ಕ್ರೂರಿ ಕರೋನಾ ವ್ಯಾಪಿಸುತ್ತಿದ್ದಂತೇ, ಸರ್ಕಾರ ಲಾಕ್ಡೌನ್ ಘೋಷಿಸಿ ಎಲ್ಲರನ್ನೂ ಮನೆಯೊಳಗೆ ಕೂಡಿಹಾಕಿತು. ಯಾವ ಮುನ್ಸೂಚನೆಯೂ ಇಲ್ಲದೆ ಕತ್ತಲೆ ಆವರಿಸಿಕೊಂಡಿತು. ಕೆಲವು ಸಿನಿಮಾ ನಟರು ದೂರದಲ್ಲೇ ಇದ್ದು ತಮ್ಮಿಂದಾದ ಸಹಾಯ ಮಾಡಿದರು. ಒಂದಷ್ಟು ಸಾಮಾಜಿಕ ಕಾರ್ಯಕರ್ತರು, ಶುಭ್ರ ಮನಸ್ಸಿನವರು ಅನ್ನಾಹಾರ ಪೂರಿಸಿದರು. ಇದೇ ಹೊತ್ತಿನಲ್ಲಿ ನಟ, ನಿರ್ದೇಶಕ, ಕೃಷಿಕ, ಬಿಗ್ ಬಾಸ್ ವಿನ್ನರ್ ಮುಂತಾದ ಕಾರಣಗಳಿಗಾಗಿ ಹೆಸರಾಗಿರುವ ಪ್ರಥಮ್ ಕೂಡಾ ಯೋಧನಂತೆ ಬೀದಿಗಿಳಿದರು. ತನ್ನಿಂದ ಏನೆಲ್ಲಾ ಸಾಧ್ಯವೋ ಅಷ್ಟೂ ಕೆಲಸ ಮಾಡಿ ಪ್ರಥಮ್ ಸಂಕಷ್ಟದ ಸಮಯದಲ್ಲಿ ಸ್ಪಂದಿಸುತ್ತಿರುವ ನೀತಿ ನಿಜಕ್ಕೂ ಮೆಚ್ಚಲೇಬೇಕು.
ಸಿನಿಮಾರಂಗದಲ್ಲಿ ತೀರಾ ಮುಖ್ಯರಾಗಿದ್ದೂ, ಅಸಂಘಟಿತರಾಗಿರುವ ಶ್ರಮಜೀವಿ ವಲಯವಿದೆ. ಅದರಲ್ಲೂ ಸಿನಿಮಾ ಪೋಸ್ಟರ್ ವಿನ್ಯಾಸ ಕಲಾವಿದರು, ಆರ್.ಪಿ.ಗಳು. ಪತ್ರಿಕಾ ಪ್ರಚಾರಕರ್ತರಿಲ್ಲದೆ ಸಿನಿಮಾಗಳು ಜನಕ್ಕೆ ತಲುಪೋದೇ ಇಲ್ಲ. ಎಷ್ಟೋ ಬಾರಿ ಇವರ ಕೆಲಸ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿಬಿಡುತ್ತದೆ. ಪ್ರಥಮ್ ಅಂಥವರನ್ನೆಲ್ಲಾ ಭೇಟಿ ಮಾಡಿ ಈ ಕ್ಷಣಕ್ಕೆ ಬೇಕಿರುವ ಅಗತ್ಯ ವಸ್ತುಗಳನ್ನೆಲ್ಲಾ ನೀಡಿ ಸಹಕರಿಸಿದ್ದಾರೆ. ಫೀಲ್ಡಿಗಿಳಿದು ಇಷ್ಟು ವರ್ಷವಾದರೂ, ಹೆಸರು ಮಾಡಿದ್ದರೂ ಪ್ರಥಮ್ ಈ ಕ್ಷಣಕ್ಕೂ ಸ್ವಂತಕ್ಕೊಂದು ಕಾರು ಕೊಳ್ಳಲು ಸಾಧ್ಯವಾಗಿಲ್ಲ. ಹೀಗಿರುವಾಗ ಒಳ್ಳೇಹುಡುಗ ತಾನೆ ಎಷ್ಟು ಅಂತಾ ಖರ್ಚು ಮಾಡಲು ಸಾಧ್ಯ? ಜೇಬು ಖಾಲಿ ಅಂತಾ ಸುಮ್ಮನಿರುವಂತೆಯೂ ಇಲ್ಲ. ಜನಸಾಮಾನ್ಯರ ಬಳಿಯೇ ಪಡೆದು ಮತ್ತೊಬ್ಬರಿಗೆ ಕೊಡುವ ಕಾಲವೂ ಇದಲ್ಲ. ನಟಭಯಂಕರ ಬಲು ಚಾಲಾಕಿ… ಚುನಾವಣೆ ಸಂದರ್ಭದಲ್ಲಿ ಯಾರೆಲ್ಲಾ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದರೋ ಅವರಿಂದಲೇ ಪಡೆದು ಹಂಚೋಣ ಎನ್ನುವ ನಿರ್ಧಾರಕ್ಕೆ ಬಂದಿದ್ದರು.
ಯುವ ರಾಜಕಾರಣಿ ಪ್ರಿಯಾ ಕೃಷ್ಣರೊಂದಿಗೆ ಪ್ರಥಮ್ಗೆ ಉತ್ತಮ ವಿಶ್ವಾಸ ಮತ್ತು ಆಪ್ತತೆ ಹೊಂದಿದ್ದಾರೆ. ಮೊನ್ನೆಯಷ್ಟೇ ಅವರ ಹುಟ್ಟುಹಬ್ಬವೂ ಜರುಗಿತ್ತು. ಇದೇ ಹೊತ್ತಿಗೆ ಅವರಿಗೆ ಶುಭಾಶಯ ತಿಳಿಸಿ ’ಒಂದಿಷ್ಟು ಜನರಿಗೆ ಸಹಾಯವಾಗಬೇಕು’ ಅಂತಾ ವಿನಂತಿಸಿದ್ದರು. ಪ್ರಥಮ್ ಮನವಿಗೆ ತಕ್ಷಣವೇ ಸ್ಪಂದಿಸಿದ ಪ್ರಿಯಾ ಕೃಷ್ಣ ಅತ್ಯುತ್ತಮ ಕ್ವಾಲಿಟಿಯ ನೂರು ಪಡಿತರ ಕಿಟ್ ನೀಡಿದ್ದಾರೆ. ಪ್ರಥಮ್ ಹೇಳಿದ ಕಾರಣಕ್ಕೆ ತೀರ ಅಗತ್ಯವಿರುವವರಿಗೆ ೭೫ ಸಾವಿರ ಮೌಲ್ಯದ ಚೆಕ್ ಕೊಟ್ಟಿದ್ದಾರೆ ಪ್ರಿಯಾಕೃಷ್ಣ. ಆ ಚೆಕ್ ಅಮೌಂಟನ್ನು ಪ್ರಿಯಾಕೃಷ್ಣರ ಕೈಯಿಂದಲೇ ನೇರವಾಗಿ ತಲುಪಿಸಬೇಕೆಂಬ ಆಸೆ ಪ್ರಥಮ್ದಾಗಿತ್ತು. ಆದರೆ, ೭೫ ಸಾವಿರ ರೂಪಾಯಿ ಚೆಕ್ ಮೇಲೆ ನೆರವಿನ ನಿರೀಕ್ಷೆಯಲ್ಲಿರೋರ ಹೆಸರು ಬರೆದು, ನೀವೇ ಕೊಟ್ಟುಬಿಡಿ ಪ್ರಥಮ್. ನಾನು ಕೊಟ್ಟರೇನು? ನೀವು ಕೊಟ್ಟರೇನು? ಅರ್ಹರ ಹೆಸರು ಬರೆದಾಗಿದೆ…! ನೀವು ತಲುಪಿಸಿ… ಇನ್ನೂ ರೇಷನ್ ಅಗತ್ಯವಿದ್ದರೆ ನಮ್ಮ ತಂದೆಯೊಡನೆ ಮಾತಾಡಿ. ನಾನ್ ಹೇಳಿರ್ತೀನಿ ಅಂತ ಹೇಳಿ ಎಲ್ಲೂ ಪ್ರಚಾರ ಬಯಸದೇ ಅಲ್ಲಿಗೇ ಮುಗಿಸಿದ್ದಾರೆ ಪ್ರಿಯಾಕೃಷ್ಣ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ,ಪ್ರಥಮ್ ಕೇಳಿದ ರೇಷನ್ ಕಿಟ್ ಗಳು ಮತ್ತು ತಲುಪಿಸಿದ ಚೆಕ್ ಪ್ರಿಯಾಕೃಷ್ಣ ರ ಕ್ಷೇತ್ರಕ್ಕೂ ಸಂಬಂಧವೇ ಇಲ್ಲ ಅನ್ನೋದು. ಮೇಲಾಗಿ ಈಗ ಪ್ರಿಯಾಕೃಷ್ಣ ಈ ಬಾರಿ ಚುನಾವಣೆಯಲ್ಲಿ ಗೆದ್ದೂ ಇಲ್ಲ.. ಸೋತಮೇಲೆ ಕೈಕೊಟ್ಟು ಹೋಗೋರೆ ಜಾಸ್ತಿ. ವಿಶ್ವಾಸಕ್ಕೆ ಕಟ್ಟುಬಿದ್ದು ಯಾವ ಲಾಭವೂ ಬಯಸದ ಪ್ರಿಯಾಕೃಷ್ಣರ ಈ ಕೆಲಸ ತಿಳಿದ ಅಲ್ಲಿನ ಕೆಲವರು ಇಂತ ನಾಯಕನನ್ನು ಕೈಹಿಡಿಯಲಿಲ್ಲವಲ್ಲ ಎಂದು ಮರುಗುತ್ತಿದ್ದಾರೆ. ಪ್ರಥಮ್ -ಪ್ರಿಯಾಕೃಷ್ಣ ನಡುವಿನ ವಿಶ್ವಾಸ ಹೀಗೇ ಮುಂದುವರೆಯಲಿ.
‘ಕೊಡ್ತಿರೋನು ಕುಬೇರನೂ ಅಲ್ಲ, ಪಡೆದವರು ನಿರ್ಗತಿಕರೂ ಅಲ್ಲ. ಕಷ್ಟಕಾಲಕ್ಕೆ ಒಬ್ಬರಿಗೊಬ್ಬರು ನೆರವಾಗುತ್ತಿದ್ದೇವಷ್ಟೇ.. ಅದನ್ನು ಫೋಟೋ ತೆಗೆದು ಪ್ರಚಾರ ಪಡೆಯಬಾರದು’ ಎನ್ನುವ ಕಾರಣಕ್ಕೆ ಎಲ್ಲೂ ಸ್ವೀಕರಿಸಿದವರ ಮುಖ ಕಾಣದಂತೆ ಪ್ರಥಮ್ ಎಚ್ಚರ ವಹಿಸಿದ್ದಾರೆ. ಚಿತ್ರರಂಗದ ಅಸಂಘಟಿತ ಶ್ರಮಿಕರ ಜೊತೆಗೆ ಜನಸಾಮಾನ್ಯರು, ಮಂಗಳಮುಖಿಯರು ಸೇರಿದಂತೆ ಕಣ್ಣೆದುರಿಗೆ ಕಷ್ಟ ಪಡುತ್ತಿರುವ ದೇವ್ರಂತಾ ಜೀವಗಳಿಗೆ ನೆರವಾಗುತ್ತಿರುವ ಒಳ್ಳೇಹುಡ್ಗನಿಗೂ ಒಳ್ಳೇದಾಗ್ಲಿ…