ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಲ್ಲಿ ಒಳಗೊಳಗೇ ಅಸಹನೆಯೊಂದು ಹಬೆಯಾಡುತ್ತಿರುವಂತಿದೆ. ಇದಕ್ಕೆ ಕಾರಣ ಬೇರೇನೋ ಅಂತ ಅಂದುಕೊಳ್ಳಬೇಕಿಲ್ಲ. ಅಭಿಮಾನಿಗಳಲ್ಲಿ ಹಬೆಯಾಡುತ್ತಿರೋ ಅಸಹನೆಗೆ ಪುನೀತ್ ಅವರ ಹೊಸಾ ಚಿತ್ರಕ್ಕೆ ಯುವರತ್ನ ಎಂಬ ಟೈಟಲ್ ಫಿಕ್ಸಾಗಿರೋದೇ ಕಾರಣ!
ಅವರ ಬಿರುದೇ ಪವರ್ ಸ್ಟಾರ್. ಹಾಗೆಂದ ಮೇಲೆ ಅವರು ನಟಿಸೋ ಚಿತ್ರಗಳ ಶೀರ್ಷಿಕೆಯೂ ಪವರ್ ಫುಲ್ಲಾಗಿಯೇ ಇರಬೇಕೆಂಬುದು ಅಭಿಮಾನಿಗಳ ಮಹದಾಸೆ. ಆದರೆ ಸಂತೋಷ್ ಆನಂದ್ ರಾಮ್ ನಿರ್ದೇಶನದ ಚಿತ್ರಕ್ಕೆ ಯಾವ ಪವರೂ ಇಲ್ಲದ ಯುವರತ್ನ ಟೈಟಲ್ ಅನ್ನು ಫಿಕ್ಸ್ ಮಾಡಿರೋದರ ಬಗ್ಗೆ ಅಭಿಮಾನಿಗಳೇ ಅಸಮಾಧಾನ ಹೊಂದಿರುವಂತಿದೆ.
ಹೇಳಿಕೇಳಿ ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ಯಶಸ್ವೀ ಜೋಡಿ. ಇವರಿಬ್ಬರ ಕಾಂಬಿನೇಷನ್ನಿನಲ್ಲಿ ಮೂಡಿ ಬರುತ್ತದೆ ಎಂದಾಕ್ಷಣ ನಿರೀಕ್ಷೆ ಹುಟ್ಟದಿರುತ್ತಾ… ಅಭಿಮಾನಿಗಳೆಲ್ಲ ಈ ಚಿತ್ರದ ಟೈಟಲ್ಲಿನ ಬಗ್ಗೆಯೇ ಥ್ರಿಲ್ ಆಗಿ ಕಾಯುತ್ತಿದ್ದರು. ಪವರ್ ಫುಲ್ ಟೈಟಲ್ಲೇ ಫನಲ್ ಆಗುತ್ತದೆ ಅಂತ ನಿರೀಕ್ಷಿಸಿದ್ದರು. ಆದರೆ ಅಂತಿಮಗೊಂಡಿದ್ದು ಮಾತ್ರ ಯುವರತ್ನ ಎಂಬ ಟೈಟಲ್.
ಈ ಯುವರತ್ನ ಎಂಬುದು ಪ್ರಸಿದ್ಧ ನವರತ್ನ ತೈಲದಂತೆಯೇ ಕೇಳಿಸೋದರಲ್ಲಿ ಅಚ್ಚರಿ ಪಡುವಂಥಾದ್ದೇನೂ ಇಲ್ಲ. ಇನ್ನು ಪತ್ರಕರ್ತ ರಮೇಶ್ ಸುರ್ವೆ ಈಗಾಗಲೇ ಥರ ಥರದ ರತ್ನಗಳ ಹೆಸರಿನಲ್ಲಿ ಹುಡುಕಾಡಿ ಪ್ರಶಸ್ತಿ ಪುರ್ಕಾರಗಳನ್ನು ಕೊಟ್ಟು ಬಿಟ್ಟಿದ್ದಾರೆ. ಬೆಂಗಳೂರಿನ ಹಾದಿ ಬೀದಿಗಳಲ್ಲಿ ಇಂಥಾ ರತ್ನ ಧರಿಸಿಕೊಂಡವರ ಫ್ಲೆಕ್ಸ್ ಹಾವಳಿಯನ್ನೂ ಕಂಡಾಗಿದೆ. ಇಂಥಾ ಎಲ್ಲ ಕಾರಣಗಳಿಂದ ಈ ಯುವ ರತ್ನ ಎಂಬುದು ಸವಕಲು ಪದವಾಗಿಯೇ ಧ್ವನಿಸುತ್ತದೆ. ಅದರಲ್ಲಿ ಯಾವ ಪವರ್ರೂ ಕಾಣಿಸದಿರೋದರಿಂದ ಅಭಿಮಾನಿಗಳು ಸಹಜವಾಗಿಯೇ ಅಸಾಮಾಧಾನಗೊಂಡಂತಿದೆ!
#
No Comment! Be the first one.