premam pujyam

ನೆನಪಿರಲಿ ಪ್ರೇಮ್‌ ಈಗ ಮಹತ್ವದ ಘಟ್ಟಕ್ಕೆ ಬಂದು ತಲುಪಿದ್ದಾರೆ. ಸಿನಿಮಾರಂಗದ ಹಿನ್ನೆಲೆ, ಹಣಬಲ ಇಲ್ಲದೆ ಹೀರೋ ಆಗೋದೇ ಕಷ್ಟ ಅನ್ನುವಂತಿದ್ದ ಕಾಲದಲ್ಲಿ, ರಂಗಭೂಮಿಯ ನಂಟು ಪಡೆದು, ನಂತರ ನೆನಪಿರಲಿ ಸಿನಿಮಾದ ಮೂಲಕ ನಾಯಕನಟನಾಗಿ ಬಣ್ಣದ ಜಗತ್ತಿಗೆ  ಕಾಲಿಟ್ಟವರು ಪ್ರೇಮ್.‌

ಲವ್ಲಿ ಸ್ಟಾರ್‌ ಪಟ್ಟವನ್ನು ಪಡೆದು, ಹಂತ ಹಂತವಾಗಿ ಮೇಲೆಬಂದು, ಪರ್ಮನೆಂಟಾಗಿ ಚಿತ್ರರಂಗದಲ್ಲಿ ಉಳಿದಿರುವ ಪ್ರೇಮ್‌ ಪಾಲಿಗೆ ಪ್ರೇಮಂ ಪೂಜ್ಯಂ ಇಪ್ಪತ್ತೈದನೇ ಚಿತ್ರ. ಬಂದ ಕತೆಗಳನ್ನೆಲ್ಲಾ ಒಪ್ಪಿದ್ದಿದ್ದರೆ ಬಹುಶಃ ಇಂದು ಮೂವತ್ತು, ನಲವತ್ತರ ಗಡಿ ದಾಟಿರುತ್ತಿದ್ದರು.

ಇಷ್ಟು ಸಿನಿಮಾಗಳಲ್ಲಿ ನಟಿಸಿದ ಮೇಲೆ, ಇನ್ನು ತನಗೊಪ್ಪುವ ಕತೆಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು ಅಂತಾ ಪ್ರೇಮ್‌ ನಿರ್ಧರಿಸಿದ್ದರು. ಅದೇ ಸಮಯಕ್ಕೆ ವೈದ್ಯ ವೃತ್ತಿಯೊಂದಿಗೆ ಸಿನಿಮಾವನ್ನು ಜೀವದಂತೆ ಪ್ರೀತಿಸುವ ಡಾ. ರಾಘವೇಂದ್ರ ಜೊತೆಯಾದರು. ಪ್ರೇಮ್‌ ಮಾತ್ರವೇ ನಟಿಸಬಹುದಾದ ಕತೆಯನ್ನು ಸಿದ್ದಪಡಿಸಿದ್ದರು. ಏಳು ವಿಭಿನ್ನ ಗೆಟಪ್ಪುಗಳಿರುವ ʻಪ್ರೇಮಂ ಪೂಜ್ಯಂʼ ಶುರುವೂ ಆಯ್ತು. ಆದರೆ, ಅದು ಬೇಡಿದ್ದ ಶ್ರಮ ಅಷ್ಟಿಷ್ಟಲ್ಲ. ಹತ್ತೊಂಬತ್ತು ವರ್ಷದ ಹುಡುಗನಿಂದ ಹಿಡಿದು ನಲವತ್ತೈದರ ವಯಸ್ಕನ ತನಕ ಭಿನ್ನ ಕಾಲಘಟ್ಟದ ಪಾತ್ರಗಳಿಗೆ ಪ್ರೇಮ್‌ ತಮ್ಮನ್ನು ತಾವು ಮಾರ್ಪಾಟು ಮಾಡಿಕೊಳ್ಳಬೇಕಿತ್ತು. ಊಟ ಬಿಟ್ಟು, ಡಯೆಟ್‌ ಮಾಡಿ ಮೈ ಕರಗಿಸಬೇಕಿತ್ತು.

premam pujyam

ಸದ್ಯ ಅರವತ್ತಾರು ಕೇಜಿ ತೂಗುತ್ತಿರುವ ಲವ್ಲಿಸ್ಟಾರ್‌ ಗೆ ಊಟವೆಂದರೆ ಪ್ರಾಣ. ಎರಡು ಬಿರಿಯಾನಿಯನ್ನು ಭರ್ಜರಿಯಾಗಿ ತಿಂದು ಮೂರು ತಾಸು ಕಳೆಯುವ ಹೊತ್ತಿಗೆ ಮತ್ತೆ ಹಸಿವಾಗುವಂಥಾ ದೇಹವಾತಾವರಣ ಪ್ರೇಮ್‌ ಅವರದ್ದು. ತಿಂದ ಊಟವನ್ನು ಸಲೀಸಾಗಿ ಅರಗಿಸಿಕೊಳ್ಳುವುದು ಅವರ ವಂಶದ ಬಳುವಳಿಯಂತೆ. ಇಂಥ ಪ್ರೇಮ್‌ ಏಕಾಏಕಿ ತಮ್ಮನ್ನು ತಾವು ಡಯೆಟ್ಟಿಗೆ ಒಗ್ಗಿಸಿಕೊಂಡು, ತಿಂಗಳಿಗೆ ಎರಡು ಸಲ ಮೂವತ್ತಾರು ಗಂಟೆಗಳ ಕಾಲ ನೀರನ್ನೂ ಕುಡಿಯದೆ ನಿರ್ಜಲ ಉಪವಾಸ ಮಾಡಿ ಸ್ಲಿಂ ಆಗಿದ್ದಾರೆ. ಎರಡು ವರ್ಷಗಳಿಂದ ವ್ರತ ಹಿಡಿದವರಂತೆ ಕಸರತ್ತು ಮಾಡಿ, ದೇಹ ದಂಡಿಸಿ  ಇಂದು ಚೆಂದನೆಯ ಸಿನಿಮಾವೊಂದರ ಭಾಗವಾಗಿದ್ದಾರೆ.

ಈ ಚಿತ್ರವನ್ನು ಡಾ. ಬಿ.ಎಸ್. ರಾಘವೇಂದ್ರ ನಿರ್ದೇಶಿಸಿದ್ದಾರೆ. ಕೆಡಂಬಡಿ ಕ್ರಿಯೇಶನ್ಸ್ ಸಂಸ್ಥೆಯಲ್ಲಿ ತಯಾರಾಗಿರುವ ಈ ಚಿತ್ರವನ್ನು ಡಾ. ರಕ್ಷಿತ್ ಕೆಡಂಬಡಿ, ಡಾ. ರಾಜ್ ಕುಮಾರ್ ಜಾನಕೀರಾಮನ್, ಡಾ. ರಾಘವೇಂದ್ರ ಎಸ್. ಮನೋಜ್ ಕೃಷ್ಣನ್ ಸೇರಿ ನಿರ್ಮಿಸಿದ್ದಾರೆ.

ಸಂಗೀತ ಮತ್ತು ಸಾಹಿತ್ಯವನ್ನು ಸ್ವತಃ ನಿರ್ದೇಶಕ ರಾಘವೇಂದ್ರ ರಚಿಸಿದ್ದಾರೆ. ಹಿನ್ನೆಲೆ ಸಂಗೀತವನ್ನು ಎಂ.ಎಸ್. ತ್ಯಾಗರಾಜ್ ಮತ್ತು ರಾಘವೇಂದ್ರ ನಿಭಾಯಿಸಿದ್ದಾರೆ. ನವೀನ್ ಕುಮಾರ್ ಅವರ ಕಲಾತ್ಮಕ ಕ್ಯಾಮೆರಾ ಕೆಲಸ, ಚರಣ್ ರಾವ್ ಗಿಟಾರ್, ಫ್ರಾನ್ಸಿಸ್ ತಂಡದ ವಯಲಿನ್, ಸಂಜಯ್ ಕುಮಾರ್ ಅವರ ಧ್ವನಿ ವಿನ್ಯಾಸ ಪ್ರೇಮಂ ಪೂಜ್ಯಂ ಚಿತ್ರಕ್ಕಿದೆ. ಇದೇ ವಾರ ಪ್ರೇಮಂ ಪೂಜ್ಯಂ ಕರ್ನಾಟಕ ಮಾತ್ರವಲ್ಲದೆ, ಹಲವು ರಾಜ್ಯ, ರಾಷ್ಟ್ರಗಳಲ್ಲಿ ತೆರೆಗೆ ಬರುತ್ತಿದೆ. ಪಟ್ಟ ಶ್ರಮಕ್ಕೆಲ್ಲಾ ಪ್ರತಿಫಲದಂತೆ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿ…

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಹುಷಾರು ಪ್ರಸನ್ನ!

Previous article

ಹಾಯಾಗಿದೆ ಎದೆಯೊಳಗೆ…!

Next article

You may also like

Comments

Leave a reply

Your email address will not be published.