ಕನ್ನಡ ಚಿತ್ರರಂಗದ ಪುರಾತನ ನಿರ್ಮಾಪಕ ಗಂಡುಗಲಿ ಕೊಬ್ರಿ ಮಂಜು. ಈಗ ಅವರ ಮಗ ಶ್ರೇಯಸ್ ಒಂದರ ಹಿಂದೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.‌ ಪಡ್ಡೆ ಹುಲಿ ಸಿನಿಮಾ ಬಂದಾಗ ಹುಡುಗ ಪೀಚು ಪೀಚಾಗಿದಾನಲ್ಲ ಅಂತನ್ನಿಸಿದ್ದು ನಿಜ. ತೆರೆಗೆ ಬರಲು ರೆಡಿಯಾಗಿರುವ ವಿಷ್ಣುಪ್ರಿಯ ಸಿನಿಮಾದ ಪೋಸ್ಟರು ಇತ್ಯಾದಿಗಳನ್ನು ನೋಡಿದಾಗ ಲವರ್‌ ಬಾಯ್‌ ಕ್ಯಾರೆಕ್ಟರಿಗೆ ಹೇಳಿಮಾಡಿಸಿದಂತಿದ್ದಾನೆ ಅನ್ನೋ ಅಭಿಪ್ರಾಯ ಮೂಡಿದ್ದೂ ಹೌದು. ಈಗ ʻರಾಣಾʼ ಚಿತ್ರಕ್ಕಾಗಿ ಈ ಹುಡುಗ ರೆಡಿಯಾಗಿರುವ ಪರಿ ನೋಡಿದರೆ ಪಕ್ಕಾ ಮಾಸ್‌ ಮೆಟೀರಿಯಲ್ಲು ಅಂತಾ ಯಾರಿಗಾದರೂ ಅನ್ನಿಸುವಂತಿದೆ.

ಗುಜ್ಜಲ್‌ ಪುರುಷೋತ್ತಮ್‌ ನಿರ್ಮಾಣದ ಈ ಚಿತ್ರ ಅದ್ದೂರಿಯಾಗಿ ಆರಂಭವಾಗಿದೆ. ಈ ಹಿಂದೆ ಟಗರು, ಆ ದೃಶ್ಯ ಮೊದಲಾದ ಸಿನಿಮಾಗಳಿಗೆ ಸಹ ನಿರ್ಮಾಪಕರಾಗಿದ್ದವರು ಪುರುಷೋತ್ತಮ್.‌ ನಂದ ಕೀಶೋರ್‌ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಆರಂಭದ ನಾಲ್ಕು ಸಿನಿಮಾಗಳನ್ನು ಬಿಟ್ಟರೆ ನಂದನ ಪಾಲಿಗೆ ಗೆಲುವಿನ ಕದ ತೆರೆಯುತ್ತಲೇ ಇಲ್ಲ. ಟೈಗರ್‌ ಅಬ್ಬರಿಸಲಿಲ್ಲ, ಬೃಹಸ್ಪತಿ ಬೀಗಲಿಲ್ಲ, ಪೊಗರು ಏನಾದರೂ ಸೌಂಡು ಮಾಡಿತೆಂದರೆ ಅದರ ಸಂಪೂರ್ಣ ಕ್ರೆಡಿಟ್ಟು ಧೃವ ಸರ್ಜಾ ಖಾತೆಗೆ ಜಮೆಯಾಗುತ್ತದೆ. ದುಬಾರಿ ಕೂಡಾ ಶುರುವಾಗಲಿಲ್ಲ. ಹೀಗಿರುವಾಗ ಕೊಬ್ರಿ ಸನ್‌ ಶ್ರೇಯಸ್‌ ನನ್ನು ಮಾಸ್‌ ಹೀರೋ ಆಗಿ ಗೆಲ್ಲಿಸಬೇಕಿರುವ ಸವಾಲು ನಂದ ಕಿಶೋರ್‌ ಮುಂದಿದೆ…

ಗವಿಪುರಂನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ರಾಣ ಚಿತ್ರದ ಮುಹೂರ್ತ ಕಾರ್ಯ ನೆರವೇರಿದ್ದು, ಇನ್ನೇನು ಶೀಘ್ರದಲ್ಲಿಯೇ ಸಿನಿಮಾ ಕೆಲಸಗಳನ್ನು ಶುರು ಮಾಡಲಿದ್ದಾರಂತೆ ನಿರ್ದೇಶಕ ನಂದಕಿಶೋರ್. ಚಿತ್ರದ ಬಗ್ಗೆ ಮತ್ತು ಪಾತ್ರದ ಬಗ್ಗೆ ಮಾಹಿತಿ ನೀಡುವ ನಟ ಶ್ರೇಯಸ್, ‘ಈ ಹಿಂದಿನ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, ರಾಣದಲ್ಲಿ ತುಂಬ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದೇನೆ. ಪಡ್ಡೆಹುಲಿಯಲ್ಲಿ ಕಾಮಿಡಿ ಫನ್ ಇತ್ತು. ವಿಷ್ಣು ಪ್ರಿಯ ಚಿತ್ರದಲ್ಲಿ ಸೌಮ್ಯ ಸ್ವಭಾವದ ಪಾತ್ರವಿದೆ. ಇದೀಗ ರಾಣದಲ್ಲಿ ಸಂಪೂರ್ಣ ಚೇಂಜ್ ಓವರ್ ಇದೆ. ಬಾಡಿ ಬಿಲ್ಡ್ ಮಾಡಿಕೊಳ್ಳುತ್ತಿದ್ದೇನೆ. ಆ್ಯಕ್ಷನ್​ಗೆ ಸಾಕಷ್ಟು ಪ್ರಾಮುಖ್ಯತೆ ಇರುವುದರಿಂದ ಅದಕ್ಕಾಗಿ ತಯಾರಿ ನಡೆಸಿದ್ದೇನೆ ಎನ್ನುತ್ತಾರೆ.

ಇನ್ನು ಪುತ್ರನ ಚಿತ್ರದ ಬಗ್ಗೆ ಕೆ. ಮಂಜು ಸಹ ಪ್ರತಿಕ್ರಿಯಿಸಿದ್ದಾರೆ. ಒಳ್ಳೆ ಕಥೆ ಸಿಕ್ಕಿದೆ. ಗುಜ್ಜಲ್ ಅವರು ಮೊದಲಿಂದಲೂ ನನಗೆ ಸ್ನೇಹಿತರು. ಯಾವುದಾದರೂ ಸಿನಿಮಾ ಇದ್ದರೆ ನೀಡಿ ಎಂದಿದ್ದರು. ಅದರಂತೆ ನಂದಕಿಶೋರ್ ಮತ್ತು ಶ್ರೇಯಸ್ ಕಾಂಬಿನೇಷನ್ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಚಿತ್ರ ನಿರ್ಮಾಣದಲ್ಲಿ ಗುಜ್ಜರ್ ಅವರಿಗೆ ಕೃಷ್ಣನಂತೆ ಅವರೊಂದಿಗೆ ಬೆನ್ನಿಗೆ ನಿಲ್ಲುತ್ತೇನೆ ಎಂದರು.

ಇನ್ನು ಈ ಚಿತ್ರದಲ್ಲಿ ಶ್ರೇಯಸ್​ಗೆ ಇಬ್ಬರು ನಾಯಕಿಯರು. ರೀಷ್ಮಾ ನಾಣಯ್ಯ ಮತ್ತು ರಜನಿ ಭಾರದ್ವಾಜ್ ಮೊದಲ ಬಾರಿ ನಂದಕಿಶೋರ್ ಮತ್ತು ಶ್ರೇಯಸ್ ಜತೆ ಕೆಲಸ ಮಾಡುತ್ತಿದ್ದಾರೆ. ತುಂಬ ಮುದ್ದಾದ ಪಾತ್ರವನ್ನು ನೀಡಿದ್ದಾರೆ.  ನಂದಕಿಶೋರ್ ಅವರ ಜೊತೆಗೆ ಕೆಲಸ ಮಾಡಬೇಕೆಂಬ ಆಸೆ ಇತ್ತು. ಅದೀಗ ಈ ಸಿನಿಮಾ ಮೂಲಕ ಈಡೇರಿದೆ ಎಂದು ಮನದಾಳವನ್ನು ನಟಿ ರೀಷ್ಮಾ ನಾಣಯ್ಯ ಹೇಳಿಕೊಂಡರು.

ಪೊಗರು ಬಳಿಕ ನಂದಕಿಶೋರ್ ಜತೆಗೆ ಚಂದನ್ ಶೆಟ್ಟಿ ಅವರ ಸಂಗೀತ ನಿರ್ದೇಶನ ಇಲ್ಲಿಯೂ ಮುಂದುವರಿಯುತ್ತಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿರಲಿದ್ದು, ಮಾಸ್ ಶೈಲಿಯಲ್ಲಿ ಮೂಡಿಬರಲಿವೆಯಂತೆ.

ಕೊನೆಯದಾಗಿ ಮಾತಿಗಿಳಿದ ನಂದಕಿಶೋರ್, ಮುಂದಿನ ವಾರದಿಂದ ಚಿತ್ರದ ಶೂಟಿಂಗ್​ ಬೆಂಗಳೂರಿನಲ್ಲಿ ನಡೆಯುತ್ತದೆ. ಬಳಿಕ ಉತ್ತರ ಕರ್ನಾಟಕ ಭಾಗದಲ್ಲಿ ಕೆಲ ದಿನ ನಡೆಯಲಿದೆ. ಒಟ್ಟಾರೆ 40-45 ದಿನದ ಶೂಟಿಂಗ್ ಪ್ಲಾನ್ ಹಾಕಿದ್ದೇವೆ. ಬಹುತೇಕ ಹೊಸಬರೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಲನ್ ಪಾತ್ರಕ್ಕೆ ಬಾಡಿ ಬಿಲ್ಡರ್​ ರಾಘವೇಂದ್ರ ಅವರನ್ನು ವಿಲನ್ ಪಾತ್ರದ ಮೂಲಕ ಪರಿಚಯಿಸುತ್ತಿದ್ದೇವೆ. ಇನ್ನುಳಿದ ಪಾತ್ರ ವರ್ಗದ ಮಾಹಿತಿ ಶೀಘ್ರದಲ್ಲಿ ತಿಳಿಸಲಿದ್ದೇವೆ ಎಂದರು.

ಶೇಖರ್ ಚಂದ್ರ ಛಾಯಾಗ್ರಹಣ, ಸಂಗೀತ ಚಂದನ್ ಶೆಟ್ಟಿ, ಕೆ.ಎಂ. ಪ್ರಕಾಶ್ ಸಂಕಲನ, ಪ್ರಶಾಂತ್ ರಾಜಪ್ಪ ಸಂಭಾಷಣೆ, ರವಿ ವರ್ಮಾ ಸಾಹಸ ನಿರ್ದೇಶನ ಮಾಡಲಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

Truth is mighty and must prevail…

Previous article

ಕಿಚ್ಚನಿಂದ ಮಾತ್ರ ಈ ಥರ ಇರಲು ಸಾಧ್ಯ!

Next article

You may also like

Comments

Leave a reply

Your email address will not be published.