ಲಾಕ್ ಡೌನ್ ಟೈಮಲ್ಲಿ ದಂಡಿ ದಂಡಿ ಯೂ ಟ್ಯೂಬ್ ಚಾನೆಲ್ ಗಳು ಹುಟ್ಟಿಕೊಂಡವು. ಅವುಗಳಲ್ಲಿ ಕೆಲವೇ ಬೆರಳೆಣಿಕೆಯ ಚಾನೆಲ್ ಗಳು ಮಾತ್ರ ಗುಣಮಟ್ಟದ ವಿಡಿಯೋ ಪ್ರಸಾರ ಮಾಡುತ್ತಿವೆ.
ಸಿನಿಮಾ ಛಾಯಾಗ್ರಾಹಕ ಅರುಣ್ ಸುರೇಶ್ (ಸುರೇಶ್ ಬಾಬು), ಶ್ರೀಕಾಂತ್ ಕಶ್ಯಪ್ ಸೇರಿ ʻಭಾನವಿ ಕ್ಯಾಪ್ಚರ್ʼ ಹೆಸರಿನ ಚೆಂದದ ಯೂ ಟ್ಯೂಬ್ ಚಾನೆಲ್ ಮಾಡಿದ್ದಾರೆ. ಬಹುಶಃ ಇವರಷ್ಟು ಕ್ವಾಲಿಟಿಯ ಕಂಟೆಂಟ್ ಬೇರೆ ಯಾವ ಯೂ ಟ್ಯೂಬಿನವರೂ ಹಾಕಲು ಸಾಧ್ಯವಿಲ್ಲ. ಕಿರುಚಿತ್ರಗಳು ಮತ್ತು ಆಲ್ಬಂ ಸಾಂಗ್ ಗಳು, ಸಂದರ್ಶನಗಳು ಈ ಚಾನೆಲ್ ನಲ್ಲಿ ಅಪ್ ಲೋಡ್ ಆಗುತ್ತಿವೆ. ದಿನದಿಂದ ದಿನಕ್ಕೆ ಭಾನವಿ ಕ್ಯಾಪ್ಚರ್ ಹೆಸರುವಾಸಿಯಾಗುತ್ತಿದೆ. ತಾವು ಬೆಳೆಯುವುದರೊಂದಿಗೆ ಕ್ರಿಯಾಶೀಲ ನಿರ್ದೇಶಕರಿಗೆ ಅವಕಾಶ ಮಾಡಿಕೊಟ್ಟು, ಅತ್ಯುತ್ತಮ ಕಂಟೆಂಟ್ ಗಳು ಹೊರಬರುವಂತೆ ಮಾಡುತ್ತಿರುವುದು ಭಾನವಿಯ ಹೆಚ್ಚುಗಾರಿಕೆ. ಮೇಲ್ನೋಟಕ್ಕೆ ನೋಡಿದರೆ, ಸದ್ಯ ಭಾನವಿ ಕ್ಯಾಪ್ಚರ್ ಗಾಗಿ ಕೆಲಸ ಮಾಡಿರುವ ನಿರ್ದೇಶಕರು, ಈ ತಂಡದಲ್ಲಿ ಇರುವವರೆಲ್ಲಾ ಮುಂದೆ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುವವರೇ ಆಗಿದ್ದಾರೆ.
ಸದ್ಯ ʻಪಬ್ಲಿಕ್ ಟಾಯ್ಲೆಟ್ʼ ಹೆಸರಿನ ಪುಟಾಣಿ ಸಿನಿಮಾವೊಂದನ್ನು ಸುಚಿತ್ರಾ ವೇಣುಗೋಪಾಲ್ ಸಹಯೋಗದೊಂದಿಗೆ ಭಾನವಿ ಕ್ಯಾಪ್ಚರ್ ತಯಾರು ಮಾಡಿದೆ. ಸುಮಾರು 20 ನಿಮಿಷದ ಈ ಚಿತ್ರ ಯಾವ ದೊಡ್ಡ ಸಿನಿಮಾಗೂ ಕಡಿಮೆ ಇಲ್ಲದಂತೆ ಮೂಡಿಬಂದಿದೆ. ಈ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ಅವರ ಬಳಿ ಸಹಾಯಕರಾಗಿ ದುಡಿದಿರುವ ನಾಗೇಶ್ ಹೆಬ್ಬೂರು ಈ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ನಿಮಗೆ ನೆನಪಿರಬೇಕು… ಪಬ್ಲಿಕ್ ಟಾಯ್ಲೆಟ್ಟಿನಲ್ಲಿ ಮಹಿಳೆಯೊಬ್ಬಳು ಪರಪುರುಷನೊಂದಿಗೆ ಇರುವ ಸಂದರ್ಭವನ್ನು ಕಿಡಿಗೇಡಿಯೊಬ್ಬ ವಿಡಿಯೋ ಮಾಡಿ ಆನ್ ಲೈನಿನಲ್ಲಿ ಹರಿಯಬಿಟ್ಟಿದ್ದ. ಆತ ವಿಡಿಯೋ ಮಾಡಿದ್ದನ್ನು ನೋಡಿದ ಆ ಹೆಣ್ಣುಮಗಳು ʻಯಾಕಣ್ಣಾ?ʼ ಅಂದಿದ್ದನ್ನು ಜನ ವೈರಲ್ ಮಾಡಿಟ್ಟಿದ್ದರು. ಜನ ಟಿಕ್ ಟಾಕ್ ನಲ್ಲೂ ಹೇರಳವಾಗಿ ಬಳಸಿಕೊಂಡರು.
ಆ ಕಿರಾತಕನೇನೋ ತನ್ನ ಮೊಬೈಲಲ್ಲಿ ವಿಡಿಯೋ ತೆಗೆದು ಎಲ್ಲರಿಗೂ ತಲುಪಿಸಿದ. ಆದರೆ ಅದರ ಸೈಡ್ ಎಫೆಕ್ಟ್ ಏನಾಗಿರಬೇಡ? ತೆಗೆದವನ ಮನಸ್ಥಿತಿ, ಆ ಹೆಣ್ಣುಮಗಳ ವಾಸ್ತವ ಪರಿಸ್ಥಿತಿಗಳನ್ನೇ ಚಿತ್ರಕತೆಯನ್ನಾಗಿಸಿ ಕಾಡುವ ಕಿರುಚಿತ್ರವನ್ನು ನಾಗೇಶ್ ಕಟ್ಟಿಕೊಟ್ಟಿದ್ದಾರೆ.
ಸದ್ಯ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುತ್ತಿರುವ ಅಪ್ಪಟ ಕಲಾವಿದ ಸಂಪರ್ ಕುಮಾರ್ ನ. ಮೂಕಹಕ್ಕಿ, ಕೆ.ಜಿ.ಎಫ್, ಕವಲುದಾರಿ, ಆಕ್ಟ್ 1978ನಂತಾ ಸಿನಿಮಾದಲ್ಲಿ ಸಂಪತ್ ಅಮೋಘವಾಗಿ ನಟಿಸಿದ್ದಾರೆ. ಸಿನಿಮಾ ವಲಯದಲ್ಲಿ ಕನ್ನಡದ ನವಾಜ಼ುದ್ದೀನ್ ಸಿದ್ದಿಕಿ ಅಂತಲೇ ಕರೆಸಿಕೊಳ್ಳುತ್ತಿದ್ದಾರೆ. ಇಂಥಾ ಸಂಪತ್ ಪಬ್ಲಿಕ್ ಟಾಯ್ಲೆಟ್ ಕಿರುಚಿತ್ರದ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಇಲ್ಲಿರುವ ತಂತ್ರಜ್ಞರೆಲ್ಲಾ ಸಿನಿಮಾದಲ್ಲಿ ಹೆಸರು ಮಾಡಿರುವವರೇ. ತಮ್ಮ ಅದ್ಭುತ ಸಂಭಾಷಣೆಯ ಮೂಲಕವೇ ಫೇಮಸ್ ಆಗಿರುವ ರಘು ನಿಡುವಳ್ಳಿ ಡೈಲಾಗ್ ಬರೆದಿದ್ದಾರೆ. ಹರ್ಷವರ್ಧನರಾಜ್ ಸಂಗೀತ, ಅಭಿಷೇಕ್ ಜಿ. ಕಾಸರಗೋಡು ಛಾಯಾಗ್ರಹಣ ಈ ಕಿರುಚಿತ್ರಕ್ಕಿದೆ.
No Comment! Be the first one.