ಹುಬ್ಬೇರಿಸೋ ಹಾಡಿನ ಮೂಲಕ ಸಾಂಕ್ರಾಮಿಕವಾಗಿ ಹುಚ್ಚು ಹತ್ತಿಸಿದ್ದ ಹುಡುಗಿ ಕೇರಳದ ಪ್ರಿಯಾ ವಾರಿಯರ್. ಒಂದೇ ಒಂದು ಹಾಡಿನಿಂದ ದೇಶ ವಿದೇಶಗಳಲ್ಲಿಯೂ ಪ್ರಸಿದ್ಧಿ ಪಡೆದಿರೋ ಈ ಹುಡುಗಿಗೆ ಅಚ್ಚರಿಯಾಗುವಂಥಾ ಅವಕಾಶಗಳು ಹುಡುಕಿ ಬಂದಿದ್ದವು. ಆದರೆ ಆ ವರೆಗೆ ಈಕೆ ನಟಿಸಿದ್ದ ಯಾವ ಚಿತ್ರವೂ ಬಂದಿರಲಿಲ್ಲ. ಪ್ರಿಯಾ ಈ ಪಾಟಿ ಸುದ್ದಿಯಾದದ್ದು ಆಕೆ ನಟಿಸಿದ್ದ ಮೊದಲ ಚಿತ್ರ ಒರು ಅಡಾರ್ ಲವ್ನ ಒಂದು ದೃಷ್ಯದಿಂದಷ್ಟೆ. ಇದೀಗ ಈ ಚಿತ್ರದ ಕನ್ನಡ ಡಬ್ಬಿಂಗ್ ವರ್ಷನ್ ಅನ್ನು ತೆರೆಗಾಣಿಸಲಿದ್ದಾರೆಂಬ ಸುದ್ದಿ ಹಬ್ಬಿಕೊಂಡಿದೆ. ಈ ಚಿತ್ರವನ್ನ ಪ್ರೇಮಿಗಳ ದಿನದಂದು ಬಿಡುಗಡೆಗೊಳಿಸಲಾಗುತ್ತದೆಯಂತೆ!
ಈಗಷ್ಟೇ ಕಾಲೇಜು ಕಲಿಯುತ್ತಿರೋ ಪ್ರಿಯಾ ವಾರಿಯರ್ `ಒರು ಅಡಾರ್ ಲವ್’ ಚಿತ್ರದ ಮೂಲಕ ಮಾಲಿವುಡ್ಗೆ ಪಾದಾರ್ಪಣೆ ಮಾಡಿದ್ದವಳು. ಕಾಲೇಜಿನಲ್ಲಿ ನಡೆಯುವ ಲವ್ಸ್ಟೋರಿ ಹೊಂದಿರೋ ಈ ಚಿತ್ರದ ಮೂಲಕವಷ್ಟೇ ಈಕೆ ಪರಿಚಯವಾಗಿದ್ದಳಾದರೂ ಅಷ್ಟೇನೂ ಪ್ರಸಿದ್ಧಿ ಪಡೆದಿರಲಿಲ್ಲ. ಆದರೆ ಆ ಚಿತ್ರದ ಇಪ್ಪತ್ತು ಸೆಕೆಂಡುಗಳ ವೀಡಿಯೋವನ್ನು ಧನುಷ್ ಅಭಿನಯದ ಥ್ರೀ ಚಿತ್ರದ ಹಿನ್ನೆಲೆ ಸಂಗೀತದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದೇ ಅದು ಸಖತ್ ಫೇಮಸ್ ಆಗಿತ್ತು. ಆ ವೀಡಿಯೋ ಶರ ವೇಗದಲ್ಲಿ ಮಾಲಿವುಡ್ ದಾಟಿ ಎಲ್ಲಾ ಭಾಷೆಗಳನ್ನೂ ಆವರಿಸಿಕೊಂಡಿದ್ದು ನಿಜಕ್ಕೂ ಆನ್ಲೈನ್ ಯುಗದ ಮಹಾ ಮಾಯೆ.
ಬಹುಶಃ ಮನಸೊಳಗಿನ ಸುಪ್ತ ಭಾವನೆಗಳನ್ನೆ ಕೆರಳಿಸುವಂಥಾ ಸಾಹಿತ್ಯ, ಹಾಡು, ದೃಷ್ಯಗಳು ಮಾತ್ರವೇ ಇಂಥಾ ಮ್ಯಾಜಿಕ್ಕು ಮಾಡುತ್ತವೇನೋ… ಆದ್ದರಿಂದಲೇ ಕಣ್ಣ ಪಾಪೆಗಳಿಂದಲೇ ಯಾವುದೋ ಸುಪ್ತ ಪದರುಗಳನ್ನು ಮೀಟಿದ ಈ ಹುಡುಗಿಯ ಬಗ್ಗೆ ಹುಡುಗರು, ನಡುವಯಸಿನ ಹುಡುಗರು ಮತ್ತು ವಯಸಾದ ಹುಡುಗರಿಗೂ ಅತೀವ ಕುತೂಹಲ ಮೂಡಿಕೊಂಡಿದ್ದರಲ್ಲಿ ಯಾವ ಅಚ್ಚರಿಯೂ ಇಲ್ಲ. ಆದರೆ, ಆ ಮುನ್ನ ಯಾವ ಚಿತ್ರದಲ್ಲಿಯೂ ನಟಿಸದ ಈಕ ಹುಬ್ಬೇರಿಸುವ ಮೂಲಕವೇ ಸನ್ನಿ ಹಿಡಿಸಿದ್ದನ್ನು ಕಂಡು ಅನೇಕರು ಮೂದಲಿಸಿದ್ದರು. ಆದರೆ ಅದೆಲ್ಲವನ್ನೂ ಮೀರಿ ಪ್ರಿಯಾ ಫೇಮಸ್ಸಾಗಿ ಬಿಟ್ಟಿದ್ದಾಳೆ!
#