ಈ ಹಿಂದೆ ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿದ್ದ ಝೂಮ್ ಚಿತ್ರ ದೊಡ್ಡ ಮಟ್ಟದಲ್ಲಿಯೇ ಗೆಲುವು ದಾಖಲಿಸಿತ್ತು. ಈ ಚಿತ್ರವನ್ನು ನಿರ್ದೇಶನ ಮಾಡಿದ್ದವರು ಪ್ರಶಾಂತ್ ರಾಜ್. ಇದೀಗ ಮತ್ತೆ ಆರೆಂಜ್ ಚಿತ್ರದ ಮೂಲಕ ಈ ಜೋಡಿ ಒಂದಾಗಿದೆ. ಈ ವಾರ ಬಿಡುಗಡೆಯಾಗುತ್ತಿರುವ ಆರೆಂಜ್ ಈಗಾಗಲೇ ಅಗಾಧ ನಿರೀಕ್ಷೆ ಹುಟ್ಟಿಸಿದೆ. ಟ್ರೈಲರ್, ಹಾಡುಗಳೆಲ್ಲವೂ ಪ್ರೇಕ್ಷಕರನ್ನು ಈ ಚಿತ್ರದತ್ತ ಆಕರ್ಷಿತರಾಗುವಂತೆಯೂ ಮಾಡಿವೆ. ಈ ಮೂಲಕವೇ ಪ್ರಶಾಂತ್ ರಾಜ್ ನಿರ್ದೇಶಕರಾಗಿ ಮತ್ತೊಂದು ಗೆಲುವಿನ ರೂವಾರಿಯಾಗೋ ಭರವಸೆಯನ್ನೂ ಹೊಂದಿದ್ದಾರೆ.
ಈಗಾಗಲೇ ಐದು ಯಶಸ್ವಿ ಚಿತ್ರಗಳನ್ನು ನಿರ್ದೇಶನ ಮಾಡುವ ಮೂಲಕ ಕನ್ನಡದ ಮುಖ್ಯ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿರುವವರು ಪ್ರಶಾಂತ್. ಅವಕಾಶ ಸಿಗಲಿಲ್ಲ, ಯಾರೂ ಬೆಳೆಸಲಿಲ್ಲ ಮುಂತಾದ ಸೋಲಿನ ನೆಪಗಳನ್ನು ಹೇಳುತ್ತಾ ಇದ್ದಲ್ಲೇ ಕೊಳೆಯುವವರಿದ್ದಾರಲ್ಲಾ? ಅಂಥವರಿಗೆಲ್ಲ ಪಾಠದಂಥಾ ವ್ಯಕ್ತಿತ್ವವನ್ನು ರೂಢಿಸಿಕೊಂಡಿರುವ ಪ್ರಶಾಂತ್ ರಾಜ್ ಪಾಲಿಗೆ ಯಾರೂ ಗಾಡ್ ಫಾದರುಗಳಿಲ್ಲ. ನಿರ್ದೇಶಕನಾಗೋ ಕನಸು ಹೊತ್ತು ತಿರುಗುತ್ತಿದ್ದ ಕಾಲದಲ್ಲಿ ಯಾವ ಅವಕಾಶದ ಬಾಗಿಲುಗಳೂ ತೆರೆದುಕೊಂಡಿರಲಿಲ್ಲ. ಆದರೆ ತಮ್ಮ ಗುರಿಯನ್ನು ತಲುಪಿಯೇ ತೀರುವ ಛಲ, ತಮ್ಮ ಪ್ರತಿಭೆ ಮತ್ತು ಪರಿಶ್ರಮಗಳ ಮೇಲಿನ ಅಚಲ ನಂಬಿಕೆಯೇ ಅವರನ್ನಿಂದು ನಿರ್ದೇಶಕರನ್ನಾಗಿ ರೂಪಿಸಿವೆ.
ಇದೀಗ ಪ್ರಶಾಂತ್ ರಾಜ್ ನಿರ್ದೇಶನದ ಆರನೇ ಚಿತ್ರ ಆರೆಂಜ್ ಬಿಡುಗಡೆಯ ಹೊಸ್ತಿಲಲ್ಲಿದೆ. ಗಣೇಶ್ ಈ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದಾರೆ. ಆರೆಂಜ್ ಎಂಬುದು ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ ಚಿತ್ರ. ಕನ್ನಡದಲ್ಲಿ ಇತ್ತೀಚೆಗೆ ಬೃಂದಾವನದಂಥಾ ಕೆಲವೇ ಕೆಲ ಚಿತ್ರಗಳನ್ನು ಬಿಟ್ಟರೆ ಸಂಪೂರ್ಣ ಫ್ಯಾಮಿಲಿ ಎಂಟರ್ಟೈನರ್ ಚಿತ್ರಗಳು ಬಂದಿದ್ದು ವಿರಳ. ಆ ಸಾಲಿನಲ್ಲಿ ಸೇರಿಕೊಳ್ಳೋ ಆರೆಂಜ್ ಚಿತ್ರವನ್ನು ಈ ಹಿಂದಿನ ಝೂಮ್ ಚಿತ್ರದ ತಂಡವನ್ನಿಟ್ಟುಕೊಂಡೇ ಪ್ರಶಾಂತ್ ರೂಪಿಸಿದ್ದಾರೆ. ಹೀರೋಯಿನ್ ಬದಲಾಗಿದ್ದು ಬಿಟ್ಟರೆ ತಂತ್ರಜ್ಞರು ಸೇರಿದಂತೆ ಎಲ್ಲವೂ ಹಳೇ ತಂಡವೇ. ಆದರೆ ಕಥೆಯನ್ನು ಹೊಸಾ ಥರದಲ್ಲಿ ಸಿದ್ಧ ಪಡಿಸಿರುವ ಪ್ರಶಾಂತ್ ರಾಜ್ ಈಗಾಗಲೇ ಹಾಡುಗಳೂ ಗೆದ್ದು ಖುಷಿಯಲ್ಲಿದ್ದಾರೆ.
ಹೀಗೆ ಆರನೇ ಚಿತ್ರದತ್ತ ಯಶಸ್ವೀ ನಿರ್ದೇಶಕರಾಗಿ ಸಾಗಿ ಬಂದಿರುವ ಪ್ರಶಾಂತ್ ರಾಜ್ ಮೂಲ ಬೆಂಗಳೂರಿಗರೇ. ಎಚ್ಎಎಲ್ ಏರಿಯಾದಲ್ಲಿಯೇ ಹುಟ್ಟಿ ಬೆಳೆದ ಅವರು ಓದಿಕೊಂಡಿದ್ದು ಎಂಬಿಎ. ಆದರೆ ಅವರ ಕನಸಾಗಿದ್ದದ್ದು ತಾವು ಓದಿಕೊಂಡಿದ್ದಕ್ಕೆ ತದ್ವಿರುದ್ಧವಾದ ಸಿನಿಮಾ ನಿರ್ದೇಶನ. ಫಿಲಂ ಮೇಕಿಂಗ್ ಡಿಪ್ಲೊಮಾ ಪೂರೈಸಿ ಬಂದರಾದರೂ ಅವಕಾಶಗಳೇನೂ ಸಿಗಲಿಲ್ಲ. ಆದರೆ ಅಪಾರವಾದ ಕನ್ನಡಾಭಿಮಾನಿಯಾಗಿರೋ ಪ್ರಶಾಂತ್ ಕನ್ನಡದಲ್ಲಿಯೇ ನಿರ್ದೇಶಕನಾಗಿ ನೆಲೆ ನಿಲ್ಲೋ ಛಲ ಹೊಂದಿದ್ದರು. ಆದ್ದರಿಂದಲೇ ಸಾಕಷ್ಟು ತಯಾರಿ ನಡೆಸಿ ಲವ್ಗುರು ಚಿತ್ರವನ್ನು ನಿರ್ದೇಶನ ಮಾಡಿದ್ದರು. ಪ್ರಶಾಂತ್ ಅವರ ಮೊದಲ ಕನಸಿನಂತಿದ್ದ ಆ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು.
ಅದಾದ ನಂತರ ಗಾನಬಜಾನ, ವಿಜ಼ಲ್, ಝೂಮ್, ದಳಪತಿ ಮುಂತಾದ ಚಿತ್ರಗಳನ್ನು ನಿರ್ದೇಶನ ಮಾಡಿ ಗೆದ್ದಿರೋ ಪ್ರಶಾಂತ್ ರಾಜ್ ಅವರ ಆರನೇ ಕನಸು ಆರೆಂಜ್. ಈಗಾಗಲೇ ಈ ಚಿತ್ರದ ನಾಲಕ್ಕೂ ಹಾಡುಗಳು ಹಿಟ್ ಆಗಿವೆ. ಎಲ್ಲೆಡೆ ಈ ಚಿತ್ರದ ಬಗ್ಗೆ ನಿರೀಕ್ಷೆಗಳಿವೆ. ಈ ಬಿಸಿಯಲ್ಲಿಯೇ ಆರೆಂಜ್ ಚಿತ್ರ ಈಗ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.
#
No Comment! Be the first one.