ಯಾವುದೇ ಸಿನಿಮಾ ಕಲಾವಿದರು ತಮ್ಮ ಇಪ್ಪತ್ತೈದನೇ ಸಿನಿಮಾ ತಮಗೆ ಮಾತ್ರವಲ್ಲದೆ, ಪ್ರೇಕ್ಷಕರ ನೆನಪಿನಲ್ಲೂ ಅಚ್ಚಳಿಯದೇ ಉಳಿಯಬೇಕು ಅಂತಾ ಬಯಸುವುದು ಸಹಜ. ʻನೆನಪಿರಲಿʼ ಸಿನಿಮಾದ ಮೂಲಕ ಹೀರೋ ಆಗಿ ಚಿತ್ರರಂಗಕ್ಕೆ ಬಂದು, ನಂತರ ಲವ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡವರು ಪ್ರೇಮ್. ನೋಡ ನೋಡುತ್ತಿದ್ದಂತೇ ಪ್ರೇಮ್ ಮಹತ್ತರವಾದ ಘಟ್ಟಕ್ಕೆ ಬಂದಿದ್ದಾರೆ. ಅವರ ನಟನೆಯ ಇಪ್ಪತ್ತೈದನೇ ಚಿತ್ರ ಪ್ರೇಮಂ ಪೂಜ್ಯಂ.
ಫೆಬ್ರವರಿ 14ರಂದು ಪ್ರೇಮಿಗಳ ದಿನಕ್ಕಾಗಿ ಪ್ರೇಮಂ ಪೂಜ್ಯಂ ಚಿತ್ರದ ಮನಮೋಹಕವಾದ ಟೀಸರ್ ರಿಲೀಸ್ ಆಗಿದೆ. ಪ್ರೇಮಿಗಳ ದಿನದ ಗ್ರೀಟಿಂಗ್ ಕಾರ್ಡ್ ನಂತಿರುವ ಈ ಟೀಸರ್ ಅನ್ನು ಹತ್ತು ಹಲವು ಸಲ ನೋಡಿದರೂ ಪ್ರೀತಿಸೋ ಜೀವಗಳಿಗೆ ಬೇಜಾರಾಗೋದಿಲ್ಲ. ಅಷ್ಟು ಆಕರ್ಷಕವಾಗಿ ಮೂಡಿಬಂದಿದೆ.
ಕಿಟಕಿಯ ಗಾಜಿನ ಆಚೆಗೆ ಧೋ ಎಂದು ಸುರಿಯುವ ಮಳೆ. ಮಳೆಗೆ ಮುಖ ಮಾಡಿ ನಿಂತ ಹೀರೋ. ಹಿನ್ನೆಲೆಯಲ್ಲಿ ʻʻನಿನ್ನನು ಬಿಟ್ಟು ಹೇಗಿರಲಿ… ನಿನಗಾಗಿ ನಾನು ಕಾಯುವೆನು… ಏಂಜಲ್…” ಎನ್ನುವ ಅವನದೇ ದನಿ. ಹಳೆಯ ಕಟ್ಟಡ, ಅದರ ಎದುರೊಂದು ಕಾರು, ಅದಕ್ಕೆ ಒರಗಿ ಕೊಡೆ ಹಿಡಿದು ಹೀರೋ ನಿಂತಿದ್ದಾನೆ. ಮತ್ತೊಂದೆಡೆ ಕೊಡೆ ಹಿಡಿದು ಹುಡುಗಿ ಕೂತಿದ್ದಾಳೆ. ಸುತ್ತ ಹೂಗಳು…. ಇವೆಲ್ಲಾ ಪ್ರೇಮಂ ಪೂಜ್ಯಂ ಚಿತ್ರದ ಟೀಸರಿನಲ್ಲಿ ಅನಾವರಣಗೊಂಡಿರುವ ಕ್ಯೂಟ್ ಕ್ಷಣಗಳು. ಟೀಸರೇ ಇಷ್ಟೊಂದು ಮುದ್ದಾಗಿದೆಯಲ್ಲಾ? ಇನ್ನು ಸಿನಿಮಾ ಅದೆಷ್ಟು ಚೆಂದ ಇರಬೇಕು. ಅಲ್ಲಿ ಬಳಸಿರುವ ಹಿನ್ನೆಲೆ ಸಂಗೀತವನ್ನು ವರ್ಣಿಸಲು ಇರುವ ಒಂದೇ ಪದ ಅದ್ಭುತ!
“ಇಪ್ಟಾ” ಎಂಬ ರಂಗ ತಂಡದಲ್ಲಿ ನಟನೆಯನ್ನು ಕಲಿತು, ಶಶಿಕಾಂತ ಯಡಹಳ್ಳಿಯವರ ನಿರ್ದೇಶನದ ನಾಟಕಗಳಲ್ಲಿ ಅಭಿನಯಿಸಿ, ಚಿತ್ರರಂಗ ಪ್ರವೇಶಿಸಿ “ಒಳ್ಳೆ ಹೀರೋ” ಎನಿಸಿಕೊಂಡು ಯುವಕರನ್ನು ಸೆಳೆದಿದ್ದರ ಜೊತೆಗೆ ಅಪಾರ ಮಹಿಳಾ ಅಭಿಮಾನಿಗಳನ್ನು ಹೊಂದಿರುವ ನಟ ಪ್ರೇಮ್. ಪ್ರೇಮ್ ಎಂಬ ಮುದ್ದು ಮುಖದ ನಟ “ನೆನಪಿರಲಿ” ಚಿತ್ರದ ಯಶಸ್ಸಿನ “ಜೊತೆಜೊತೆಯಲಿ” ಸಾಗಿ ಈಗ ಪ್ರೇಮಂ ಪೂಜ್ಯಂ ಎನ್ನುತ್ತಿದ್ದಾರೆ. ಈ ಚಿತ್ರವನ್ನು ಡಾ. ಬಿ.ಎಸ್. ರಾಘವೇಂದ್ರ ನಿರ್ದೇಶಿಸಿದ್ದಾರೆ. ಕೆಡಂಬಡಿ ಕ್ರಿಯೇಶನ್ಸ್ ಸಂಸ್ಥೆಯಲ್ಲಿ ತಯಾರಾಗಿರುವ ಈ ಚಿತ್ರವನ್ನು ಡಾ. ರಕ್ಷಿತ್ ಕೆಡಂಬಡಿ, ಡಾ. ರಾಜ್ ಕುಮಾರ್ ಜಾನಕೀರಾಮನ್, ಡಾ. ರಾಘವೇಂದ್ರ ಎಸ್. ಮನೋಜ್ ಕೃಷ್ಣನ್ ಸೇರಿ ನಿರ್ಮಿಸಿದ್ದಾರೆ.
ಸಂಗೀತ ಮತ್ತು ಸಾಹಿತ್ಯವನ್ನು ಸ್ವತಃ ನಿರ್ದೇಶಕ ರಾಘವೇಂದ್ರ ರಚಿಸಿದ್ದಾರೆ. ಹಿನ್ನೆಲೆ ಸಂಗೀತವನ್ನು ಎಂ.ಎಸ್. ತ್ಯಾಗರಾಜ್ ಮತ್ತು ರಾಘವೇಂದ್ರ ನಿಭಾಯಿಸಿದ್ದಾರೆ. ನವೀನ್ ಕುಮಾರ್ ಅವರ ಕಲಾತ್ಮಕ ಕ್ಯಾಮೆರಾ ಕೆಲಸ, ಚರಣ್ ರಾವ್ ಗಿಟಾರ್, ಫ್ರಾನ್ಸಿಸ್ ತಂಡದ ವಯಲಿನ್, ಸಂಜಯ್ ಕುಮಾರ್ ಅವರ ಧ್ವನಿ ವಿನ್ಯಾಸ ಪ್ರೇಮಂ ಪೂಜ್ಯಂ ಚಿತ್ರಕ್ಕಿದೆ.