ಒಂದು ಕೋಣೆಯಲ್ಲಿ ಪಾತ್ರಗಳನ್ನು ಹಿಡಿದಿಡಬಹುದು. ಆದರೆ ಪ್ರೇಕ್ಷಕರ ಮನಸುಗಳನ್ನು ಅದರ ಸುತ್ತಲೇ ಕೇಂದ್ರೀಕರಿಸುವಂತೆ ಮಾಡೋದು ಸವಾಲಿನ ಸಂಗತಿ. ಆದರೆ ನಿರ್ದೇಶಕ ದಯಾಳ್ ಪದ್ಮನಾಭನ್ ಪಾಲಿಗದು ಕರತಲಾಮಲಕ ಎಂಬುದೀಗ ತೆರೆ ಕಂಡಿರೋ ಪುಟ ೧೦೯ ಚಿತ್ರದ ಮೂಲಕವೂ ಋಜುವಾತಾಗಿದೆ!
ಒಂಚೂರು ಲಯ ತಪ್ಪಿದರೂ ಪ್ರೇಕ್ಷಕರು ಉಸಿರುಗಟ್ಟಿ ಬಿಡುವಂಥಾ ಸೂಕ್ಷ್ಮವಾದ ಕಥೆಯನ್ನಿಲ್ಲಿ ದಯಾಳ್ ಜಾಣ್ಮೆಯಿಂದಲೇ ಹೇಳಿದ್ದಾರೆ. ಗಂಡ ಮತ್ತು ಹೆಂಡತಿ, ಒಂದು ಕೊಲೆ ಮತ್ತು ಅದರ ಸುತ್ತಾ ಸಾಗೋ ತನಿಖೆ… ಸಲೀಸಾಗಿ ಕಾಣೋ, ತೀರಾ ಸರಳ ಎನ್ನಿಸುವಂತೆ ಕಾಣುವ ಈ ಒನ್ ಲೈನ್ ಸ್ಟೋರಿಯನ್ನು ಪ್ರೇಕ್ಷಕರನ್ನು ತುದೀ ಸೀಟಿಗೆ ತಂದು ಕೂರಿಸುವಂತೆ, ಅದರ ಸುತ್ತ ಮನುಷ್ಯ ಸಂಬಂಧಗಳು, ವರ್ತನೆಗಳು ಮತ್ತು ನಾನಾ ಭಾವಗಳು ಗರಿ ಬಿಚ್ಚುವಂತೆ ರೋಚಕವಾಗಿ ಕಟ್ಟಿ ಕೊಡುವಲ್ಲಿಯೂ ಈ ಚಿತ್ರದ ಮೂಲಕ ದಯಾಳ್ ಗಮನಾರ್ಹ ಪ್ರಯತ್ನ ಮಾಡಿದ್ದಾರೆ.
ಒಂದು ಮನೆ. ಅದರೊಳಗೆ ಹೆಂಡತಿ ಮತ್ತು ಬರಹಗಾರನಾದ ಗಂಡ. ಈ ಎರಡು ಪಾತ್ರಗಳನ್ನು ವೈಷ್ಣವಿ ಮೆನನ್ ಮತ್ತು ನವೀನ್ ಕೃಷ್ಣ ನಿಭಾಯಿಸಿದ್ದಾರೆ. ಈ ಸಂಸಾರದಲ್ಲಿ ಹೆಂಡತಿ ಕೊಲೆ ಮೂಲಕವೇ ಗಂಡಾಂತರವೊಂದು ಬಂದೆರಗುತ್ತೆ. ಈ ಪ್ರಕರಣದ ತನಿಖೆಗಾಗಿ ಜೆಕೆ ಖಡಕ್ಕು ಪೊಲೀಸ್ ಅಧಿಕಾರಿಯಾಗಿ ಮನೆಯೊಳಗೆ ಎಂಟ್ರಿ ಕೊಡುತ್ತಾರೆ. ನಂತರ ಆ ಮನೆಯೊಳಗಿನ ನಾಲಕ್ಕು ಗೋಡೆಗಳ ನಡುವೆಯೇ ಕೊಲೆಯ ರಹಸ್ಯ ಪತ್ತೆಹಚ್ಚುವ ಕಾರ್ಯ ಶುರುವಾಗುತ್ತೆ. ಅದನ್ನೊಂದು ತನಿಖೆಯಾಗಿ ಮಾತ್ರ ಚಿತ್ರಿಸದೇ ಮನುಷ್ಯ ಸಂಬಂಧಗಳ ತಾಕಲಾಟವಾಗಿಯೂ, ನಂಟುಗಳ ಪೀಕಲಾಟವಾಗಿಯೂ, ಬದುಕಿನ ಸಂಕೀರ್ಣತೆಗಳ ಅನಾವರಣದಂತೆಯೂ ಕಟ್ಟಿ ಕೊಟ್ಟಿರೋದೇ ಈ ಚಿತ್ರದ ನಿಜವಾದ ಪ್ಲಸ್ ಪಾಯಿಂಟ್. ಈ ಪೊಲೀಸ್ ಅಧಿಕಾರಿ ಮತ್ತು ಬರಹಗಾರ ಗಂಡನ ಪಾತ್ರವನ್ನು ಜೆಕೆ ಮತ್ತು ನವೀನ್ ಕೃಷ್ಣ ಪೈಪೋಟಿಗೆ ಬಿದ್ದಂತೆ ನುಂಗಿಕೊಂಡು ನಟಿಸಿರೋದೂ ಕೂಡಾ ಪುಟ ೧೦೯ ರೋಚಕವೆನ್ನಿಸಲು ಪ್ರಧಾನ ಕಾರಣವಾಗಿ ದಾಖಲಾಗುತ್ತೆ.
ಹೀಗೆ ಮೊದಲಾರ್ಧ ನೋಡುಗರನ್ನು ಕುತೂಹಲದ ಕಾವಲಿಯಲ್ಲಿ ಕೂರಿಸಿ ಸಾಗುವ ಕಥೆ ದ್ವಿತೀಯಾರ್ಧದಲ್ಲಿ ಸಂಸಾರದ ಜಂಜಾಟಗಳನ್ನು ತೆರೆದಿಡುತ್ತಾ, ತನಿಖೆಯ ಟ್ರ್ಯಾಕಿಗೆ ಬರುತ್ತಾ ಮುದ ನೀಡುತ್ತದೆ. ಹಾಗಾದರೆ ಆ ಸಂಸಾರದಲ್ಲಿ ಇಂಥಾದ್ದೊಂದು ಗಂಡಾಂತರ ತಲೆದೋರಲು ಕಾರಣವೇನು. ಆ ಗೃಹಿಣಿಯ ಕೊಲೆಗೆ ಯತ್ನಿಸಿದವರ್ಯಾರು, ಅದನ್ನು ಖಡಕ್ ಅಧಿಕಾರಿ ಭೇದಿಸುತ್ತಾನಾ ಎಂಬುದೇ ನಿಜವಾದ ಕುತೂಹಲ. ಅದನ್ನು ದಯಾಳ್ ಸೃಷ್ಟಿಸಿದ ನೆರಳು ಬೆಳಕಿನ ಚಮಾತ್ಕಾರದ ನಡುವೆಯೇ ನೋಡೋದೊಳ್ಳೆಯದು!
ಒಟ್ಟಾರೆಯಾಗಿ ಪಾತ್ರ ವರ್ಗ, ನಟನೆ, ಕ್ಯಾಮೆರಾ, ಸಂಕಲನ, ಹಿನ್ನೆಲೆ ಸಂಗೀತ ಸೇರಿದಂತೆ ಎಲ್ಲವನ್ನೂ ಜತನದಿಂದ ಸಂಭಾಳಿಸುವಲ್ಲಿ ನಿರ್ದೇಶನದ ಕಸರತ್ತು ಗಮನ ಸೆಳೆಯುತ್ತೆ. ಒಂದೇ ಕೋಣೆಯೊಳಗೆ ಫೋಕಸ್ ಆಗಿದ್ದರೂ ಪಿಕೆಎಚ್ ದಾಸ್ ಅವರ ಕ್ಯಾಮೆರಾ ಕೈಚಳಕ ಇಡೀ ಚಿತ್ರವನ್ನು ಏಕತಾನತೆಯಿಂದ ಪಾರು ಮಾಡಿದೆ. ಇಂಥ ಪ್ರಯೋಗಾತ್ಮಕ ಸಿನಿಮಾವನ್ನು ಸಂಕಲನ ಮಾಡುವಾಗಿನ ಛಾಲೆಂಜು ಬಹುಶಃ ಎಡಿಟ್ ಮಾಡಿದ ಶ್ರೀ ಅವರಿಗೇ ತಿಳಿದಿರಬೇಕು. ಆದರೆ, ಅದೆಲ್ಲ ನೋಡೋ ಪ್ರೇಕ್ಷಕರಿಗೆ ಗೊತ್ತಾಗದಂತೆ ಸಂಕಲಿಸಿ ಕೊಟ್ಟಿರೋದು ಎಡಿಟರ್ ಕ್ರೇಜ಼ಿಮೈಂಡ್ಸ್ ಶ್ರೀ ಅವರ ಗೆಲುವು. ಕೊಲೆ, ತನಿಖೆ, ಅನುಮಾನಗಳ ಸುತ್ತ ಹೊಸೆದುಕೊಂಡಿರೋ ಈ ಸಿನಿಮಾ ಈ ಜಾನರಿನ ಚಿತ್ರಗಳಲ್ಲಿಯೇ ಭಿನ್ನವಾಗಿ ಕಾಣಿಸುತ್ತದೆ. ಅದು ಪುಟ ೧೦೯ರ ನಿಜವಾದ ಗಮ್ಮತ್ತು!
#
No Comment! Be the first one.