ಬಿಗ್ಬಾಸ್ ಮನೆಯಿಂದ ವಾಪಾಸಾದಾಕ್ಷಣವೇ ಆ ಕರಾಳ ರಾತ್ರಿಯೆಂಬ ಚಿತ್ರ ನಿರ್ದೇಶನ ಮಾಡಿ ಗೆದ್ದವರು ದಯಾಳ್ ಪದ್ಮನಾಭನ್. ಹೊಸಾ ಪ್ರಯೋಗದೊಂದಿಗೇ ಗೆಲುವು ಕಂಡ ದಯಾಳ್ ಆ ಕರಾಳ ರಾತ್ರಿ ಚಿತ್ರದೊಂದಿಗೇ ಪುಟ ೧೦೯ ಚಿತ್ರವನ್ನೂ ಆರಂಭಿಸಿದ್ದರು. ಆದರೆ ಪೂರ್ವ ಯೋಜನೆಯಂತೆಯೇ ಮೊದಲು ಕರಾಳ ರಾತ್ರಿಯನ್ನು ಮುಗಿಸಿ ಪ್ರೇಕ್ಷಕರ ಮುಂದೆ ತಂದಿದ್ದರು. ಇದೀಗ ದಯಾಳ್ ಪುಟ ೧೦೯ ಚಿತ್ರವನ್ನು ಇದೇ ವಾರ ತೆರೆಗೆ ತರುತ್ತಿದ್ದಾರೆ.
ಇದುವರೆಗೂ ಭಿನ್ನವಾದ ಕಥೆಯನ್ನೇ ಚಿತ್ರವಾಗಿಸುತ್ತಾ ಬಂದಿರುವ ದಯಾಳ್ ತೆರೆದಿರೋ ಪುಟ ೧೦೯ರಲ್ಲಿ ಏನಿದೆ ಎಂಬ ಕುತೂಹಲವೀಗ ಸಾರ್ವತ್ರಿಕವಾಗಿದೆ. ಈ ಬಗ್ಗೆ ಒಂದಷ್ಟು ವಿಚಾರಗಳನ್ನು ದಯಾಳ್ ಅವರೇ ಹಂಚಿಕೊಂಡಿದ್ದಾರೆ. ಆ ಪ್ರಕಾರವಾಗಿ ಹೇಳೋದಾದರೆ ಇದೊಂದು ಸಸ್ಪೆನ್ಸ್ ಕಥಾನಕದ ಚಿತ್ರ. ಎಲ್ಲರೂ ಪೊಲೀಸ್ ತನಿಖೆಗಳ ಬಗ್ಗೆ ಕೇಳಿರುತ್ತಾರೆ. ಆದರೆ ಅದನ್ನು ಪರಿಣಾಮಕಾರಿಯಾಗಿ ನೋಡೋ ಸದಾವಕಾಶ ಈ ಚಿತ್ರದ ಮೂಲಕ ಕೂಡಿ ಬಂದಿದೆ. ಯಾಕೆಂದರೆ ಈ ಚಿತ್ರ ಒಂದು ರೋಚಕವಾದ ಪೊಲೀಸ್ ತನಿಖೆಯನ್ನೂ ಹೊಂದಿದೆಯಂತೆ.
ಮೂರು ನಾಲಕ್ಕು ಪಾತ್ರಗಳು ಮತ್ತು ಸೀಮಿತ ಲೊಕೇಷನ್ನುಗಳನ್ನಿಟ್ಟುಕೊಂಡೇ ಪ್ರೇಕ್ಷಕರನ್ನು ಮೋಡಿಗೊಳಿಸೋ ಕಲೆ ದಯಾಳ್ ಅವರಿಗೆ ಕರಗತವಾಗಿದೆ. ಈಗಾಗಲೇ ಆ ಸೂತ್ರದಲ್ಲಿ ಅವರು ಗೆದ್ದಿದ್ದಾರೆ. ಈ ಚಿತ್ರದಲ್ಲಿಯೂ ಅಂಥಾದ್ದೇ ಇದೆ. ಆದರೆ ಇಡೀ ಚಿತ್ರ ಮಾತ್ರ ಪ್ರೇಕ್ಷಕರನ್ನು ಕ್ಷಣ ಕ್ಷಣವೂ ಕುತೂಹಲದ ಉತ್ತುಂಗಕ್ಕೇರಿಸುತ್ತಾ ಎಲ್ಲರಿಗೂ ಇಷ್ಟವಾಗುವಂತೆ ಮೂಡಿ ಬಂದಿದೆ ಎಂಬುದು ದಯಾಳ್ ಭರವಸೆ. ಅದರ ಅಸಲೀ ಕಮಾಲ್ ಏನೆಂಬುದು ತಿಳಿಯಲು ದಿನಗಳಷ್ಟೇ ಬಾಕಿ ಉಳಿದಿವೆ.
ದಯಾಳ್ ಪದ್ಮನಾಭನ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಪಿ.ಕೆ.ಹೆಚ್ ದಾಸ್ ಅವರ ಛಾಯಾಗ್ರಹಣವಿದೆ. ಗಣೇಶ್ ನಾರಾಯಣ್ ಸಂಗೀತ ನಿರ್ದೇಶನ ಹಾಗೂ ಶ್ರೀ ಕ್ರೇಜಿಮೈಂಡ್ಸ್ ಸಂಕಲನವಿರುವ ಈ ಚಿತ್ರಕ್ಕೆ ನವೀನ್ಕೃಷ್ಣ ಸಂಭಾಷಣೆ ಬರೆದಿದ್ದಾರೆ. ಜೆ ಕೆ, ನವೀನ್ ಕೃಷ್ಣ, ವೈಷ್ಣವಿ ಚಂದ್ರನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಅನುಪಮ ಗೌಡ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.
#
No Comment! Be the first one.