ಮಂಡ್ಯ ಲೋಕಸಭಾ ಕ್ಷೇತ್ರವೀಗ ಇಡೀ ಕರ್ನಾಟಕದ ಕುತೂಹಲದ ಕೇಂದ್ರ ಬಿಂದು. ರೆಬೆಲ್ ಸ್ಟಾರ್ ಅಂಬರೀಶ್ ಮಡದಿ ಸುಮಲತಾ ಕೊನೆಗೂ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಎರಡೂ ಪಕ್ಷಗಳಿಗೆ ಸೆಡ್ಡು ಹೊಡೆದಿದ್ದಾರೆ. ಈ ಮೂಲಕ ಈ ಕ್ಷೇತ್ರಕ್ಕೂ ಸಿನಿಮಾ ರಂಗಕ್ಕೂ ನೇರಾ ನೇರ ಸಂಪರ್ಕ ಬಂದು ಬಿಟ್ಟಿದೆ. ಯಾವ ನಟರು ಯಾರ ಪರ ಪ್ರಚಾರ ನಡೆಸಬಹುದೆಂಬ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಒಂದಷ್ಟು ರೂಮರುಗಳೂ ಹರಿದಾಡಿ ಕೆಲ ನಾಯಕರ ಹೆಸರುಗಳೂ ಓಡಾಡುತ್ತಿವೆ.
ಮಂಡ್ಯ ಲೋಕಸಭಾ ಕ್ಷೇತ್ರದ ಕಣದಲ್ಲಿ ಪುನೀತ್ ರಾಜ್ ಕುಮಾರ್ ಅವರ ಹೆಸರೂ ಹರಿದಾಡಿತ್ತು. ಪುನೀತ್ ಸುಮಲತಾ ಪರವಾಗಿ ಪ್ರಚಾರ ನಡೆಸುತ್ತಾರಾ? ನಿಖಿಲ್ ಪರವಾಗಿ ಕಣಕ್ಕಿಳಿಯುತ್ತಾರಾ ಅಂತೆಲ್ಲ ಗೊಂದಲಗಳೂ ಸೃಷ್ಟಿಯಾಗಿದ್ದವು. ಹೀಗೆ ತಮ್ಮ ಹೆಸರು ವಿನಾಕಾರಣ ಹರಿದಾಡುತ್ತಿರೋದನ್ನು ಗಮನಿಸಿರುವ ಪುನೀತ್ ಕರ್ನಾಟಕದ ಮಹಾ ಜನತೆಗೆ ಪತ್ರ ಮುಖೇನ ಸಂದೇಶವೊಂದನ್ನು ರವಾನಿಸಿದ್ದಾರೆ. ಈ ಮೂಲಕ ಈ ಲೋಕಸಭಾ ಚುನಾವಣೆಯ ಬಗ್ಗೆ ತಮ್ಮ ನಿಲುವೇನೆಂಬುದನ್ನೂ ಸ್ಪಷ್ಟಪಡಿಸಿದ್ದಾರೆ.
‘ನನಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲವೆಂದು ನಿಮಗೂ ತಿಳಿದಿದೆ. ನಾನು ಒಬ್ಬ ನಟನಾಗಿ ಕಲೆಯ ಜೊತೆ ಗುರುತಿಸಿಕೊಳ್ಳುತ್ತೇನೇ ಹೊರತು ರಾಜಕಾರಣದಲ್ಲಲ್ಲ. ನಾನು ಹೇಳ ಬಯಸುವ ವಿಚಾರವೇನೆಂದರೆ, ಮತ ಚಲಾಯಿಸುವುದು ಪ್ರತಿಯೊಬ್ಬ ನಾಗರಿಕರ ಹಕ್ಕು. ಹಾಗೆಯೇ ಅದು ಅವರ ಆಯ್ಕೆಗೆ ಸಂಬಂಧಪಟ್ಟಿದ್ದು. ಅದನ್ನು ಈ ದೇಶದ ಹಾಗೂ ಈ ನಾಡಿನ ನಾಗರಿಕನಾಗಿ ನಾನು ಗೌರವಿಸುತ್ತೇನೆ. ಕನ್ನಡ ಜನತೆಗೆ ಹಾಗೂ ನಮ್ಮ ಅಭಿಮಾನಿಗಳಿಗೆ ಅವರ ಮತವನ್ನು ಪ್ರಬುದ್ಧವಾಗಿ ಚಲಾಯಿಸಿ ಎಂದು ಕೇಳಿಕೊಂಡಿದ್ದೇನೇ ಹೊರತು ಯಾವುದೇ ಪಕ್ಷ ಹಾಗೂ ವ್ಯಕ್ತಿಗೆ ಎಂದಿಗೂ ಸೂಚಿಸುವುದಿಲ್ಲ.
ಗೌರವಾನ್ವಿತ ದೇವೇಗೌಡರ ಕುಟುಂಬ ಹಾಗೂ ಅಂಬರೀಶ್ ಅವರ ಕುಟುಂಬ ನಮ್ಮ ಕುಟುಂಬದ ಹಾಗೆ. ಇಬ್ಬರೂ ನಮ್ಮ ಹಿತೈಶಿಗಳೇ. ಇಬ್ಬರಿಗೂ ಒಳ್ಳೆಯದಾಗಲಿ. ಆ ಭಗವಂತ ನಿಮಗೆ ಜನಸೇವೆ ಮಾಡುವ ಶಕ್ತಿಯನ್ನು ಇನ್ನಷ್ಟು ಕೊಡಲಿ ಎಂದು ಪ್ರಾರ್ಥಿಸುತ್ತಾ ನನ್ನ ಹೆಸರನ್ನು ಚುನಾವಣೆಗೆ ಹಾಗೂ ರಾಜಕಾರಣಕ್ಕೆ ಸಂಬಂಧಿಸಬೇಡಿ ಎಂದು ಎಲ್ಲರಲ್ಲೂ ವಿನಂತಿಸುತ್ತೇನೆ’ ಎಂಬ ಸ್ಪಷ್ಟವಾದ ಸಂದೇಶವನ್ನು ಪುನೀತ್ ಕೊಟ್ಟಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆರಂಭ ಕಾಲದಿಂದಲೂ ರಾಜಕಾರಣದತ್ತ ಆಸಕ್ತಿ ಹೊಂದಿದವರಲ್ಲ. ಯಾವುದೇ ಪಕ್ಷದ ದಾಳವಾಗಲೊಲ್ಲದ ಅವರು ಈ ವಲಯದಿಂದ ದೂರವೇ ಉಳಿದುಕೊಂಡು ಬಂದಿದ್ದಾರೆ. ಈ ಮೂಲಕ ಈ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅವರು ತಮ್ಮ ನಿಲುವನ್ನು ಮತ್ತಷ್ಟು ಸ್ಪಷ್ಟಪಡಿಸಿದ್ದಾರೆ.