ಭಜರಂಗಿ ಸಿನಿಮಾ ಆ ಚಿತ್ರದ ಖಳನಟ ಸೌರವ್ ಲೋಕಿಗೆ ದೊಡ್ಡ ಬ್ರೇಕ್ ನೀಡಿತ್ತು. ಭಜರಂಗಿ ಲೋಕಿ ಅಂತಲೇ ಫೇಮಸ್ಸಾದರು. ಈಗ ಭಜರಂಗಿ-೨ ನೋಡಿದವರು ಅಜಾನುಬಾಹು ದೇಹದ ಪ್ರಸನ್ನ ಬಾಗಿನನನ್ನು ಕಂಡು ʻಎಲ್ಲಿದ್ದ ಇಲ್ಲೀತನಕ?ʼ ಎನ್ನುವಷ್ಟರ ಮಟ್ಟಿಗೆ ಗುರುತಿಸಿಕೊಳ್ಳುತ್ತಿದ್ದಾನೆ.
ದಕ್ಷಿಣ ಕನ್ನಡದಿಂದ ಬಂದು, ಮೈಸೂರಿನ ವಿಪ್ರೋದಲ್ಲಿ ಒಳ್ಳೆ ನೌಕರಿಯಲ್ಲಿದ್ದವರು ಪ್ರಸನ್ನ. ಸಿನಿಮಾ ಸೆಳೆತದಿಂದ, ಇದ್ದ ಕೆಲಸ ಬಿಟ್ಟು ಗಾಂಧೀನಗರದ ಬೀದಿಗಳಲ್ಲೆಲ್ಲಾ ಅಲೆದಿದ್ದರು. ಜೈ ಹನುಮಾನ್ ಮತ್ತು ಉಘೇ ಉಘೇ ಮಾದೇಶ್ವರ ಧಾರಾವಾಹಿಗಳಲ್ಲಿ ಪ್ರಸನ್ನಗೆ ಪಾತ್ರ ಸಿಕ್ಕಿತ್ತು. ಕೆಜಿಎಫ್, ಮಫ್ತಿ ಸಿನಿಮಾದಲ್ಲೂ ಪ್ರಸನ್ನ ಅಭಿನಯಿಸಿದ್ದರೂ ಅದು ಗುರುತಿಸಿಕೊಳ್ಳುವಂಥದ್ದಲ್ಲ.
ಎಲ್ಲ ಪ್ರಯತ್ನಗಳ ನಂತರ ಪ್ರಸನ್ನ ಭಜರಂಗಿ-2 ಚಿತ್ರದಲ್ಲಿ ಒಳ್ಳೇದೊಂದು ಛಾನ್ಸು ಗಿಟ್ಟಿಸಿಕೊಂಡಿದ್ದಾರೆ. ಈ ಸಿನಿಮಾ ಇನ್ನು ಹತ್ತು ಹಲವು ಪಾತ್ರಗಳಿಗೆ ದಾರಿ ಮಾಡಿಕೊಡುತ್ತದೆ. ಈ ಸಂದರ್ಭದಲ್ಲಿ ಒಂದಿಷ್ಟೂ ಮೈಮರೆಯದೆ, ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಸದ್ಯ ಭಜರಂಗಿ-೨ನಿಂದ ದೊರೆತಿರುವ ಪ್ರಭಾವಳಿಗಳು ಪ್ರಸನ್ನನ ಮುಂದಿನ ಭವಿಷ್ಯಕ್ಕೆ ಬೆಳಕಾಗಬೇಕೇ ವಿನಃ ಮುಳುವಾಗಬಾರದು.
ಸಿನಿಮಾಗೆ ಬಂದು, ಜನ ಗುರುತಿಸುವಂತಾಗಿ, ಗೆಲುವು ಕೈಗೆಟುಕುತ್ತಿದ್ದಂತೇ ಕೆಲವರ ಕಣ್ಣಿಗೆ ನೆಲ ಕಾಣದಂತಾಗಿಬಿಡುತ್ತದೆ. ಭಜರಂಗಿ ಪ್ರಸನ್ನ ಕೂಡಾ ಭೇಟೆಗೆ ಹೊಂಚು ಹಾಕುತ್ತಿದ್ದಾನೆ ಎನ್ನುವ ಗಾಳಿ ಸುದ್ದಿ ಹರಿದಾಡುತ್ತಿದೆ. ಇದರ ಜೊತೆಗೆ, ಹೇಗಾದರೂ ಪ್ರಸನ್ನನನ್ನು ಪರಿಚಯ ಮಾಡಿಕೊಳ್ಳಬೇಕು ಅಂತಾ ಕೆಲವು ಚಿಳ್ಳೆ, ಮಿಳ್ಳೆಗಳೆಲ್ಲಾ ಮಿಸುಕಾಡುತ್ತಿವೆ ಎನ್ನುವ ಸ್ಮೆಲ್ಲೂ ರಾಚುತ್ತಿದೆ. ಗುರಿಯನ್ನು ಮರೆಯದೇ, ಕಾಳು ಹಾಕೋರ ಬಗ್ಗೆ ಗಮನ ಕೊಡದೆ, ಚಿಣಮಿಣಕಿಯರಿಂದ ರಕ್ಷಿಸಿಕೊಂಡರೆ ಮಾತ್ರ ಭವಿಷ್ಯ ಉಜ್ವಲವಾಗಲು ಸಾಧ್ಯ.
ಹುಷಾರು ಪ್ರಸನ್ನ!
Comments