ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ವೃತ್ತಿಜೀವನದಲ್ಲಿ ೩೪ ವರ್ಷಗಳನ್ನು ಪೂರೈಸಿದ್ದಾರೆ. ನೂರಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಸಾಕಷ್ಟು ಸಿನಿಮಾಗಳು ಸೂಪರ್ ಹಿಟ್ ಕೂಡಾ ಆಗಿವೆ. ಅಷ್ಟು ಸಿನಿಮಾಗಳ ನಡುವೆ ಜನ ಪದೇ ಪದೇ ನೆನಪಿಸಿಕೊಳ್ಳೋದು ಮಾತ್ರ ತವರಿಗೆ ಬಾ ತಂಗಿ ಸಿನಿಮಾವನ್ನು. ಕಮರ್ಷಿಯಲ್ ಸಿನಿಮಾಗಳು ಎಷ್ಟೇ ಬಂದರೂ, ಅವುಗಳಲ್ಲಿ ಫ್ಯಾಮಿಲಿ ಸೆಂಟಿಮೆಂಟು ಹೊಂದಿರುವ ಕತೆಗಳು ಮಾತ್ರ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿರುತ್ತದೆ. ಈ ಕಾರಣಕ್ಕೋ ಏನೋ ಶಿವಣ್ಣ ಎಲ್ಲಿ ಹೋದರೂ ಬಂದರೂ ಎದುರಾಗುವ ಸಾಮಾನ್ಯ ಪ್ರಶ್ನೆ ? ಮತ್ತೆ ಯಾವಾಗ ಅಣ್ಣ-ತಂಗಿ ಸಬ್ಜೆಕ್ಟಿನ ಸಿನಿಮಾ ಮಾಡ್ತೀರ ಅನ್ನೋದು.
ಅದಕ್ಕೆ ಶಿವಣ್ಣ ಮೊನ್ನೆ ಹೇಳಿದ್ದು ಒಂದೇ ಮಾತು ? ರಾಧಿಕಾ ಥರದ ನಟಿ ಸಿಕ್ಕ ತಕ್ಷಣ ಅಂಥಾ ಸಿನಿಮಾ ಮಾಡ್ತೀನಿ… ನಿಜ ರಾಧಿಕಾ ಕನ್ನಡ ಚಿತ್ರರಂಗ ಕಂಡ ಅದ್ಭುತ ಕಲಾವಿದೆ. ಈಕೆಯ ಹಿನ್ನೆಲೆ ಮುನ್ನೆಲೆಗಳೇನೇ ಇರಬಹುದು, ಚಿತ್ರರಂಗದಲ್ಲಿ ಮಾತ್ರ ರಾಧಿಕಾ ಬಗ್ಗೆ ಒಳ್ಳೇ ಮಾತುಗಳೇ ಇವೆ. ರಾಧಿಕಾ ಯಾವತ್ತೂ ನಿರ್ಮಾಪಕ, ನಿರ್ದೇಶಕರಿಗೆ ಕಾಟ ಕೊಟ್ಟವಳಲ್ಲ. ದೃಶ್ಯಗಳಲ್ಲಿ ಅಭಿನಯಿಸಲು ಸೈಕಲ್ ಹೊಡೆದವಳಲ್ಲ. ಸಾಯಿಪ್ರಕಾಶ್’ರಂಥ ಅನುಭವೀ ನಿರ್ದೇಶಕನ ಸಿನಿಮಾಗಳಲ್ಲಿ ನಟಿಸಿ ಸೈ ಅನ್ನಿಸಿಕೊಳ್ಳೋದು ಅಂದರೆ ಸುಮ್ಮನೆ ಮಾತಲ್ಲ, ಮಾಲಾಶ್ರೀ, ಶೃತಿ ಮುಂತಾದ ನಟಿಯರು ಸಾಯಿಪ್ರಕಾಶ್ ಜೊತೆಗೆ ಅಷ್ಟು ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದರು. ನಂತರ ರಾಧಿಕಾ ಕೂಡಾ ಅದೇ ಜಾಗದಲ್ಲಿ ಬಂದು ಕೂತವರು.
ಸೆಂಟಿಮೆಂಟು, ಗ್ಲಾಮರ್ರು, ಕಾಮಿಡಿ ಹೀಗೆ ಯಾವುದೇ ಪಾತ್ರವನ್ನು ನಿಭಾಯಿಸಬಲ್ಲ ಕಲಾವಿದೆ ರಾಧಿಕಾ. ಇಡೀ ಇಂಡಸ್ಟ್ರಿಗೆ ಗೊತ್ತಿರುವಂತೆ ಈಕೆ ಸಿಂಗಲ್ ಟೇಕ್ ಆರ್ಟಿಸ್ಟ್. ಅಂದರೆ ಕ್ಯಾಮೆರಾ ಮುಂದೆ ಒಂದಿಷ್ಟೂ ತಿಣುಕಾಡದೆ, ಒಂದೇ ಏಟಿಗೆ ನಟಿಸುವವರು. ಈ ಎಲ್ಲ ಕಾರಣಗಳಿಂದಲೇ ಶಿವಣ್ಣ ಈಗ ರಾಧಿಕಾ ಥರದ ನಟಿ ಸಿಕ್ಕರೆ ಅಣ್ಣ-ತಂಗಿ ಕತೆಯ ಸಿನಿಮಾ ಮಾಡ್ತೀನಿ ಅಂದಿದ್ದು. ಹೇಗೂ ರಾಧಿಕಾ ಈಗ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಶಿವಣ್ಣ, ವಿಜಯರಾಘವೇಂದ್ರರ ಜೊತೆ ಮತ್ತೆ ಸಿನಿಮಾಗಳಲ್ಲಿ ಈಕೆ ಕಾಣಿಸಿಕೊಳ್ಳುವಂತಾಗಲಿ…