ಎಲ್ಲೆಲ್ಲೋ ಹುಟ್ಟಿ ಬೆಳೆದವರು. ಓದುವ ಕಾರಣಕ್ಕೆ ಬಂದು ಒಂದಾಗುತ್ತಾರೆ. ದೇಶದ ನಾನಾ ಮೂಲೆಗಳಿಂದ ವಿದ್ಯಾಭ್ಯಾಸಕ್ಕಾಗಿ ಬಂದವರು, ಓದನ್ನು ನೆಪವಾಗಿಸಿಕೊಂಡು ಓತ್ಲಾ ಹೊಡೆಯುವುದನ್ನೇ ಬದುಕಾಗಿಸಿಕೊಂಡವರು, ಪಾಸಾಗದೇ ಅಲ್ಲೇ ಉಳಿದವರು ಅದರ ನಡುವೆ ಅಲ್ಲೊಬ್ಬ ಇಲ್ಲೊಬ್ಬ ಪ್ರಾಮಾಣಿಕ ವಿದ್ಯಾರ್ಥಿಗಳು – ಅದು ಮೆಡಿಕಲ್ ಕಾಲೇಜು. ಬೇರೆಲ್ಲಾ ಕಾಲೇಜುಗಳಂತೇ ವೈದ್ಯಕೀಯ ವಿದ್ಯಾಲಯದಲ್ಲೂ ರ್ಯಾಗಿಂಗು, ರಗಳೆಗಳಿರುತ್ತವೆ ಅನ್ನೋದರ ಮೂಲಕ ಕತೆ ತೆರೆದುಕೊಳ್ಳುತ್ತದೆ. ಮಂಡ್ಯ ಜಿಲ್ಲೆಯ ಮಳವಳ್ಳಿಯ ರೈತಾಪಿ ಕುಟುಂಬದ ಹುಡುಗ ಶ್ರೀಹರಿ. ರೈತರ ಮಕ್ಕಳು ಮೆಡಿಕಲ್ ಓದಲು ಬರಬೇಕಾದರೆ ಪಡಬೇಕಾದ ಪಾಡು, ಬವಣೆಗಳು ಸೂಕ್ಷ್ಮವಾಗಿ ಅನಾವರಣಗೊಂಡಿರುತ್ತದೆ.
ಕಾಲೇಜಿನ ಕ್ಲಾಸ್ ರೂಮಿಗೆ ಲೇಟಾಗಿ ಎಂಟ್ರಿ ಕೊಡುವ ಹುಡುಗಿ ಶೆರ್ಲಿನ್ ಹುಡುಗನ ಎದೆಯೊಳಗೂ ಹೆಜ್ಜೆ ಇಡುತ್ತಾಳೆ.
ಪ್ರೀತಿ ಅಂದರೆ ಒಟ್ಟೊಟ್ಟಿಗೇ, ಕೈ ಕೈ ಹಿಡಿದು ಸುತ್ತಾಡುವುದು, ಟೈಮು ಸಿಕ್ಕಾಗೆಲ್ಲಾ ಮುದ್ದಾಡಿಕೊಳ್ಳುವುದು, ಅವಕಾಶ ಒದಗಿಬಂದರೆ ಎಲ್ಲವನ್ನೂ ಪೂರೈಸಿಕೊಳ್ಳುವುದು ಈಗಿನ ರೀತಿ. ಆದರೆ ಇದು ಇಪ್ಪತ್ತು ವರ್ಷಗಳ ಹಿಂದೆ ಅರಳಿಕೊಳ್ಳುವ ಪ್ರೀತಿ. ಅಲ್ಲದೆ, ಹುಡುಗಿಯೇ ಬಂದು ಕೈ ಹಿಡಿ, ಕಿಸ್ ಕೊಡು ಅಂದರೂ ಒಲ್ಲೆ ಎನ್ನುವ ಶುದ್ದಾತ್ಮ ಈ ಹುಡುಗ. ಪ್ರೀತಿಗೆ ಹೊಸ ಪರಿಭಾಷೆ ಬರೆಯಲು ಹೊರಟವನು. ಮದುವೆಯಾದರೆ ಮಾತ್ರ ಅವಳನ್ನು ಮುಟ್ಟಬೇಕೆಂದು ಮನಸ್ಸು ಮಾಡಿದವನು. ತನ್ನ ಲವ್ ಹಂಡ್ರೆಂಡ್ ಪರ್ಸೆಂಟ್ ಪ್ಯೂರ್ ಆಗಿದ್ದರೆ ಮಾತ್ರ ಅದನ್ನು ನನಗೆ ದಕ್ಕಿಸಿಕೊಡು ಅಂತಾ ಕರುಣಾಮಯಿ ದೇವರಲ್ಲಿ ಮೊರೆಯಿಡುವ ಸತ್ಯಸಂಧ. ಇಷ್ಟಪಟ್ಟ ಹುಡುಗಿಯನ್ನು ನಿಷ್ಕಾಮವಾಗಿ ಕಂಡು, ತೀವ್ರ ರೀತಿಯಲ್ಲಿ ಗೌರವಿಸೋದೇ ಪ್ರೀತಿ ಅಂತಾ ನಂಬಿದ ಹೃದಯವಂತ!
ಇಷ್ಟು ಗಾಢವಾಗಿ ಪ್ರೀತಿಸಲು ಸಾಧ್ಯವಾ? ಅನ್ನಿಸುವ ಹೊತ್ತಿಗೇ ಆ ಪ್ರೀತಿ ಆತನಿಗೆ ಒಲಿಯುತ್ತಾ ಎನ್ನುವ ಪ್ರಶ್ನೆಯೂ ಮೂಡುತ್ತದೆ. ಅನ್ಯಧರ್ಮದ ಜೊತೆಗೆ ಅಮ್ಮನ ಅಡ್ಡಗಾಲು, ಒಪ್ಪಿದವರ ಅಗಲಿಕೆಗಳೆಲ್ಲಾ ಎದುರಾದಮೇಲೂ ಶ್ರೀಹರಿ-ಶೆರ್ಲಿನ್ ಒಂದಾಗುತ್ತಾರಾ? ಇಲ್ಲವಾ ಅನ್ನೋದು ಸಿನಿಮಾದ ಅಂಂತಿಮ ಗುಟ್ಟು.
ಅದೇನೋ ಗೊತ್ತಿಲ್ಲ. ಜೀವ ಉಳಿಸಿಕೊಡುವ ವೈದ್ಯರ ಬಗ್ಗೆ ಜನಸಾಮಾನ್ಯರಲ್ಲಿ ಕೆಲವಾರು ಕಲ್ಪನೆಗಳು, ಅಪನಂಬಿಕೆಗಳು ಮನೆಮಾಡಿರುತ್ತವೆ. ಬಿಳೀ ಕೋಟು ಹಾಕಿಕೊಂಡು, ಕುತ್ತಿಗೆಯಲ್ಲಿ ಸ್ಟೆತಾಸ್ಕೋಪು ನೇತು ಹಾಕಿಕೊಂಡವರ ಎದೆಯಲ್ಲಿ ಪ್ರೀತಿ ಹುಟ್ಟುತ್ತಾ? ಹುಟ್ಟು, ಸಾವುಗಳನ್ನೆಲ್ಲಾ ಕಣ್ಣಾರೆ ಕಾಣುವ ಅವರಲ್ಲಿ ಬದುಕಿನ ಸಹಜ ಸಂವೇದನೆಗಳೆಲ್ಲಾ ಉಳಿದಿರತ್ತಾ? ಲವ್ ಫೇಲಾದ್ರೂ ಲೈಫಲ್ಲಿ ಫೇಲಾಗಬಾರದು ಎನ್ನುವ ಥಿಯರಿಯನ್ನು ಹೇಳುವ ವೈದ್ಯನ ಎದೆಯೊಳಗೆ ಕೈಬಿಟ್ಟುಹೋದ ಪ್ರೀತಿ ಕಾಡದೇ ಬಿಡುತ್ತದಾ? ಎಂಬಿತ್ಯಾದಿ ಪ್ರಶ್ನೆಗಳಿಗೆ ಪ್ರೇಮಂ ಪೂಜ್ಯಂ ಚಿತ್ರದಲ್ಲಿ ನಿಖರ ಉತ್ತರ ದೊರೆಯುತ್ತದೆ.
ಹಳೇದನ್ನೆಲ್ಲಾ ಮರೆತಿಲ್ವಾ? ಅಂತಾ ಹುಡುಗಿ ಕೇಳಿದಾಗ
ನಾನು ಯಾವುದನ್ನೂ ಹಳೇದಾಗಲು ಬಿಡೋದಿಲ್ಲ…. ಎನ್ನುವ ಅವನ ಉತ್ತರ ಮತ್ತೆ ಮತ್ತೆ ಕಾಡುತ್ತದೆ. ನನಗೋಸ್ಕರ ನಿನ್ನನ್ನು ಏನೂ ಕೇಳಲಿಲ್ಲ ಜೀಸಸ್. ಆದರೆ ಮತ್ತೆ ನನ್ನ ಜೀವನದಲ್ಲಿ ಯಾಕೆ ಅವಳನ್ನು ಬರುವ ಹಾಗೆ ಮಾಡಿದೆ? ಅಂತಾ ಆತ ಕಣ್ಣೀರು ಸುರಿಸಿದಾಗ ಭಗ್ನ ಪ್ರೇಮಿಗಳಿಗೆ ಮಾತ್ರವಲ್ಲ ಪ್ರತಿಯೊಬ್ಬರ ಕಣ್ಣು ಒದ್ದೆಯಾಗುತ್ತದೆ.
ಬ್ರೋಕನ್ ಹಾರ್ಟ್ ಸಿಂಡ್ರೋಮ್ ಎನ್ನುವ ವಿರಳ ಬಾಧೆಯ ಕಾರಣಗಳನ್ನು ಪ್ರೇಮಂ ಪೂಜ್ಯಂ ಪ್ರೇಕ್ಷಕರಿಗೆ ಪರಿಚಯಿಸಿದೆ. ಹನ್ನೆರಡು ಹಾಡುಗಳಿದ್ದರೂ ಅವು ಬಂದುಹೋಗೋದು ಗೊತ್ತಾಗದಂತೆ ಕತೆ ಸಾಗುತ್ತದೆ. ಸಾಧು ಕೋಕಿಲಾ ಕಾಮಿಡಿ ಸಿನಿಮಾದ ವೇಘವನ್ನು ಕಡಿಮೆ ಮಾಡಿರೋದು ನಿಜ. ಮೊದಲ ಭಾಗ ಸ್ಲೋ ಅನ್ನಿಸಿದರೂ ಎರಡನೇ ಭಾಗ ಲವಲವಿಕೆಯಿಂದ ಸಾಗುತ್ತದೆ. ಮಾಸ್ಟರ್ ಆನಂದ್ ವಿಪರೀತ ರಂಜಿಸುತ್ತಾರೆ. ಲವ್ಲಿ ಸ್ಟಾರ್ ಹುಸಿ ಗಾಂಭೀರ್ಯ ಚಿತ್ರಕ್ಕೆ ಪೂರಕವಾಗೇ ಇದೆ. ನಾಯಕಿ ಬೃಂದಾ ಆಚಾರ್ಯ ನಗುವಾಗ ಮತ್ತು ಅಳುವಾಗ ಮಾತ್ರ ಗಮನ ಸೆಳೆಯುತ್ತಾಳೆ. ನವೀನ್ ಕುಮಾರ್ ಕ್ಯಾಮೆರಾ ಕೆಲಸ ಬ್ಯೂಟಿಫುಲ್. ತ್ಯಾಗರಾಜ್ ಮತ್ತು ರಾಘವೇಂದ್ರ ಹಿನ್ನೆಲೆ ಸಂಗೀತ ಕರ್ಣಾನಂದಕ್ಕೆ ಕಾರಣವಾಗುತ್ತದೆ.
ಪುನೀತ್ ರಾಜ್ ಕುಮಾರ್ ಅವರ ನಿಧನದ ಆಘಾತದಲ್ಲಿರುವಾಗಲೇ ಹೃದಯದ ಆರೋಗ್ಯಕ್ಕೆ ಸಂಬಂಧಿಸಿದ ಈ ಸಿನಿಮಾ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ. ಅಡಿಗಡಿಗೆ ಅಪ್ಪು ಅವರನ್ನು ನೆನಪು ಮಾಡುತ್ತದೆ.
ಸ್ವತಃ ವೈದ್ಯರಾಗಿರುವ ನಿರ್ದೇಶಕ ರಾಘವೇಂದ್ರ ಹಲವು ಕಾರಣಗಳಿಗೆ ಪ್ರೇಮಂ ಪೂಜ್ಯಂ ಚಿತ್ರದ ಬಗ್ಗೆ ಪೂಜನೀಯ ಭಾವ ಮೂಡಿಸಿದ್ದಾರೆ. ಇದೇ ಅವರ ಗೆಲುವೆಂದುಕೊಳ್ಳಬಹುದು….
Comments