ಕೊರೋನಾ ಎರಡು ಲಾಕ್ ಡೌನ್ ಮುಗಿಸಿಕೊಂಡು ಬರುವಷ್ಟರಲ್ಲಿ ಮನೆಯ ಕಪಾಟೊಂದರ ಕೀ ಎಲ್ಲಿಟ್ಟಿದ್ದೇವೆಂದು ನಮ್ಮ ಮನೆಯಲ್ಲಿ ಯಾರಿಗೂ ನೆನಪಿಗೆ ಬರಲೇ ಇಲ್ಲ. ಬಹಳ ದಿನಗಳವರೆಗೆ ಕಾದ ನಂತರ ರಾಜಾಜಿನಗರದ ESI ಆಸ್ಪತ್ರೆಯ ಮುಂದೆ ಕೀ ಮಾಡುವವರ ಬಳಿ ಹೋಗಿ ಕೇಳಿದೆ. ‘ ಎಲ್ಲಿರೋದು ಮನೆ ? ‘ ‘ ಕೀ ಎಲ್ಲಿ ಕಳೆದುಕೊಂಡ್ರಿ?’ ‘ ಬಾಡಿಗೆ ಮನೆಯಾ ? ಸ್ವಂತ ಮನೆಯಾ ? ‘ ಎಂದೆನೇನೋ ಪ್ರಶ್ನೆ ಕೇಳಲಾರಂಭಿಸಿದ. ಅಷ್ಟರಲ್ಲಿ ಒಬ್ಬ ವ್ಯಕ್ತಿ ಬಂದು’ ಅವರಿಗೆ 200 ರೂಪಾಯಿ ಕೊಟ್ಟು, ‘ಥ್ಯಾಂಕ್ಸ್ ಅಣ್ಣೋ, ನಿನ್ನೆ ಇಡೀ ಪೋಲೀಸರ ಹತ್ರ ಏಗೋದೇ ಆಗೋಯ್ತು. ಆ ಹುಡುಗ ಅಂಗಡಿಲಿ ಕೆಲಸ ಮಾಡ್ಕೊಂಡು ಇದ್ದೋನು. ಇಲ್ಲೇ ಸುಸೈಡ್ ಮಾಡ್ಕೊಂಡು ನಮ್ ತಲೆಗೆ ತಂದ್ ಬಿಡ್ತಿದ್ದ ನೋಡಿ. ಹೇಗೋ ಸಿಸಿಟಿವಿ ಇದ್ದಿದ್ಕೆ ಬಚಾವ್ ನಾವು’ ಎಂದ. ಅಷ್ಟರಲ್ಲಿ ನಾನು ಬೈಕಿನದ್ದೂ ಒಂದು ಡುಪ್ಲಿಕೇಟ್ ಕೀ ಮಾಡಿಕೊಡಬೇಕಿತ್ತು ಎಂದೆ. ಆರ್ ಸಿ ಬುಕ್ ಕಾಪಿ ಇದ್ರೆ ಮಾತ್ರ ಮಾಡೋದು ಎಂದ. ಒಂದು ಡುಪ್ಲಿಕೇಟ್ ಕೀ ಮಾಡಿಕೊಡುವುದು ಎಷ್ಟು ಜವಾಬ್ದಾರಿಯುತ ಕೆಲಸ ಎಂಬುದು ನಿಧಾನವಾಗಿ ನನಗೆ ಅರಿವಿಗೆ ಬಂತು ಆ ದಿನ.
ಆ ದಿನ ನನಗೆ ತಕ್ಷಣ ನೆನಪಾಗಿದ್ದು ಸಂಚಾರಿ ವಿಜಯ್. ಅವರು ಒಮ್ಮೆ ನಾವು ಜೊತೆಯಲ್ಲಿ ಪ್ರಯಾಣಿಸುವಾಗ ತಮ್ಮ ಪುಕ್ಸಟ್ಟೆ ಲೈಫು ಚಿತ್ರದ ಕಥೆಯ ಬಗ್ಗೆ ಹೇಳಿದ್ದರು. ಕೀ ಮಾಡುವವನನ್ನು ಟ್ರ್ಯಾಪ್ ಮಾಡಿ ಪೋಲೀಸರೇ ದರೋಡೆಗೆ ಇಳಿಯುವ ಕಥಾ ಹಂದರ ಅದು. ವಿಜಯ್ ರನ್ನು ಶಹಜಹಾನ್ ನ ಪಾತ್ರದಲ್ಲಿ ಇಂದು ನೋಡಿದಮೇಲೆ ಸಿನಿಮಾದ ಕಥಾವಸ್ತು ಮತ್ತು ಅದನ್ನು ನಿಭಾಯಿಸಿರುವ ರೀತಿ ಬಹಳ ಇಷ್ಟವಾಯ್ತು.
ಅವರ ನಟನೆಯ ಬಗ್ಗೆ ವಿಶೇಷವಾಗಿ ನಾನೇನೂ ಹೇಳಲಾರೆ. ಅವರು ಆ ಪಾತ್ರದಲ್ಲಿ ಸಂಪೂರ್ಣವಾಗಿ ಜೀವಿಸಿದ್ದಾರೆ. ಸಿನಿಮಾ ನೋಡುವಾಗ ಅವರ ಪಾತ್ರದ ಮೇಲೆ ಕರುಣೆ, ಕೋಪ ಒಟ್ಟೊಟ್ಟಿಗೇ ಆಗುತ್ತದೆ. ಈ ಪಾತ್ರ ಮತ್ತು ಚಿತ್ರದ ಬಗ್ಗೆ ಅವರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಅವರ ನಿರೀಕ್ಷೆ ಖಂಡಿತಾ ಹುಸಿಯಾಗಿಲ್ಲ. ಇದೊಂದು ಅಚ್ಚ ಕನ್ನಡದ ಸಿನಿಮಾ. ಒಂದು ಹೊಸ ಅನುಭವಕ್ಕಾಗಿ,ಸಣ್ಣ ಆತ್ಮ ವಿಮರ್ಷೆಗಾಗಿ ಈ ಸಿನಿಮಾ ನಾವೆಲ್ಲರೂ ನೋಡಬಹುದು. There’s a god and a devil within all of us. ಎಂಬ ಮಾತು ಎಷ್ಟು ಸತ್ಯ…
ನೋವಿನ ಸಂಗತಿಯೆಂದರೆ ಅವರ ಯಾವುದೇ ಸಿನಿಮಾ ನೋಡಿ ಬಂದ ದಿನ ರಾತ್ರಿ ಕರೆ ಮಾಡುತ್ತಿದ್ದರು. ನೇರವಾಗಿ ಹಿಡಿಸಿದ್ದು , ಹಿಡಿಸದ್ದು ಎರಡನ್ನೂ ಹೇಳುತ್ತಿದ್ದೆ. ಜಂಟಲ್ ಮನ್ ಸಿನಿಮಾ ನೋಡಿದ ರಾತ್ರಿ ಇಂಥ ಪಾತ್ರ ಮಾಡಿ ಸ್ವಾಮಿ ಅಂದಿದ್ದೆ. ಅದರಲ್ಲಿನ ಬಾಲನಟಿಯ ಬಗ್ಗೆ ಕೊಂಡಾಡಿದ್ದರು ವಿಜಯ್… ಸಿನಿಮಾದಲ್ಲಿ ಹೀರೋ ಬೈಕ್ ಓಡಿಸುವ ದೃಶ್ಯಗಳಲ್ಲಿ ಹೆಲ್ಮೆಟ್ ಹಾಕಿರಲೇ ಇಲ್ಲ. ಕಥೆ ಬೆಂಗಳೂರಿನಲ್ಲಿ ನಡೆಯುತ್ತಿರುವಾಗ, ಇಲ್ಲಿ ಹೆಲ್ಮೆಟ್ ಕಡ್ಡಾಯ ಕೂಡ ಇರುವಾಗ ಅದ್ಹೇಗೆ ಡೈರೆಕ್ಟರ್ ಇದನ್ನು ನಿರ್ಲಕ್ಷಿಸುತ್ತಾರೆ ಎಂದು ಪ್ರಶ್ನಿಸಿದ್ದೆ … ಹೌದಲ್ವ …ಅದು ತಪ್ಪು ಎಂದು ಒಪ್ಪಿಕೊಂಡಿದ್ದರು.
ಇಂದು ರಾತ್ರಿ ಕೂಡ ವಿಜಯ್ ಕಾಲ್ ಮಾಡಿಯೇ ಇರುತ್ತಿದ್ದರು…
ಮಾಡಿದ್ದರೆ ಅವರಿಗೆ ಈ ಎರಡು ವಿಷಯ ಹೇಳಬೇಕಿತ್ತು ;
- ಈ ಸಿನಿಮಾದಲ್ಲೂ ಯಾಕೆ ನಿಮಗೆ ಹೆಲ್ಮೆಟ್ ಹಾಕಿಸಿಲ್ಲವಲ್ಲ ? ‘
- ಅಂದು ESI ಬಳಿಯ ಕೀ ಮೇಕರ್ ನೊಂದಿಗೆ ನಡೆದ ಸಂಭಾಷಣೆಯನ್ನು ,ಅವನು ಮನೆಗೆ ಬಂದು ಹೋದ ಸ್ವಲ್ಪ ಸಮಯವಾದರೂ ಅವನ ಮೇಲೆ ಅನುಮಾನ ಬಂದಿತ್ತಲ್ಲ ಅದು ಏಕಿರಬಹುದು ಎಂದು ಅವರ ಬಳಿ ಮಾತಾಡಬೇಕಿತ್ತು…
ಆದರೆ …
ವಿಜಿ ಈಗ ಕರೆ ಮಾಡದೇ ಮಾತಾಡುವ ಕಲೆಯನ್ನು ರೂಢಿ ಮಾಡಿಕೊಳ್ಳಲು ಕಲಿಸಿ ಹೋಗಿದ್ದಾರೆ …
– ಶಿವಕುಮಾರ ಮಾವಲಿ
Comments