ಈ ಸಿನಿಮಾ ನಟರ ಮೇಲಿನ ಅಭಿಮಾನ ಹೆಚ್ಚಿನ ಸಂದರ್ಭಗಳಲ್ಲಿ ಅತಿರೇಕದ ಉತ್ತುಂಗದಲ್ಲಿರುತ್ತದೆ. ಅದು ಎಷ್ಟೋ ಸಲ ನಟ ನಟಿಯರನ್ನೇ ಮುಜುಗರಕ್ಕೀಡು ಮಾಡೋದೂ ಇದೆ. ಸದ್ಯ ಅಭಿಮಾನಿಯೊಬ್ಬ ಮಾಡಿರೋ ಕೆಲಸದಿಂದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೂ ಅಂಥಾದ್ದೊಂದು ಮುಜುಗರದ ಸನ್ನಿವೇಶ ಎದುರಾಗಿ ಬಿಟ್ಟಿದೆ.
ಅಭಿಮಾನಿಗಳು ತಮ್ಮಿಷ್ಟದ ನಟನ ಚಿತ್ರ ಬಿಡುಗಡೆಯಾದ ದಿನ ಥರ ಥರದಲ್ಲಿ ಅಭಿಮಾನ ತೋರ್ಪಡಿಸಿಕೊಳ್ಳುತ್ತಾರೆ. ಅದರಲ್ಲಿ ಕಟೌಟಿಗೆ ಹಾಲಿನಭಿಷೇಕ ಮಾಡೋದು ಕಾಮನ್. ಆದರೆ ನಟಸಾರ್ವಭೌಮ ಚಿತ್ರ ಬಿಡುಗಡೆಯಾದ ಮೊದಲ ದಿನ ತ್ರಿವೇಣಿ ಚಿತ್ರಮಂದಿರದಲ್ಲಿ ಅಭಿಮಾನಿಯೊಬ್ಬ ಅಪ್ಪು ಕಟೌಟಿಗೆ ಬಿಯರ್ ಅಭಿಷೇಕ ಮಾಡಿದ್ದ.
ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಟೀಕೆಗಳೂ ಕೂಡಾ ಕೇಳಿ ಬಂದಿದ್ದವು. ಇದೀಗ ಈ ಬಗ್ಗೆ ಖುದ್ದು ಪುನೀತ್ ಮಾತಾಡಿದ್ದಾರೆ. ಬಿಯರ್ನಿಂದ ಅಭಿಷೇಕ ಮಾಡೋದೆಲ್ಲ ಒಳ್ಳೇದಲ್ಲ, ಇಂಥಾದ್ದನ್ನ ಇನ್ನುಮುಂದೆ ಮಾಡಬೇಡಿ ಅಂತ ಅಭಿಮಾನಿಗಳಿಗೆ ಪ್ರೀತಿಯಿಂದಲೇ ತಿಳಿ ಹೇಳಿದ್ದಾರೆ. ಸಿನಿಮಾದಲ್ಲಿ ಏನೇನೋ ಮಾಡಬೇಕಾಗುತ್ತೆ. ಆದರೆ ಅದನ್ನ ನಿಜ ಜೀವನದಲ್ಲಿ ಮಾಡಬಾರದು ಅಂತಲೂ ಪುನೀತ್ ಹೇಳಿದ್ದಾರೆ.
#