ಸಂವಿಧಾನದ ಭಾಗ ಮೂರು ವಿಧಿ 23ರಲ್ಲಿ ಬಾಲಕಾರ್ಮಿಕ ಪದ್ದತಿ, ಬಲವಂತದ ದುಡಿಮೆ ಇತ್ಯಾದಿಗಳ ಕುರಿತಾಗಿ ಭೀಮ್ ರಾವ್ ಅಂಬೇಡ್ಕರ್ ರವರು 1950ರಲ್ಲಿಯೇ ಕಾನೂನು ಕಟ್ಟಳೆಗಳನ್ನು ಜಾರಿ ಗೊಳಿಸಿದ್ದರೂ ಸಹ ಬಾಲ ಕಾರ್ಮಿಕ ಪದ್ದತಿ ಎಂಬುದು ಆರದ ಕೆಂಡದಂತೆ ಸದಾ ಕಾಣದಂತೆ ಉರಿಯುತ್ತಲೇ ಇರುತ್ತಿದೆ. ಅಲ್ಲದೇ ಬಾಲ ಕಾರ್ಮಿಕ ಪದ್ದತಿಯನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸರ್ಕಾರವೂ ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳುತ್ತಿಲ್ಲ. ಪಾಲಕರು ತಮ್ಮ ಸ್ವಾರ್ಥವನ್ನು ಬಿಡುತ್ತಿಲ್ಲ. ಈ ಅಮಾನವೀಯ ಪದ್ದತಿಯಿಂದ ಮುಗ್ಧ ಮಕ್ಕಳನ್ನು ರಕ್ಷಿಸಿ ಕಸಿಯಲಾಗುತ್ತಿರುವ ಅವರ ಹಕ್ಕುಗಳನ್ನು ಅವರಿಗೆ ಮರಳಿಸಲು ಕೈ ಜೋಡಿಸುವ ನಿಟ್ಟಿನಲ್ಲಿ ನಿರ್ಮಾಣವಾದ ಮಕ್ಕಳ ಸಿನಿಮಾ ಪುಟಾಣಿ ಪವರ್.ಎಸ್. ವಿ ಕ್ರಿಯೇಷನ್ಸ್ ಲಾಂಛನದ ಅಡಿಯಲ್ಲಿ ನಿರ್ಮಾಣಗೊಂಡ ಈ ಚಿತ್ರವನ್ನು ಎಂ. ಗಜೇಂದ್ರ ನಿರ್ದೇಶನ ಮಾಡುತ್ತಿದ್ದಾರೆ. ಸಾಮಾಜಿಕ ಕಳಕಳಿಯ, ಅದರಲ್ಲಿಯೂ ಕಡಿಮೆ ವೀಕ್ಷಕ ವರ್ಗ ಹೊಂದಿರುವ ಮಕ್ಕಳ ಚಿತ್ರದ ನಿರ್ದೇಶನಕ್ಕೆ ಕೈ ಹಾಕಿರುವ ಗಜೇಂದ್ರ ಅವರ ಧೈರ್ಯ ಮೆಚ್ಚಲೇಬೇಕು.
ಪುಟಾಣಿ ಪವರ್ ನಲ್ಲಿ ಮಜಾ ಭಾರತ ಖ್ಯಾತಿಯ ಬಾಲನಟಿ, ನಿರೂಪಕಿ ಆರಾಧನ ಭಟ್ ನಾಯಕಿಯಾಗಿ ನಟಿಸಿದ್ದಾರೆ. ಹಿರಿಯ ಸಾಹಿತಿ, ಚಿತ್ರಸಾಹಿತಿ ದೊಡ್ಡರಂಗೇಗೌಡರು ಪುಟಾಣಿ ಪವರ್ ನಲ್ಲಿ ಹೆಡ್ ಮಾಸ್ಟರ್ ಪಾತ್ರವನ್ನು ನಿಭಾಯಿಸಿದ್ದಾರೆ. ಉಳಿದಂತೆ ಐಶ್ವರ್ಯಾ, ಪ್ರೀತಿರಾಜ್, ಅಕ್ಷಯ, ಶ್ರೀ ರಕ್ಷಾ, ಮನೋಜ್, ಮಹೇಂದ್ರ ಮನ್ನೋತ್, ಬದ್ರಿ, ಹರಿಣಿ ಶ್ರೀಕಾಂತ್ ಪುಟಾಣಿ ಪವರ್ ನಲ್ಲಿದ್ದಾರೆ. ಚಿತ್ರಕ್ಕೆ ಜೀವ ಅಂತೋಣಿ ಛಾಯಾಗ್ರಹಣದ ಕೆಲಸವನ್ನು ಮಾಡಿದ್ದು, ಸುನೀಲ್ ಹರದೂರು, ರಂಗನಾಥ್ ಎನ್. ಸಾಹಿತ್ಯ ಬರೆದಿದ್ದಾರೆ. ವಿಜಯ್ ಕೃಷ್ಣ ಸಂಗೀತ ನೀಡಿದ್ದಾರೆ. ಪುಟಾಣಿ ಪವರ್ ಇದೇ ಮೇ 24ರಂದು ರಾಜ್ಯಾದ್ಯಂತ ಪವರ್ ತೋರಿಸಲಿದೆ.