ಇಸವಿ ೨೦೦೨ರ ಆಸುಪಾಸು. ಮಿಸ್ ಇಂಡಿಯಾ ಕಿರೀಟ ತೊಟ್ಟಿದ್ದ ಪ್ರಿಯಾಂಕಾ ಚೋಪ್ರಾಳನ್ನು ಸಿನಿಮಾರಂಗಕ್ಕೆ ಕರೆತರಬೇಕೆಂದು ಬಹಳಷ್ಟು ಜನ ಪ್ರಯತ್ನ ಪಟ್ಟಿದ್ದರು.
ಆ ತನಕ ತಮಿಳು ಚಿತ್ರರಂಗದಲ್ಲಿ ಸಹ ನಿರ್ದೇಶಕರಾಗಿ, ಬರಹಗಾರರಾಗಿದ್ದ ಎಸ್.ಪಿ. ಜನನಾಥನ್ ಸ್ವತಂತ್ರ ಸಿನಿಮಾ ನಿರ್ದೇಶಕರಾಗುವ ಮನಸ್ಸು ಮಾಡಿರುತ್ತಾರೆ. ಅದಕ್ಕಾಗಿ ಚೆಂದದ ಕಥೆಯೊಂದನ್ನು ಸಿದ್ದ ಪಡಿಸಿಕೊಂಡಿರುತ್ತಾರೆ. ಬೆಂಗಳೂರು ಮೂಲದ ಶ್ಯಾಮ್ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿರುತ್ತಾನೆ. ನಾಯಕಿಯ ಪಾತ್ರಕ್ಕೆ ಯಾರನ್ನು ಸೆಲೆಕ್ಟ್ ಮಾಡುವುದು ಅನ್ನೋದು ನಿರ್ದೇಶಕರಿಗೆ ದೊಡ್ಡ ಪ್ರಶ್ನೆಯಾಗಿರುತ್ತದೆ. ತೀರಾ ಹೊಸ ಮುಖವನ್ನೇ ಹಾಕಿಕೊಳ್ಳಬೇಕು ಅಂತಲೂ ತೀರ್ಮಾನಿಸಿರುತ್ತಾರೆ. ಪ್ರಿಯಾಂಕಾ ಚೋಪ್ರಾಳನ್ನು ಕೇಳೋಣ ಅಂತಾ ಏನೇನೋ ಪ್ರಯತ್ನ ಮಾಡಿದರೂ, ಆಕೆಯ ಸಂಪರ್ಕ ಸಾಧಿಸೋದು ಕೂಡಾ ಸಾಧ್ಯವಾಗುವುದಿಲ್ಲ.
ಹೇಮಾ ಮಾಲಿನಿ ಮಗಳು ಇಶಾ ಡಿಯೋಲ್ ಬಳಿ ಮಾತಾಡಿ ಒಪ್ಪಿಸಿದ್ದೂ ಆಗುತ್ತದೆ. ಕಡೆಗೆ ʻಅಯ್ಯೋ ನಿರ್ದೇಶಕರ ಮೊದಲ ಸಿನಿಮಾ… ಹೇಗೆ ಒಪ್ಪುವುದುʼ ಅಂತಾ ಹಿಂದೇಟು ಹಾಕಿಬಿಡುತ್ತಾರೆ. ನಾಯಕಿಯನ್ನು ತಲಾಷ್ ಮಾಡಲು ಬೆಂಗಳೂರಿಗೆ ಬಂದು ಕೂತಿರುತ್ತಾರೆ ಡೈರೆಕ್ಟರ್ ಜನಾ. ಪ್ರಿಯಾಮಣಿ ಮತ್ತು ಅವಳ ಅಪ್ಪ ಬಂದು ನಿರ್ದೇಶಕರನ್ನು ಭೇಟಿಯಾಗುತ್ತಾರೆ. ಅವಕಾಶಕ್ಕಾಗಿ ಬಂದವಳು ಕಾಲಮೇಲೆ ಕಾಲು ಹಾಕಿಕೊಂಡು ಕೂತಿರುತ್ತಾಳೆ. ʻನಾನು ಸೃಷ್ಟಿಸಿರುವ ಇಂಥಾ ಧಿಮಾಕಿನ ಹೆಣ್ಣೇ ಬೇಕುʼ ಅಂದುಕೊAಡ ಜನನಾಥನ್ ಪ್ರಿಯಾಮಣಿಯನ್ನು ಓಕೆ ಅನ್ನುತ್ತಾರೆ.
ಜೊತೆಗೆ ಬಂದಿದ್ದ ಅವಳ ಅಪ್ಪ ವಾಸುದೇವಮಣಿ ʻನನ್ನ ಮಗಳನ್ನು ಸೀನಿಯರ್ ಡೈರೆಕ್ಟರ್ ಭಾರತೀರಾಜ ನೋಡಿದ್ದಾರೆ, ಅವರ ಮುಂದಿನ ಸಿನಿಮಾದಲ್ಲಿ ಅವಕಾಶ ಕೊಡುವ ಸಾಧ್ಯತೆ ಇದೆʼ ಅಂದಿದ್ದ. ʻʻಹೌದಾ? ಅಂತಾ ಮೇರು ನಿರ್ದೇಶಕರ ಸಿನಿಮಾದಲ್ಲಿ ಛಾನ್ಸು ಸಿಗೋದಾದರೆ, ಅದಕ್ಕಿಂತಾ ಅದೃಷ್ಟ ಬೇರೆ ಯಾವುದಿದೆ? ನೀವು ಈ ವಿಚಾರ ತಿಳಿಸಿದ್ದು ಒಳ್ಳೇದೇ ಆಯ್ತು. ಅಪ್ಪಿತಪ್ಪಿ ನನ್ನ ಕೈಗೆ ಸಿಕ್ಕಿಕೊಂಡುಬಿಡುತ್ತಿದ್ದಿರಿ. ನಾನು ಯಾರು ಅಂತಾ ನನಗೇ ಸರಿಯಾಗಿ ಗೊತ್ತಿಲ್ಲ. ಕಷ್ಟ ಪಟ್ಟು ಮೊದಲ ಸಿನಿಮಾವನ್ನು ನಿರ್ದೇಶಿಸುವ ಅವಕಾಶ ಪಡೆದಿದ್ದೀನಿ. ನೀವು ಭಾರತೀರಾಜರ ಸಿನಿಮಾವನ್ನೇ ಒಪ್ಪುವುದು ಒಳ್ಳೇದುʼʼ ಅಂತಾ ಹೇಳಿ ಪ್ರಿಯಾಮಣಿ ಮತ್ತು ಅವಳಪ್ಪನನ್ನು ಜನನಾಥನ್ ಸಾಗಹಾಕಿದ್ದರು.
ಎಷ್ಟೇ ಪ್ರಯತ್ನಿಸಿದರೂ ನನ್ನ ಸಿನಿಮಾಗೆ ಹೀರೋಯಿನ್ನು ಸಿಗುತ್ತಿಲ್ಲವಲ್ಲಾ? ಅಂತಾ ಚಿಂತಿಸಿಕೊAಡು ಚೆನ್ನೈಗೆ ವಾಪಾಸು ಹೊರಟಿದ್ದರಂತೆ. ಹಾಗೆ ಬರುವ ದಾರಿಯಲ್ಲಿ ಗೋಡೆಮೇಲೊಂದು ಪೋಸ್ಟರ್ ನೋಡಿದವರೆ ʻಯಾರು ಈ ಹುಡುಗಿʼ ಅಂದಿದ್ದರು. ಈಕೆಯ ಹೆಸರು ರಾಧಿಕಾ ಅಂತಾ. ಹೊಸಾ ನಟಿ. ಆದರೂ ಸಿಕ್ಕಾಪಟ್ಟೆ ಬ್ಯುಸಿ ಇದ್ದಾಳೆ. ಒಂದರ ಹಿಂದೊAದು ಅವಕಾಶ ಸಿಗುತ್ತಿವೆ. ಈಕೆ ಸಿಗೋದು ಕಷ್ಟ. ಎಂದು ಹೇಳಿದ್ದ ಮ್ಯಾನೇಜರ್. ಯಾವುದಕ್ಕೂ ಒಂದು ಸಲ ಕೇಳಿ ಹೇಳು ಅಂತಾ ಹೇಳಿ ನಿರ್ದೇಶಕರು ಬೆಂಗಳೂರಿನಿAದ ಚೆನ್ನೈಗೆ ಹೊರಟುಬಿಟ್ಟಿದ್ದರು.
ಈ ವಿಚಾರ ರಾಧಿಕಾ ಕಿವಿಗೆ ಬಿದ್ದಿತ್ತು. ತನ್ನನ್ನು ನೋಡಿ ಒಬ್ಬ ನಿರ್ದೇಶಕರು ವಿಚಾರಿಸಿದ್ದಾರೆ ಅಂದರೆ, ಬೇರೆ ಯಾರೇ ನಟಿಯಾಗಿದ್ದರೂ ʻಹೋ ಹೌದಾʼ ಅಂತಾ ಹೇಳಿ ಸುಮ್ಮನಾಗಿಬಿಡುತ್ತಿದ್ದರೇನೋ… ಆದರೆ ರಾಧಿಕಾ ಹಾಗೆ ಮಾಡಿರಲಿಲ್ಲ. ತಕ್ಷಣ ತಮ್ಮ ಕಾರನ್ನು ಸ್ಟಾರ್ಟ್ ಮಾಡಿಕೊಂಡು, ಡ್ರೈವ್ ಮಾಡಿಕೊಂಡು ಸೀದಾ ಮದ್ರಾಸಿಗೆ ಹೋಗಿ ನಿಲ್ಲಿಸಿದ್ದರು. ಜನನಾಥನ್ ಅವರ ಆಫೀಸಿನ ಹುಡುಗನೊಬ್ಬ ಹೋಗಿ ʻರಾಧಿಕಾ ಅಂತಾ ಯಾರೋ ಬಂದಿದ್ದಾರೆʼ ಎಂದು ಹೇಳಿದ್ದ. ʻಯಾವ ರಾಧಿಕಾ?ʼ.. ʻನೀವು ಕೇಳಿದ್ದರಂತಲ್ಲಾ? ಕನ್ನಡ ಹೀರೋಯಿನ್ʼ… ಜನನಾಥನ್ ಗೆ ಪರಮಾಶ್ಚರ್ಯ. ಆ ಹುಡುಗಿ ಉಪ್ಪುತ್ತಾಳೋ? ಇಲ್ಲವೋ.. ಅಂದುಕೊAಡರೆ, ಆಕೆಯೇ ಇಲ್ಲಿಗೆ ಬಂದಿದ್ದಾಳಾ? ಅಂದವರೇ ಮೊದಲು ಒಳಗೆ ಕಳಿಸು ಅಂದರು. ಒಳ ಬರುವ ಮುಂಚೆ ರಾಧಿಕಾ ಅಲ್ಲಿದ್ದವರನ್ನು ಕೇಳಿದ್ದಳು; ʻನಮಸ್ಕಾರʼ ಅಂತಾ ತಮಿಳಿನಲ್ಲಿ ಹೇಗೆ ಹೇಳೋದು?. ನಿರ್ದೇಶಕರ ಕ್ಯಾಬಿನ್ನಿಗೆ ಹೋದವಳೇ ʻವಣಕ್ಕಂʼ ಅಂದಿದ್ದಳು. ಮಂಗಳೂರಿನಿಂದ ಬಂದು, ಕನ್ನಡ ಚಿತ್ರರಂಗದಲ್ಲಿ ನೆಲೆಯೂರುತ್ತಿದ್ದ, ತಮಿಳು ಭಾಷೆ ಅಂದರೇನು ಅನ್ನೋದು ಕೂಡಾ ಗೊತ್ತಿಲ್ಲದ ಹುಡುಗಿಯ ನಡೆ ನುಡಿ ನಿರ್ದೇಶಕರಿಗೆ ಇಷ್ಟವಾಗಿತ್ತು. ಬೇರೆ ಯೋಚಿಸದೆ ಈಕೆಯೇ ನನ್ನ ಸಿನಿಮಾದ ನಾಯಕಿ ಅಂತಾ ತೀರ್ಮಾನಿಸಿದರು. ಜೊತೆಗಿದ್ದವರೆಲ್ಲಾ ʻಒಂದು ಸಲ ಯೋಚಿಸಿ.. ಅವಳ ಕಿವಿ ಅಗಲ, ನೋಡಲು ಸುಮಾರಾಗಿದ್ದಾಳೆʼ ಅಂತೆಲ್ಲಾ ನಿರ್ದೇಶಕರ ಕಿವಿ ಕಚ್ಚಿದ್ದರು. ಅದಕ್ಕೆಲ್ಲಾ ತಲೆ ಕಡಿಸಿಕೊಳ್ಳದ ಜನನಾಥನ್ ಒಂದು ಸಲ ತೀರ್ಮಾನಿಸಿದ ಮೇಲೆ ಮುಗೀತು ಅಂದಿದ್ದರು.
ಸಿನಿಮಾ ನಿರ್ಮಾಣಗೊಂಡಿತು. ಚಿತ್ರೀಕರಣದ ಸಂದರ್ಭದಲ್ಲಿ ರಾಧಿಕಾ ನಡೆದುಕೊಂಡ ರೀತಿ, ಆಕೆಯ ನಯ ವಿನಯ, ನಟನೆಯಲ್ಲಿನ ತನ್ಮಯತೆಗಳೆಲ್ಲಾ ಇಡೀ ಚಿತ್ರತಂಡವವನ್ನು ಮೋಡಿ ಮಾಡಿತ್ತು. ಸಿನಿಮಾ ತೆರೆಗೆ ಬಂದಮೇಲೆ ನೋಡಿದವರೆಲ್ಲಾ ರಾಧಿಕಾಳನ್ನು ಕೊಂಡಾಡಿದರು. ʻಇಯರ್ಕೈʼ ಹೆಸರಿನ ಆ ಸಿನಿಮಾಗೆ ಅತ್ಯುತ್ತಮ ೨೦೦೪ನೇ ಸಾಲಿನ ಅತ್ಯುತ್ತಮ ಚಿತ್ರ ರಾಷ್ಟç ಪ್ರಶಸ್ತಿ ಲಭಿಸಿತು.
ಪ್ರಿಯಾಂಕಾ ಛೋಪ್ರಾ, ಇಶಾ ಡಿಯೋಲ್, ಪ್ರಿಯಾಮಾಣಿಯ ಪಾಲಾಗಬೇಕಿದ್ದ ಇಯರ್ಕೈ ಚಿತ್ರದ ನಾಯಕಿಯ ಪಾತ್ರ ರಾಧಿಕಾಗೆ ಒಲಿದಿತ್ತು. ರಾಧಿಕಾ ಎಲ್ಲಿಂದ ಬಂದು ಏನೇನಾದಳು ಅನ್ನೋದು ಮುಖ್ಯವಲ್ಲ. ಆಕೆ ಒಪ್ಪಿದ ವೃತ್ತಿಯನ್ನು, ಸಿಕ್ಕ ಪಾತ್ರಗಳನ್ನು ಕಣ್ಣಿಗೆ ಒತ್ತಿಕೊಂಡು ಅಭಿನಯಿಸಿದ ಅಪ್ಪಟ ಕಲಾವಿದೆ. ರಾಧಿಕಾರ ಪ್ರತಿಭೆಯ ಮುಂದೆ ಈಕೆಯ ಮಿಕ್ಕೆಲ್ಲಾ ವಿಚಾರಗಳು ನಗಣ್ಯ…
Comments