ರಾಧಿಕಾ ಕುಮಾರಸ್ವಾಮಿ ತಮ್ಮದೇ ಶಮಿಕಾ ಎಂಟರ್ ಪ್ರೈಸಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿ, ನಟಿಸುತ್ತಿರುವ ಸಿನಿಮಾ ಭೈರಾದೇವಿ. ಈ ಚಿತ್ರದಲ್ಲಿ ರಾಧಿಕಾ ಅಘೋರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರೋದು ಎಲ್ಲರಿಗೂ ತಿಳಿದಿರೋ ವಿಚಾರ. ಆದರೆ ಯಾರಿಗೂ ಗೊತ್ತಿಲ್ಲದ, ಅಗೋಚರ ಶಕ್ತಿಯೊಂದು ಪದೇ ಪದೇ ಭೈರಾದೇವಿಯನ್ನು ಕಾಡುತ್ತಿರೋ ವಿಚಾರ ಇಲ್ಲಿದೆ ಕೇಳಿ.
ಶ್ರೀ ಜಯ್ ನಿರ್ದೇಶನದಲ್ಲಿ, ರಮೇಶ್ ಅರವಿಂದ್, ರವಿಶಂಕರ್, ರಂಗಾಯಣ ರಘು ಮತ್ತು ರಾಧಿಕಾ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರೋ ಸಿನಿಮಾ ಭೈರಾದೇವಿ. ಕೋಟ್ಯಂತರ ರುಪಾಯಿ ಖರ್ಚು ಮಾಡಿ ಚಿತ್ರ ವಿಚಿತ್ರ ಸೆಟ್ಗಳನ್ನು ನಿರ್ಮಿಸಿ ಕಳೆದೊಂದು ವರ್ಷದಿಂದ ನಿರಂತರವಾಗಿ ಈ ಸಿನಿಮಾಗಾಗಿ ಕೆಲಸ ನಿರ್ವಹಿಸಲಾಗುತ್ತಿದೆ. ಕಂಠೀರವ ಸ್ಟುಡಿಯೋ, ಮೋಹನ್ ಬಿ.ಕೆರೆ ಸ್ಟುಡಿಯೋ ಸೇರಿದಂತೆ ನಾನಾ ಕಡೆಗಳಲ್ಲಿ ಭೈರಾದೇವಿಗಾಗಿ ಚಿತ್ರೀಕರಣವನ್ನು ನಡೆಸಲಾಗಿದೆ. ಅದೆಲ್ಲವೂ ಸರಾಗವಾಗಿಯೇ ನೆರವೇರಿದೆ. ಆದರೆ, ಅದೊಂದು ಸ್ಮಶಾನದಲ್ಲಿ ಮಾತ್ರ ಏನೇ ತಿಪ್ಪರಲಾಗ ಹಾಕಿದರೂ ನೆಮ್ಮದಿಯಾಗಿ ಶೂಟಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ.
ದಿನಕ್ಕೊಂದು ಕುರಿ ಬಲಿ!
ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ… ಆ ಸ್ಮಶಾನದಲ್ಲಿ ಚಿತ್ರೀಕರಣ ಆರಂಭಿಸೋ ಮುನ್ನ ಪ್ರತಿ ದಿನ ಬೆಳಿಗ್ಗೆ ಕುರಿಯೊಂದನ್ನು ಬಲಿ ಕೊಡಲಾಗುತ್ತಿದೆ. ಚಿತ್ರೀಕರಣಕ್ಕೂ ಮುಂಚೆ ಸಾಕಷ್ಟು ಪೂಜಾ ವಿಧಿ ವಿಧಾನಗಳನ್ನು ಕೂಡಾ ನಡೆಸಲಾಗಿದೆ. ಏನೇ ಮಾಡಿದರೂ ಕಾಳಿ ಮಾತೆಯ ಅವತಾರದಲ್ಲಿ ರಾಧಿಕಾ ನೃತ್ಯವನ್ನು ಮಾತ್ರ ನೆಮ್ಮದಿಯಾಗಿ ಸೆರೆ ಹಿಡಿಯಲು ಸಾಧ್ಯವಾಗಿಲ್ಲ. ಅದು ಶಾಂತಿ ನಗರದ ರುದ್ರಭೂಮಿ. ಅವತ್ತೊಂದು ದಿನ ಚಿತ್ರೀಕರಣಕ್ಕಾಗಿ ಸಕಲ ತಯಾರಿಯನ್ನೂ ಮಾಡಿಕೊಳ್ಳಲಾಗಿತ್ತು. ಬೃಹತ್ ಶಾಮಿಯಾನವನ್ನು ಹಾಕಿ ಚಿತ್ರತಂಡವನ್ನು ಅಣಿಗೊಳಿಸಲಾಗಿತ್ತು. ಬೆಳಗೆದ್ದು ಶೂಟಿಂಗು ಶುರು ಮಾಡಬೇಕೆಂದುಕೊಂಡಿದ್ದರಷ್ಟೇ. ಅಷ್ಟರಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸಾವಿನ ಸುದ್ದಿ ಬರಸಿಡಿಲಿನಂತೆ ಬಂದು ರಾಚಿತ್ತು. ಅದಕ್ಕೂ ಮುಂಚೆ ಕೂಡಾ ಸಾಕಷ್ಟು ಬಾರಿ ಈ ಶೂಟಿಂಗ್ ನಿಂತ ನಿದರ್ಶನಗಳೂ ಇವೆ. ಇನ್ನು ಇಲ್ಲಿ ಶೂಟಿಂಗ್ ಮಾಡಲು ಸಾಧ್ಯವಿಲ್ಲವೆಂದು ಇಂದಿರಾನಗರದ ಬಳಿಯ ಕಲ್ಲಪಲ್ಲಿ ಸ್ಮಶಾನದಲ್ಲಿ ಚಿತ್ರೀಕರಣ ನಡೆಸಲು ಪ್ಲಾನು ಮಾಡಿದ್ದರು. ಆದರೆ ಅಲ್ಲಿಯೂ ನಾನಾ ರೀತಿಯ ಅಡೆತಡೆಗಳು ಉಂಟಾದವರು. ಕಳೆದ ವಾರ ಮತ್ತೆ ಶಾಂತಿನಗರದ ರುದ್ರಭೂಮಿಯಲ್ಲೇ ಶೂಟಿಂಗ್ ನೆರವೇರಿಸುವ ಪ್ಲಾನು ಮಾಡಿಕೊಂಡು, ಎಂದಿನಂತೆ ಕುರಿಯೊಂದನ್ನು ಬಲಿಕೊಟ್ಟು ಕೆಲಸ ಶುರು ಮಾಡಿದ್ದರಷ್ಟೇ. ಘೋರಿಯೊಂದರ ಮೇಲೆ ನಿಂತು ದೃಶ್ಯಕ್ಕಾಗಿ ನಟಿಸಿ ಕೆಳಗಿಳಿಯುತ್ತಿದ್ದಂತೇ ಆಯತಪ್ಪಿ ಕೆಳಕ್ಕೆ ಬಿದ್ದರು. ತಕ್ಷಣ ಅವರಿಗೆ ಡಾಕ್ಟರ್ ಬಳಿ ಟ್ರೀಟ್ ಮೆಂಟು ಕೊಡಿಸಿದ್ದೂ ಆಯಿತು. ಆದರೆ ಈ ವರೆಗೂ ಅವರ ಬೆನ್ನುಹುರಿಗೆ ಬಿದ್ದ ಪೆಟ್ಟು ಗುಣವಾಗೇ ಇಲ್ಲ. ಈ ಕಾರಣದಿಂದ ಶೂಟಿಂಗ್ ಮತ್ತಷ್ಟು ತಡವಾಗಿದೆ.
ಇದನ್ನೆಲ್ಲಾ ಕಂಡವರು ಭೈರಾದೇವಿಯ ಕುರಿತಾದ ಸಿನಿಮಾವನ್ನು ರೂಪಿಸೋದು ಅಷ್ಟು ಸುಲಭದ ಕೆಲಸವಲ್ಲ. ಅದೂ ಮಾತೆ ಕಾಳಿಯ ವೇಷ ಧರಿಸಿ ಸಿನಿಮಾ ಮಾಡೋದೆಂದರೆ ಸುಮ್ಮನೇ ಮಾತಲ್ಲ. ಅಡಿಗಡಿಗೂ ಇಂಥಾ ಸಂದಿಗ್ಧತೆಗಳು ಎದುರಾಗದೇ ಇರೋದಿಲ್ಲ ಅಂತೆಲ್ಲಾ ಮಾತುಗಳನ್ನಾಡುತ್ತಿದ್ದಾರೆ. ಈ ಹಿಂದೆ ಕೂಡಾ ಅಗೋಚರ ಶಕ್ತಿಗಳ ಕುರಿತಾದ ಸಿನಿಮಾಗಳು ತಯಾರಾದ ಸಂದರ್ಭದಲ್ಲಿ ಇಂಥಾ ವಿಚಿತ್ರ ಘಟನೆಗಳು ನಡೆದ ಉದಾಹರಣೆಗಳಿವೆ. ಈಗ ಭೈರಾದೇವಿಯ ವಿಚಾರದಲ್ಲೂ ಅದು ಮರುಕಳಿಸಿದೆ. ಈ ವಿಚಾರವನ್ನು ನೆನ್ನೆ ಮೊದಲು ಜಾಹೀರು ಮಾಡಿದ್ದು ಸಿನಿಬಜ಼್. ಆ ನಂತರ ಕನ್ನಡದ ಅನೇಕ ಸುದ್ದಿವಾಹಿನಿಗಳು ಇದೇ ಸುದ್ದಿಯನ್ನು ಫಾಲೋ ಮಾಡಿವೆ…