ಸಮಾಜಸೇವೆ ಮಾಡಲು ಬಂದ ಎಲ್ಲ ಸಿನಿಮಾ ಸೆಲೆಬ್ರಿಟಿಗಳನ್ನು ನಂಬುವಂತಿರೋದಿಲ್ಲ!
ಅನೇಕರು ಯಾರದ್ದೋ ದುಡ್ಡಿನಲ್ಲಿ ಸಾಮಾಜಿಕ ಸೇವಾ ಕಾರ್ಯ ಮಾಡಿ ಸ್ವಯಂಸೇವಕರೆನಿಸಿಕೊಳ್ಳುತ್ತಾರೆ. ಉಳ್ಳವರ ಬ್ಲಾಕ್ ಮನಿ ಕರಗಿಸಲು ಕೆರೆಗೆ ನೀರು ತುಂಬಿಸಿದವರು, ಲಕ್ಷ ಖರ್ಚುಮಾಡಿ ಕೋಟಿ ಪ್ರಚಾರ ಪಡೆಯೋರು, ಗಿಡ ನೆಡುವ ಕಾರ್ಯಕ್ರಮಕ್ಕೆ ಬರಲು ಕಾಸು ಪಡೆದವರು, ಉಚಿತ ರಕ್ತದಾನ ಶಿಬಿರ ಉದ್ಘಾಟಿಸಲು ಪೇಮೆಂಟು ಕೇಳಿದವರು- ಹೀಗೆ ಪೇಯ್ಡ್ ಸೋಷಿಯಲ್ ವರ್ಕ್ ಮಾಡಿ ಸೋ ಕಾಲ್ಡ್ ಸೇವಕರೆನಿಸಿಕೊಂಡವರೆಲ್ಲಾ ಚಿತ್ರರಂಗದಲ್ಲಿದ್ದಾರೆ.
ಆದರೆ ಪುನೀತ್ ರಾಜ್ ಕುಮಾರ್ ಹಾಗಲ್ಲ. ಈ ಕೈಲಿ ಕೊಟ್ಟಿದ್ದು, ಆ ಕೈಗೂ ಗೊತ್ತಾಗಬಾರದು ಅಂತಾ ಬಯಸೋ ವ್ಯಕ್ತಿ. ತಮ್ಮ ತಂದೆ ತಾಯಿ ಹೆಸರಲ್ಲಿ ಸ್ಥಾಪಿಸಿರುವ ಟ್ರಸ್ಟ್ ಮೂಲಕ ಪುನೀತ್ ಸಾಕಷ್ಟು ಸಮಾಜ ಸೇವಾ ಕೈಂಕರ್ಯಗಳನ್ನು ಮಾಡುತ್ತಲೇ ಬಂದಿದ್ದಾರೆ. ಸಿನಿಮಾಗಳಿಗೆ ಪುನೀತ್ ಹಾಡು ಹೇಳುತ್ತಾರಲ್ಲ? ಅದಕ್ಕೆಂದು ಬರುವ ಸಂಭಾವನೆಯನ್ನು ಡೈರೆಕ್ಟಾಗಿ ಟ್ರಸ್ಟ್’ಗೆ ಸಲ್ಲಿಸಿ, ಅದನ್ನು ಪರೋಪಕಾರಕ್ಕಾಗಿ ವಿನಿಯೋಗಿಸುತ್ತಾರೆ. ಸಿನೆಮಾ ನಟನೆಯ ಜೊತೆಜೊತೆಗೆ ಒಂದಷ್ಟು ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಅವರಿಗೆ ಮೊದಲಿನಿಂದಲೂ ರೂಢಿ. ಅದೇ ಅಪ್ಪು ಇದೀಗ ರೈತರ ಪರ ನಿಲ್ಲಲು, ರೈತರ ಅಭಿವೃದ್ಧಿಗಾಗಿ ಒಂದಷ್ಟು ಸಮಯ ಮೀಸಲಿಡುವ ನಿರ್ಧಾರ ಮಾಡಿದ್ದಾರೆ!
ಫೀಡ್ ಯುವರ್ ಫಾರ್ಮರ್ ಎಂಬ ಹೊಸ ಅಭಿಯಾನಕ್ಕೆ ಕೈ ಜೋಡಿಸುವ ಮೂಲಕ ರೈತ ದೇವೋಭವ ಎನ್ನುತ್ತಿದ್ದಾರೆ. ಶ್ರೀವತ್ಸ ವಾಜಪೇಯಿ ಅವರ ಮುಂದಾಳತ್ವದಲ್ಲಿ ನಡೆಯುತ್ತಿರುವ ಈ ಅಭಿಯಾನಕ್ಕೆ ಪುನೀತ್ ರಾಜ್ಕುಮಾರ್ ಸಾಥ್ ಸಿಕ್ಕಿರುವ ಹಿನ್ನೆಲೆಯಲ್ಲಿ ಇಡೀ ಕನ್ನಡ ಚಿತ್ರರಂಗ ರೈತರ ಪರ ನಿಲ್ಲೋದು ನಿಜ. ರೈತರ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಹುಡುಕುವುದರ ಜೊತೆಗೆ ರೈತ ಬಾಂಧವರ ಬೆನ್ನ ಹಿಂದೆ ಶಾಶ್ವತವಾಗಿ ನಿಲ್ಲುವ ಉದ್ದೇಶದೊಂದಿಗೆ ಪುನೀತ್ ಪೂರ್ಣ ಪ್ರಮಾಣದಲ್ಲಿ ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಆ ಮೂಲಕ ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ಸಿನೆಮಾದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸಕ್ಕೆ ಸಾಥ್ ನೀಡಿದ್ದಾರೆ!
No Comment! Be the first one.