ಕಾಸು ಕೊಟ್ಟು ಯಾವುದನ್ನು ಬೇಕಾದರೂ ಪಡೆಯಬಲ್ಲ ತಾಕತ್ತು ಹೊಂದಿರುವ ಕೆಲವೇ ಮಂದಿಯ ಪೈಕಿ ಶೃತಿ ನಾಯ್ಡು ಕೂಡಾ ಒಬ್ಬರು.
ಮೊದಲಿನಂತೆ ಸಿನಿಮಾ ಥೇಟರಿನಲ್ಲಿ ಓಡಿದರೆ ಮಾತ್ರ ಲಾಭ ಅನ್ನುವಂತ ಸಂದರ್ಭ ಈಗಿಲ್ಲ. ಸಿನಿಮಾ ನೋಡಲು ಜನ ಚಿತ್ರಮಂದಿರಕ್ಕೆ ಬರದಿದ್ದರೂ ಕಾಸು ಮಾಡಿಕೊಳ್ಳಲು ಸಾಕಷ್ಟು ದಾರಿಗಳಿವೆ. ಡಬ್ಬಿಂಗು, ಡಿಜಿಟಲ್ಲು, ಟೀವಿ ರೈಟ್ಸುಗಳನ್ನು ಮಾರಿದರೂ ಹಾಕಿದ ಬಂಡವಾಳ, ಕೆಲವೊಮ್ಮೆ ಲಾಭ ಕೂಡಾ ಆಗುತ್ತದೆ. ಟೀವಿ ಸೀರಿಯಲ್ಲುಗಳನ್ನು ನಿರ್ಮಿಸುವ ದೊಡ್ಡ ಸಂಸ್ಥೆಗಳು ಈಗ ಸಿನಿಮಾಗಳ ಮೇಲೂ ಕಣ್ಣಿಟ್ಟಿವೆ. ಯಾವ ವಾಹಿನಿಯಲ್ಲಿ ತಮ್ಮ ಸೀರಿಯಲ್ಲುಗಳು ಒಳ್ಳೇ ಟಿಆರ್’ಪಿ ಪಡೆದು ಲಾಭದಲ್ಲಿವೆಯೋ ಅದೇ ಚಾನೆಲ್ಲುಗಳಿಗೆ ತಾವೇ ಸಿನಿಮಾ ನಿರ್ಮಿಸಿ ಮಾರುವ ಕಸುಬು ಮಾಡುತ್ತಿದ್ದಾರೆ.
ಏಕಕಾಲದಲ್ಲಿ ಹಲವು ಧಾರಾವಾಹಿಗಳನ್ನು ನಿರ್ಮಿಸುವ ಶೃತಿ ನಾಯ್ಡು ಕಂಪನಿ ಮಾಡುತ್ತಿರೋದೂ ಇದನ್ನೇ. ಇವತ್ತು ಕಿರುತೆರೆಯಲ್ಲಿ ಅತ್ಯಂತ ಹೆಚ್ಚು ದುಡಿಯುತ್ತಿರುವ ನಿರ್ಮಾಪಕಿ ಈಕೆ. ಸೀರಿಯಲ್ ಇಂಡಸ್ಟ್ರಿಯಲ್ಲಿ ಇದುವರೆಗೂ ಯಾರೂ ಖರೀದಿಸದ ದುಬಾರಿ ಕಾರುಗಳು ಶೃತಿ ಬಳಿ ಇವೆಯಂತೆ. ಒಂದು ಕಾಲಕ್ಕೆ ಟಿ.ಎನ್. ಸೀತಾರಾಮ್ ಅವರ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಶೃತಿ ನಾಯ್ಡು ಬೆಳೆದ ರೀತಿ ಇದೆಯಲ್ಲಾ? ಅದು ನಿಜಕ್ಕೂ ಒಂಥರಾ ಪವಾಡ!
ಇದೇ ಶೃತಿ ನಾಯ್ಡು ಕಳೆದ ವರ್ಷ ಪ್ರೀಮಿಯರ್ ಪದ್ಮಿನಿ ಅನ್ನೋ ಸಿನಿಮಾವನ್ನು ನಿರ್ಮಿಸಿದರು. ಜಗ್ಗೇಶ್ ಮತ್ತು ಪ್ರಮೋದ್ ಅಭಿನಯದ ಈ ಸಿನಿಮಾವನ್ನು ಕಿರುತೆರೆ ನಿರ್ದೇಶಕ ರಮೇಶ್ ಇಂದಿರಾ ನಿರ್ದೇಶಿಸಿದ್ದರು. ಖ್ಯಾತ ಲೇಖಕ, ಕಾದಂಬರಿಕಾರ ವಸುಧೇಂದ್ರ ಅವರ ಕಥೆಯನ್ನು ಹೇಳದೇ ಕೇಳದೇ ಎತ್ತಿಕೊಂಡು ಸಿನಿಮಾ ಮಾಡಿದ ಅಪಕೀರ್ತಿಗೆ ಕೂಡಾ ರಮೇಶ್ ಗುರಿಯಾಗಿದ್ದರು. ಏನೇ ಎತ್ತುವಳಿ ನಡೆಸಿ ಚಿತ್ರ ಮಾಡಿದರೂ ಹೇಳಿಕೊಳ್ಳುವ ಮಟ್ಟಿಗೆ ಮೂಡಿಬಂದಿರಲಿಲ್ಲ; ಕಲೆಕ್ಷನ್ನೂ ಆಗಲಿಲ್ಲ. ಆ ಸಿನಿಮಾಗೆ ಅತಿ ದೊಡ್ಡ ಶಕ್ತಿಯಾಗಿದ್ದಿದ್ದು ನವರಸ ನಾಯಕ ಜಗ್ಗೇಶ್ ಅಭಿನಯ. ಜಗ್ಗೇಶ್ ಇದ್ದ ಮೇಲೆ ವ್ಯಾಪಾರ ಗ್ಯಾರೆಂಟಿ. ಹೀಗಾಗಿ ಸಿನಿಮಾವನ್ನು ಡಿಜಿಟಲ್, ಟೀವಿ ಇತ್ಯಾದಿಗಳಿಗೆ ಮಾರಿದ ಕಾರಣಕ್ಕೆ ಹಾಕಿದ ಬಂಡವಾಳಕ್ಕೆ ದುಪ್ಪಟ್ಟು ಲಾಭವಾಯ್ತು ಅನ್ನೋ ಮಾತಿದೆ.
ಕಾಸು ಕೊಟ್ಟು ಯಾವುದನ್ನು ಬೇಕಾದರೂ ಪಡೆಯಬಲ್ಲ ತಾಕತ್ತು ಹೊಂದಿರುವ ಕೆಲವೇ ಮಂದಿಯ ಪೈಕಿ ಶೃತಿ ನಾಯ್ಡು ಕೂಡಾ ಒಬ್ಬರು. ಸುಮಾರಾಗಿದ್ದ ಪ್ರೀಮಿಯರ್ ಪದ್ಮಿನಿಯಿಂದ ಸರಿಯಾದ ಲಾಭ ಕಂಡಿರುವ ನಾಯ್ಡು ಮೇಡಮ್ಮು ಈಗ ಪ್ರೀಪೇಯ್ಡ್ ಪದ್ಮಿನಿ ಎನ್ನುವ ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದು ಶೃತಿ ನಾಯ್ಡು ಅವರ ಹಿರಿಮೆ, ಗರಿಮೆಗಳನ್ನು ಕಂಡವರು ಹಬ್ಬಿಸುತ್ತಿರುವ ಪುಕಾರಾ? ಕುಹುಕವಾ ಅಥವಾ ನಿಜವಾ? ಸದ್ಯಕ್ಕೆ ಯಾವುದೂ ಗೊತ್ತಾಗುತ್ತಿಲ್ಲ!