ಪುಣ್ಯಾತ್ಗಿತ್ತೀರ ಹಾಡು ಬಂತು!

ಸತ್ಯನಾರಾಯಣ ಮನ್ನೆ ನಿರ್ಮಾಣದ ಪುಣ್ಯಾತ್ ಗಿತ್ತೀರು ಚಿತ್ರದ ಹಾಡುಗಳು ಹೊರ ಬಂದಿವೆ. ರಾಮಾನುಜಂ ಸಂಗೀತ ಸಂಯೋಜನೆ ಮಾಡಿರುವ ಈ ಹಾಡುಗಳೆಲ್ಲವೂ ಈಗಾಗಲೇ ಪುಣ್ಯಾತ್ಗಿತ್ತೀರು ಸೃಷ್ಟಿಸಿರೋ ಸಂಚಲನಕ್ಕೆ ಮತ್ತಷ್ಟು ರಂಗು ತುಂಬುವಂತೆ ಮೂಡಿ ಬಂದಿವೆ. ಕವಿರತ್ನ ವಿ ನಾಗೇಂದ್ರ ಪ್ರಸಾದ್ ಇದರ ಟೈಟಲ್ ಸಾಂಗ್ ಬರೆದಿದ್ದಾರೆ. ಹೆಣ್ಣಿನ ಮಹತ್ವ ಸಾರುವ ಹಾಡೊಂದನ್ನು ನಿರ್ದೇಶಕ ರಾಜು ಅವರೇ ಬರೆದಿದ್ದಾರೆ. ಕಾಶಿ ಮೋಹನ್, ಸ್ವರಾಜ್ ಮುಂತಾದವರೂ ಹಾಡುಗಳನ್ನ ಬರೆದಿದ್ದಾರೆ. ಈ ಎಲ್ಲ ಹಾಡುಗಳೂ ಸಿನಿಮಾ ಕಥೆಗೆ ಪೂರಕವಾಗಿ, ಹೊಸತನದೊಂದಿಗೆ ಪ್ರೇಕ್ಷಕರನ್ನು ಸೆಳೆದುಕೊಳ್ಳುವತ್ತ ಮುನ್ನುಗ್ಗುತ್ತಿವೆ.

ಈ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಭಿನ್ನವಾಗಿಯೇ ನಡೆಸಲು ನಿರ್ಮಾಪಕರು, ನಿರ್ದೇಶಕರು ಯೋಜನೆ ಹಾಕಿಕೊಂಡಿದ್ದರು. ಈ ಚಿತ್ರದಲ್ಲಿ ನಾಲ್ವರು ನಾಯಕಿಯರೂ ಅನಾಥರೇ. ಆದ್ದರಿಂದ ಅನಾಥ ಹೆಣ್ಣುಮಗುವೊಂದರಿಂದ ಆಡಿಯೋ ಲಾಂಚ್ ನಡೆಸಲು ತೀರ್ಮಾನಿಸಲಾಗಿತ್ತು. ಅನಾಥಾಶ್ರಮದಲ್ಲಿ ಒಂದು ಹೆಣ್ಣುಮಗುವನ್ನು ದತ್ತು ಪಡೆದುಕೊಂಡು ಅದರ ಶಿಕ್ಷಣದ ಜವಾಬ್ದಾರಿಯನ್ನೂ ಚಿತ್ರತಂಡವೇ ಹೊತ್ತುಕೊಂಡಿತ್ತಂತೆ. ಆದರೆ ಆ ಮಗು ಅನಾರೋಗ್ಯಗೊಂಡಿದ್ದರಿಂದ ಎಣಿಕೆಯಂತೆ ಕಾರ್ಯಕ್ರಮ ನಡೆಸಲು ಸಾಧ್ಯವಾಗಿಲ್ಲ. ಆದ್ದರಿಂದ ನಾಲ್ವರು ನಾಯಕಿಯರೇ ಆಡಿಯೋ ಬಿಡುಗಡೆ ಮಾಡಿದ್ದಾರೆ.

ನಾಲ್ವರು ಬಿಂದಾಸ್ ಹುಡುಗೀರೇ ಮುಖ್ಯಭೂಮಿಕೆಯಲ್ಲಿರುವ ‘ಪುಣ್ಯಾತ್ಗಿತ್ತೀರು ಚಿತ್ರದ ಟೀಸರ್ ಭಾರೀ ಫೇಮಸ್ ಆಗಿದೆ. ಸತ್ಯನಾರಾಯಣ ಮನ್ನೆ ನಿರ್ಮಾಣದ ಈ ಚಿತ್ರದ ಟೀಸರ್ ಬಿಡುಗಡೆಯಾಗಿ ದಿನಗೊಪ್ಪತ್ತಿನಲ್ಲಿಯೇ ಯೂಟ್ಯೂಬ್‌ನಲ್ಲಿ ಐವತ್ತು ಸಾವಿರಕ್ಕೂ ಹೆಚ್ಚಿನ ವೀಕ್ಷಣೆ ಪಡೆಯುವ ಮೂಲಕ ಟಾಕ್ ಕ್ರಿಯೇಟ್ ಮಾಡಿತ್ತು. ಇದೀಗ ಹಾಡುಗಳೂ ಕೂಡಾ ಅಂಥಾದ್ದೇ ಆವೆಗದಲ್ಲಿ ಮೂಡಿ ಬಂದಿವೆ.

ರಾಜ್ ಕತೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರೋ ಈ ಚಿತ್ರದಲ್ಲಿ ಮಮತಾ ರಾವುತ್, ವಿದ್ಯಾ ಮೂಡಿಗೆರೆ ಮತ್ತು ವಿದ್ಯಾಶ್ರೀ ಬೋಲ್ಡ್ ಹುಡುಗಿಯರಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಕುರಿ ರಂಗ ಮುಂತಾದವರು ಪುಣ್ಯಾತ್‌ಗಿತ್ತೀರಿಗೆ ಸಾಥ್ ನೀಡಿದ್ದಾರೆ. ಇನ್ನುಳಿದಂತೆ ಎ.ರಾಮಾನುಜಂ ಸಂಗೀತ, ಶರತ್ ಕುಮಾರ್ ಜಿ ಛಾಯಾಗ್ರಹಣ, ಶಿವಶಂಕರ್ ಸಂಕಲನ, ಸಂದೀಪ್ ಕನಕಪುರ ಸಂಭಾಷಣೆ, ತ್ರಿಭುವನ್ ನೃತ್ಯ ನಿರ್ದೇಶನವಿದೆ.


Posted

in

by

Tags:

Comments

Leave a Reply