ಕನ್ನಡ ಚಿತ್ರರಂಗದ ಪ್ರತಿಭಾವಂತರಿಬ್ಬರ ಸಮಾಗಮವಾಗಿದೆ. ರಥಾವರ, ತಾರಕಾಸುರದಂಥ ಸಿನಿಮಾ ಕೊಟ್ಟವರು ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ. ಸದ್ಯ ಇವರು ನಟ ಕಿಶೋರ್ ಅವರಿಗಾಗಿ ರೆಡ್ ಕಾಲರ್ ಎನ್ನುವ ಹಿಂದಿ ಚಿತ್ರವನ್ನೂ ರೂಪಿಸಿದ್ದಾರೆ. ಚಂದ್ರಶೇಖರ ಬಂಡೀಯಪ್ಪ ಉತ್ತಮ ನಿರ್ದೇಶಕ ಅನ್ನಿಸಿಕೊಳ್ಳುವುದರ ಜೊತೆಗೆ ಅದ್ಭುತ ಕತೆಗಾರರೂ ಆಗಿದ್ದಾರೆ. ʻದೇವರ ಕಾಲೋನಿʼ, ʻಚೈನಾಸೆಟ್ʼ ಮತ್ತು ʻಉಯಿಲುʼ ಎಂಬ ಮೂರು ಕಥೆಗಳನ್ನು ಒಳಗೊಂಡ ಕಥಾಸಂಕಲನ `ದೇವರ ಕಾಲೋನಿ’ ಹೆಸರಿನಲ್ಲಿ ಪ್ರಕಟ ಕೂಡಾ ಆಗಿದೆ. ಯುವ ನಿರ್ದೇಶಕ ಗುರುದತ್ತ ಗಾಣಿಗ ಪ್ರಜ್ವಲ್ ದೇವರಾಜ್ ಗಾಗಿ ʻಕರಾವಳಿʼ ಹೆಸರಿನ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರಲ್ಲಾ? ಆ ಚಿತ್ರಕ್ಕೆ ಕಥೆ, ಚಿತ್ರಕತೆ ಬರೆದುಕೊಟ್ಟಿರೋದು ಕೂಡಾ ಇದೇ ಚಂದ್ರಶೇಖರ ಬಂಡಿಯಪ್ಪ. ಹಾಗೆ ನೋಡಿದರೆ, ಕಾಂತಾರ ಸಿನಿಮಾ ತೆರೆಗೆ ಬರುವ ಮೊದಲೇ ʻಕಂಬಳʼವನ್ನು ಆಧರಿಸಿದ ಸಿನಿಮಾಗಾಗಿ ತಯಾರಿ ಮಾಡಿಕೊಂಡಿದ್ದವರಿವರು.
ಸದ್ಯ ಹಿಂದಿ ಚಿತ್ರವನ್ನು ಕಂಪ್ಲೀಟ್ ಮಾಡಿರುವ ಚಂದ್ರಶೇಖರ್ ಈಗ ಪೃಥ್ವಿ ಅಂಬರ್ಗಾಗಿ ಹೊಸ ಚಿತ್ರವನ್ನು ಆರಂಭಿಸುತ್ತಿದ್ದಾರೆ. ದಿಯಾ ಸಿನಿಮಾದ ಮೂಲಕ ಪ್ರವರ್ಧಮಾನಕ್ಕೆ ಬಂದ ಪೃಥ್ವಿಗೆ ಬಂಡಿಯಪ್ಪನವರ ಸಿನಿಮಾ ಹೊಸದೊಂದು ಇಮೇಜು ತಂದುಕೊಡುವುದು ಖಚಿತ. ಯಾಕೆಂದರೆ ಅದ್ಧೂರಿ ಬಜೆಟ್ಟಿನಲ್ಲಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಅಂಬಾರ್ ಬೇರೆಯದ್ದೇ ಶೇಡ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಾರೂ ಮುಟ್ಟದ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡು ಭಿನ್ನ ರೀತಿಯಲ್ಲಿ ಕಟ್ಟಿ ಕೊಡುವುದು ಚಂದ್ರಶೇಖರ ಬಂಡೀಯಪ್ಪ ಅವರ ರೀತಿ. ರಥಾವರದಲ್ಲಿ ಮಂಗಳಮುಖಿಯರ ಜಗತ್ತನ್ನು ಅನಾವರಣಗೊಳಿಸಿದ್ದ ಇವರು, ತಾರಕಾಸುರದಲ್ಲಿ ಬುಡುಬುಡುಕೆ ಜನಾಂಗದ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡಿದ್ದರು. ದೇಸೀ ಕಥಾವಸ್ತುವನ್ನು ಕಮರ್ಷಿಯಲ್ ಆಗಿ ಕಟ್ಟಿಕೊಡುವ ಬಗೆ ಚಂದ್ರಶೇಖರ್ ಬಂಡಿಯಪ್ಪನವರಿಗೆ ಸಿದ್ಧಿಸಿದೆ. ಸದ್ಯ ಪೃಥ್ವಿಗಾಗಿ ಮಾಡುತ್ತಿರುವ ಹೊಸ ಸಿನಿಮಾದ ಟೈಟಲ್ ಜೂನ್ ಮೊದಲ ವಾರದಲ್ಲಿ ಅನಾವರಣಗೊಳ್ಳಲಿದೆ. ಈ ಚಿತ್ರದ ಶೀರ್ಷಿಕೆ ಏನಿರಬಹುದು? ನಿರ್ದೇಶಕರು ಈ ಸಲ ಯಾವ ಕಥಾವಸ್ತುವನ್ನು ಕೈಗೆತ್ತಿಕೊಂಡಿದ್ದಾರೆ? ಈ ಚಿತ್ರದ ಹೀರೋಯಿನ್ ಯಾರು? ನಿರ್ಮಾಪಕರು ಯಾರಿರಬಹುದು? ಎಂಬಿತ್ಯಾದಿ ವಿವರಗಳೆಲ್ಲಾ ಸದ್ಯದಲ್ಲೇ ಗೊತ್ತಾಗಲಿದೆ.
No Comment! Be the first one.