puksatte lifu

ನಿಜ… ಎಲ್ಲೋ ಕೆಲವರು ಅಂಡು ಸವೆಯುವಂತೆ ಕೂತು ದುಡಿಮೆ ಮಾಡೋದು ಬಿಟ್ಟರೆ, ಉಳಿದಂತೆ ಲೈಫಲ್ಲಿ ಪುಕ್ಸಟ್ಟೆಯಾಗಿಯೇ ಸಕಲವನ್ನೂ ಬಯಸುವವರೇ ಹೆಚ್ಚು. ಗೌರ್ಮೆಂಟ್‌ ಕೆಲಸದಲ್ಲಿರೋರಿಗೂ ಅನಾಮತ್ತಾಗಿ ದುಡಿದುಬಿಡುವ ಧಾವಂತ. ಕೈಗೆ ಸಿಕ್ಕಿದ್ದನ್ನೆಲ್ಲಾ ಮುಕ್ಕಿಬಿಡುವ ಧೂರ್ತತೆ. ಪುರುಸೊತ್ತು ಕೊಡದೆ ಸಿಕ್ಕಷ್ಟನ್ನೂ ತಿಂದು ತೇಗಿಬಿಡುವ ಖೂಳತನ. ಈಗಷ್ಟೇ ಬಿಡುಗಡೆಯಾಗಿರುವ ಪುಕ್ಸಟ್ಟೆ ಲೈಫು ಚಿತ್ರ ಇಂಥಾ ಎಲ್ಲರ ಜಾತಕವನ್ನು ಹಸಿಹಸಿಯಾಗಿ ಹರವಿದೆ.

ಆತ ಬೀಗ ರಿಪೇರಿ ಮಾಡುವ ಸೀದಾ ಸಾದಾ ಹುಡುಗ. ʻನಕಲಿ ಕೀ ಮಾಡಿಕೊಡುʼ ಅಂತಾ ಯಾರಾದರೂ ಬಂದರೆ, ʻಮೊದಲು ನಿನ್ನ ಡಾಕ್ಯುಮೆಂಟು ತೋರಿಸು, ಆಮೇಲೆ ಮಾಡ್ಕೊಡ್ತೀನಿʼ ಎನ್ನುವಷ್ಟರ ಮಟ್ಟಿಗೆ ಪ್ರಾಮಾಣಿಕ. ಡೂಪ್ಲಿಕೇಟ್ ಕೀ ಬಳಸಿ ಕಳ್ಳತನವಾದಾಗ ಪೊಲೀಸರು ಮೊದಲಿಗೆ ವಿಚಾರಣೆಗೆ ಕರೆಸೋದು ಸುತ್ತಮುತ್ತಲಿನ ಕೀ ರಿಪೇರಿಯವರನ್ನು. ಕಳ್ಳನ ಮಾಡಿದವರ ಬಳಿ ‌ಕೂಡಾ ʻಕೀ ಮಾಡಿಕೊಟ್ಟಿದ್ದು ಯಾರು?ʼ ಅಂತಲೇ ವಿಚಾರಿಸಿರುತ್ತಾರೆ. ನಲವತ್ತೈವತ್ತು ರುಪಾಯಿ ಪಡೆದು ಕೀ ಮಾಡಿಕೊಟ್ಟಿದ್ದ ತಪ್ಪಿಗೆ ಪಡಬಾರದ ಕಷ್ಟ ಪಡುವ ಕೆಲಸಗಾರರಿವರು. ಹಾಗೆಯೇ ಮಹಿಳೆಯೊಬ್ಬಳು ಮಾಡಿದ ಮನೆಗಳ್ಳತನದ ಕೇಸಿನ ವಿಚಾರಣೆಗಾಗಿ ಪೊಲೀಸ್‌ ಸ್ಟೇಷನ್ನಿನ ಮೆಟ್ಟಿಲೇರುವ ಹುಡುಗ ಶಹಜಹಾನ್.‌

ಜನ ಪೊಲೀಸರನ್ನು ʻಕಳ್‌ ನನ್ ಮಕ್ಳುʼ ಅಂತಾ ಬಾಯಿಮಾತಿಗೆ ಮೂದಲಿಸುತ್ತಾರಲ್ಲಾ? ಪುಕ್ಸಟ್ಟೆ ಲೈಫು ಚಿತ್ರದಲ್ಲವರು ಪೊಲೀಸರನ್ನು ಪದಶಃ ಕಳ್ಳರನ್ನಾಗಿಯೇ ಚಿತ್ರಿಸಿದ್ದಾರೆ. ಕಳ್ಳತನದ ಕೇಸುಗಳಲ್ಲಿ ಸಿಕ್ಕಿದ ಮಾಲಿನ ಒಂದು ಭಾಗವನ್ನಷ್ಟೇ ಲೆಕ್ಕಕ್ಕೆ ತೋರಿಸಿ, ಮಿಕ್ಕವನ್ನು ಅವರೇ ಬಾಚಿಬಾಯಿಗೆ ಹಾಕ್ಕೊಳ್ಳುತ್ತಾರೆ ಅನ್ನೋದು ಹಳೆಯ ಆರೋಪ. ʻಪುಕ್ಸಟ್ಟೆ ಲೈಫಿʼನಲ್ಲಿ ಅದನ್ನೂ ಮೀರಿ ಸ್ವತಃ ತಾವೇ ಕಳ್ಳತನ ಮಾಡಿಸಿಸುತ್ತಾರೆ. ವರಮಾನಕ್ಕಿಂತಾ ಅಧಿಕ ಹಣ ಆಸ್ತಿ ಹೊಂದಿದವರೇ ಇವರ ಟಾರ್ಗೆಟ್ಟು. ಕಳ್ಳರ ಜಾಡು ಹಿಡಿದು ಹುಡುಕಿಕೊಟ್ಟಂತೆ ನಾಟಕವಾಡುತ್ತಾರೆ. ʻಅನ್‌ ಅಫಿಷಿಯಲ್ಲಾಗಿ ಕೇಸು ಕ್ಲೋಸು ಮಾಡಿಕೊಳ್ತೀರಾ? ಕೋರ್ಟು ಕೇಸು ಅಂತಾ ಅಲೀತೀರಾʼ ಅಂತಾ ಇನ್‌ ಡೈರೆಕ್ಟ್‌ ಆಗಿ ಬ್ಲಾಕ್‌ ಮೇಲ್‌ ಮಾಡ್ತಾರೆ. ಬ್ಲಾಕ್‌ ಮನಿ ಮಡಗಿಕೊಂಡ ಯಾರು ತಾನೆ ಕೇಸು ಮುಂದುವರೆಸಲು ಬಯಸುತ್ತಾರೆ? ಅಲ್ಲಿಗೆ ಪೊಲೀಸರ ಕಾರ್ಯಾಚರಣೆ ಫಲಪ್ರದವಾದಂತೆ. ಈ ಕೃತ್ಯಕ್ಕೆ ಅವರು ಬಳಸುವುದು ಪ್ರೊಫೆಷನಲ್‌ ಕಳ್ಳ ಮತ್ತು ಮನೆ ಬೀಗ ಒಡೆಯಲು ಕೀ ಮಾಡಿಕೊಡುವ ಹುಡುಗನನ್ನು.

ತನಗೇ ಅರಿವಿಲ್ಲದಂತೆ, ಅರಿವಿಗೆ ಬಂದಮೇಲೂ ಹೊರಬರದಂತೆ ಕಥಾನಾಯಕ ಶಹಜಹಾನ ದುಷ್ಟ ಪೊಲೀಸರು ತೋಡಿದ ಖೆಡ್ಡಾದಲ್ಲಿ ಸಿಕ್ಕಿಕೊಂಡಿರುತ್ತಾನೆ. ಚಿಲ್ಲರೆ ಕಾಸಿಗೆ ಪರದಾಡುತ್ತಿದ್ದವನ ಜೇಬಿಗೆ ಬಿದ್ದ ಗರಿಗರಿ ನೋಟು ಮೈಮರೆಸುತ್ತದೆ. ಅಷ್ಟರಲ್ಲಿ ಒಡಹುಟ್ಟಿದ ಸಹೋದರನ ಬ್ರೈನಿನಲ್ಲಿ ಟ್ಯೂಮರಿರುವುದೂ ಗೊತ್ತಾಗುತ್ತದೆ. ತನ್ನನ್ನು ಬಳಸಿಕೊಂಡು ದುಡಿಯುತ್ತಿರುವವರ ಬಳಿ ಆಸ್ಪತ್ರೆ ಖರ್ಚಿನ ಹಣಕ್ಕಾಗಿ ಅಂಗಲಾಚುತ್ತಾನೆ. ಐದೂವರೆ ಲಕ್ಷ ಕೊಡಿ ಸಾಕು ಅಂತಾ ಬೇಡುತ್ತಾನೆ. ದುರಾಸೆಗೆ ಬಿದ್ದ ಖಾಕಿ ಮಂದಿ ಬೂಟಿನಲ್ಲಿ ಒದ್ದು ಕಳಿಸುತ್ತಾರೆ.

ಆ ನಂತರ ಶಹಜಹಾನ ತಮ್ಮನ ಆಪರೇಷನ್ನಿಗೆ ಹೇಗೆ ಹಣ ಹೊಂದಿಸುತ್ತಾನೆ? ಯಾವೆಲ್ಲಾ ಅವಾಂತರಗಳು ಸೃಷ್ಟಿಯಾಗುತ್ತವೆ. ನೀಚ ಪೊಲೀಸರು ಏನೇನು ಮಾಡುತ್ತಾರೆ? ಇದ್ದಕ್ಕಿದ್ದಂತೆ ನಾಪತ್ತೆಯಾಗುವ ಶಹಜನಾನು ಎಲ್ಲಿ? ಹೇಗೆ ಸಿಗುತ್ತಾನೆನ್ನುವುದೆಲ್ಲಾ ಚಿತ್ರದ ಅಂತಿಮ ಗುಟ್ಟು.

ಕಥೆ ಪುಟ್ಟದಾದರೂ, ಇಲ್ಲಿ ಬಂದು ಹೋಗುವ ಎಲಿಮೆಂಟುಗಳು ಸಾಕಷ್ಟು; ಒಂದೇ ತಂತಿಯಲ್ಲಿ ಪೋಣಿಸಿದ ಕೀ ಗೊಂಚಲಿನಷ್ಟು. ಲೂನಾದಲ್ಲಿ ಓಡಾಡೋ ಹುಡುಗನ ಹೃದಯಕ್ಕೆ ಪ್ರೀತಿಯ ಕೀಲಿ ಹಾಕಿ, ಲಾಕ್‌ ಮಾಡುವ ಲಾಯರ್‌ ಹುಡುಗಿ, ಕನ್ನಡ್‌ ಗೊತ್ತಿಲ್ಲ ಅಂತಲೇ ಕನ್ನ ಕೊರೆಯುವ ಖದೀಮ ಹೆಂಗಸು, ಕಿಲಾಡಿ ಕಳ್ಳ, ಕಾಸಿಗಾಗಿ ಕಾತರಿಸುವ ಬಿಕನಾಸಿ ಪೀಸಿಗಳು, ಹಣಬಾಕ ಇನ್ಸ್‌ ಪೆಕ್ಟರ್‌, ಪ್ರಾಮಾಣಿಕ ಇನ್ವೆಸ್ಟಿಗೇಷನ್‌ ಆಫೀಸರ್‌, ಪೊಲೀಸ್‌ ಠಾಣೆಯನ್ನು ಖಾಲಿ ಮಾಡಿಸಲು ಹೆಣಗಾಡುವ ಬಿಲ್ಡಿಂಗ್‌ ಓನರ್ ಮತ್ತು ಶುದ್ಧ ಮನಸ್ಸಿನ ಕೀ ಮೇಕರ್‌ ಸುತ್ತ‌ ʻಪುಕ್ಸಟ್ಟೆ ಲೈಫುʼ ಅನಾವರಣಗೊಂಡಿದೆ.

ವಿಪರೀತ ಕೇಡುಗರು ಮಹಾನ್‌ ದೈವಭಕ್ತರಾಗಿರುವ ಸಾಕಷ್ಟು ನಿದರ್ಶನಗಳು ನಮ್ಮ ಕಣ್ಣೆದುರೇ ಕಾಣುತ್ತಿರುತ್ತವೆ. ಅಂಥ ಕಡುಭ್ರಷ್ಟ ಪೊಲೀಸ್ ಅಧಿಕಾರಿಯಾಗಿ ಅಚ್ಯುತ ಅವತಾರವೆತ್ತಿದ್ದಾರೆ. ಸದಾ ಪಾತ್ರದೊಳಗಿಳಿದು, ಅದನ್ನು ಅನುಭವಿಸಿ ನಟಿಸುವ  ಸಂಚಾರಿ ವಿಜಯ್‌ ಇಲ್ಲಿ ಕೀ ತಯಾರಿಸುವ ಹುಡುಗನಾಗಿ ಮಾರ್ಪಾಟಾಗಿದ್ದಾರೆ. ನಾಯಕಿ ಮಾತಂಗಿ ಪ್ರಸನ್‌ ನಟನೆಯಲ್ಲೇನೋ ಪ್ರಚ್ಛನ್ನ ಶಕ್ತಿ ಇರೋದು ನಿಜ. ಅಷ್ಟು ಸಹಜ ನಟನೆ ಈಕೆಯದ್ದು. ನಿರ್ದೇಶಕ ಅರವಿಂದ್‌ ಕುಪ್ಳೀಕರ್‌ ಚೆಂದದ ನಿರ್ದೇಶನದ ಜೊತೆಗೆ ಕಳ್ಳನ ಪಾತ್ರದಲ್ಲಿ ಕರಾರುವಕ್ಕಾಗಿ ಅಭಿನಯಿಸಿದ್ದಾರೆ.  ರಂಗಾಯಣ ರಘು ಕೊನೆಗೆ ಬಂದರೂ ಥೇಟು ಅಯ್ಯಪ್ಪ ಸ್ವಾಮಿಯಂತೇ ಎಲ್ಲರನ್ನೂ ಆವರಿಸಿಕೊಳ್ಳುತ್ತಾರೆ. ಜೊತೆಗಿರುವ ಕಿರಣ್‌ ನಾಯಕ್‌ ನಗಿಸುತ್ತಾರೆ.

ಅದ್ವೈತ ಗುರುಮೂರ್ತಿ ಎಲ್ಲಿ ಕ್ಯಾಮೆರಾ ಇಟ್ಟಿದ್ದಾರೆನ್ನುವುದೇ ಗೊತ್ತಾಗದ ರೀತಿಯಲ್ಲಿ ಎಲ್ಲ ದೃಶ್ಯಗಳೂ ಕಣ್ಣೆದುರೇ ಚಲಿಸಿವೆ. ಸಂಕಲನ ಮಾಡಿರುವ ಸುರೇಶ್‌ ಆರ್ಮುಗಂ ಕತ್ತರಿ ಸ್ವಲ್ಪ ಮೊಂಡು ಅನ್ನೋದು ಬಿಟ್ಟರೆ, ವಾಸು ದೀಕ್ಷಿತ್‌ ಟ್ಯೂನು ಖುಷಿ ಕೊಡುತ್ತದೆ. ಪೂರ್ಣಚಂದ್ರ ತೇಜಸ್ವಿಯವರ ಹಿನ್ನೆಲೆ ಸಂಗೀತದ ಹೊಸ ಆವಿಷ್ಕಾರ ಎದ್ದು ಕೇಳಿಸುತ್ತದೆ!

ಸಿನಿಮಾಗೆ ಬಳಸಿರುವ ಭಾಷೆಯಲ್ಲೇ ಒಂಥರಾ ಮಜವಿದೆ ; ಮನಸ್ಸಿಗೆ ನಾಟುವ ಗುಣವೂ ಇದೆ. ʻʻಮಾಡ್ತಿರೋದು ತಪ್ಪು ಅನ್ನೋದು ನಮಗೆ ಗೊತ್ತು. ಸಿಡಿಸುವ ಗನ್ನಿಗೇನು ಗೊತ್ತು, ತಾಕುವ ಬುಲೆಟ್ಟಿಗೇನು ಗೊತ್ತು?..ʼʼ ಅನ್ನುವ ಮಾತನ್ನು ಮರೆಯಲಾಗುವುದಿಲ್ಲ. ಪೊಲೀಸು ಸಾಯಿಸಬಹುದು, ಕೊಲೆ ಮಾಡಬಾರದು ಎನ್ನುವ ಸಾಲು ಕೂಡಾ ಕಾಡದೇ ಬಿಡೋದಿಲ್ಲ.

ಸೋಷಿಯಲ್‌ ಮೀಡಿಯಾಗಳಲ್ಲಿ ಸಿಂಗಂ, ತಂಗಂ ಅಂತೆಲ್ಲಾ ಕರೆಸಿಕೊಳ್ಳುವ ಎಷ್ಟೋ ಜನ ಅಧಿಕಾರಿಗಳ ಅಸಲೀ ಬಂಡವಾಳವೇ ಬೇರೆಯದ್ದಾಗಿರುತ್ತದೆ. ಈ ಚಿತ್ರ ನೋಡುವಾಗಲೇ, ವಿಪರೀತ ಪಬ್ಲಿಸಿಟಿ ಪಡೆಯುವ ಪೊಲೀಸ್‌ ಅಧಿಕಾರಿಗಳ ಬಗ್ಗೆ ಅನುಮಾನ ಮೂಡುತ್ತದೆ. ಕನ್ನಡ ಸಿನಿಮಾ ಇತಿಹಾಸದಲ್ಲಿ ಎಲ್ಲೋ ಕೆಲವೇ ಸಿನಿಮಾಗಳನ್ನು ಹೊರತುಪಡಿಸಿ ಸಾಬರನ್ನು ಕೆಟ್ಟವರಂತೆ ಚಿತ್ರಿಸಿದ್ದೇ ಹೆಚ್ಚು. ಆದರೆ ಇಲ್ಲಿ ಶಹಜಹಾನನ ಮುಗ್ದತೆ, ಒಳ್ಳೇತನಗಳೆಲ್ಲ ನೋಡುಗರಿಗೆ ತುಂಬಾನೇ ಆಪ್ತವಾಗುತ್ತದೆ. ಮುಸ್ಲಿಮರ ಕುರಿತಾಗಿ ಕೆಲವರಲ್ಲಿರುವ ಪೂರ್ವಹಗ್ರಹವನ್ನು ಶಹಜಹಾನ್‌ ದೂರಮಾಡುತ್ತಾನೆ. ಅಷ್ಟರ ಮಟ್ಟಿಗೆ ʻಪುಕ್ಸಟ್ಟೆ ಲೈಫುʼ ಅಕ್ಷರಶಃ ಗೆಲುವು ಕಂಡಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಇದೇನಿದು ‘ಮೂವಿ ಗ್ಯಾರೇಜ್’?

Previous article

ಈ ಸಿನಿಮಾದಲ್ಲೂ ಯಾಕೆ ನಿಮಗೆ ಹೆಲ್ಮೆಟ್ ಹಾಕಿಸಿಲ್ಲವಲ್ಲ?

Next article

You may also like

Comments

Leave a reply

Your email address will not be published.