ಇತ್ತೀಚಿಗಷ್ಟೇ ರಿಲೀಸ್ ಆಗಿದ್ದ ಪ್ರೀಮಿಯರ್ ಪದ್ಮಿನಿ ಸಿನಿಮಾದ ಮೇಲೆ ಕಳ್ಳತನದ ಆರೋಪ ಎದುರಾಗಿದೆ. ಖ್ಯಾತ ಬರಹಗಾರರಾದ ವಸುಧೇಂದ್ರರವರು ಬರೆದಿರುವ ವರ್ಣಮಯ ಪುಸ್ತಕದಿಂದ ಸಿನಿಮಾದಲ್ಲಿ ಗಮನ ಸೆಳೆದ ನಂಜುಂಡಿ ಪಾತ್ರವನ್ನು ಕದಿಯಲಾಗಿದೆ ಎಂಬ ಆರೋಪ ಪ್ರೀಮಿಯರ್ ಪದ್ಮಿನಿ ಸಿನಿಮಾದ ಚಿತ್ರತಂಡದ ಮೇಲೆ ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವಸುಧೇಂದ್ರ, ಸಿನಿಮಾದಲ್ಲಿರುವ ನಂಜುಂಡಿ ಪಾತ್ರವು ನನ್ನ ವರ್ಣಮಯ ಪುಸ್ತಕದಲ್ಲಿರುವ ಪ್ರಬಂಧ ನಂಜುಂಡಿಯಿಂದ ತೆರೆದುಕೊಂಡದ್ದು. ಅದರ ಬಹುತೇಕ ವಿವರಗಳನ್ನು ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ. ನಿರ್ದೇಶಕರು ಮೊದಲಿಗೆ ನನ್ನನ್ನು ಭೇಟಿಯಾಗಿ, ನನ್ನ ಎರಡು ಪ್ರಬಂಧಗಳನ್ನು ಬಳಸಿಕೊಂಡು ಸಿನಿಮಾ ಮಾಡುವುದಾಗಿ ಹೇಳಿದ್ದರು. ಅದಕ್ಕೆ ಸಂಭಾವನೆಯನ್ನೂ ನಿಗದಿಪಡಿಸಲಾಗಿತ್ತು. ನಂತರ ಕರಾರು ಪತ್ರವನ್ನು ಶುಭ ದಿನದಂದು ಮಾಡಿಕೊಳ್ಳೋಣ ಎಂದು ಹೇಳಿ ಹೋದವರು ಮತ್ತೆ ವಾಪಾಸಾಗಲಿಲ್ಲ. ಸಿನಿಮಾ ಬಿಡುಗಡೆಗೆ ಮುಂಚೆ ಕರೆ ಮಾಡಿ, ‘ಸಿನಿಮಾ ಮಾಡಿಬಿಟ್ಟೆ ಸಾರ್. ಆ ಪ್ರಬಂಧದ ಪ್ರೇರಣೆ ನನಗೆ ಸಾಕಷ್ಟಿದೆ. ಅದನ್ನು ಟೈಟಲ್ ಕಾರ್ಡ್ನಲ್ಲಿ ಹಾಕಬಹುದೇ?’ ಎಂದು ವಿಚಾರಿಸಿದರು. ನನ್ನ ಒಪ್ಪಿಗೆ ಇಲ್ಲದೆ ಸಿನಿಮಾ ಆಗಿರುವುದು ನನಗೆ ಇಷ್ಟವಾಗಲಿಲ್ಲ. ಪ್ರೇರಣೆಯನ್ನು ಪಡೆದುಕೊಂಡಿದ್ದರೆ ನನಗೆ ಸಮಸ್ಯೆಯಿಲ್ಲ. ಆದರೆ ಪ್ರಬಂಧದ ದೃಶ್ಯಗಳನ್ನು ತೆಗೆದುಕೊಳ್ಳುವಂತಿಲ್ಲ. ಯಾವುದೋ ಮತ್ತೊಂದು ಕಥೆಯ ಭಾಗವಾಗಿ ನನ್ನ ಪಾತ್ರಗಳು ಬರುವುದು ನನಗೆ ಇಷ್ಟವಿಲ್ಲ ಎಂದು ಹೇಳಿದ್ದೆ. ಅನಂತರ ಅವರು ಸುಮ್ಮನಾಗಿಬಿಟ್ಟರು.
ಈಗ ಸಿನಿಮಾದಲ್ಲಿ ಬಹುತೇಕ ನಂಜುಂಡಿ ಪಾತ್ರದ ದೃಶ್ಯಗಳು ನನ್ನ ಪ್ರಬಂಧದಿಂದ ನೇರವಾಗಿ ತೆಗೆದುಕೊಳ್ಳಲಾಗಿದೆ’ ಎಂದಿದ್ದಾರೆ. ‘ಸಿನಿಮಾದ ಬಹುತೇಕ ಮಂದಿಗೆ ಲೇಖಕರು ಮತ್ತು ಕಥೆಗಾರರ ಬಗ್ಗೆ ಇರುವ ಅಲಕ್ಷ್ಯ ಈ ಘಟನೆಯಿಂದ ಗೊತ್ತಾಗುತ್ತದೆ. ಇಲ್ಲಿ ಸಮಸ್ಯೆ ಇರುವುದು ಹಣದ್ದಲ್ಲ. ಅಂತಹ ದೊಡ್ಡ ಹಣದ ವ್ಯವಹಾರ ಸಾಹಿತಿಗಳ ಮಧ್ಯೆ ನಡೆಯುವುದಿಲ್ಲ. ಆದರೆ ಯಾವುದೋ ನನಗೆ ಒಪ್ಪಿಗೆಯಾಗದ ಅಸೂಕ್ಷ್ಮ ಕಥೆಯ ಚಿತ್ರವೊಂದರ ಭಾಗವಾಗಿ ನನ್ನ ಪಾತ್ರಗಳನ್ನು ಬಳಸಿಕೊಳ್ಳುವುದನ್ನು ವಿರೋಧಿಸುತ್ತೇನೆ. ಇದು ಮತ್ತೊಬ್ಬ ಕಥೆಗಾರನಿಗೆ ಆಗಬಾರದೆಂಬ ಕಾಳಜಿಯೇ ಈ ವಿರೋಧದ ಉದ್ದೇಶ. ಸಿನಿಮಾದ ಮೂಲಕ ಜನಪ್ರಿಯತೆ ಗಳಿಸುವ ಹಪಹಪಿಯೂ ನನಗಿಲ್ಲ. ಏಕೆಂದರೆ ಈಗಾಗಲೇ ನನ್ನ ಪುಸ್ತಕಗಳು ಹಲವಾರು ಮುದ್ರಣಗಳನ್ನು ಕಂಡು ಓದುಗರ ಮನ್ನಣೆ ಗಳಿಸಿವೆ. ಅದಕ್ಕೆ ಸಿನಿಮಾ ಮಂದಿಯ ಮುದ್ರೆ ಬೇಕಿಲ್ಲ. ಈಗ ನನ್ನ ಸುದೀರ್ಘ ಪ್ರಬಂಧವನ್ನು ಮತ್ತೊಬ್ಬರು ಸಿನಿಮಾ ಮಾಡುವುದಕ್ಕೂ ಸಾಧ್ಯವಿಲ್ಲ. ಅದನ್ನು ಅರ್ಧಂಬರ್ಧ, ತಮ್ಮ ಮನಸ್ಸಿಗೆ ತೋಚಿದಂತೆ ಈ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಇಂತಹ ಘಟನೆಗಳು ಕನ್ನಡದಲ್ಲಿ ಮತ್ತೆ ನಡೆಯದಿರಲಿ ಎನ್ನುವುದಷ್ಟೇ ನನ್ನ ಕಳಕಳಿ’ ಎಂದು ಅವರು ಹೇಳಿಕೊಂಡಿದ್ದಾರೆ.
ಲೇಖಕರ ಮಾತನ್ನು ಅಲ್ಲಗಳೆದು ಸಿನಿಮಾ ಮಾಡುವ ತಗಾದೆ ಏನಿತ್ತೋ ಶೃತಿ ನಾಯ್ಡು ಅವರೇ ಹೇಳಬೇಕು. ಕದ್ದಿದ ಕಥೆಯಾದರಿಂದಲೇ ಸಿನಿಮಾ ಮಕಾಡೆ ಮಲಗಿಕೊಂಡಿತೇನೋ ತಿಳಿಯುತ್ತಿಲ್ಲ. ಸಿನಿಮಾದ ಕುರಿತಾದ ಯಾವುದೇ ಪ್ರೆಸ್ ಮೀಟ್ ನಲ್ಲೂ ಈ ಕುರಿತು ಪ್ರಸ್ಥಾಪವನ್ನೇ ಮಾಡದ ಚಿತ್ರತಂಡ ಹಳ್ಳಕ್ಕೆ ಬಿದ್ದ ತಕ್ಷಣವೇ ಸಮಾಜಾಯಿಷಿಕೊಡಲು ಹಾತೊರೆಯುತ್ತಿದೆ. ಕೇವಲ ಧಾರಾವಾಹಿಗೆ ಸೀಮಿತವಾಗಿದ್ದ ಶೃತಿ ನಾಯ್ಡು ಅದ್ಯಾಕಪ್ಪ ಕದ್ದು ಸಿನಿಮಾ ಮಾಡುವ ಉನ್ಮಾದಕ್ಕೆ ಇಳಿದರೋ ದೇವರೇ ಬಲ್ಲ. ಇನ್ನು ಮುಂದಾದರೂ ಸ್ವಂತಿಕೆಯಿಂದ ಸಿನಿಮಾ ಮಾಡುವ ಹವ್ಯಾಸವನ್ನು ಶೃತಿ ನಾಯ್ಡು ಮತ್ತು ಆಕೆಯ ಬಲಗೈ ಭಂಟ ರಮೇಶ್ ಇಂದಿರಾ ಕಲಿಯಲಿ. ಇಂತಹ ಸಿನಿಮಾಗಳನ್ನು ಪೂರ್ವಪರ ಯೋಚಿಸದೇ ಒಪ್ಪಿಕೊಳ್ಳುವ ನಟರಿಗೆ ತಿಳುವಳಿಕೆ ಬರುವಂತಾಗಲಿ.
No Comment! Be the first one.