ರಚಿತಾ ರಾಮ್ ಈ ವರೆಗೂ ಕಮರ್ಷಿಯಲ್ ಚಿತ್ರಗಳ ಮೂಲಕವೇ ಗುರುತಿಸಿಕೊಂಡು ಬಂದಿರುವವರು. ಸೀರಿಯಲ್ ಲೋಕದಲ್ಲಿ ಸಣ್ಣಗೆ ಸದ್ದು ಮಾಡುತ್ತಲೇ ಏಕಾಏಕಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾಯಕಿಯಾಗಿ ನಟಿಸೋ ಮೂಲಕ ಅಚ್ಚರಿಗೆ ಕಾರಣವಾಗಿದ್ದವರು. ಆ ನಂತರದಲ್ಲಿ ಈವರೆಗೂ ಅವರ ಸಿನಿಮಾ ಯಾತ್ರ ಕಮರ್ಷಿಯಲ್ ಪಥದಲ್ಲಿಯೇ ಮುಂದುವರೆಯುತ್ತಾ ಬಂದಿತ್ತು. ಕೈ ತುಂಬಾ ಅವಕಾಶಗಳಿರೋ ಹೊತ್ತಿನಲ್ಲಿಯೂ ಅವರನ್ನು ಕಾಡಿದ ಬದಲಾವಣೆಯ ಬಯಕೆಯಿಂದಲೇ ಏಪ್ರಿಲ್ ಚಿತ್ರದಲ್ಲಿನ ಭಿನ್ನವಾದ ಪಾತ್ರವೊಂದು ಅವರಿಗೆ ಸಿಕ್ಕಿದೆ!
ಏಪ್ರಿಲ್ ಎಂಬುದು ಕಮರ್ಷಿಯಲ್ ಸೂತ್ರದಾಚೆಗಿನ ಬೇರೆಯದ್ದೇ ಜಾಡಿನ ಚಿತ್ರ. ಮಹಿಳಾ ಪ್ರಧಾನ ಕಥಾನಕ ಹೊಂದಿರೋ ಈ ಚಿತ್ರದಲ್ಲಿ ರಚಿತಾ ಏಪ್ರಿಲ್ ಡಿಸೋಜಾ ಎಂಬ ಹೆಣ್ಣೊಬ್ಬಳ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದೀಗ ರಚಿತಾ ಹುಟ್ಟು ಹಬ್ಬದ ಸಂಭ್ರಮಕ್ಕೆ ಈ ಚಿತ್ರದ ಪೋಸ್ಟರ್ ಒಂದು ಬಿಡುಗಡೆಯಾಗಿದೆ. ಇದನ್ನು ಕಂಡು ರಚಿತಾಭಿಮಾನಿಗಳು ನಿಜಕ್ಕೂ ಖುಷಿಗೊಂಡಿದ್ದಾರೆ.
ರಚಿತಾ ಅವರೇ ಹೇಳಿಕೊಂಡಿರೋ ಪ್ರಕಾರ ಕಮರ್ಷಿಯಲ್ ಹೀರೋಯಿನ್ ಎಂಬ ಇಮೇಜನ್ನು ಬ್ರೇಕ್ ಮಾಡಿಕೊಂಡು ಬೇರೆ ಥರದಲ್ಲಿಯೂ ಗುರುತಿಸಿಕೊಳ್ಳುವ ಬಯಕೆ ಅವರಲ್ಲಿ ಬಹು ಹಿಂದೆಯೇ ಹುಟ್ಟಿಕೊಂಡಿತ್ತಂತೆ. ಆದರೆ ಅದರ ಸಾಕಾರಕ್ಕೆ ಕಾಲ ಕೂಡಿ ಬಂದಿದ್ದು ಏಪ್ರಿಲ್ ಚಿತ್ರದಿಂದ. ಇದರಲ್ಲಿನ ಏಪ್ರಿಲ್ ಡಿಸೋಜಾ ಎಂಬ ಪಾತ್ರಕ್ಕೆ, ಅದರ ಸುತ್ತಾ ಜರುಗೋ ಮೋಹಕ ಮತ್ತು ರೋಚಕವಾದ ಕಥೆಗೆ ಮಾರು ಹೋಗಿಯೇ ರಚಿತಾ ಈ ಚಿತ್ರವನ್ನು ಒಪ್ಪಿಕೊಂಡಿದ್ದರಂತೆ.
ಇದು ರಚಿತಾ ಪಾಲಿಗೆ ಖುಷಿಯ ಸುಗ್ಗಿಯಂಥಾ ಕಾಲ. ಅತ್ತ ಕಮರ್ಷಿಯಲ್ ಆಗಿ ನೋಡ ಹೋದರೆ ಅಯೋಗ್ಯ ಚಿತ್ರದ ಮೂಲಕ ಭರ್ಜರಿ ಗೆಲುವೊಂದು ರಚಿತಾ ಪಾಲಾಗಿದೆ. ಶಿವಣ್ಣನ ರುಸ್ತುಂ ಚಿತ್ರದಲ್ಲಿ ವಿವೇಕ್ ಓಬೇರಾಯ್ ಅವರಿಗೆ ಜೋಡಿ ಯಾಗಿ ನಟಿಸುತ್ತಿರೋ ರಚಿತಾ, ಪಿ ವಾಸು ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರಿಗೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರದಲ್ಲಿಯೂ ಕೂಡಾ ರಚಿತಾರದ್ದು ಪಕ್ಕಾ ಸವಾಲಿನ ಪಾತ್ರವಂತೆ. ಈ ಪಾತ್ರ ಕಮರ್ಶಿಯಲ್ ಸಿನಿಮಾಗಳ ಸಾಲಿನಲ್ಲಿಯೂ ತನಗೆ ಬೇರೆಯದ್ದೇ ಇಮೇಜು ಕಟ್ಟಿಕೊಡುವ ಭರವಸೆ ರಚಿತಾಗಿದೆ.
#
No Comment! Be the first one.