ನಟ, ನಿರ್ದೇಶಕ, ಬಿಗ್ ಬಾಸ್ ವಿನ್ನರ್, ಸಾಮಾಜಿಕ ಕಾರ್ಯಕರ್ತ, ದೇವೇಗೌಡರ ಮೊಮ್ಮಗ, ಸಿದ್ದರಾಮಯ್ಯನವರ ತಮ್ಮನ ಮಗ ಹೀಗೆ ನಾನಾ ಬಗೆಯಲ್ಲಿ ಗುರುತಿಸಲ್ಪಡುವ ಪ್ರತಿಭೆ ಪ್ರಥಮ್. ಈ ದೇವ್ರಂತಾ ಮನುಷ್ಯನನ್ನು ಹೆತ್ತ ತಂದೆ ಮಲ್ಲಣ್ಣ ಅದೆಲ್ಲೋ ಕೊಳ್ಳೇಗಾಲದ ಗ್ರಾಮದಲ್ಲಿ ಆರಾಮಾಗಿ ಬಾಳ್ವೆ ನಡೆಸುತ್ತಿದ್ದಾರೆ.
ಪ್ರಥಮ್ ಮೊದಲ ಬಾರಿಗೆ ನಿರ್ದೇಶನ ಆರಂಭಿಸಿದ್ದ ದೇವ್ರೌನೆ ಬುಡು ಗುರು ಮತ್ತು ನಂತರ ನಟಿಸಿದ ಎಂ.ಎಲ್.ಎ., ದೇವ್ರಂತಾ ಮನುಷ್ಯ ಮತ್ತೀಗ ನಟ ಭಯಂಕರ – ಇಷ್ಟೂ ಸಿನಿಮಾಗಳಲ್ಲಿ ಅಪ್ಪನ ಪಾತ್ರದಲ್ಲಿ ನಟಿಸಿದ್ದವರು ರಾಕ್ ಲೈನ್ ಸುಧಾಕರ್. ಇತ್ತೀಚೆಗೆ ಶೂಟಿಂಗ್ ಸ್ಪಾಟಲ್ಲೇ ಹಾರ್ಟ್ ಅಟ್ಯಾಕ್ ಆಗಿ ಸುಧಾಕರ್ ಹೋಗಿಬಿಟ್ರಲ್ಲಾ? ಅದಾದ ನಂತರ ಪ್ರಥಮ್ ವಿಪರೀತ ಖಿನ್ನತೆಗೆ ಜಾರಿದ್ದಾರಂತೆ.
ಪ್ರಥಮ್ ಸಿನಿಮಾಗಳಲ್ಲಿ ಪರ್ಮನೆಂಟು ಅಪ್ಪ ಎನ್ನುವಷ್ಟರ ಮಟ್ಟಿಗೆ ಸುಧಾಕರ್ ಅವಕಾಶ ಪಡೆದಿದ್ದವರು ಸುಧಾಕರ್. ಸ್ವಭಾವತಃ ಇಬ್ಬರೂ ಕೂಡಾ ಎದುರಿಗಿದ್ದವರು ಎಂಥವರೇ ಆದರೂ ಮಾತಿನಲ್ಲೇ ಮಣಿಸಬಲ್ಲ ನಟಭಯಂಕರರು ಬೇರೆ. ಈ ಅಪರೂಪರ ಬಾಂಧವ್ಯ ಸಿನಿಮಾಗಷ್ಟೇ ಸೀಮಿತವಾಗಿರಲಿಲ್ಲ. ಬಿಡುವಿದ್ದಾಗ ʻಬಾರೋ ಮಗನೇʼ ಅಂತಾ ಪ್ರಥಮನನ್ನು ಕರೆದುಕೊಂಡು ಹೋಗಿ ಬಸವೇಶ್ವರನಗರ ಫುಟ್ ಪಾತಿನಲ್ಲಿ ತಟ್ಟೆ ಇಡ್ಲಿ ಕೊಡಿಸುತ್ತಿದ್ದರಂತೆ. ತಮ್ಮದೇ ಬೈಕಿನಲ್ಲಿ ಸುತ್ತಾಡಿಸುತ್ತಿದ್ದರಂತೆ. ಡಬ್ಬಿಂಗ್, ಶೂಟಿಂಗ್ ಯಾವುದಕ್ಕಾದರೂ ಬರಲು ಕಾರು ಕಳಿಸುತ್ತೀನಿ ಅಂದರೆ, ʻಬ್ಯಾಡ ಕಣಪ್ಪೋ.. ಅದೇ ದುಡ್ಡನ್ನ ಸಿನಿಮಾಗೆ ಹಾಕು. ನಾನೊಬ್ಬ ಬರಲು ಕಾರು ಗೀರು ಅಂತೆಲ್ಲಾ ಯಾಕೆ ಖರ್ಚು ಮಾಡ್ತಿಯಾ? ನನ್ನತ್ರ ಟೂ ವ್ಹೀಲರ್ ಐತೆ. ಅದರಲ್ಲೇ ಬರ್ತೀನಿʼ ಎನ್ನುತ್ತಿದ್ದರಂತೆ. ಇಂಥ ಅಪರೂಪದ, ಅಪ್ಪನ ಪಾತ್ರವನ್ನು ನಿರ್ವಹಿಸುತ್ತಿದ್ದ ಆಪ್ತ ಗೆಳೆಯ ಹೇಳದೇ ಕೇಳದೇ ಹೋಗಿಬಿಟ್ಟರಲ್ಲಾ ಅನ್ನೋದು ಪ್ರಥಮ್ ಗೆ ಕಾಡುತ್ತಿದೆಯಂತೆ.
ಸದಾ ಪಟಪಟ ಮಾತಾಡುತ್ತಾ, ದಡಬಡ ಓಡಾಡುವ ಪ್ರಥಮ್ ಥರದ ಹಡುಗರನ್ನು ನೋಡಿದರೆ ಕೆಲವೊಮ್ಮೆ ಇವರಿಗೆ ಸಂವೇದನೆ ಕಡಿಮೆಯಾ ಅನ್ನಿಸುವುದು ನಿಜ. ವಾಸ್ತವದಲ್ಲಿ ಈ ಥರದವರು ಆಂತರ್ಯದಲ್ಲಿ ತೀರಾ ಭಾವುಕರೂ, ಸ್ವಭಾವದವರೂ ಆಗಿರುತ್ತಾರೆ. ಹತ್ತಿರದವರನ್ನು ಕಳೆದುಕೊಂಡ ಇವರು ಪಡುವ ಯಾತನೆ, ನೋವು ಅವರಿಗಷ್ಟೇ ಗೊತ್ತಿರುತ್ತದೆ.
No Comment! Be the first one.