ಪುಟ್ಟಣ್ಣ ಕಂಡಿದ್ದು ೫೧ ವಸಂತಗಳನ್ನು ಮಾತ್ರ.  ಅವರ ವ್ಯಕ್ತಿತ್ವದ, ಅವರ ಸಿನಿಮಾಗಳ ಪರ-ವಿರೋಧವೇನೇ ಇರಲಿ, ಅವರ ಉಲ್ಲೇಖವಿಲ್ಲದ ಕನ್ನಡ ಸಿನಿಮಾ ಅಪೂರ್ಣ. ಅವರ ಬಗ್ಗೆ ಕಳೆದ ವರ್ಷಗಳಲ್ಲಿ ಬರೆದ ಹಲವು ಬರಹಗಳನ್ನು ಸಂಕಲಿಸುವ ಒಂದು ಪ್ರಯತ್ನ…

ಚಿತ್ರಕಾರನ ವೈವಿಧ್ಯಮಯ ಚಿತ್ರಣ: ಬಹಳ ದಿನಗಳಿಂದ ಹುಡುಕುತ್ತಿದ್ದ ಡಿ.ಬಿ.ಬಸವೇಗೌಡರ ’ನಾ ಕಂಡ ಪುಟ್ಟಣ್ಣ ಕಣಗಾಲ್’ ಕಳೆದವಾರ ’ಕನ್ನಡ-ಸಂಸ್ಕೃತಿ ಇಲಾಖೆಯ’ ಪುಸ್ತಕ ಮಳಿಗೆಯಲ್ಲಿ ಸಿಕ್ಕೇಬಿಟ್ಟಿತು. ಆ ಪುಸ್ತಕದ ನಂತರವೂ ಗೌಡರು ’ಬೆಳ್ಳಿತೆರೆಯ ಭಾವಶಿಲ್ಪಿ’ ಎಂಬ ಪರಿಷ್ಕೃತವಾದ ಮೈಕೈ ತುಂಬಿಕೊಂಡ ಆವೃತ್ತಿಯನ್ನೂ ತಂದರು. ಪುಟ್ಟಣ್ಣ ಕಾಲವಾದ ಕೆಲವೇ ತಿಂಗಳುಗಳಲ್ಲಿ ಹೊರಬಂದ ’ನಾ ಕಂಡ ಪುಟ್ಟಣ್ಣ ಕಣಗಾಲ್’ ಆ ಕಾರಣಕ್ಕಾಗಿಯೇ ಕುತೂಹಲ ಉಂಟುಮಾಡಿತ್ತು.

ವೃತ್ತಿಯಿಂದ ವಕೀಲರಾದ ಗೌಡರ ಚಿತ್ರರಂಗದ ಮೇಲಿನ ಅಭಿಮಾನ, ಪುಟ್ಟಣ್ಣ ಬಗೆಗಿದ್ದ ಪ್ರೀತಿ ಬೆರಗುಗೊಳಿಸುತ್ತದೆ. ಎರಡೂ ಪುಸ್ತಕಗಳಲ್ಲಿ ಎದ್ದು ಕಾಣುವುದು ವಕೀಲರ ಶಿಸ್ತು. ಕೇಸ್ ಫ಼ೈಲ್ ಅನ್ನು ಒಪ್ಪ-ಓರಣವಾಗಿಡುವ ಶಿಸ್ತು. ಎನ್ಕಂಬರೆನ್ಸ್ ಪತ್ರಗಳನ್ನು ಕೂಲಂಕುಷವಾಗಿ ನೋಡುವ ಸೂಕ್ಷ್ಮತೆ. ಹಾಗೆಯೇ ಪುಟ್ಟಣ್ಣನವರಿಗೂ ಗೌಡರ ಬಗ್ಗೆ ಇದ್ದ ವಿಶ್ವಾಸ-ಸಲಿಗೆ ಗಳ ಯಥಾವತ್ ಚಿತ್ರಣವಿದೆ. ಪುಟ್ಟಣ್ಣ ೧೯೬೮ ರ ಆಗಸ್ಟ್ ೧ ರಂದು ಗೌಡರಿಗೆ ಬರೆದ ಪತ್ರ, ಪುಟ್ಟಣ್ಣನವರ ಹಸ್ತಾಕ್ಷರದಲ್ಲೇ ಇರುವುದು ಒಂದು ವಿಶೇಷ. ಆಗ ’ಸಾವಿರ ಮೆಟ್ಟಿಲು’ ಕೈಕೊಟ್ಟಿತ್ತು. ಇದು ಪುಟ್ಟಣ್ಣನವರ ಮೊದಲ ಚಿತ್ರವಾಗಬೇಕಿತ್ತು. (ಪುಟ್ಟಣ್ಣ ಜೀವಿತಾವಧಿಯಲ್ಲಿ ಆ ಚಿತ್ರ ಬಿಡುಗಡೆಯ ಭಾಗ್ಯ ಕಾಣಲೇ ಇಲ್ಲ). ಗೌಡರು ಈ ಚಿತ್ರದ ನಿರ್ಮಾಪಕರಾದ್ದರಿಂದ ಬಹಳನೊಂದಿದ್ದರು. ಪುಟ್ಟಣ್ಣ ಆ ಸಮಯದಲ್ಲಿ ಗೌಡರಿಗೆ ಬರೆದಿರುವ ಪತ್ರದ ಒಕ್ಕಣೆ ವಿಸ್ಮಿತಗೊಳಿಸುತ್ತದೆ. ನಾವು ಇಂದು ಚಿತ್ರರಂಗದ ಬಗ್ಗೆ ಹೇಳುತ್ತಿರುವ ಹಲವು ತೀಕ್ಷ್ಣ ಮಾತುಗಳನ್ನು ಐದು ದಶಕಗಳ ಹಿಂದೆಯೇ ಪುಟ್ಟಣ್ಣ ಹೇಳಿದ್ದರು. “ಸಿನಿಮಾ ತಯಾರಿಕೆ ಬಗ್ಗೆ ಅರೆಬರೆ ತಿಳಿದಿರುವ ಅಡಿಮುಠ್ಠಾಳರ” ಬಗ್ಗೆ ಪುಟ್ಟಣ್ಣ ಅರವತ್ತರ ಆ ದಶಕದಲ್ಲೇ ಕ್ರೋಧಗೊಂಡಿದ್ದರು. ಇಂದಿಗೂ ಈ ಪರಿಸ್ಥಿತಿ ಬಹಳ ಬದಲಾಗಿಲ್ಲ ಎಂಬುದೇ ಅಚ್ಚರಿ. ಪತ್ರದುದ್ದಕ್ಕೂ ಗೌಡರನ್ನು ಪುಟ್ಟಣ್ಣ ’ನನ್ನ ರೋಮಿಯೋ’ ಎಂದು ಸಂಬೋಧಿಸುತ್ತಾ, ಚಿತ್ರೀಕರಣದಲ್ಲಾದ ವಿಳಂಬವನ್ನು ಸಮರ್ಥಿಸಿಕೊಳ್ಳುವ ಪರಿಯನ್ನು ಒಮ್ಮೆ ಓದಿಯೇ ತೀರಬೇಕು. ಇನ್ನೂ ’ಬೆಳ್ಳಿಮೋಡ’ ಮಾತ್ರ ಮಾಡಿದ್ದ ಆ ಕಾಲಘಟ್ಟದಲ್ಲಿಯೇ ’ಮುಂಗೋಪಿ’, ’ಉದ್ದ ನಾಲಗೆ’ ಎಂದೆಲ್ಲಾ ಟೀಕೆಗೊಳಾಗಾಗಿದ್ದ ಪುಟ್ಟಣ್ಣ ತಮ್ಮ ಅಸಹಾಯಕತೆ, ಕನ್ನಡ ಪ್ರೇಮಗಳನ್ನೆಲ್ಲಾ ಒಂದೇ ಉಸಿರಲ್ಲಿ ಆ ಪತ್ರದಲ್ಲಿ ಹೊರಹಾಕಿದ್ದಾರೆ.

ತಾವು ನೆನೆಸಿದಂತೆ ದೃಶ್ಯಗಳು ಬರದಿದ್ದರೆ, ನಿರೀಕ್ಷಿಸಿದಂತೆ ಕಲಾವಿದರು ಅಭಿನಯಿಸದಿದ್ದರೆ, ಸೆಟ್ ನಲ್ಲಿಯೇ ಕಪಾಳಕ್ಕೆ ಬಿಗಿದುಬಿಡುವ (ದುರ್)ಅಭ್ಯಾಸವಿದ್ದ ಪುಟ್ಟಣ್ಣ, ಇದಕ್ಕಾಗಿ ಟೀಕೆಗೆ ಒಳಗಾಗುತ್ತಿದ್ದರು. ವೃತ್ತಿ ಕಾಠಿಣ್ಯದ ಬಗ್ಗೆ ಗೌಡರಿಗೆ ವಿವರಿಸುತ್ತಾ ಪುಟ್ಟಣ್ಣ ಸ್ವಲ್ಪ ಅತಿರೇಕಕ್ಕೆ ಹೋಗಿಬಿಡುತ್ತಾರೆ. ರಾಮಕೃಷ್ಣರು ರಾಣಿ ರಾಸಮಣಿಯವರ ಕಪಾಳಕ್ಕೆ ಹೊಡೆದ ಉದಾಹರಣೆ ನೀಡಿ, ತಾವೂ ರಾಮಕೃಷ್ಣರಂತೆ ಅತ್ಯುಗ್ರ ಏಕಾಗ್ರತೆ ಬಯಸುವಾತನೆಂದು ಕೊಚ್ಚಿ ಕೊಳ್ಳುತ್ತಾರೆ. ಪುಟ್ಟಣ್ಣ ನಂತರದ ವರ್ಷಗಳಲ್ಲಿ ಕೆಲವೊಮ್ಮೆ ಕಲ್ಪನಾರಿಂದ, ಹಲವೊಮ್ಮೆ ಆರತಿಯವರಿಂದ ತಮ್ಮ ಏಕಾಗ್ರತೆ ಕಳೆದುಕೊಂಡರು. ಆಗ ಅವರಿಗೆ ರಾಮಕೃಷ್ಣರ ನೆನಪಾದಂತೆ ಎಲ್ಲೂ ಉಲ್ಲೇಖಗಳಿಲ್ಲ. ಆದರೂ ಪುಟ್ಟಣ್ಣ ಹೇಳಿದ ’ಕನ್ನಡ ಚಿತೊದ್ಯಮ ನನ್ನಿಂದ ಬೇಕಾದಷ್ಟು ಬುದ್ಧಿವಂತಿಕೆ ಕೊಂಡುಕೊಂಡು ನನ್ನನ್ನು ಶೋಷಣೆ ಮಾಡಿ ಪಾಪರ್ ಮಾಡಿತು. ನನ್ನನ್ನು ನಿಲ್ಲುವಂತೆ ಮಾಡಿದ್ದು ನನ್ನ ಕನ್ನಡ ಜನ. ನಾನು ಅವರಿಗೆ ಸದಾ ಕೃತಜ್ಞ. ಐದು ಲಕ್ಷ ಹಾಕಿದ ನಿರ್ಮಾಪಕನಿಗೆ ಐವತ್ತು ಲಕ್ಷ ಸಂಪಾದಿಸಿಕೊಟ್ಟೆ. ಅದನ್ನು ನೆನೆಯದ ಚಿತ್ರರಂಗಕ್ಕೆ ಬೆಂಕಿ ಇಡಬೇಕು. ನಾನು ಎಡವಿದಾಗ ಈ ನಿರ್ಮಾಪಕರ ಜಗತ್ತು ನನಗೆ ಅವಕಾಶ ನೀಡಲಿಲ್ಲ’…ಎಂಬ ಈ ಮಾತುಗಳು ಅವರ ಹೃದಯದಿಂದಲೇ ಬಂದವು ಎಂಬುದು ಸುಲಭ ವೇದ್ಯ.

’ನನ್ನ ಸಿನಿಮಾ ನೋಡಿ ಬಂದ ಮೇಲೆ ಹತಾಶೆಗೊಳಗಾಗಬಾರದು. ದುರಂತ-ವಿಕೋಪಗಳು ಜೀವನದಲ್ಲಿವೆ. ಅದನ್ನು ಎದುರಿಸೋ ಧೈರ್ಯ ಮಾಡಬೇಕು. ಇದು ನನ್ನ ಧೋರಣೆ. ಇದರಿಂದಾಗಿ ಜೀವನದಲ್ಲಿ ಸಲ್ಲದ ನಕಾರಾತ್ಮಕ ಅಂಶಗಳನ್ನು ಅವಗುಣಗಳನ್ನು ನಾನು ವೈಭವೀಕರಿಸಲಿಲ್ಲ.” ತಮ್ಮ ಈ ಮಾತುಗಳನ್ನು ಪುಟ್ಟಣ್ಣ ಉಳಿಸಿಕೊಂಡರೇ ಎಂಬ ಪ್ರಶ್ನೆ ಎದುರಾಗುತ್ತದೆ. ’ರಂಗನಾಯಕಿ’ ಯ ಆರತಿ, ಮಾನಸ ಸರೋವರದ ಶ್ರೀನಾಥ್ ಹತಾಶೆ, ಅಸಹಾಯಕತೆಗಳ ಸಂಕೇತವಾಗಿ ನಿಲ್ಲುತ್ತಾರೆ. ’ಎಡಕಲ್ಲು ಗುಡ್ಡ’ದ ಮಾಧವಿ ವಿಕೋಪ-ಖಿನ್ನತೆಗಳನ್ನು ಮೀರಿ ನಿಲ್ಲುವುದೇ ಇಲ್ಲ. ಗೌಡರು ಇಂತಹ ಕಡೆ ಜಾಣ ಕುರುಡರಾಗಿಬಿಡುತ್ತಾರೆ. ಪುಟ್ಟಣ್ಣ ಹೇಳಿಕೆಯನ್ನು ಸುಮ್ಮನೆ ದಾಖಲಿಸಿಬಿಡುತ್ತಾರೆ. ಅಟಿನ್ ಬರೋರ ’ಗಾಂಧಿ’ ಯನ್ನು ಬಹಳ ಮೆಚ್ಚುವ ಪುಟ್ಟಣ್ಣ ’ದೇವಿ ಭಾಗವತ’ ವನ್ನು ೭೦ ಎಮ್.ಎಮ್ ನಲ್ಲಿ ಸ್ಟೀರಿಯೋಫೋನಿಕ್ ನಲ್ಲಿ ಹಾಲಿವುಡ್ ಮಾದರಿಯಲ್ಲಿ ಸುಂದರವಾಗಿ ಚಿತ್ರಿಸಿ ಪ್ರಪಂಚದಾದ್ಯಂತ ತೋರಿಸುವ ಬೃಹದಾಸೆ’ ಯನ್ನು ಹೊರಗೆಡುವುತ್ತಾ ತಾವು ಕೂಡಾ ಅಂತರರಾಷ್ಟ್ರೀಯ ಮಟ್ಟದ ನಿರ್ದೇಶಕನಾಗುವ ಇಚ್ಛೆಯನ್ನು ತೋಡಿಕೊಳ್ಳುತ್ತಾರೆ. ಸಹಜವೇ…ಆದರೆ ಅಚ್ಚರಿಗೊಳಿಸುವುದು ಪುಟ್ಟಣ್ಣನವರಲ್ಲಿನ ಸ್ಪಂದನಶೀಲತೆಯ ಕೊರತೆ. ಪುಟ್ಟಣ್ಣ ಪುರಾಣ-ಭಾಗವತ-ಪುಣ್ಯಕಥೆಗಳ ಲೋಕಕ್ಕೇ ಮರಳುವ ಔಚಿತ್ಯ ಪ್ರಶ್ನಾರ್ಹವೆನಿಸುತ್ತದೆ. ತಮ್ಮದೇ ಚೌಕಟ್ಟಿನಲ್ಲುಳಿದುಬಿಡುವ ’ಸ್ಥಿತಿಸ್ಥಾಪಕತೆ’ಯಿಂದಲೇ ಪುಟ್ಟಣ್ಣ ಬರಿಯ ’ದಕ್ಷಿಣ’ದ ನಿರ್ದೇಶಕನಾದರು. ತಮ್ಮ ಸಮಕಾಲೀನರಾಗಿದ್ದ ಮಲಯಾಳಂ ಚಿತ್ರರಂಗದ ದಂತಕಥೆ ಎನಿಸಿದ್ದ ಭರತನ್, ಪದ್ಮರಾಜನ್, ಜಾರ್ಜ್, ಅರವಿಂದನ್ ತರದವರ ಚಿತ್ರಗಳನ್ನಾಗಲೀ, ಹೃಷಿಕೇಶ್ ಮುಖರ್ಜೀ, ಬಸು ಚಟರ್ಜೀ ತರದವರ ಚಿತ್ರಗಳನ್ನಾಗಲೀ ನೋಡಿ ಮೆಚ್ಚಿದ್ದರ ಬಗ್ಗೆ ಎಲ್ಲೂ ಉಲ್ಲೇಖಗಳಿಲ್ಲ.

ರಿತ್ವಿಕ್ ಘಟಕ್, ರೇ, ಕಾಸರವಳ್ಳಿ ತರದವರು ಪುಟ್ಟಣ್ಣನವರಿಗೆ ಅಷ್ಟಕ್ಕಷ್ಟೆ. ಸರ್ಕಾರದಿಂದ (ಎನ್.ಎಫ಼್,ಡಿ,ಸಿ) ಸಾಲ ತೆಗೆದು ಸರ್ಕಾರಿ ಪ್ರಶಸ್ತಿ ತೆಗೆದುಕೊಳ್ಳುವವರೆಂದು ಅಸಡ್ಡೆ. ತಮ್ಮ ಚಿತ್ರಗಳು ಯಾವುದರಲ್ಲಿ ಕಮ್ಮಿ ಎಂಬ ಪ್ರಶ್ನೆ ಸ್ಪಷ್ಟವಾಗಿ ಕೇಳುತ್ತಾರೆ. ಅವರ ಪ್ರಶ್ನೆ ಅರ್ಥಪೂರ್ಣವೇ. ಆದರೂ ’ಅಪೂರ್ ಸಂಸಾರ್’, ’ಗರಂಹವಾ’, ’ಘಟಶ್ರಾದ್ಧ’ ಗಳು ಹೇಗೆ ತಮ್ಮ ’ಬೆಳ್ಳಿಮೋಡ’, ’ಕಥಾಸಂಗಮ’, ’ಗೆಜ್ಜೆಪೊಜೆ’ ಗಳಿಗಿಂತ ಭಿನ್ನ ಎಂಬ ಮೂಲಭೂತ ಪ್ರಶ್ನೆಯೊಂದು ಪುಟ್ಟಣ್ಣನವರ ಮನಸ್ಸಿನಲ್ಲಿ ಮೂಡಿಬರುವುದೇ ಇಲ್ಲ. ಬೆಳ್ಳಿತೆರೆಯ ಭಾವಶಿಲ್ಪಿ’ ಹೆಚ್ಚು ವಿಚಾರಗಳಿಂದ ಕೂಡಿದೆ. ಪುಟ್ಟಣ್ಣ ಬಾಲ್ಯದಲ್ಲಿ ಅನುಭವಿಸಿದ ಬವಣೆ, ಬಡತನ, ಸಮಾಜದ ಬಿರುನುಡಿಗಳು ಎಲ್ಲದರ ಸಮಗ್ರ ಚಿತ್ರಣವಿದೆ. ಈ ಪರಿಷ್ಕೃತ ಆವೃತ್ತಿಗಾಗಿ ತಾವು ಪಟ್ಟ ಶ್ರಮವನ್ನು ಗೌಡರು ಒಂದು ಚಿತ್ರಕಥೆಯಂತೆಯೇ ತಮ್ಮ ಮುನ್ನುಡಿಯಲ್ಲಿ ಬರೆದಿದ್ದಾರೆ. ಗೌಡರ ಶ್ರಮವನ್ನು ಮೆಚ್ಚಲೇಬೇಕಾಗುತ್ತದೆ. ಪುಟ್ಟಣ್ಣ ಬಗೆಗಿನ ಮಾಹಿತಿಗಾಗಿ ಎಲ್ಲಾ ದಕ್ಷಿಣದ ರಾಜ್ಯಗಳು, ಸಿಂಗಪುರಕ್ಕೂ ತೆರೆಳಿ ಚಿತ್ರದ ಕ್ಯಾಸೆಟ್ ಗಳನ್ನು ತರಿಸಿ ವೀಕ್ಷಿಸಿ ಕೂಲಂಕುಷವಾಗಿ ಬರೆದಿರುವ ಈ ಎರಡನೆಯ ಆವೃತ್ತಿಯ ಒಂದು ಋಣಾತ್ಮಕ ಎನ್ನ ಬಹುದಾದ ಅಂಶವೆಂದರೆ ಪುಟ್ಟಣ್ಣ ಬಗೆಗಿನ ಕ್ಲೀಷೆ. ’ಭಾವಶಿಲ್ಪಿ’, ’ಕಲ್ಪನಾಲೋಕದ ಭಾವಜೀವಿ’, ’ಚಿಂತನಶೀಲ’, ’ರಸ‌ಋಷಿ’ ಹೀಗೆ ಹಲವು ಬಿರುದಾವಳಿಗಳನ್ನು ಗೌಡರು ಪುಟ್ಟಣ್ಣನವರಿಗೆ ದಯಪಾಲಿಸುತ್ತಾರೆ. ಪುಟ್ಟಣ್ಣನವರ ಕಷ್ಟಕಂಡು ತಾವೂ ಕೆಲವು ಸಂದರ್ಭದಲ್ಲಿ ’ಕಣ್ಣೀರಾ’ಗಿದ್ದನ್ನು ಹೇಳುತ್ತಾರೆ. ’ಕಥಾಸಂಗಮ’ದಂತಹ ಚಿತ್ರಕ್ಕೆ ವರಕವಿ ಬೇಂದ್ರೆ ಕ್ಲಾಪ್ ಮಾಡಿದ್ದಂತಹ ಕುತೂಹಲಕರ ವಿಚಾರ ಇಲ್ಲಿ ದಾಖಲಾಗಿಲ್ಲ. (’ಕಥಾಸಂಗಮ’ ದಲ್ಲಿನ ’ಹಂಗು’ ಕಥೆಯ ಆಯ್ಕೆ ಹಾಗೂ ಆ ಕಥಾನಕದ ನಿರೂಪಣೆಯಲ್ಲಿ ಪುಟ್ಟಣ್ಣನವರ ಸೂಕ್ಷ್ಮತೆ ಎದ್ದು ಕಾಣುತ್ತದೆ.) ಲೇಖಕರ ಪರಿಚಯ ಮಾಡಿಕೊಟ್ಟಿರುವ ಅಬ್ದುಲ್ ರಹಮಾನ್ ಪಾಷ “ಪುಟ್ಟಣ್ಣನವರ ಯಶಸ್ಸು ಮತ್ತು ಸೋಲಿನ ದಿನಗಳಲ್ಲಿ ಅವರ ಹತ್ತಿರವಿದ್ದ ಆತ್ಮೀಯರ ಪೈಕಿ ಒಬ್ಬರಾಗಿದ್ದ ಬಸವೇಗೌಡರು ಪುಟ್ಟಣ್ಣನವರ ನೆನಪನ್ನು ಜನಮನದಲ್ಲಿ ಅಜರಾಮರಗೊಳಿಸಿದರು’ ಎಂದು ಪ್ರಶಂಸಿಸುತ್ತಾರೆ. ತಮ್ಮ ಕನ್ನಡಪರ ಕಾಳಜಿ, ಕಾದಂಬರಿ ಆಧಾರಿತ ಚಿತ್ರಗಳು, ಚಿತ್ರಣಕ್ಕಾಗಿ ಆರಿಸಿಕೊಂಡ ಕನ್ನಡದ ನೆಲ-ಜಲಗಳು, ತಮ್ಮ ಚಿತ್ರಗಳಿಗೆ ಅಳವಡಿಸಿಕೊಂಡ ಹಲವು ಕವಿಗಳ ಮನಮುಟ್ಟುವ ಗೀತಸಾಹಿತ್ಯ, ಆ ಸಾಹಿತ್ಯದ ಸಾಲುಗಳಿಗೆ ಸರಿಹೊಂದುವಂತಹ ಅಪೂರ್ವ ಸಂಗೀತ ಸಂಯೋಜನೆಗಳಿಂದ ಪುಟ್ಟಣ್ಣ ಅಜರಾಮರಾಗಿದ್ದಾರೆ. ಪುಟ್ಟಣ್ಣನವರನ್ನು ಅಜರಾಮರಗೊಳಿಸಿದ್ದರಲ್ಲಿ ಬಸವೇಗೌಡರ ಪಾತ್ರವೂ ಇದೆ.

ಪುಟ್ಟಣ್ಣ ನಿರ್ದೇಶಿಸಿದ (ಕನ್ನಡ, ಮಲಯಾಳಂ, ತೆಲುಗು, ತಮಿಳು) ಎಲ್ಲಾ ಚಿತ್ರಗಳ ಸಂಗ್ರಹವೇ (ಲಘು ಚಿತ್ರಕಥೆ, ಹಾಡುಗಳು) ಇಲ್ಲಿದೆ. ಪುಟ್ಟಣ್ಣ ಬದುಕಿನ ಹಲವು ಸ್ವಾರಸ್ಯಕರ ಘಟನೆಗಳು ಇಲ್ಲಿ ದಾಖಲಾಗಿವೆ. ಅವರಿಗೆ ಬಂದ ಪ್ರಶಸ್ತಿಗಳು, ಅವರು ಪರಿಚಯಿಸಿದ ಕಲಾವಿದರು, ತಂತ್ರಜ್ಞರು, ಚಿತ್ರೀಕರಣದ ಸಂದರ್ಭಗಳಲ್ಲಿನ ಪ್ರಸಂಗಗಳು, ಪುಟ್ಟಣ್ಣ ಬಗೆಗೆ ಹಲವರ ಪ್ರಶಂಸಾತ್ಮಕ ಬರಹಗಳೆಲ್ಲೆನ್ನೆಲ್ಲಾ ಒಪ್ಪವಾಗಿ ಜೋಡಿಸಿರುವ ಈ ಪುಸ್ತಕ ಪುಟ್ಟಣ್ಣವರ ಸಂಭಾವನಾ ಗ್ರಂಥದಂತೆ.. ಭಕ್ತಿಭಾವದಿಂದ ಅರ್ಪಿಸಿದ ಬಿನ್ನವತ್ತಳೆಯಂತೆ ಕಾಣುತ್ತದೆ. ಆದರೆ ನಿಷ್ಟುರತೆಯ ಕೊರತೆ, ಕ್ಲೀಷೆಗಳ ಹಾವಳಿ, ಅತಿ‌ಎನಿಸುವ ಮಾಹಿತಿ ಸಂಗ್ರಹಗಳಿಂದ ಒಂದು ’ವ್ಯಕ್ತಿಚಿತ್ರಣ’ ವಾಗಿ ಸೋಲುತ್ತದೆ. ಎಂ.ಕೆ.ಇಂದಿರಾರ ಪುಟ್ಟಣ್ಣ ಬಗೆಗಿನ ಚಿತ್ರಣದಲ್ಲಿ (“ಕನ್ನಡ ಚಿತ್ರಶಿಲ್ಪಿ ಪುಟ್ಟಣ್ಣ ಕಣಗಾಲ್”) ಈ ರೀತಿಯಾದ ಮಾಹಿತಿಭಾರವಿಲ್ಲ. ಚಿತ್ರಣ ಹೆಚ್ಚು ಪ್ರಬುದ್ಧವೆನಿಸಿದರೂ, ಇಂದಿರಾ ರ ಸಂಕೋಚವೂ ಅನಾವರಣಗೊಳ್ಳುತ್ತದೆ. ಇಂದಿರಾ ಇಲ್ಲಿ ಪುಟ್ಟಣ್ಣನವರನ್ನು ಮಗನಂತೆ ಕಾಣುವ ತಾಯಿಯಾಗುತ್ತಾರೆ. ಅಳಿಯನನ್ನು ಕಂಡಾಗ ಒಂಥರಾ ಆತ್ಮೀಯ ಆತಂಕಕ್ಕೆ ಒಳಗಾಗುವ ಸಾತ್ವಿಕ ಅತ್ತೆಯೊಬ್ಬರು ಇಲ್ಲಿ ಕಾಣುತ್ತಾರೆ. ಪುಟ್ಟಣ್ಣ ಕೂಡಾ ಇಂದಿರಾರನ್ನು ಕಂಡಾಗಲೆಲ್ಲಾ ’ಚೆನಾಗಿದೀರಾ ತಾಯಿ..ನನಗೆ ಆಶೀರ್ವಾದ ಮಾಡಿ” ಎನ್ನುತ್ತಾ ಅಪ್ಪಟ ಸಿನೀಮೀಯ ಶೈಲಿಯಲ್ಲಿ ’ಡೈವ್’ ಹೊಡೆಯುತ್ತಿದೂ ಇಂದಿರಾರ ಸಂಕೋಚ ದಾಕ್ಷಿಣ್ಯಗಳನ್ನು ಹೆಚ್ಚಿಸಿದೆ. ೧೮ರ ತರುಣನಾಗಿದ್ದಾಗ ಪೆಟ್ರೋಲ್ ಪಂಪ್ ಒಂದರಲ್ಲಿ ಕೆಲಸಗಾರನಾಗಿದ್ದ ಪುಟ್ಟಣ್ಣ ತಮ್ಮ ಕಾರಿಗೆ ಪೆಟ್ರೋಲ್ ತುಂಬಿಸಿದ್ದು, ಇದೇ ಪುಟ್ಟಣ್ಣ ಚಿತ್ರರಂಗದ ದೊಡ್ಡಣ್ಣನಾಗಿದ್ದು, ಪುಟ್ಟಣ್ಣ ನಿರ್ದೇಶಿಸುವಂತಿದ್ದರೆ ಮಾತ್ರ ತಮ್ಮ ’ಗೆಜ್ಜೆಪೂಜೆ’ ಯ ಹಕ್ಕನ್ನು ತಾವು ಕೊಡುತ್ತೇನೆಂದು ಇಂದಿರಾ ಪಟ್ಟು ಹಿಡಿದಿದ್ದರ ಕಥನ ಕುತೂಹಲಕಾರಿಯಾಗಿದೆ.

’ಗೆಜ್ಜೆಪೂಜೆ’ ಕಾದಂಬರಿಯ ಮೊದಲ ಅಧ್ಯಾಯವೇ ಸೋಮು ಬಾಳಿನಲ್ಲಿ ಒಂದು ರೂಪಕವಾಗಿ ಬಿಂಬಿತವಾಗಿದೆ. ಹೊನ್ನಾವರದ ಅಜ್ಜಿಯ ಮನೆಗೆ ಹೋದ ಸೋಮು ಅಲ್ಲಿ ಕೊಳದಲ್ಲಿನ ತಾವರೆಯನ್ನು ಕಂಡು ಬೆರಗಾಗುತ್ತಾನೆ. ಊರ ಮಧ್ಯೆ ವಿಸ್ತಾರವಾದ ಎತ್ತರದ ಏರಿ. ಬಲಬದಿಗೆ ಬ್ರಾಹ್ಮಣರ ಅಗ್ರಹಾರದವರ ತಿಳಿನೀರಿನ ಕೆರೆ. ಎಡಬದಿಗೆ ಊರ ಶೂದ್ರಾದಿಗಳ ಒಂದು ಸಣ್ಣ ಕೆರೆ. ಆ ಕೊಳಚೆಯ ಮಧ್ಯೆ ಒಂದು ಸಿರಿದಾವರೆ. ಸೋಮು ಆ ಹೂವು ಅರಸಿ ಹೋದಾಗ ತಾಯಿ ಸಿಡುಕಿ ಮನೆಗೆ ಎಳೆದುಕೊಂಡು ಹೋಗುತ್ತಾರೆ. ಸೋಮು ಎಷ್ಟು ಪ್ರಯತ್ನಿಸಿದರೂ ಆ ಹೂವು ಅವನಿಗೆ ಸಿಗುವುದಿಲ್ಲ. ಕೊಳಚೆ ನೀರಿನದಾದರೂ ಅಂದವಾದ ತಾವರೆ, ಅದನ್ನು ಪಡೆಯಲು ಮನೆಯ ವಿರೋಧ ಇದೆಲ್ಲಾ ಸೋಮುವಿನ ಮುಂದಿನ ದಿನಗಳನ್ನು ಸಂಕೇತಿಸುವಂತಿದ್ದರೂ ಪುಟ್ಟಣ್ಣ, ಕಾದಂಬರಿಯಲ್ಲಿನ ಇಂತಹ ಅಂಶಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇಂದಿರಾ ಕೂಡಾ ಇದನ್ನೆಲ್ಲಾ ಹೇಳಲು ಹೋಗಿಲ್ಲ. ವೇಶ್ಯೆಯೊಬ್ಬಳಿಂದ ’ಗೆಜ್ಜೆಪೂಜೆ’ಯ ಸಂದರ್ಭವೊಂದಕ್ಕೆ ಆಹ್ವಾನ ಬಂದಾಗ ಇಂದಿರಾ ತುಂಬಾ ಭಯ-ಆತಂಕಗಳಿಂದಲೇ ತಲೆಗೆ ಸೆರಗು ಹೊದ್ದು ಹೋಗಿಬರುತ್ತಾರೆ. ಗೆಜ್ಜೆಪೂಜೆಯಲ್ಲಿನ ಶಾಸ್ತ್ರಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿ ತಮ್ಮ ಕಥಾಚಿತ್ರಣದಲ್ಲಿ ಬಳಸಿಕೊಳ್ಳುತ್ತಾರೆ. ಪುಟ್ಟಣ್ಣ ಕೂಡಾ ಸೀತಾವಿಲಾಸ ಜೆಟ್ಟಿ ಆಸ್ಪತ್ರೆಯ ಸಮೀಪವಿದ್ದ ಬಸಮ್ಮ ಎಂಬ ವೇಶ್ಯೆಯ ಮನೆಗೆ ಹೋಗಿ ಇಂತಹ ಒಂದು ಶಾಸ್ತ್ರವನ್ನು ಖುದ್ದಾಗಿ ವೀಕ್ಷಿಸಿ ತಮ್ಮ ಚಿತ್ರಕಥೆಗೆ ಸಹಜತೆಯ ಸ್ಪರ್ಶ ಕೊಡುತ್ತಾರೆ. ಆದರೆ ’ಗೆಜ್ಜೆ ಪೂಜೆ’, ವೇಶ್ಯಾವಾಟಿಕೆಯ ವಸ್ತುಹೊಂದಿದ್ದರೂ ಮೂಲಕಥೆಯಾಗಲೀ, ಸಿನಿಮಾ ಆವೃತ್ತಿಯಾಗಲೀ, ಆ ಸಮಸ್ಯೆಯ ಬಗ್ಗೆ, ಅದರ ನಿವಾರಣೆಯ ಬಗ್ಗೆ ಚಕಾರವೆತ್ತದೇ, ಅಪರ್ಣ, ಚಂದ್ರಾರ ತುಮುಲ, ಸಂಕೋಚ, ತಲ್ಲಣಗಳನ್ನು ಕಟ್ಟಿಕೊಡುವಲ್ಲೇ ಕೇಂದ್ರೀಕೃತವಾಗಿಬಿಡುತ್ತವೆ. ಅಶ್ವಥ್ ರ ಅವಧಾನಿ ಪಾತ್ರದ ವ್ಯಾಪ್ತಿ ಕಿರಿದು. ಸಾತ್ವಿಕ ಕಳೆಯ ಲೀಲಾವತಿಯವರನ್ನು ವೇಶ್ಯೆಯಾಗಿ ಕಲ್ಪಿಸಿಕೊಳ್ಳುವುದು ಸ್ವಲ್ಪ ಕಷ್ಟವಾದರೂ, ’ಸಾಹುಕಾರ್ರು ಸತ್ತೋದ್ರಂತೆ’ ಎಂಬ ಸುದ್ದಿ ಬಂದಾಗ ಆಕೆ ಪ್ರತಿಕ್ರಿಯಿಸುವ ರೀತಿ, ಬಹುಶಃ ಲೀಲಾವತಿಯಂತಹ ಕಲಾವಿದೆಯರಿಗೆ ಮಾತ್ರ ಸಾಧ್ಯ.. ಚಂದ್ರಾಳಾಂತೆಯೇ ಕಲ್ಪನಾರ ಜೀವನವೂ ದುರಂತದಲ್ಲಿ ಕೊನೆಯಾಗಿದ್ದು ವಿಪರ್ಯಾಸ…

©

ಇಷ್ಟಾದರೂ ಇಂದಿರಾರವರಿಗೆ ಪ್ರಶಸ್ತಿ ಬರಲಿಲ್ಲ. ೧೯೭೦ರ ಪ್ರಥಮ ಶ್ರೇಷ್ಟ ಚಿತ್ರವಾಗಿ ಪ್ರಶಂಸಿಸಲ್ಪಟ್ಟ ’ಗೆಜ್ಜೆಪೂಜೆ’ ಯ ಚಿತ್ರಕಥೆಗೆ ಪುಟ್ಟಣ್ಣ ಪ್ರಶಸ್ತಿ ಪಡೆದರು. ಲೀಲಾವತಿಯವರಿಗೆ ಶ್ರೇಷ್ಟ ಪೋಷಕನಟಿ ಪ್ರಶಸ್ತಿ ಸಂದಿತು. ಇಂದಿರಾ ಬೇಸರಿಸಿಕೊಳ್ಳಲಿಲ್ಲ. ಕ್ರೀಡಾತ್ಮಕತೆ ತೋರಿದರು. ಅಚ್ಚರಿಯಾಗುವಂತೆ ಪುಟ್ಟಣ್ಣ ಉಪಚಾರಕ್ಕಾಗಿಯಾದರೂ ವಿಷಾದ ತೋರಿಸುವುದಿಲ್ಲ. ಎಲ್ಲಿಯೂ ಇಂದಿರಾ ನಿಷ್ಟುರ ನುಡಿ ನುಡಿಯುವುದಿಲ್ಲ. ಪುಟ್ಟಣ್ಣನವರ ’ತಾಯೀ ಎಂಬ ಆ ಮಮತಾಪೂರ್ಣ ಸಂಬೋಧನೆ ಅವರ ಎಲ್ಲಾ ತರ್ಕ’ವನ್ನೂ ಅಡಗಿಸಿಬಿಟ್ಟಿತು. ಹಾಗಾಗಿಯೇ ’ಪುಟ್ಟಣ್ಣನವರು ಯಶಸ್ಸಿನ ಪೂರಾ ತೇಜಿನಲ್ಲಿದ್ದಾಗ ಅವರು ನೆಲ ಕಚ್ಚುವಂತಹ ಬರಸಿಡಿಲೊಂದು ಅವರ ಮೇಲೆರಿಗಿತು. ಅದೇನೆಂಬುದು ಸಮಗ್ರ ಕರ್ನಾಟಕಕ್ಕೇ ತಿಳಿದಿರುವುದರಿಂದ ಇಲ್ಲಿ ವಿವರಿಸುವ ಅಗತ್ಯವಿಲ್ಲ’ ಎಂದು ಸುಮ್ಮನಾಗಿಬಿಡುತ್ತಾರೆ ತಾಯಿ ಇಂದಿರಾ. ಪುಟ್ಟಣ್ಣ ಜೊತಿಗಿನ ಹಲವು ಅನುಭವಗಳು, ಪುಟ್ಟಣ್ಣನ ಮುಗ್ಧ ಪ್ರೀತಿ, ಶೀಘ್ರಕೋಪಗಳನ್ನೂ ಇಂದಿರಾ ಯಥಾವತ್ ಚಿತ್ರಿಸುತ್ತಾರೆ. ಪುಟ್ಟಣ್ಣ ಹಣೆಯ ಮೇಲಿನ ದೊಡ್ಡ ಕುಂಕುಮದ ಬೊಟ್ಟನ್ನು ಕುರಿತು ’ಇನ್ ಸ್ವಲ್ಪ ಚಿಕ್ಕದು ಇಟ್ಟುಕೋಬಾರ್ದೆ’ ಎಂದಾಗ ಅದುವರೆಗೂ ಸಂತೋಷದಿಂದ ನಗು-ನಗುತ್ತಿದ್ದ ಪುಟ್ಟಣ್ಣ ಒಡನೆಯೇ ಕೆಂಡಾಮಂಡಲವಾಗಿಬಿಡುತ್ತಾರೆ. ’ನೋಡೀ ತಾಯೀ..ನಾನ್ ಹೀಗೇನೆ’ ಎಂದು ಕೊಚ್ಚುತ್ತಾ ’ನಿಮಗೆ ಇಷ್ಟವಿಲ್ಲದಿದ್ದರೆ ನೋಡೊದ್ ಬೇಡ’ ಎಂದು ಧಮಕಿ ಹಾಕಿ ಬಿಡುತ್ತಾರೆ. ಆದರೆ ಇದೇ ಪುಟ್ಟಣ್ಣ (ಮಾನಸ ಸರೋವರದ ಸಂದರ್ಭದಲ್ಲಿ ಬೆಳೆಸಿಕೊಂಡ) ತಮ್ಮ ಅಸಹ್ಯವಾದ ಗಡ್ಡ ಮೀಸೆಗಳನ್ನು ನೋಡಿ ಇಂದಿರಾ ’ಲಕ್ಷಣಾವಾಗಿರೊಕ್ಕೆ ನಿಮಗೇನು? ಯಾಕೀ ಅಸಹ್ಯ’ ಎಂದು ಛೇಡಿಸಿದಾಗ, ಗಹಗಹಿಸಿ ನಕ್ಕುಬಿಡುತ್ತಾರೆ. ಮದರಾಸಿನ ಸಮಾರಂಭವೊಂದಕ್ಕೆ ಹೋದಾಗ ಇಂದಿರಾ ಪುಟ್ಟಣ್ಣನವರನ್ನು ಅವರ ಮನೆಯಲ್ಲಿ ಭೇಟಿಯಾಗುತ್ತಾರೆ. ಊಟದ ನಂತರ ’ನೀವ್ಯಾಕೆ ಇನ್ನೂ ಸೈಟು ಮನೆ ಅಂತ ಏನೂ ಮಾಡ್ಕೋಳ್ಲಿಲ್ಲ’ ಎಂದಾಗ, ಒಣನಗೆ ನಗುತ್ತಾ ಪುಟ್ಟಣ್ಣ, ’ಅಯ್ಯೋ ತಾಯಿ..ನಾವೆಲ್ಲಾ ಬರೀ ನಿರ್ದೇಶಕರಮ್ಮಾ..ಎಲ್ಲಿ ಬರಬೇಕಮ್ಮಾ’ ಎಂದೊಡನೇ ತಕ್ಷಣ ಮಧ್ಯೆ ಪ್ರವೇಶಿಸುವ ಪುಟ್ಟಣ್ಣನವರ ಶ್ರೀಮತಿ, ’ದೊಡ್ಡವರ ಮುಂದೆ ಸುಳ್ಳ್ಯಾಕ್ ಹೇಳ್ತೀರಿ’ ಎನ್ನುತ್ತಾ ’ಇಲ್ಲಮ್ಮಾ, ಬೆಂಗಳೂರಿನ ಜಯನಗರದಲ್ಲಿ ಸೈಟ್ ಕೊಂಡಿದ್ದೇವೆ.. ಕಟ್ಟಿಸುವ ವಿಚಾರ ಇನ್ನೂ ಮಾಡಿಲ್ಲ’ ಎಂದು ಸತ್ಯ ನುಡಿದುಬಿಡುತ್ತಾರೆ. ಪುಟ್ಟಣ್ಣ ಮಾತು ತಿರುಗಿಸುತ್ತಾರೆ…

ಹೀಗೆಯೇ ಹಲವು ಘಟನೆಗಳನ್ನು ಇಂದಿರಾ ಸ್ವಾರಸ್ಯಕರವಾಗಿ ಹೇಳುತ್ತಾ ಹೋಗುತ್ತಾರೆ. ಇಂದಿರಾರ ಈ ಮಾತುಗಳಂತೂ ಮನ ತಟ್ಟುತ್ತವೆ: “ಎಂತಹಾ ರಣಪೆಟ್ಟನ್ನೂ ಸಹಿಸಿ ಮತ್ತೆ ಹೊಸ ಮನುಷ್ಯರಾಗುತ್ತಿದ್ದ ಆ ಕನ್ನಡ ಚಿತ್ರಶಿಲ್ಪಿಯನ್ನು ನಿಶ್ಚಿತಾರ್ಥ ವೇಳೆಯಲ್ಲಿ ದೀಪ ಆರಿಹೋಗುವಂತೆ ವಿಧಿ ತಟ್ಟನೆ ಸೆಳೆದು ಕೊಂಡುಬಿಟ್ಟಿತು’. ಪುಟ್ಟಣ್ಣ ನಿಧನದ ಸುದ್ದಿಯನ್ನು ಕಾನಕಾನಹಳ್ಳಿ ಗೋಪಿ ಓಡುತ್ತಾ ಬಂದು ಇಂದಿರಾರಿಗೆ ತಿಳಿಸಿದರೂ ಆ ’ಘೋರವನ್ನು ನೋಡುವ ಧೈರ್ಯವಿಲ್ಲದೇ’ ಕುಸಿದು ಕುಳಿತುಬಿಡುತ್ತಾರೆ ಇಂದಿರಾ. ಪುಟ್ಟಣ್ಣನವರ ಅಂತ್ಯಸಂಸ್ಕಾರಕ್ಕೆ ಇಂದಿರಾ ಹೋಗಲಾಗುವುದಿಲ್ಲ. ತನ್ನ ತಾಯಿ, ಪತಿ, ೨೨ವರ್ಷದ ಮಗ, ತಮ್ಮ ಕಿರಿಯ ಸೋದರ ಇವರುಗಳನ್ನು ೮ ವರ್ಷಗಳ ಅಂತರದಲ್ಲಿ ಕಳೆದುಕೊಂಡ ಇಂದಿರಾ, ಈ ಎಲ್ಲಾ ಕ್ಲೇಶಗಳಿಂದ ಗಟ್ಟಿಯಾಗುತ್ತಾ ಹೋದರು. ’ಕ್ಷಮಯಾ ಧರಿತ್ರಿ’ಯೇ ಆದರು. ಹೀಗಾಗಿ ಪುಟ್ಟಣ್ಣನವರ ವ್ಯಕ್ತಿಚಿತ್ರಣದಲ್ಲೂ ವಾತ್ಸಲ್ಯ-ಸಂಕೋಚಗಳೇ ಮೇಲುಗೈ ಸಾಧಿಸಿವೆ. ನಿಷ್ಟುರತೆಯ ಮೈಲಿಗೆಯನ್ನು ಇಂದಿರಾ ದೂರವಿರಿಸಿದರು. ಆದರೆ ಕೆಲವೇ ವಾಕ್ಯಗಳಲ್ಲಿ, ನೇರ-ನಿಷ್ಟುರನುಡಿಗಳಲ್ಲಿ ಪುಟ್ಟಣ್ಣನನ್ನು ಚಿತ್ರಿಸಿರುವುದು ಲಂಕೇಶ್ (ತಮ್ಮ ಟೀಕೆ-ಟಿಪ್ಪಣಿಯಲ್ಲಿ), ಅವರ ಗರಡಿಯಾಳು ಎನ್.ಎಸ್,ಶಂಕರ್ (ತಮ್ಮ ಮಾಯಾಬಜಾರ್ ಪುಸ್ತಕದಲ್ಲಿ) ಹಾಗೂ ಹಾಮಾನಾ (ತಮ್ಮ ಸಂಪ್ರತಿ ಅಂಕಣದಲ್ಲಿ). ಪುಟ್ಟಣ್ಣನವರ ನಿರಂಕುಶತ್ವ, ಪ್ರಲಾಪಗಳನ್ನು ಗುರುತಿಸುವ ಲಂಕೇಶ್ ’ಆತ ಬೇರೆ ಬಗೆಯ ಭ್ರಮೆಯ ಮನುಷ್ಯನಾಗಿದ್ದರೆ ಒಂದೆರಡು ದಶಕ ಬದುಕಬಹುದಿತ್ತು. ಆದರೆ ಕಲ್ಪನ, ಪುಟ್ಟಣ್ಣ ಮುಂತಾದ ಕಲಾವಿದರು ಒಂದು ರೀತಿಯಲ್ಲಿ ಮರ್ಲಿನ್ ಮನ್ರೋ, ಮೀನಾಕುಮಾರಿಗಳು..ಅವರದೇ ಕಲಾಲೋಕದ ಬಲೆಯಲ್ಲಿ ಸಿಕ್ಕಿ ಸಾವನ್ನು ಜೊತೆಗೇ ಕರೆದುಕೊಂಡು ಓಡಾಡುವ ಕೀಟ್ಸ್, ಶೆಲ್ಲಿ, ಬೋದಿಲೇರ್ ಗಳು’ ಎಂದು ಬರೆಯುತ್ತಾರೆ. ’ನಾಗರಹಾವಿ ನ ಕ್ಲಾಸ್ ರೂಮುಗಳು ’ಮದುವೆ ಮನೆಯಂತೆ ಭರ್ಜರಿಯಾಗಿ ಕಾಣುವುದು, ಕಾಲೇಜುರಂಗದ ಅಧ್ಯಾಪಕರು ಮಂಡಿ ವರ್ತಕರಂತೆ ವರ್ತಿಸುವುದು’ ಲಂಕೇಶರ ಸೂಕ್ಷ್ಮ ದೃಷ್ಟಿಗೆ ಗೋಚರವಾಗುತ್ತದೆ. ಹೀರೋಗಿಂತ ಹೀರೋ ಆದ ಪುಟ್ಟಣ್ಣ, ಅದರೊಂದಿಗೇ ಕ್ರಮೇಣ ನಿರ್ಜೀವವಾದ ಪುಟ್ಟಣ್ಣ, ಭಾವುಕತೆಯೇ ಜೀವನದ ಮುಖ್ಯ ಸ್ಥರವೆಂದು ತಿಳಿದಿದ್ದ ಪುಟ್ಟಣ್ಣ, ಕನ್ನಡನಾಡು ಸೃಷ್ಟಿಸಿದ ಮೊದಲ ನಿರ್ದೇಶಕ ಹೀರೋ’ ಎಂಬುದನ್ನು ಲಂಕೇಶ್ ಒಪ್ಪುತ್ತಾರೆ. ’ಜಗನ್ಮಾತೆಯ ಬಗ್ಗೆ ಮಾತಾಡುತ್ತಲೇ ಶುದ್ಧ ಅವಿವೇಕಿಯಾದ ಹೆಣ್ಣು ಮಗಳೊಬ್ಬಳ ಜೊತೆ ಅವಳಿಗಿಂತ ಅವಿವೇಕದಿಂದ ವರ್ತಿಸುತ್ತಾ ಬದುಕಿನ ಕ್ರೌರ್ಯಕ್ಕೆ ತಮ್ಮನ್ನು ಒಡ್ಡಿಕೊಂಡ’ ಪುಟ್ಟಣ್ಣ ಬಗ್ಗೆ ಲಂಕೇಶರಿಗೆ ವಿಷಾದವಿದೆ. ಲೇಖನದ ಕೊನೆಯ ವಾಕ್ಯವಂತೂ ಬಹಳ ಮಾರ್ಮಿಕವಾಗಿದೆ: “ಮೂಲಭೂತವಾಗಿ ಸಾಮಾನ್ಯನೂ ಸರಳನೂ ಆಗಿದ್ದ ಈ ವ್ಯಕ್ತಿ ನಿಜಜೀವನದಲ್ಲಿ ಕಾಮನಬಿಲ್ಲೆಂದು ತಿಳಿದು ಕಾಂಪೌಂಡಿನ ಕಮಾನುಗಳಿಗೆ ಢಿಕ್ಕಿ ಹೊಡೆದದ್ದು ಹೀಗೆ”.

ತಮ್ಮ ಮಾಯಾಬಜಾರ್ ನಲ್ಲಿ ’ಪುಟ್ಟಣ್ಣ ನೆನಪೊಂದೇ ಸಾಕೇ’ ಎಂಬ ಲೇಖನದಲ್ಲಿ ಎನ್.ಎಸ್.ಶಂಕರ್ ಕೂಡಾ ಕೆಲವೇ ಅರ್ಥಪೂರ್ಣ ವಾಕ್ಯಗಳಲ್ಲಿ ಪುಟ್ಟಣ್ಣ ವ್ಯಕ್ತಿತ್ವವನ್ನು, ಅವರ ಭಾವಮೂಢತೆಯನ್ನು ಹಿಡಿದಿಟ್ಟಿದ್ದಾರೆ. ತಮ್ಮ ಶೈಲಿಯನ್ನು ಎಂದೂ ಬಿಟ್ಟು ಕೊಡದಿದ್ದೇ ಪುಟ್ಟಣ್ಣ ಸಾಧನೆ’ ಎಂಬುದನ್ನು ಗುರುತಿಸುವ ಶಂಕರ್ ಪುಟ್ಟಣ್ಣ ಹೇಗೆ ವೈಯಕ್ತಿಕ ಸಂಬಂಧಗಳನ್ನು ಚಿತ್ರಿಸುವಾಗಿನ ಹುಮ್ಮಸ್ಸನ್ನು, ಸಾಮಾಜಿಕ ಸಂಬಂಧಗಳನ್ನು ಚಿತ್ರಿಸುವಾಗ ಕಳೆದುಕೊಳ್ಳುತ್ತಾರೆಂಬುದನ್ನು ಸಿದ್ಧಲಿಂಗಯ್ಯನವರ ’ಬಂಗಾರದ ಮನುಷ್ಯ’, ’ಅಯ್ಯು’ ತರದ ಉದಾಹರಣೆ ಕೊಟ್ಟು ವಿವರಿಸುತ್ತಾರೆ. ಮೇಲ್ನೋಟಕ್ಕೆ ಕ್ರಾಂತಿಕಾರಿಯಾದರೂ ಅಂತರಂಗದಲ್ಲಿ ಗೊಡ್ಡು ಸಂಪ್ರದಾಯದ ಪ್ರತಿನಿಧಿಯಂತಿದ್ದ ಪುಟ್ಟಣ್ಣ, ತಮ್ಮ ಭಾವಲೋಕದಲ್ಲೇ ಸಂಪೂರ್ಣ ಮುಳುಗಿಹೋಗಿ ಜೀವನದ ದೊಡ್ಡ ಗುಟ್ಟುಗಳನ್ನು ಕಾಣಲೇ ಇಲ್ಲ’ ಎಂಬ ಅಪ್ರಿಯ ಸತ್ಯ ನುಡಿಯುತ್ತಾರೆ. ಭಾವೊದ್ವೇಗ ಪುಟ್ಟಣ್ಣ ಜೀವಿತದ ಭಾಗವಾಗಿದ್ದನ್ನು ಹಾಮಾನಾ ತಮ್ಮ ಪುಟ್ಟಣ್ಣ ಬಗ್ಗೆ ಬರೆದ ಅಂಕಣದಲ್ಲಿ ಹೇಳುತ್ತಾರೆ. ಗುಲ್ಬರ್ಗಾದಲ್ಲಿ ನಡೆದ ಸಮಾರಂಭದಲ್ಲಿ ಚಿತ್ರರಂಗದ ಪರ ವಕೀಲಿ ನಡೆಸಿದ ಪುಟ್ಟಣ್ಣನವರ ಹೃದಯವಂತಿಕೆ ಬಗ್ಗೆ ಬರೆಯುತ್ತಲೇ, ಪುಟ್ಟಣ್ಣನವರಿಗೆ ಔಚಿತ್ಯ ಪ್ರಜ್ಞೆಯೇ ಇರಲಿಲ್ಲ ಎಂದು ಹೇಳುತ್ತಾರೆ. ಪುಟ್ಟಣ್ಣ ಏರಿದ ಎತ್ತರಕ್ಕೆ ಅವರಾಡುತ್ತಿದ್ದ ಮಾತುಗಳು ಶೋಭೆ ತರುವಂತಿರಲಿಲ್ಲ. ಅವರಾಡಿದ ಕೆಲವು ಮಾತುಗಳನ್ನು ಬೇರೆಮೂಲಗಳಿಂದ ಅರಿತ ಹಾಮಾನಾ ವ್ಯಥೆ ಪಟ್ಟಿದ್ದನ್ನು ನೆನೆಯುತ್ತಾರೆ. ತಮಗೆ ತೋಚಿದ್ದನ್ನು ಹೇಳಲು ಬೇಕಾದ ಶಿಸ್ತು-ಸಂಯಮ ಪುಟ್ಟಣ್ಣನವರಿಗೆ ಇಲ್ಲದಿದ್ದಿದ್ದು, ಅದಕ್ಕೆ ಅವರ ಭಾವುಕ ಪ್ರವೃತ್ತಿ ಕಾರಣವಾಗಿದ್ದನ್ನು ಹಾಮಾನಾ ವಿವರಿಸುತ್ತಾರೆ. ’ಪಡುವಾರಳ್ಳಿ ಪಾಂಡವರು’ ಸಂದರ್ಭದಲ್ಲಿ ಪುಟ್ಟಣ್ಣರಿಂದ ತಮಗಾದ ಕಹಿ ಅನುಭವಗಳನ್ನು ರಾವ್ ಬಹಾದ್ದೂರ್, ಹಾಮಾನಾ ಬಳಿ ಬೇಸರದಿಂದ ಹೇಳಿಕೊಂಡಿದ್ದರು. ’ಇದ್ದು ಪುಟ್ಟಣ್ಣನವರಿಗೆ ಗೌರವ ತರುವಂತಹದಲ್ಲ’ ಎಂದು ಹಾಮಾನಾ ಗೌರವದಿಂದಲೇ ಖಂಡಿಸುತ್ತಾರೆ.

ಕೆ. ಪುಟ್ಟಸ್ವಾಮಿಯವರ ಸಂಗ್ರಹಯೋಗ್ಯವಾದ ’ಸಿನಿಮಾಯಾನ’ ದಲ್ಲಿ ಪುಟ್ಟಣ್ಣನವರಿಗೇ ಒಂದು ದೊಡ್ಡ ಅಧ್ಯಾಯ ಮೀಸಲಾಗಿದೆ. ಬಸವೇಗೌಡರಂತೆ ಕ್ಲೀಷೆಗಳನ್ನು ಬಳಸದೇ, ಆರಕ್ಕೆ ಏರದೇ, ಮೂರಕ್ಕಿಳಿಯದೇ ಪುಟ್ಟಸ್ವಾಮಿಯವರು ಪುಟ್ಟಣ್ಣ ಬಗೆಗೆ ಬರೆದಿರುವುದನ್ನು ಒಮ್ಮೆ ಒದಲೇಬೇಕು. ಚಿತ್ರರಸಿಕರಿಗೂ, ಚಿತ್ರ ಮಾಧ್ಯಮದ ಸೀರಿಯಸ್ ವಿದ್ಯಾರ್ಥಿಗಳಿಗೂ ಪುಟ್ಟಸ್ವಾಮಿಯವರು ಮಾಡಿರುವ ಉಪಕಾರ ’ಸಿನಿಮಾ ಯಾನ’ ಎಂದರೆ ಅತಿಶಯೋಕ್ತಿಯಲ್ಲ. ಪುಟ್ಟಣ್ಣ ಕನ್ನಡದ ಪ್ರಾದೇಶಿಕತೆಯನ್ನು ಮೊದಲಬಾರಿಗೆ ಪರಿಚಯಿಸಿದ್ದನ್ನು ನೆನಪಿಸಿಕೊಳ್ಳುವ ಪುಟ್ಟಸ್ವಾಮಿ, ’ಬೆಳ್ಳಿಮೋಡ’ದ ಸೊಗಸಾದ ವಿಮರ್ಶೆಯನ್ನು ಬರೆಯುತ್ತಾ ಪುಟ್ಟಣ್ಣ ತಮ್ಮ ಮೊದಲ ಚಿತ್ರದಲ್ಲೇ ತೋರಿದ ಸೂಕ್ಷ್ಮತೆಯನ್ನು ಅನಾವರಣಗೊಳಿಸುತ್ತಾರೆ. ’ಶುಕಭಾಷೆಯ ಹೊಗಳಿಕೆಗಳ ನಡುವೆ ಕಳೆದುಹೋದ ಪುಟ್ಟಣ್ಣ ಚಿತ್ರಗಳ ಗಂಭೀರ ವಿಮರ್ಶೆ ಇನ್ನೂ ನಡೆಯದ’ ಬಗ್ಗೆ ಪುಟ್ಟಸ್ವಾಮಿಯವರ ವಿಷಾದ ಸಹಜವಾಗಿದೆ. ’ಬೆಳ್ಳಿಮೋಡ’ದ ಇಂದಿರಾ ನಂತರ ಬಂದ ಪುಟ್ಟಣ್ಣ ಚಿತ್ರಗಳ ನಾಯಕಿಯರು ಹೇಗೆ ಅಶಕ್ತರೂ, ನಿರ್ದೇಶಕನ ಕೈಗೊಂಬೆಗಳೂ ಆದರು ಎಂಬ ಸ್ಪಷ್ಟ ಚಿತ್ರಣವಿದೆ. ಪುಟ್ಟಣ್ಣನವರ ಸ್ವಭಾವ ಏನೇ ಇರಲಿ, ಅವರು ಗತಿಸಿ ದಶಕಗಳಾದರೂ ಇನ್ನೂ ಕಾಡುತ್ತಿರುತ್ತಾರೆ. ಇದಕ್ಕೆ ಅವರ ಭಾವುಕತೆ ಮಾತ್ರವಲ್ಲ, ಅವರ ಇಂದಿರಾ, ಸದಾಶಿವರಾಯರು, ರಾಮಾಚಾರಿ, ಚಾಮಯ್ಯ, ಕಾವೇರಿ, ಚಂದ್ರ, ವತ್ಸಲ, ಹೇಮಾ, ರಂಗನಾಯಕಿ, ಆನಂದ..ಸಾಮಾನ್ಯ ಪಾತ್ರಗಳಲ್ಲ. ೧೯೮೨ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಬಂದಾಗ ಪುಟ್ಟಣ್ಣ ಚಿಕ್ಕಮಗುವಿನಂತೆ ಹರ್ಷಿಸಿದ್ದನ್ನು ಗೌಡರು ತಮ್ಮ ಪುಸ್ತಕದಲ್ಲಿ ನೆನಪಿಸಿಕೊಂಡಿದ್ದಾರೆ. ವಿವೇಕ್ ತರದ ನಟನಿಗೆ ಪದ್ಮಶ್ರೀ ಪ್ರಶಸ್ತಿ ದೊರೆಯುತ್ತದೆ. (ವಡಿವೇಲು ರಾಜಕೀಯವಾಗಿ ಸ್ವಲ್ಪ ಹೆಚ್ಚು ಸೂಕ್ಷ್ಮ ಬೆಳೆಸಿಕೊಂದಿದ್ದರೆ, ಆತನಿಗೂ ಈಗಾಗಲೇ ಒಂದು ಪದ್ಮಶ್ರೀ ದಯಪಾಲಿಸುತ್ತಿದ್ದರು). ಪುಟ್ಟಣ್ಣ ಬಳಿ ಸಿನಿಮಾದ ಅಕ್ಷರ ಕಲಿತ ಬಾಲಚಂದರ್, ಭಾರತೀರಾಜಾ ಪದ್ಮ ಪ್ರಶಸ್ತಿಗೆ ಭಾಜನರಾಗುತ್ತಾರೆ. ಸಂಜೆ ಹೊತ್ತಿಗೆ ಮೂರು ಮೊಣ ನೇಯುವವರು ದೆಹಲಿಯಲ್ಲಿ ಪ್ರತಿಷ್ಟಿತ ವ್ಯಕ್ತಿಗಳಾಗುತ್ತಾರೆ. ಇವರ್ಯಾರೂ ಪರಿಪೂರ್ಣರೇನೂ ಅಲ್ಲ. ಕನ್ನಡ ಮಣ್ಣಲ್ಲಿ ಹುಟ್ಟಿ ಇವರಿಗೆಲ್ಲಾ ಮಾದರಿಯಾಗಿದ್ದ ಪುಟ್ಟಣ್ಣ ಒಂದು ಯಕಃಶ್ಚಿತ್ ರಾಜ್ಯೋತ್ಸವ ಪ್ರಶಸ್ತಿಗೆ ಸಂತೋಷದಿಂದ ಕುಣಿದಾಡಿದ್ದು ಕೇಳಿದಾಗ ಬಹಳ ಪಾಪವೆನಿಸುತ್ತದೆ. ಇದಕ್ಕೇ ಇರಬೇಕು ಪುಟ್ಟಣ್ಣ ’ನಮ್ಮ ಚಿತ್ರರಂಗದವರಿಗೆ ಬೆಂಕಿ ಇಡಬೇಕು’ ಎಂದು ಹೇಳಿದ್ದು. ೧೯೮೪ ಇರಬಹುದು, ನ್ಯಾಷನಲ್ ಕಾಲೇಜಿನಲ್ಲಿ ಓದುತ್ತಿದ್ದ ಸಂದರ್ಭ. ರಾಜ್ಯೊತ್ಸವದ ಸಮಾರಂಭವೊಂದಕ್ಕೆ ಪುಟ್ಟಣ್ಣ ಆಹ್ವಾನಿತರಾಗಿದ್ದರು. ಆಗಾಗಲೆ ಅವರ ಹಲವು ಚಿತ್ರಗಳು ದೂರದರ್ಶನದಲ್ಲಿ ಪ್ರಸಾರವಾಗಿತ್ತು. ನಮಗೆಲ್ಲಾ ಈತ ಕನ್ನಡನಾಡು-ನುಡಿಯ ಬಗ್ಗೆ ಏನು ಮಾತಾಡಬಹುದು ಎಂಬ ಕುತೂಹಲ. ಅವರ ಮೈ-ಮನಸ್ಸುಗಳನ್ನು ಅನಾರೋಗ್ಯ ಆವರಿಸಿಕೊಂಡಿದ್ದು ಎದ್ದು ಕಾಣುತಿತ್ತು. ಪುಟ್ಟಣ್ಣ ಮಾತಾಡಲಾರಂಭಿಸಿದರು. ಒಮ್ಮೊಮ್ಮೆ ರೋಷಾವಿಷ್ಟರಾಗಿ, ಮಗದೊಮ್ಮೆ ದೈನ್ಯವಾಗಿ ಪುಟ್ಟಣ್ಣ ನಿರರ್ಗಳವಾಗಿ, ಅಕ್ಷರಸಾಕಲ್ಯವಿಲ್ಲದೇ ಮಾತನಾಡಿದರು. ಇಡೀ ಸಮಯ ಚಿತ್ರರಂಗದವರ ಮನೋಭಾವವನ್ನು ಖಂಡ-ತುಂಡವಾಗಿ ಖಂಡಿಸಲು ವ್ಯಯಿಸಿದರು. ತಮ್ಮನ್ನು ಕರೆಸಿದ ಉದ್ದೇಶ್ಯ ಸಂಪೂರ್ಣವಾಗಿ ಮರೆತುಬಿಟ್ಟಿದ್ದರು. ’ರಾಜಾ ವೆಂಕಟಪ್ಪ’ನನ್ನು ಬೆಳ್ಳಿತೆರೆಗೆ ತರಬೇಕೆಂಬ ಅವರ ದೀಕ್ಷೆಗೆ ನಿರ್ಮಾಪಕರೊಬ್ಬರಿಂದ ಭಂಗ ಬಂದಿತ್ತು. ತಮ್ಮೆಲ್ಲಾ ಹತಾಶೆ ತೋಡಿಕೊಂಡ ಪುಟ್ಟಣ್ಣ ’ತಮ್ಮನ್ನು ಅರ್ಥಮಾಡಿಕೊಳ್ಳದ, ತಮ್ಮ ಕನಸು ಸಾಕರಗೊಳಿಸಲು ಬಿಡದ ಚಿತ್ರರಂಗದ ಮಂದಿಗೆ ಬೆಂಕಿ ಇಡಬೇಕು’ ಎಂದು ಘರ್ಜಿಸಿದ್ದರು. “ಥೂ…ಉಗೀಬೇಕ್ರೀ..” ಎಂಬ ಮಾತಂತೂ ಅಪ್ರಯತ್ನಪೂರ್ವಕವಾಗಿ ಬಂದಿತ್ತು. ಮಾತಿನಲ್ಲಿ ಆತ್ಮರತಿ ವಿಪರೀತವಾಗಿತ್ತು. ಕಿವಿಗಡಚಿಕ್ಕುವ ಚಪ್ಪಾಳೆ, ’ಸಖತ್ತಾಗ್ ಮಾತಾಡ್ದಾ ಕಾಣ್ರಿ’ ಎಂಬ ಪ್ರಶಂಸೆ, ಭೀಕರ ಶಿಳ್ಳೆ ಗಳ ಸಮ್ಮುಖದಲ್ಲಿ ಪುಟ್ಟಣ್ಣ ಭಾಷಣ ಮುಗಿಸಿದರು. ಅವರ ಆಟೋಗ್ರಾಫ್ ಗಾಗಿ ಹಾತೊರೆದ ನಮಗೆ ನಿರಾಸೆ ಕಾದಿತ್ತು. ’ತನ್ನ ಬಣ್ಣಿಸಿ ಇದಿರ ಹಳಿಯುವ “ANTI ಶರಣ” ನಂತೆ ಒಂದುಕ್ಷಣ ಕಂಡುಬಂದ ಪುಟ್ಟಣ್ಣನವರ ಕುರಿತು ಅಂದು ನಮಗೆಲ್ಲಾ ಕೆಲವು (ಯುವ)ವಯೋಸಹಜ (ಅರ್ಥಾತ್ ತಲಹರಟೆ) ಪ್ರಶ್ನೆಗಳು ಉದ್ಭವಿಸಿದವು:

೧. ಈತ ಸ್ವಂತ ಕಥೆಗಳನ್ನೇಕೆ ಬರೆಯುವುದಿಲ್ಲ.’ಶುಭಮಂಗಳ’, ’ಋಣಮುಕ್ತಳು’ ತರಹದ ಘನಾಂದಾರಿಯೇನೂ ಅಲ್ಲದ ಕಥೆಗಳಿಗೂ ಕೂಡಾ ಏಕೆ ಕಂಡವರ ಕಾದಂಬರಿಯ ಮೊರೆ ಹೋಗುತ್ತಾರೆ? VORACIOUS READER ಆಗಿದ್ದ ಪುಟ್ಟಣ್ಣ ಸ್ವಂತ ಕಥೆ ಬರೆದಿದ್ದು ಕಡಿಮೆ.)

೨. ತ್ರಿವೇಣಿಯವರೇನಾದರೂ ’ಬೆಳ್ಳಿಮೋಡ’, ’ಶರಪಂಜರ’ ಗಳನ್ನು ಬರೆಯದೆಯೇ ಹೋಗಿದ್ದರೆ, ಈತ ಏನು ಮಾಡುತ್ತಿದ್ದರು.

೩. ’ಆರತಿ’ ಎಂಬಾಕೆ ಹುಟ್ಟದಲೇ ಇದ್ದಿದ್ದರೆ, ಅಥವಾ ಪುಟ್ಟಣ್ಣನವರ ಕಣ್ಣಿಗೇನಾದರೂ ಆಕೆ ಬೀಳದಲೇ ಇದ್ದಿದ್ದರೆ, ’ರಂಗನಾಯಕಿ’ ಏನಾಗುತ್ತಿದ್ದಳು. ’ಮಾನಸ ಸರೋವರ’ ಎಲ್ಲಿ ಹೋಗುತಿತ್ತು?

೪. ಸಿನಿಮಾ ಮಾಧ್ಯಮಕ್ಕೆ ತಕ್ಷಣ ಒಗ್ಗಿಬಿಡುವ ಕಾದಂಬರಿಗಳನ್ನೇ ಈತ ಏಕೆ ಆರಿಸುತ್ತಾರೆ? ’ಶರಪಂಜರ’ದ ತೀವ್ರತೆ ಯಿಲ್ಲದಿದ್ದರೂ ’ಮುಚ್ಚಿದ ಬಾಗಿಲು’, ನಿರ್ದೇಶಕನಿಗೆ ಸವಾಲಾಗಬಹುದಾದ ಕಾದಂಬರಿ. ಮನೋವಿಜ್ಞಾನಿಯೊಬ್ಬ ತಾನು ಕಂಡ ಮನೋರೋಗಿಗಳ ಬಗ್ಗೆ, ಅವರನ್ನು ತಾನು ಗುಣಪಡಿಸಿದ ಬಗ್ಗೆ ಸ್ವಗತದಲ್ಲಿ ಹೇಳುವ ಕಥೆ. ತ್ರಿವೇಣಿಯವರ ಕಥಾನಿರೂಪಣೆ ಇಲ್ಲಿ ಗಮನಾರ್ಹ. ಆದರೆ ಕಥೆಯನ್ನು ಸಿನಿಮಾದ ಭಾಷೆಗೆ ಒಳಪಡಿಸುವುದು ಕಷ್ಟಸಾಧ್ಯ. ಪುಟ್ಟಣ್ಣ ಇಂತಹಾ ಕಾದಂಬರಿಗಳನ್ನು ಬಿಟ್ಟರು.

ನಂತರದ ದಿನಗಳಲ್ಲಿ ಅವರ ’ಎಡಕಲ್ಲು ಗುಡ್ಡದ ಮೇಲೆ’ ಚಿತ್ರ ನೋಡಿದೆ. ಆತ ಕಸುಬಿನಲ್ಲಿ ಎಂತಹ ಸಂಯಮವಂತ ಎಂಬುದನ್ನು ಮತ್ತೆ ನಿರೂಪಿಸಿದ ಚಿತ್ರ. ಪುಟ್ಟಣ್ಣ ಆಯ್ಕೆ ಮಾಡಿಕೊಂದಿದ್ದ SUBJECT ಆ ತರಹದ್ದು. ಸ್ವಲ್ಪ ಸಂಯಮ ಕಳೆದುಕೊಂಡಿದ್ದರೂ, ಅಥವಾ COMMERCIAL TOUCH ಕೊಡುವ ದುಶ್ಚಟಕ್ಕೆ ಬಲಿಯಾಗಿದ್ದರೂ, ಒಂದು ’ನೀಲಿ’ ಚಿತ್ರವಾಗಿಬಿಡಬಹುದಾಗಿದ್ದ ’ಎಡಕಲ್ಲು ಗುಡ್ಡದ ಮೇಲೆ’, ಪುಟ್ಟಣ್ಣ ಕೈಯಲ್ಲಿ ಒಂದು ವಿಭಿನ್ನ ಕೃತಿಯಾಗಿ ಮೂಡಿಬಂದಿದ್ದು ಪ್ರಶಂಸಾರ್ಹ. ಆದರೆ ’ಮಾಧವಿ’ (ಜಯಂತಿ) ಯನ್ನು ಸಾಯಲು ಬಿಡಬಾರದಿತ್ತು ಎನಿಸಿತು. (ಮೂಲ ಲೇಖಕ ಭಾರತೀಸುತ ರಿಗೆ ಚಿತ್ರ ಇಷ್ಟವಾಗಲಿಲ್ಲ ಎಂಬುದೂ ನಿಜ) ಚಿತ್ರ ನೋಡಿದ ಮೇಲೆ, ಮೇಲಿನ ಪ್ರಶ್ನೆಗಳಿಗೆಲ್ಲಾ ಉತ್ತರ ಹುಡುಕುತ್ತಾ ಕೂರುವುದು ಅನಿವಾರ್ಯವೆಂದೇನೂ ಅನಿಸಲಿಲ್ಲ. ’ಬೆಳ್ಳಿಮೋಡ’, ’ಗೆಜ್ಜೆಪೂಜೆ’ ಗಳಂತೆ ಎಡಕಲ್ಲು ಗುಡ್ಡ ಕಾಡಲೂ ಇಲ್ಲ. ಕಾಲಕ್ರಮೇಣ ಪುಟ್ಟಣ್ಣ, ಅವರ ಭಾಷಣ, , ಮೇಲಿನ ಪ್ರಶ್ನೆಗಳೆಲ್ಲಾ ಮರೆಯುತ್ತಾ ಬಂದವು.

ಜೂನ್ ೬, ೧೯೮೫ ರ ಬೆಳಿಗ್ಗೆ…’ಪ್ರಜಾವಾಣಿ’ಯಲ್ಲಿ ’ಪುಟ್ಟಣ್ಣ ಕಣಗಾಲ್ ಇನ್ನಿಲ್ಲ’ ಎಂಬ ಸುದ್ದಿ ನೋಡಿದಾಗ ಅಪಾರ ನೋವಾಯಿತು. ಅಂದು ವೇದಿಕೆಯ ಮೇಲೆ ಒಮ್ಮೆ ಕೆಂಡಾಮಂಡಲರಾಗಿ, ಮತ್ತೊಮ್ಮೆ ಹತಾಶರಾಗಿ ಮಾತನಾಡಿದ್ದ ಪುಟ್ಟಣ್ಣನವರ ಅಸ್ಪಷ್ಟ ಚಿತ್ರ ಕಣ್ಣ ಮುಂದೆ ಬಂತು. ಆಂದಿನ ಸಮಾರಂಭದಲ್ಲಿ ಅವರಿಗೆ ಅರೋಗ್ಯವಿರಲಿಲ್ಲ ಎಂದು ಸ್ಪಷ್ಟವಾಗಿ ಕಂಡುಬಂದರೂ, ಅಷ್ಟುಬೇಗ ಅಗಲಬಹುದೆಂದು ಎಣಿಸಿರಲಿಲ್ಲ.

ಪುಟ್ಟಣ್ಣ ತಮ್ಮ ಅಸ್ಮಿತೆಯನ್ನು ಕಂಡುಕೊಳ್ಳಲು, ಸಶಕ್ತಗೊಳಿಸಿಕೊಳ್ಳಲು ಪ್ರಮುಖ ಪಾತ್ರ ವಹಿಸಿದ ತ್ರಿವೇಣಿ, ಇಂದಿರಾ ಕೂಡಾ ನೆನಪಾದರು. ೪೫ರ ವಯಸ್ಸಿನಲ್ಲಿ ತಮ್ಮ ಮೊದಲ ಕಾದಂಬರಿ ’ತುಂಗಭದ್ರ’ ಬರೆದ ಇಂದಿರಾ, ’ಗೆಜ್ಜೆಪೂಜೆ’ಯನ್ನೂ ಬರೆದರು. ’ಗೆಜ್ಜೆಪೂಜೆ’ ಶಾಸ್ತ್ರವನ್ನು ಪ್ರತ್ಯಕ್ಷ ಅವಲೋಕಿಸಲು, ಮೈಸೂರಿನ ಸೀತಾವಿಳಾಸ ಜೆಟ್ಟಿ ಆಸ್ಪತ್ರೆಯ ಬಳಿ ಇದ್ದ ಬಸಮ್ಮ ಎಂಬ ವೇಶ್ಯೆಯ ಮನೆಗೆ ತಾವೇ ಖುದ್ದು ಹೋಗಿ ಬಂದರು. ಇಂದಿರಾ ರ ಅಪ್ಪಟ ಸಂಪ್ರದಾಯಸ್ಥ ಕೌಟುಂಬಿಕ ಹಿನ್ನಲೆ, ಶೈಕ್ಷಣಿಕ ಹಿನ್ನಲೆಗಳನ್ನು ಅವಲೋಕಿಸಿದಾಗ, ಅವರು ’ಗೆಜ್ಜೆಪೂಜೆ’ ಬರೆದದ್ದು ನಿಜಕ್ಕೂ ಪ್ರಶಂಸಾರ್ಹ. ಅವರು ನಂತರ ’ಫಣಿಯಮ್ಮ’ ಬರೆದರು. ಸಮಾಜದ ಹುಳುಕುಗಳನ್ನು ಮೈಕ್ರೋಸ್ಕೋಪ್ ನಲ್ಲಿ ನೋಡಿದರು. ನೋಡಿದ್ದನ್ನು ಸ್ಪಷ್ಟಮಾತುಗಳಲ್ಲಿ, ನಿರ್ವಂಚನೆಯಿಂದ, ತಣ್ಣಗಿನ ಶೈಲಿಯಲ್ಲಿ ಬರೆದರು. ಹುಳುಕುಗಳನ್ನು ಖಂಡಿಸಲಿಲ್ಲ. ತಿದ್ದಲು ಹೋಗಲಿಲ್ಲ,, ಆದರೆ ಓದುಗರಿಗೆ ’ಖಂಡಿಸಬೇಕು’ ಎನ್ನುವ ಭಾವನೆ ಬರುವಂತೆ ಮಾಡಿದರು. ಇಂದಿರಾ ಎಂದೂ ತಮ್ಮನ್ನು ’ತುಂಗಭದ್ರೆ’ಗೆ ಸೀಮಿತಗೊಳಿಸಲಿಲ್ಲ.

೩೫ ವಯಸ್ಸಿಗೆ ಇಹಲೋಕದ ಯಾತ್ರೆ ಮುಗಿಸಿದ ತ್ರಿವೇಣಿ, ಜೀವನ-ಸಾಹಿತ್ಯ ರಚನೆಯ ಸಂಕೀರ್ಣತೆಗಳಿಗೆ ತಮ್ಮನ್ನು ತೆರುದುಕೊಂಡ ರೀತಿ, ಅವರ ಸ್ಪಂದನಶೀಲತೆ ಬೆರಗು ಹುಟ್ಟಿಸುತ್ತದೆ.

ಆದರೆ ಪುಟ್ಟಣ್ಣ, ಸಾಹಿತ್ಯಲೋಕ/ಸಿನಿಮಾಲೋಕದಲ್ಲಿ ಉಂಟಾದ ಸ್ಥಿತ್ಯಂತರ. ಸಂಕ್ರಮಣಗಳಿಗೆ ಸೂಕ್ತರೀತಿಯಲ್ಲಿ ತೆರೆದುಕೊಳ್ಳಲಿಲ್ಲ. . (ಅವರ ಉಗ್ರ-ಅತ್ಯುಗ್ರ ಅಭಿಮಾನಿಗಳು ಈ ಮಾತನ್ನು ಇಷ್ಟಪಡಲಾರರು). ’ಅನ್ವೇಷಣೆ’, ’ಅಪರಿಚಿತ’ ಗಳಂತೆ THRILL ಕೊಡದೆ, ’ಘಟಶ್ರಾದ್ಧ’, ’ತಬರನ ಕಥೆ’ ಗಳಂತೆ ಆಳಕ್ಕಿಳಿಯದೇ, ಪುಟ್ಟಣ್ಣ ತಮ್ಮದೇ ಪಥ ಕಂಡುಕೊಂಡರು. ಕನ್ನಡ ಚಿತ್ರಗಳಿಗೆ ಬೆಲೆ ತಂದುಕೊಟ್ಟರು. ಹೊಸ ದಿಕ್ಕಿನ ಅನ್ವೇಷಣೆಯಲ್ಲಿ ತಾವೇ ದಿಕ್ಕು ತಪ್ಪಿದರೇನೂ… ಗಾಬರಿ ಹುಟ್ಟಿಸುವಂತಹ ’ಕಾಲೇಜು ರಂಗ’ ವನ್ನು ತಂದರು. ತಮ್ಮ ಪೂಜ್ಯ ಮೇಷ್ಟ್ರು ಪಂತುಲು ಶಾಲಾ ಮಾಸ್ಟರನ ಕಥೆ ಇದ್ದ ’ಸ್ಕೂಲ್ ಮಾಸ್ಟರ್’ ಮಾಡಿದಂತೆ, ಪುಟ್ಟಣ್ಣ ಕಾಲೇಜು ಮೇಷ್ಟರ ’ಕಾಲೇಜು ರಂಗ’ ಮಾಡಲು ಹೋಗಿ ಎಡವಿದರು. ಪಂತುಲು ನಿರ್ಮಾಣದ ’ಕಾಲೇಜು ರಂಗ’ ಕ್ಕೆ ಬಿಜಿ‌ಎಲ್ ಸ್ವಾಮಿ ಯವರ ಕಥೆ ಇತ್ತು. ಸ್ವಾಮಿ ಕೃತಿಯಲ್ಲಿದ್ದ ನವಿರು ಹಾಸ್ಯ ಪುಟ್ಟಣ್ಣನವರ ಚಿತ್ರದಲ್ಲಿ ಮಾಯವಾಗಿತ್ತು. ’ಸ್ಕೂಲ್ ಮಾಸ್ಟರ್’ ನಲ್ಲಿದ್ದ ಆತ್ಮ-ಕಣ್ಣುಗಳೆರಡೂ ’ಕಾಲೇಜು ರಂಗ’ದಲ್ಲಿ ಅದೃಶ್ಯವಾಗಿದ್ದವು. ಹಲವು ಬಾಲಿಶ ದೃಶ್ಯಗಳಿದ್ದ ’ರಂಗ’ ತೋಪಾಯಿತು. ಸಮಕಾಲೀನ ರಾಜಕೀಯದಿಂದ ಪ್ರೇರಿತವಾದ ’ಆಕ್ಸಿಡೆಂಟ್’, ಅಥವಾ ’ತಣ್ಣೀರ್ ತಣ್ಣೀರ್’ ತರದ ಚಿತ್ರಗಳು ಬರುತ್ತಿದ್ದಾಗ, ಪುಟ್ಟಣ್ಣ ’ಋಣಮುಕ್ತಳು’ ಅಥವಾ ’ಅಮೃತ ಘಳಿಗೆ’ ತರದ ಚಿತ್ರಗಳಲ್ಲಿ ತೊಡಗಿಸಿಕೊಂಡರು. ಕಥಾವಸ್ತುವಿನ ಸಮಕಾಲೀನತೆಗಿಂತ, ಅದು ಎಷ್ಟು ಸುಲಭವಾಗಿ ಸಿನಿಮಾದ ಪರಿಭಾಷೆಗೆ ಒಗ್ಗುತ್ತದೆ ಎಂಬುದನ್ನು ಪುಟ್ಟಣ್ಣ ಗಮನಿಸುತ್ತಿದ್ದರು.

ಕನ್ನಡ ಸಿನಿಮಾ ’ಸಂಸ್ಕಾರ’, ’ವಂಶವೃಕ್ಷ’ಗಳ ಮೂಡ್ ನಲ್ಲಿದ್ದ ೭೦ರ ಆ ದಶಕದಲ್ಲಿ, ಹೊಸ ಸಿನಿಮಾಗಳಿಗೆ ಕನ್ನಡ ಪ್ರೇಕ್ಷಕ ಎದುರುನೋಡಲಾರಂಭಿಸಿದ್ದ. ಅಲ್ಲಿಯವರೆಗೂ ಬರುತ್ತಿದ್ದ ಸಿನಿಮಾಗಳಲ್ಲಿನ ಏಕತಾನತೆಗೆ ಸಡ್ಡು ಹೊಡೆದು, ಸಿನಿಮಾದ ದಿಕ್ಕನ್ನೇ ಬದಲಿಸಿದ ’ಸಂಸ್ಕಾರ’, ಅಂತಹದ್ದೇ ’ವಂಶವೃಕ್ಷ’ಗಳತ್ತ ಕನ್ನಡ ಪ್ರೇಕ್ಷಕ ವಾಲಲಾರಂಭಿಸಿದ್ದ. ’ಕಮರ್ಷಿಯಲ್’ ಚಿತ್ರಗಳಿಗೊಂದು ಹೊಸ ’ವ್ಯಾಖ್ಯೆ’ಯ ಅಗತ್ಯವಿದ್ದುದ್ದನ್ನು ಗ್ರಹಿಸಿದ ಪುಟ್ಟಣ್ಣ, ತರಾಸು ರವರ ವಿಭಿನ್ನ ಎನ್ನಬಹುದಾದ ಮೂರು ಕಾದಂಬರಿಗಳನ್ನು ಬೆಸೆದು ’ನಾಗರಹಾವಾಗಿಸಿದರು. ’ವಂಶವೃಕ್ಷ’ದಲ್ಲಿ ಕುಮಾರ್ ಆಗಿದ್ದ, ನ್ಯಾಷನಲ್ ಕಾಲೇಜಿನಲ್ಲಿ ಓದಿದ ಹುಡುಗನೊಬ್ಬ ’ವಿಷ್ಣುವರ್ಧನ’ನಾಗಿ, ’ನಾಗರಹಾವಿ’ನ ಮೂರ್ತರೂಪವೇ ಆಗಿದ್ದು ಇತಿಹಾಸ.

ಚಿತ್ರವನ್ನು ನೋಡಿ ಇಷ್ಟಪಡದ ತರಾಸು, ’ನಾನು ಬರೆದಿದ್ದು ನಾಗರಹಾವು..ನೀನು ಮಾಡಿದ್ದು ಕೇರೆಹಾವು’ ಎಂದು ಕೆರಳಿದ ನಾಗರದಂತೆಯೇ ಬುಸುಗುಟ್ಟಿದ್ದರು. ಪುಂಗಿಯಾಡಿಸುವನಷ್ಟೇ ಶಾಂತರಾಗಿ ಪುಟ್ಟಣ್ಣ ’ನೀವು ಬರೆದಿದ್ದು ಕೇರೆಹಾವು ಗುರುಗಳೇ..ಅದು ನನ್ನ ಕೈಯಲ್ಲಿ ’ನಾಗರಹಾವಾ’ಯಿತು ಎಂದರು. ಕನ್ನಡ ಸಾಹಿತ್ಯಲೋಕದ ಬಹಳಷ್ಟು ಮಂದಿಗೆ ಪುಟ್ಟಣ್ಣ ಕಥೆ ಕೊಂಡೊಯ್ದ ರೀತಿ ಹಿಡಿಸಿರಲಿಲ್ಲ. ’ರಾಮಾಚಾರಿ’ ವಿಷ್ಣುವನ್ನು ಕೋಪಿಷ್ಟನಾಗಿ ಕುದಿರಕ್ತದ ಯುವಕನಾಗಿ ಚಿತ್ರಿಸ ಹೊರಟ ಪುಟ್ಟಣ್ಣ, ದುರ್ಗದ ಕೋಟೆಯನ್ನು ಒಂದು ಪರಿಣಾಮಕಾರಿ ರೂಪಕವಾಗಿ ಬಳಸಲು ಮರೆತರು. ಚಿತ್ರದ ಆರಂಭದಲ್ಲೇ ಕೋಟೆಯೊಳಗೆಲ್ಲೋ ಮೈಮರೆತಿದ್ದ ರಾಮಚಾರಿಗಾಗಿ ಚಾಮಯ್ಯ ಮೇಷ್ಟ್ರು ಅಶ್ವತ್ಥ್ ನಡೆಸುವ ಹುಡುಕಾಟದಲ್ಲೇ ಕೋಟೆಯ ಅಂಗುಲವನ್ನೂ ಪರಿಚಯಿಸುವ ಪುಟ್ಟಣ್ಣ, ನಂತರ ವಿಷ್ಣು ಜೊತೆ ಕೈ ಜೋಡಿಸಲಿಲ್ಲ.

ಅದೇನೇ ಆಗಿರಲಿ, ’ನಾಗರಹಾವು’ ಕನ್ನಡ ಸಿನಿಮಾದಲ್ಲಿ ಹೊಸ ಸಂಚಲನ ಮೂಡಿಸಿತು. ರಾಜ್-ಕಲ್ಯಾಣ್ ಕುಮಾರ್-ಉದಯಕುಮಾರ್ ಮಯವಾಗಿದ್ದ ಕನ್ನಡ ಸಿನಿಮಾಗೆ ’ವಿಷ್ಣುವರ್ಧನ್’, ’ಅಂಬರೀಶ್’ ಎಂಬಿಬ್ಬ ಅಪ್ಪಟ ಕನ್ನಡದ ಮುಖಗಳು ದೊರೆತವು. ಜಯಂತಿ ತಮ್ಮ ಜೀವಮಾನದ ಶ್ರೇಷ್ಟ ಅಭಿನಯ ನೀಡಿದರು. ಚಿತ್ರದುರ್ಗ ಮತ್ತಷ್ಟು ಪ್ರಸಿದ್ಧಿಯಾಯಿತು….

ಪುಟ್ಟಣ್ಣ ಯಶಸ್ಸಿನ ಅಲೆಯಲ್ಲಿ ತೇಲತೊಡಗಿದರು. ’ಉಪಾಸನೆ’, ’ಕಥಾಸಂಗಮ’ಗಳು ವಿಮರ್ಶಕರನ್ನು ರಂಜಿಸಿದವು. ಆರತಿಗಾಗಿಯೇ ಮಾಡಿದ ’ರಂಗನಾಯಕಿ’ ಸೋತುಹೋದಳು. , ’ಭಾವ ಶಿಲ್ಪಿ’, ’ಕಲ್ಪನಾ ಲೋಕದ ಭಾವ ಜೀವಿ’, ’ಚಿತ್ರ ಬ್ರಹ್ಮ’, ಎಂಬೆಲ್ಲಾ ಕ್ಲೀಷೆಗಳಿಂದ ಹೊನ್ನಶೂಲಕ್ಕಿಕ್ಕಿಸಿಕೊಳ್ಳುತ್ತಾ ಜರ್ಝರಿತರಾಗುತ್ತಾ ಸಾಗಿದ ಪುಟ್ಟಣ್ಣ ಸುಮಾರು ಎರಡುವರ್ಷ ಕೈಚೆಲ್ಲಿ ಕುಳಿತರು. ಆರತಿ ನಂತರದ ದಿನಗಳಲ್ಲಿ ಮಾಡಿದ ’ಮಾನಸ ಸರೋವರ’ ಪುಟ್ಟಣ್ಣನವರಿಗೆ ಮತ್ತೆ ಉಸಿರು ಕೊಟ್ಟಿತು. ಮತ್ತದೇ ಪರಾಭವಗಳ ಸರಮಾಲೆ. ಸಾಧಿಸಬಹುದಾಗಿದ್ದು ಬಹಳಷ್ಟಿತ್ತು.. ನೊಂದು-ಬೆಂದಿದ್ದ ಪುಟ್ಟಣ್ಣ ’ಬೆಳ್ಳಿಮೋಡ’ ಸೇರಿಬಿಟ್ಟರು.

ನಮ್ಮಲ್ಲಿ ಎಷ್ಟೋ ನಿರ್ದೇಶಕರು ತಾವು ಸ್ವತಂತ್ರರಾದ ಮೇಲೆ ಒಂದು ’ಶಾಲೆ’ಯಾಗಿ ಬೆಳೆಯದೇ, ಹೆಡ್ಮಾಸ್ಟರ್ಗಿರಿಗೆ ಇಳಿದು ಧಿಮಾಕು ತೋರಿಸುವುದನ್ನು ಕಂಡಿದ್ದೇವೆ. ’ಶಾಲೆ’ ಯೆಂಬ ಪರಿಕಲ್ಪನೆಯನ್ನು ಜೀವಂತವಾಗಿಡದೇ, ಪೋಷಿಸದೇ, ಕಟ್ಟದ ಶಾಲೆಯ ’ಹೆಡ್ಮಾಸ್ಟರ್’ಗಳೆಂದು ಭ್ರಮಿಸುವ, ಪ್ರಯೋಗಗಳಿಗೆ ಹೆಚ್ಚು ಒಡ್ಡಿಕೊಳ್ಳಲು ಹೋಗದವರ ಪಡೆಯೇ ನಮ್ಮಲ್ಲಿದೆ. ಸಾಕಾರಗೊಳ್ಳದ ಪ್ರತಿಭೆಯೊಂದು, ಪ್ರತಿಷ್ಠೆ, ಠೇಂಕಾರಗಳಲ್ಲಿ ಪರ್ಯವಸಾನವಾಗಿರುವುದನ್ನು ಕಂಡಿದ್ದೇವೆ. ಪುಟ್ಟಣ್ಣ ಈ ಮಾತಿಗೆ ಹೊರತಲ್ಲ ಎಂಬುದು ಬಹಳ ದುರದೃಷ್ಟಕರ. ಮುಂಗೋಪವೇ ಇರಲಿ, ಪ್ರೀತಿಯೇ ಇರಲಿ..ತಮ್ಮ ಭಾವನೆಗಳನ್ನು ಪುಟ್ಟಣ್ಣ ನಿರ್ಲಿಪ್ತರಾಗಿ ನಿಸ್ಸಂಕೋಚವಾಗಿ ’ಹರಿಯ’ ಬಿಡುತ್ತಿದ್ದರು.
’ಮಾನಸ ಸರೋವರ’ದ ಸಂದರ್ಭದಲ್ಲಿ ತಮ್ಮ ಹೋಟೆಲ್ ರೂಮಿನಲ್ಲಿ ಏ.ಸಿ. ಸರಿಯಿಲ್ಲವೆಂದು ಪುಟ್ಟಣ್ಣನವರ ಮುಂದೆ ಕಲಾವಿದೆಯೊಬ್ಬರು ಕೂಗಾಡಿದಾಗ, ಕೋಪಾವಿಷ್ಟರಾದ ಪುಟ್ಟಣ್ಣ, ನಿಷ್ಕಾರಣವಾಗಿ ತಮ್ಮ ಸಹಾಯಕನಿಗೆ ತಪರಾಕು ಕೊಟ್ಟಿದ್ದು ಒಂದು ಉದಾಹರಣೆ. ಕಲ್ಪನಾರ ನೆನಪಿನಲ್ಲಿ ಅವರ ಸಿನಿಮಾ ಉತ್ಸವವನ್ನು ಉದ್ಘಾಟಿಸಿದ ಅಂದಿನ ವಾರ್ತಾ ಮಂತ್ರಿ ರಘುಪತಿ, ’ಕಲ್ಪನಾರ ಪ್ರತಿಭೆಯನ್ನು ಚಿತ್ರರಂಗ ಸರಿಯಾಗಿ ಬಳಸಿಕೊಳ್ಳಲಿಲ್ಲ’ ಎಂದು (ಪದೇ ಪದೇ ಪುಟ್ಟಣ್ಣನವರ ಕಡೆ ತಿರುಗಿ) ಹೇಳಿದಾಗ, ಪುಟ್ಟಣ್ಣ ರೋಷಗೊಂಡಿದ್ದರು. ಆ ಹೇಳಿಕೆಯನ್ನು ಖಂಡ-ತುಂಡವಾಗಿ ಖಂಡಿಸಿಬಿಟ್ಟರು. ’ಚಿತ್ರರಂಗ’ ವೆಂದರೆ ತಾನೇ, ಕಲ್ಪನಾರ ಪ್ರತಿಭೆಯನ್ನು ತಮ್ಮಂತೆ ಮತ್ಯಾರೂ ಬಳಸಿಕೊಳ್ಳಲಿಲ್ಲ ಎಂಬ ಅನಿಸಿಕೆ ಪುಟ್ಟಣ್ಣನವರಲ್ಲಿತ್ತು. ಅವರ ಭಾವುಕತೆಯ ಪರಿಧಿ ಬಹಳ ವಿಸ್ತಾರವಾಗಿತ್ತು. ಚಿತ್ರದ ದಿಗ್ದರ್ಶನವನ್ನು ’ಜಗನ್ಮಾತೆ’ ಎಂಬ ಕಾಣದ ಶಕ್ತಿಯೊಂದಕ್ಕೆ ಅರ್ಪಿಸಿಬಿಡುವ ಅತಿರೇಕಗಳೂ, ’ಭಾವುಕತೆಯ’ ಪರಿಧಿಯೊಳಗೆ ನುಸುಳಿಬಿಡುತ್ತಿದ್ದವು…ಆರತಿಯವರೊಡಗಿನ ಸಂಭ್ರಮದದಿನಗಳಲ್ಲಿ ’ಬೆಳ್ಳಿತೆರೆ’ ಹೆಸರಿನ ಮನೆಯನ್ನು ಪುಟ್ಟಣ್ಣ ತುಂಬಾ ಆಸ್ಸ್ಥೆ-ಆಸಕ್ತಿ ವಹಿಸಿ ಕಟ್ಟಿಸಲಾರಂಭಿಸಿದರೂ, ಮನೆ ಮುಗಿಯುವ ಹಂತಕ್ಕೆ ಬಂದಾಗ ಆಕೆಯೊಡಗಿನ ಅವರ ಸಂಬಂಧ ಹಳಸಿತ್ತು. ಪುಟ್ಟಣ್ಣನವರಿಗೇ ಗೃಹಪ್ರವೇಶಕ್ಕೆ ಆಹ್ವಾನವಿರಲಿಲ್ಲ. ಇಟ್ಟಿಗೆಯೊಂದನ್ನು ತಲೆಯಡಿ ಇಟ್ಟುಕೊಂಡು ’ಆ ಮನೆಯ ಒಂದೊಂದು ಇಟ್ಟಿಗೆಯಲ್ಲೂ ನನ್ನ ಪರಿಶ್ರಮವಿದೆ’ ಎಂದು ಬಿಕ್ಕಿ-ಬಿಕ್ಕಿ ಅಳುತ್ತಾ ತಮ್ಮ ಪ್ರಾಣಮಿತ್ರ ವಿಜಯನಾರಸಿಂಹರಲ್ಲಿ ವೇದನೆ ತೋಡಿಕೊಂಡರು. ’ನೀನೆ ಸಾಕಿದಾ ಗಿಳಿ’ ಗೀತೆಗೆ ಈ ಘಟನೆಯೇ ಮೂಲವಂತೆ. 

ಭಗ್ನಪ್ರೇಮ-ಮಿತಿಮೀರಿದ ಭಾವುಕತೆ, ತಿಕ್ಕಲುತನ ತರಬಹುದು. ಆದರೆ ಪುಟ್ಟಣ್ಣ ತರದವರ ಮನದಂತರಾಳದಲ್ಲಿ ಮಡುಗಟ್ಟಿದ ವಿರಹವೊಂದು ಕಾಡುವ ಗೀತೆಯಾಗಿ ಹೊರಹೊಮ್ಮುವುದೂ ಇಂತಹ ತಿಕ್ಕಲುತನದಿಂದಲೇ ಅಲ್ಲವೆ?

ಪುಟ್ಟಣ್ಣ ಚಿತ್ರಗಳ ಬಗ್ಗೆ ಮಾತನಾಡುವಾಗ ದೇಶ ವಿಭಜನೆಯ ಅದ್ಭುತ ನಿರೂಪಣೆಯ ’ಗರಂ ಹವಾ’, ಸಾಹಿರ್ ಲೂಧಿಯಾನ್ವಿ-ಅಮೃತಾ ಪ್ರೀತಮ್ ರ ವಿಫಲ ಪ್ರೇಮದ ಕಥೆಯಿದ್ದ ’ಪ್ಯಾಸಾ’, ಪುಟ್ಟಣ್ಣನವರಂತೆಯೇ ಭಾವತೀವ್ರತೆಯ, ಹತಾಶ ನಿರ್ದೇಶಕನ ಕಥೆಯಿದ್ದ ’ಕಾಗಜ಼್ ಕೆ ಫೂಲ್’, ತರದ ಚಿತ್ರಗಳು ಅಪ್ರಯತ್ನ ಪೂರ್ವಕವಾಗಿ ಮನಸ್ಸಿನಲ್ಲಿ ಹಾದುಹೋಗುತ್ತವೆ. ಗುರುದತ್ ತರಹದ ಭಗ್ನಪ್ರೇಮಿ ಇವರ ಚಿತ್ರಗಳಲ್ಲೆಲ್ಲೂ ಕಾಣಲಾರ. ಆದರೆ ಇದು ಕೊರತೆಯಲ್ಲ. ಆದರೂ ರಿತ್ವಿಕ್ ಘಟಕ್-ಸತ್ಯು-ಗುರುದತ್ ತರದವರ ಸ್ವೋಪಜ್ಞತೆ, ಸಿನಿಮಾ ಪ್ರೀತಿ ಬೆರಗು ಮೂಡಿಸುತ್ತದೆ. ನಮ್ಮ ಪುಟ್ಟಣ್ಣ Rank ವಿದ್ಯಾರ್ಥಿಗಳ ಮುಂದೆ, ಫಸ್ಟ್ ಕ್ಲಾಸ್ ಪಡೆಯಲು ತಿಣುಕುವ ಮಧ್ಯಮವರ್ಗದ ವಿದ್ಯಾರ್ಥಿಯಾಗಿಬಿಟ್ಟರಲ್ಲಾ ಎಂದು ವಿಷಾದವಾಗುತ್ತದೆ.

ಪುಟ್ಟಣ್ಣ ಹಲವು ಹತ್ತು ಕಲಾವಿದರನ್ನು ಪರಿಚಯಿಸಿದರು. ತಮ್ಮಲ್ಲೊಬ್ಬ ಕಲಾವಿದ ಅಡಗಿದ್ದಾನೆ ಎಂಬ ಕಲ್ಪನೆಯೂ ಇಲ್ಲದವರೂ ಪುಟ್ಟಣ್ಣನವರ ಕೈಚಳಕದಿಂದ ಶಿಲ್ಪಗಳಾದರು. ’ನಾಗರಹಾವಿ’ನ ನಂತರ ವಿಷ್ಣು-ಪುಟ್ಟಣ್ಣ ಮತ್ತೆ ಸೇರಿ ಚಿತ್ರ ಮಾಡಲೇ ಇಲ್ಲ ಎಂಬುದು ಗಮನಾರ್ಹ. ನಾಗ್ ಸೋದರರಂತಹ ಅಪ್ರತಿಮ ಕಲಾವಿದರಿಂದ ಪುಟ್ಟಣ್ಣ ಸಾಕಷ್ಟು ದೂರವೇ ಉಳಿದರು. ಹೊಸತನಕ್ಕೆ ಸದಾ ತುಡಿಯುವ, ಅಪಾರ ಕ್ರಿಯಾಶೀಲತೆಯ ಶಂಕರ್-ಅನಂತ್ ತರದವರು ಪುಟ್ಟಣ್ಣ ತರದವರ ಜಾಯಮಾನಕ್ಕೆ ಒಗ್ಗುವರಲ್ಲ.

ನಿಜ..ಉತ್ತಮ ನಿರ್ದೇಶಕನೊಬ್ಬ ಒಂದಷ್ಟು ಕಲಾವಿದರನ್ನು ಪರಿಚಯಿಸಿದರೆ ಸಾಕೆ? ಎಷ್ಟು ’ಮರಿ ಪುಟ್ಟಣ್ಣ’ರನ್ನು ಈತ ತಯಾರು ಮಾಡಿದರು? ಎಷ್ಟು ನಿರ್ದೇಶಕರನ್ನು ತಮ್ಮ ಗರಡಿಯಲ್ಲಿ ಪಳಗಿಸಿದರು? ಉತ್ತರ ಹುಡುಕುವುದು ಕಷ್ಟವೆನಿಸಬಹುದು. ಅವರ ಬಳಿ ಸಹಾಯಕರಾಗಿದ್ದ ಎಸ್.ಪಿ.ಮುತ್ತುರಾಮನ್, ಭಾರತಿರಾಜ, ದೇವರಾಜ್-ಮೋಹನ್ ತಮಿಳರ ಪಾಲು. ಇದರಲ್ಲಿ ಭಾರತಿರಾಜ ಇಂದಿಗೂ ಗಟ್ಟಿ ಹೆಸರು.

ತಮಿಳು ಸಿನಿಮಾದ ಉದಾಹರಣೆ ತೆಗೆದುಕೊಂಡರೆ, ಕೆ.ಬಾಲಚಂದರ್(ಸುರೇಶ್ ಕೃಷ್ಣ, ಕಮಲ್, ವಸಂತ್, ಶರಣ್, ಸಮುದ್ರ ಖನಿ, ಸೆಲ್ವರಾಘವನ್, ಪ್ರಕಾಶ್ ರೈ.ಇತ್ಯಾದಿ), ಬಾಲು ಮಹೇಂದ್ರ (ಬಾಲ, ವೆಟ್ರಿಮಾರನ್..ಇತ್ಯಾದಿ), ಭಾರತಿರಾಜಾ (ಭಾಗ್ಯರಾಜ್, ಕೆ.ಎಸ್.ರವಿಕುಮಾರ್, ಚೇರನ್, ವಿಕ್ರಮನ್, ಇತ್ಯಾದಿ)ರಂತೆ “ಪುಟ್ಟಣ್ಣ ಶಾಲೆ” ಕನ್ನಡದಲ್ಲಿ ಅವಶ್ಯವಾಗಿ ಬರಬೇಕಿತ್ತು. (ಪಿ.ಎಚ್.ವಿಶ್ವನಾಥ್ ಪಂಚಮವೇದ ದಂತಹ ಚಿತ್ರವಾದ ಮೇಲೆ ನೇಪಥ್ಯ ಸೇರಿದಂತಿದೆ). ಕೆ.ಬಿ. ಪುಟ್ಟಣ್ಣನವರ ದೊಡ್ಡ ಅಭಿಮಾನಿಯಾಗಿದ್ದರು. ಅವರ ಹಲವು ಚಿತ್ರಗಳಲ್ಲಿ ಪುಟ್ಟಣ್ಣ ಛಾಯೆ ಇಣುಕುತ್ತದೆ. ಇದರಿಂದ ಕನ್ನಡಕ್ಕಾದ ಲಾಭವೇನು? ಹಾಗೆಂದು ಮೇಲೆ ಹೇಳಿದ ನಿರ್ದೇಶಕರ ಶಾಲೆಗಳಿಂದ ಬಂದ ಎಲ್ಲ ಚಿತ್ರಗಳೂ ಶ್ರೇಷ್ಟ ಚಿತ್ರಗಳೆಂದೇನೂ ಅಲ್ಲ. ಆದರೆ ಉಲ್ಲೇಖಾರ್ಹವಾದ ಹಲವು ಚಿತ್ರಗಳು ಈ ಶಾಲೆಗಳಿಂದ ಬಂದಿದೆ. ಈ ಎಲ್ಲಾ ಶಾಲೆಗಳು ಇನ್ನೂ ಅಸ್ತಿತ್ವ ಉಳಿಸಿಕೊಂಡು ತಮ್ಮ ಭಾಷೆಯ ಸಿನಿಮಾವನ್ನು ಪೊರೆಯುತ್ತಿವೆ. ಮೇಲೆ ಹೇಳಿದ ನಿರ್ದೇಶಕರೆಲ್ಲಾ ಇಂದು ಸ್ವತಂತ್ರ ನಿರ್ದೇಶಕರು ಮಾತ್ರವಲ್ಲ, ತಮ್ಮ ಮೂಲ ಶಾಲೆಯ ಛಾಪನ್ನು ತಮ್ಮೆಲ್ಲಾ ಚಿತ್ರಗಳಲ್ಲೂ ಕಾಣಿಸುತ್ತಾರೆ. ನಮ್ಮಲ್ಲಿ ಕಾಶೀನಾಥ್ ಹೀಗೊಂದು ಶಾಲೆ ಸ್ಥಾಪಿಸಿದರು. ಶಂಕರ್ ನಾಗ್ ಒಂದು ಶಾಲೆಯಾಗಿದ್ದರು. ಹಿಂದಿ/ತೆಲುಗಿನಲ್ಲಿ ಆರ್.ಜಿ.ವಿ ಹೀಗೊಂದು ಶಾಲೆ ತಂದರು. ಇವರೆಲ್ಲಾ ತಾವು ಕಟ್ಟಿದ ಶಾಲೆಯಲ್ಲಿ ನಿಸ್ಸಂಕೋಚವಾಗಿ ವಿದ್ಯಾರ್ಥಿಗಳೂ ಆದರು. ಕನ್ನಡದಲ್ಲೇಕೆ ಈ ತರಹದ ಶಾಲೆಗಳು ಹೆಚ್ಚು ಬೆಳೆಯಲಿಲ್ಲ?? ನಮ್ಮ ಭಾಷೆಯ ಬೇರು ಗಟ್ಟಿಯೂ ಆಗಬೇಕು. ಹರಡುತ್ತಲೂ ಹೋಗಬೇಕು. ೮೦ ಕ್ಕೂ ಹೆಚ್ಚು ವರ್ಷ ವಯಸ್ಸಿನ ನಮ್ಮ ಚಿತ್ರರಂಗಕ್ಕಿದು ಮನದಟ್ಟಾಗಬೇಕಿದೆ.

ಮೂಡಲ ಮನೆಯ ಮುತ್ತಿನ ನೀರಿನ’, ’ವೇದಾಂತಿ ಹೇಳಿದನು’, ’ಹಾಡು ಹಳೆಯದಾದರೇನು’, ಮುಂತಾದ ಕೆಲವರಿಗೆ ಮಾತ್ರ ಗೊತ್ತಿರಬಹುದಾಗಿದ್ದ ಅಪೂರ್ವ ಕೃತಿಗಳನ್ನು ತಮ್ಮ ಚಿತ್ರಗಳಲ್ಲಿ ಸಮರ್ಪಕವಾಗಿ ಅಳವಡಿಸಿ ಕನ್ನಡಿಗರ ಮನೆ-ಮನೆಗೂ ತಲುಪಿಸಿದ ಪುಟ್ಟಣ್ಣ ಕನ್ನಡ ಭಾಷೆ-ಸಾಹಿತ್ಯಗಳ ಬಗ್ಗೆ ಇದ್ದ ಕಕ್ಕುಲಾತಿಯಿಂದ ಎಲ್ಲಾ ಕಾಲಕ್ಕೂ ಸಲ್ಲುತ್ತಾರೆ. ಚಿತ್ರದಲ್ಲಿರುವ ಕಲಾವಿದ ವಿಷ್ಣುವೋ, ಅಂಬಿಯೋ, ಅದಕ್ಕಿಂತ ಆ ಚಿತ್ರದ ನಿರ್ದೇಶಕನೇ ಮುಖ್ಯವೆಂಬುದನ್ನು ಪುಟ್ಟಣ್ಣ ಮನಗಂಡಿದ್ದರು. ಕಥೆಯೇ ಇವರ ಚಿತ್ರದ ನಾಯಕ. ಪುಟ್ಟಣ್ಣನಂತವರಿದ್ದರು ಎಂಬ ಕಾರಣಕ್ಕಾದರೂ ಇನ್ನೂ ಹೆಚ್ಚು ’ಒಳ್ಳೆ’ಯ ಚಿತ್ರಗಳು ಕನ್ನಡದಲ್ಲಿ ಬರಬೇಕಿದೆ. ಅಭಿಮಾನ-ವಿಷಾದ ಗಳೆರಡನ್ನೂ ಒಮ್ಮೆಲೇ ತರುವ ಅಪ್ಪಟ ಕನ್ನಡದ ಹೆಸರು ಹೆಸರು ’ಪುಟ್ಟಣ್ಣ ಕಣಗಾಲ್’.

ಗೌಡರಿಗೆ ಪುಟ್ಟಣ್ಣ ಹೇಳಿದ ಈ ಮಾತು ಗಮನಿಸಿ:
“ಇದೊಂದು ಹುಚ್ಚರ ಸಂತೆ..ಈ ನಗ್ನರ ರಾಜ್ಯದಲ್ಲಿ ನಾವು ಲಂಗೋಟಿ ಹಾಕ್ಕೊಂಡು ಓಡಾಡಿದರೂ ಹಾಸ್ಯಾಸ್ಪದ ಆಗುತ್ತಲ್ಲವೇ??”  

ವಿಜಯ್ ಮತ್ತು ಸೇತುಪತಿ ಚಿತ್ರಕ್ಕೆ ಸಹಕರಿಸಿದ ಬುದ್ಧಿವಂತ-೨

Previous article

ಜೊತೆಲಿರೋರನ್ನ ನಾವ್ ಚನ್ನಾಗ್ ನೋಡ್ಕೊಂಡ್ರೆ ಮೇಲ್ಗಡೆ ಇರೋನು ನಮ್ಮನ್ನ ಚನ್ನಾಗ್ ನೋಡ್ಕಂತಾನೆ…

Next article

You may also like

Comments

Leave a reply

Your email address will not be published. Required fields are marked *