ಅದೃಷ್ಟವಂತ ಎನ್ನುವ ಪದಕ್ಕೆ ಅನ್ವರ್ಥದಂತೆ ಬಾಳಿದವರು ಪುನೀತ್‌ ರಾಜ್‌ ಕುಮಾರ್‌. ರಾಜ್‌ ಅವರ ಮೂವರು ಪುತ್ರರಲ್ಲೇ ಪರಿಗಣಿಸಿದರೆ, ಶಿವಣ್ಣ ಮತ್ತು ರಾಘವೇಂದ್ರ ರಾಜ್‌ ಕುಮಾರ್‌ ಒಂದು ಮಟ್ಟಿಗಿನ ಸಂಕಷ್ಟಗಳನ್ನೆಲ್ಲಾ ನೋಡಿ ಬೆಳೆದವರು. ಪುನೀತ್‌ ರಾಜ್‌ ಕುಮಾರ್‌ ಹುಟ್ಟುವಷ್ಟರಲ್ಲಾಗಲೇ ರಾಜ್‌ ಕನ್ನಡ ಚಿತ್ರರಂಗದ ಸೂಪರ್‌ ಸ್ಟಾರ್‌ ಪಟ್ಟವನ್ನು ಅಲಂಕರಿಸಿದ್ದರು. ಕೈತುಂಬ ಆದಾಯವೂ ಇತ್ತು. ಎತ್ತೆತ್ತ ನೋಡಿದರೂ ಅಭಿಮಾನಿಗಳು ಕಾಣುತ್ತಿದ್ದರು.  ಪುನೀತ್‌ ಹುಟ್ಟಿದ 1975ರ ಅದೇ ವರ್ಷ ಪಾರ್ವತಮ್ಮನವರು ವಜ್ರೇಶ್ವರಿ ಕಂಬೈನ್ಸನ್ನೂ ಆರಂಭಿಸಿದರು. ಅಲ್ಲೀತನಕ ಇದ್ದ ರಾಜ್‌ ಸಂಪಾದನೆ ಒಂದೇ ಏಟಿಗೆ ಹತ್ತು ಪಟ್ಟು ಹೆಚ್ಚಾಗಿತ್ತು. ಅಮ್ಮನ ಕಂಕುಳಲ್ಲಿದ್ದಾಗಲೇ ಅಪ್ಪು ಕ್ಯಾಮೆರಾದ ಎದುರು ಬಂದಾಗಿತ್ತು.

ಈಗೆಲ್ಲಾ ಒಂದು ಸಿನಿಮಾ ಗೆದ್ದರೆ ಹೀರೋಗಳನ್ನು ಹಿಡಿದು ನಿಲ್ಲಿಸಲಾಗುವುದಿಲ್ಲ. ಪುನೀತ್‌ ಹುಟ್ಟಿದಾಗಿಂದಲೂ ಸಿನಿಮಾ ವಾತಾವರಣದಲ್ಲಿ ಬೆಳೆದಿದ್ದರ ಜೊತೆಗೆ, ತೀರಾ ಸಣ್ಣ ವಯಸ್ಸಿಗೇ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದ್ದರು. ಯಾರೂ ನೋಡಲು ಸಾಧ್ಯವಿಲ್ಲದ ದೊಡ್ಡ ಗೆಲುವುಗಳನ್ನು ಬುದ್ಧಿ ಬಲಿಯುವ ಮುಂಚೆಯೇ ನೋಡಿದ, ಅರಸೊತ್ತಿಗೆಯಲ್ಲೇ ಆಡಿ ಬೆಳೆದ ಭಾರತ ಚಿತ್ರರಂಗದ ಏಕಮಾತ್ರ ನಟ ಅಪ್ಪು. ಹೀಗಾಗಿ, ಗೆಲುವು, ಸೋಲು ಅಂತೆಲ್ಲಾ ಯಾವತ್ತೂ ಇವರು ತಲೆ ಕೆಡಿಸಿಕೊಳ್ಳಲೇ ಇಲ್ಲ. ಯಾರೋ ಗೆದ್ದರು ಅಂತಾ ಹಲುಬಲಿಲ್ಲ. ಹೊಸದಾಗಿ ಗೆಲ್ಲುವ ಅನಿವಾರ್ಯವೂ ಇಲಿಲ್ಲ.

ನಲವತ್ತಾರರ ಪುನೀತ್‌ ಇನ್ನು ಎಣಿಸಿ ನಾಲ್ಕು ವರ್ಷಕ್ಕೆ ಚಿತ್ರರಂಗಕ್ಕೆ ಬಂದು ಐವತ್ತು ವರ್ಷ ಪೂರೈಸುತ್ತಿದ್ದರು.  ವಯಸ್ಸಿನಷ್ಟೇ ಅನುಭವವನ್ನೂ ಹೊಂದಿದ್ದ ಅಪ್ಪು ಇಷ್ಟು ಬೇಗ ಎದ್ದುಹೋಗಿಬಿಟ್ಟರಲ್ಲಾ ಅನ್ನೋದೇ ಕೊರಗು. ಸಕಲವನ್ನೂ ಪಡೆದಿರುವ, ನೋಡಿದ ಎಲ್ಲರ ಕಣ್ಣಿಗೂ ಅದೃಷ್ಟವಂತನಾಗಿ ಗೋಚರಿಸುವ ನಿನಗೆ ಆಯಸ್ಸು ಮಾತ್ರ ಮೊಟಕುಗೊಳ್ಳಲಿ ಅನ್ನೋದು ಬಹುಶಃ ವಿಧಿಲಿಖಿತವಿರಬಹುದು…

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಬಂದಾ ನೋಡಿ ಭಜರಂಗಿ!

Previous article

ಕೃತಕ ದೇಹದಂಡನೆ ಮಾಡದೇ ಇದ್ದಿದ್ದರೆ….

Next article

You may also like

Comments

Leave a reply

Your email address will not be published.