾಡಿ ರಚಿಸಿ ನಿರ್ದೇಶನ ಮಾಡಿದ್ದು, ಜೇನುಶ್ರೀ ತನುಷ ಪ್ರೊಡಕ್ಷನ್ಸ್ ನಲ್ಲಿ ಜಗದೀಶ್ ಕಲ್ಯಾಡಿ ನಿರ್ಮಾಣ ಮಾಡುತ್ತಿದ್ದಾರೆ.
ಇಂದಿನ ಯುವಜನಾಂಗವನ್ನು ಪೋಕಸ್ ಮಾಡುತ್ತ ಯುವಕ ಯುವತಿಯರನ್ನು ಗಮನದಲ್ಲಿಟ್ಟುಕೊಂಡು ರೆಡಿಮಾಡಿರುವ ಈ ಚಿತ್ರ ಅಪ್ಪಟ ಸಂದೇಶಾತ್ಮಕವಾಗಿರುವುದಲ್ಲದೇ ಅದ್ಭುತ ಕಥಾಹಂದರವನ್ನು ಹೊಂದಿದೆ. ಈ ಚಿತ್ರದಲ್ಲಿ ಮನೋರಂಜನ್ ಮೂರು ವಿಭಿನ್ನ ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದು, ಮನೋರಂಜನ್ ಗೆ ನಾಯಕಿಯಾಗಿ ಕೀರ್ತಿ ಅಭಿನಯಿಸಿದ್ದಾರೆ. ಉಳಿದಂತೆ ಕಡ್ಡಿಪುಡ್ಡಿ ಚಂದ್ರು, ಹನುಮಂತೇಗೌಡ, ರಾಘು ಶ್ರೀವಾಸ್ತವ್, ಶಾಂಭವಿ, ಸೂರಜ್ (ಕಾಮಿಡಿ ಕಿಲಾಡಿಗಳು) ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಚಿತ್ರದಲ್ಲಿ 5 ಹಾಡುಗಳಿದ್ದು, ಈ ಹಿಂದೆ ಉಪ್ಪು ಹುಳಿ ಖಾರ ಚಿತ್ರಕ್ಕೆ ಸಂಗೀತ ನೀಡಿದ್ದ ಪ್ರಜ್ವಲ್ ಪೈ ಪ್ರಾರಂಭಕ್ಕೂ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನು 2 ಸಾಹಸ ಸನ್ನಿವೇಶಗಳಿದ್ದು, ಥ್ರಿಲ್ಲರ್ ಮಂಜು ಹಾಗೂ ವಿಕ್ರಂ ಮೋರ್ ಸಾಹಸ ಸಂಯೋಜನೆಯನ್ನು ಮಾಡಿದ್ದಾರೆ. ಇನ್ನು ಸುರೇಶ್ ಬಾಬು ಛಾಯಾಗ್ರಹಣ, ವಿಜಯ್ ಎನ್. ಕುಮಾರ್ ಸಂಕಲನ, ಸಂತು, ಗೀತಾ ನೃತ್ಯ ನಿರ್ದೆಶನ ಹಾಗೂ ರವಿ ಸಂತೆಹೈಕ್ಲು ಕಲಾ ನಿರ್ದೇಶನ ಈ ಚಿತ್ರಕ್ಕಿದೆ.