ಎಕ್ಸ್ಚೇಂಜ್ 4 ಮೀಡಿಯಾ ಗ್ರೂಪ್ನ ಸಾಪ್ತಾಹಿಕ ನಿಯತಕಾಲಿಕೆಯಾದ ಇಂಪ್ಯಾಕ್ಟ್ ಬಿಡುಗಡೆ ಮಾಡಿದ ದೇಶದ ಅದ್ಭುತ ಮಾಧ್ಯಮ ಸಾಧಕರ ಪಟ್ಟಿಯಲ್ಲಿ ಜೀ ಕನ್ನಡ ಚಾನೆಲ್ನ ಬಿಜ಼ಿನೆಸ್ ಹೆಡ್ ರಾಘವೇಂದ್ರ ಹುಣಸೂರು ಸ್ಥಾನ ಪಡೆದಿದ್ದಾರೆ. ಇಂತಹದೊಂದು ಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾದ ಕನ್ನಡ ಮೀಡಿಯಾದ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಕೂಡ ರಾಘವೇಂದ್ರ ಹುಣಸೂರು ಪಾತ್ರರಾಗಿದ್ದಾರೆ.
ಭಾರತೀಯ ಮಾಧ್ಯಮ, ಮಾರ್ಕೆಟಿಂಗ್ ಮತ್ತು ಜಾಹೀರಾತು ಡೊಮೇನ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ೪೦ ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಗ್ರ ೪೦ ಸಾಧಕರನ್ನು ಗುರುತಿಸಿ ಈ ಪ್ರಶಸ್ತಿ ಪಟ್ಟಿ ಸಿದ್ಧಪಡಿಸಲಾಗಿದೆ. ಈ ಮೊದಲು ಈ ಪಟ್ಟಿಯಲ್ಲಿ ದೇಶದ ೮೪ ಮೀಡಿಯಾ ಸಾಧಕರನ್ನು ಹೆಸರಿಸಲಾಗಿತ್ತು.
೮೪ ಪ್ರಬಲ ಸ್ಪರ್ಧಿಗಳಿದ್ದ ಈ ಪಟ್ಟಿಯಿಂದ ಅತ್ಯುತ್ತಮ ೪೦ ಸಾಧಕರನ್ನು ಮಾತೃಭೂಮಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಎಂ.ವಿ. ಶ್ರೇಯಮ್ಸ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಗಿದೆ. ಪುರುಷರು ಮತ್ತು ಮಹಿಳೆಯರನ್ನು ಒಳಗೊಂಡ ಮಾರ್ಕೆಟಿಂಗ್ ಮಾಧ್ಯಮ ಮತ್ತು ಕ್ರಿಯೇಟಿವ್ ಏಜೆನ್ಸಿ, ಡಿಜಿಟಲ್ ಮತ್ತು ಪಿಆರ್ ವೃತ್ತಿಪರ ೪೦ ವಿಜೇತರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಈ ೪೦ ಉದಯೋನ್ಮುಖ ಸಾಧಕರಿಗೆ ಮುಂಬೈನಲ್ಲಿ ನವೆಂಬರ್ ೨೬ ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಗುತ್ತದೆ.
ಈ ಪ್ರಶಸ್ತಿ ಪಟ್ಟಿ ಆಯ್ಕೆಯಲ್ಲಿ ತೀರ್ಪುಗಾರರಾಗಿದ್ದ ಸದಸ್ಯರು: ಮೇಘಾ ಟಾಟಾ- ಸೌತ್ ಏಷಿಯಾ ಡಿಸ್ಕವರಿ ಕಮ್ಯುನಿಕೇಷನ್ಸ್ ವ್ಯವಸ್ಥಾಪಕ ನಿರ್ದೇಶಕ, ರಾಣಾ ಬರುವ- ಹವಾಸ್ ಗ್ರೂಪ್ ಇಂಡಿಯಾದ ಸಿಇಒ, ಮಹೇಶ್ ಶೆಟ್ಟಿ, ಮುಖ್ಯಸ್ಥ – ನೆಟ್ವರ್ಕ್ ಸೇಲ್ಸ್, ವಯಾಕಾಮ್ ೧೮, ಉದಯ್ ಸೋಧಿ- ಮಾಜಿ ಬಿಸಿನೆಸ್ ಹೆಡ್, ಡಿಜಿಟಲ್, ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಇಂಡಿಯಾ, ಬಸಂತ್ ಧವನ್, ಸಿಇಒ, ಇಂಗ್ಲಿಷ್ ಮತ್ತು ಬಿಸಿನೆಸ್ ನ್ಯೂಸ್ ಕ್ಲಸ್ಟರ್, ನೆಟ್ವರ್ಕ್ ೧೮, ಹಿಂದೂ ಗ್ರೂಪ್ ಮುಖ್ಯ ರೆವಿನ್ಯೂ ಆಫೀಸರ್ ಸುರೇಶ್ ಬಾಲಕೃಷ್ಣ, ಜೆ.ಡಬ್ಲ್ಯು. ಮ್ಯಾರಿಯಟ್, ಜುಹು ಮತ್ತು ಜನಾರ್ಧನ್ ಪಾಂಡೆ, ನೆಟ್ ವ್ಯಾಲ್ಯೂ ಮೀಡಿಯಾ ಪ್ರೈವೇಟ್ ಲಿಮಿಟೆಡ್.
ರಾಘವೇಂದ್ರ ಹುಣಸೂರು ನಿಜವಾದ ಸಾಧಕ. ಕ್ರಿಯಾಶೀಲತೆ ಮತ್ತು ಪರಿಶ್ರಮದಿಂದ ಮಾತ್ರ ಗೆಲುವು ಸಾಧಿಸುತ್ತಾ ಬಂದವರು. “ರಾಘವೇಂದ್ರ ಹುಣಸೂರು ಯಾವುದೇ ವಾಹಿನಿಗೆ ಹೋದರೂ ಆ ವಾಹಿನಿ ಯಶಸ್ಸು ಕಾಣುತ್ತದೆ ಎನ್ನುವ ಮಾತಿದೆ. ಅದು ಸುಮ್ಮನೇ ಘಟಿಸಿಬಿಡಲು ಸಾಧ್ಯವಿಲ್ಲ. ನೋಡುಗರಿಗೆ ಅದೊಂದು ರೀತಿಯಲ್ಲಿ ಮ್ಯಾಜಿಕ್ ಅನ್ನಿಸಬಹುದು. ಆದರೆ ಅದರ ಹಿಂದಿನ ಒದ್ದಾಟಗಳು ಸ್ವತಃ ದುಡಿಯುವವರಿಗೆ ಮಾತ್ರ ಗೊತ್ತು. ವೀಕೆಂಡ್ ವಿತ್ ರಮೇಶ್, ಕಾಮಿಡಿ ಕಿಲಾಡಿಗಳು, ಸರಿಗಮಪ ಮತ್ತು ಡ್ರಾಮಾ ಜೂನಿಯರ್ಸ್ ಮುಂತಾದ ಅದ್ಭುತ ಕಾರ್ಯಕ್ರಮಗಳು ಕರ್ನಾಟಕದ ಜನರನ್ನು ರಂಜಿಸಿದ ರೀತಿ ಮತ್ತು ಆ ಕಾರ್ಯಕ್ರಮಗಳಿಂದ ಸ್ಪರ್ಧಿಗಳು ಬದುಕು ಕಟ್ಟಿಕೊಂಡ ಬಗೆಯೇ ಚೆಂದ. ಇನ್ನು ಜೀ ಟೀವಿಯ ಧಾರಾವಾಹಿಗಳೂ ಅಷ್ಟೇ ಜನಮನ ಸೆಳೆದಿವೆ. ಕಮಲಿ, ಪಾರು ಮತ್ತೀಗ ಜೊತೆಜೊತೆಯಲಿ ತರಹದ ಧಾರಾವಾಹಿಗಳನ್ನು ನೋಡದೆ ಜನ ನಿದ್ರಿಸುತ್ತಿಲ್ಲ. ಇವೆಲ್ಲದರ ಹಿಂದೆ ಇರೋದು ರಾಘವೇಂದ್ರ ಹುಣಸೂರು ಎಂಬ ಶ್ರಮಜೀವಿಯ ನಿರಂತರ ಪ್ರಯತ್ನ. ಈ ನಿಟ್ಟಿನಲ್ಲಿ ನೋಡಿದರೆ ಮಾಧ್ಯಮ ಕ್ಷೇತ್ರದ ಸಾಧಕರಿಗೆ ದೊರೆಯಬಹುದಾದ ಇನ್ನೂ ಅಗ್ರ ಪ್ರಶಸ್ತಿಗಳು ರಾಘವೇಂದ್ರ ಹುಣಸೂರು ಅವರಿಗೆ ದಕ್ಕಬೇಕು. ಅದು ಸಾಧ್ಯವಾಗಲಿ ಅಂತೊಮ್ಮೆ ಆಶಿಸೋಣ…