ರಂಗಭೂಮಿ, ಕಿರುತೆರೆ, ಹಿರಿತೆರೆಗಳಲ್ಲಿ ನಟ, ನಿರ್ದೇಶಕನಾಗಿ ಹೆಸರು ಮಾಡುತ್ತಿರುವ ಪ್ರತಿಭೆ ರಾಘು ಶಿವಮೊಗ್ಗ. ಸಾಮಾನ್ಯಕ್ಕೆ ಸಿನಿಮಾದವರ ಮೀಟಿಂಗುಗಳು ನಡೆಯೋದು, ಸಾಕಷ್ಟು ಪ್ರಾಜೆಕ್ಟ್ಗಳು ಟೇಕಾಫ್ ಆಗುವುದು ಮತ್ತು ಮಾತಿನಲ್ಲೇ ಮುಕ್ತಾಯ ಕಾಣುವುದು ಕಾಫಿ ಡೇನಲ್ಲಿ. ಇಂಥ ಕಾಫಿ ಡೇ ಬಗ್ಗೆ ರಾಘು ಶಿವಮೊಗ್ಗ ಏನಂತಾರೆ?
ನಾನು ಮತ್ತು #Cafe_Coffee_Day
ನಾನು ನೀನಾಸಂ ನಲ್ಲಿ ರಂಗ ಶಿಕ್ಷಣ ತರಬೇತಿ ಮುಗಿಸಿ, 1 ವರ್ಷ ನೀನಾಸಂ ತಿರುಗಾಟದಲ್ಲಿ ಕೆಲಸ ಮಾಡಿ, 2006 ರ ಜೂನ್ 1 ರಂದು ಬೆಂಗಳೂರಿಗೆ ಬಂದೆ. Miller’s ರಸ್ತೆಯಲ್ಲಿ ನಾನು ಕೆಲಸ ಮಾಡುತ್ತಿದ್ದ “Centre For Film & Drama” office ಇತ್ತು. ಪ್ರತಿ ದಿನ ಬಸ್ಸು ಹತ್ತುವುದು, ಇಳಿಯುವುದು ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ. ಅಲ್ಲಿ ಒಂದು Cafe Coffee Day ಇತ್ತು. ಸ್ನೇಹಿತನೊಬ್ಬ, ಇದು ಮಾಜಿ ಮುಖ್ಯಮಂತ್ರಿ S M Krishna ಅವರ ಅಳಿಯನದ್ದು ಎಂದು ಅದರ ಪರಿಚಯ ಮಾಡಿದ. ಅದಕ್ಕಿಂತ ಮುಂಚೆ ನನಗೆ ಇಂಥದ್ದೊಂದು Coffee shop ಇರುತ್ತದೆ, ಅಲ್ಲಿ ದುಬಾರಿ ಬೆಲೆಯ Coffee ಮಾರುತ್ತಾರೆ, ಹಾಗೂ ಜನ ಅದನ್ನು ಕೊಂಡು ಕುಡಿಯುತ್ತಾರೆ ಎಂಬ ಕಲ್ಪನೆಯೂ ನನಗಿರಲಿಲ್ಲ. ಯಾಕೆಂದರೆ ಅದುವರೆಗೆ ನಮ್ಮೂರಲ್ಲಿ 2 ರೂಪಾಯಿಗೆ ಅರ್ಧ ಟೀ ಕುಡಿದು ಮಾತ್ರ ನನಗೆ ಗೊತ್ತಿದ್ದದ್ದು. ಪ್ರತಿ ದಿನ ಆ Coffee Day ನೋಡಿದಾಗಲೆಲ್ಲ ಒಮ್ಮೆ ನಾನೂ ಅಲ್ಲಿ Coffee ಕುಡಿಯಬೇಕು, ಅಷ್ಟೊಂದು ಹಣ ಕೊಟ್ಟು ಕುಡಿಯುವ ಆ ಕಾಫಿಯ ರುಚಿ ಹೇಗಿರುತ್ತೆ ಅಂತ ನೋಡಲೇಬೇಕು ಅನ್ನಿಸ್ತಿತ್ತು. ಆದರೆ ಆ ಕಾಫಿ ಬೆಲೆ ದುಬಾರಿ ಅಂತಷ್ಟೇ ನನಗೆ ಗೊತ್ತಿದ್ದದ್ದು. ಎಷ್ಟು ಬೆಲೆ ಎಂದು ನಿಖರವಾಗಿ ಹೇಳಲು ನನ್ಯಾವ ಸ್ನೇಹಿತರೂ ಅಲ್ಲಿಗೆ ಹೋಗಿ ಬಂದಿರಲಿಲ್ಲ. ನಾನೇ ನೇರವಾಗಿ ಹೋಗಿ ಕೇಳಬೇಕೆನಿಸಿದರೂ, ಅಕಸ್ಮಾತ್ ಬೆಲೆ ಗೊತ್ತಾದಮೇಲೆ ಕಾಫಿ ಕುಡಿಯದೇ ಹಾಗೇ ಬಂದರೆ ಆ Coffee Shop ನವರು ಏನಂದುಕೊಂಡಾರು ಎಂಬ ಕೀಳರಿಮೆಯಿಂದ ಆ ಸಾಹಸಕ್ಕೆ ನಾನು ಕೈ ಹಾಕಲಿಲ್ಲ. ಆದರೆ ದಿನಾ ಅದನ್ನು ನೋಡಿದಾಗಲೆಲ್ಲ ಆಸೆ ಹೆಚ್ಚಾಗುತ್ತಲೇ ಇತ್ತು.
2008 ರಲ್ಲಿ ನಾನು ಹಾಗೂ Suman Priya (ಆಗಿನ್ನೂ ಮದುವೆ ಆಗಿರಲಿಲ್ಲ. Lovers ಅಷ್ಟೇ) ಲಿಡೋ ಮಾಲ್ ನಲ್ಲಿ window shopping ಮುಗಿಸಿ ಹೊರಟೆವು, ಹೊರಗೆ ಜೋರು ಮಳೆ. ಇಬ್ಬರಿಗೂ ಹಸಿವಾಗಿತ್ತು. ಅಲ್ಲೇ ಇದ್ದ Coffee Day ಕಣ್ಣಿಗೆ ಬಿತ್ತು. ಆಗಿದ್ದಾಗಲಿ ನೋಡೇ ಬಿಡೋಣ ಅನ್ನಿಸಿ ಒಳಗೆ ಹೋದೆವು. ಅಲ್ಲಿ ಕೆಲಸ ಮಾಡುವವರು English ನಲ್ಲಿ ಮಾತಾಡಿಸಿದರು. ಅಲ್ಲಿ ಒಂದು ಕಾಫಿಯ ಬೆಲೆ ಸುಮಾರು 80 ರೂ ಇತ್ತು ಎಂದು ಮಸುಕಾಗಿ ನೆನಪು. By two ಕೊಡುವುದಿಲ್ಲವಾ ಅಂತ English ನಲ್ಲಿ ಕೇಳು ಎಂದು ನಾನು ಸುಮನ್ ಗೆ ಹೇಳಿದೆ. ಅವಳು ಬೇಡ ಬಾ ವಾಪಾಸ್ ಹೋಗೋಣ ಅಂದಳು. ಅದೇ ಸಮಯಕ್ಕೆ ಗ್ಲಾಸಿನೊಳಗೆ ಇಟ್ಟಿದ್ದ ಚಿಕನ್ ಬಿರಿಯಾನಿ ನನ್ನ ಕಣ್ಣಿಗೆ ಬಿತ್ತು. ಅದರ ಕೆಳಗೆ 150 Rs ಎಂಬ Board ಇತ್ತು. ಎರಡು ಕಾಫಿಗೆ 160 ರೂ ಕೊಡೋಬದಲು 150 ರೂಪಾಯಿಗೆ ಒಂದು ಚಿಕನ್ ಬಿರಿಯಾನಿ ತಗೊಂಡು ಇಬ್ಬರೂ ತಿನ್ನೋಣ, Coffee Day ಆಸೆಯೂ ತೀರತ್ತೆ, ಊಟನೂ ಆಗತ್ತೆ ಎಂದೆ. ಅವಳೂ ಒಪ್ಪಿದಳು. 150 ರೂ ಕೊಟ್ಟೆ, Table ಗೆ ಚಿಕನ್ ಬಿರಿಯಾನಿ ಬಂತು. ಅಬ್ಬಬ್ಬಾ ಅಂದರೆ 80 ರಿಂದ 100 ಗ್ರಾಂ ಇತ್ತು. ಇಷ್ಟಕ್ಕೆ 150 ಕೊಟ್ವಲ್ಲಾ ಅಂತ ಹೊಟ್ಟೆ ಉರ್ಕೊಂಡು ಇಬ್ಬರೂ ಎರಡೆರಡು ತುತ್ತು ತಿಂದು ಮೂರನೇ ತುತ್ತಿಗೆ ಕೈ ಹಾಕಿದ್ರೆ plate ಖಾಲಿ. ರುಚಿಯೂ ಅತೀ ಕೆಟ್ಟದಾಗಿತ್ತು. ಇನ್ಯಾವತ್ತೂ ಈ Coffee Day ಗೆ ಬರಲೇಬಾರದು ಅಂತ ನಿರ್ಧಾರ ಮಾಡಿ ಅಲ್ಲಿಂದ ಹೊರಟ್ವಿ.
2011ರಲ್ಲಿ ನಾನು ನಾನು ನಟನೆಯಿಂದ ನಿರ್ದೇಶನದ ಕಡೆಗೆ ಮುಖ ಮಾಡಿದ್ದೆ. Udaya ವಾಹಿನಿಗೆ Beesu Suresha Sir ಸಾರಥ್ಯದಲ್ಲಿ Tele Films ಗಳನ್ನು ನಿರ್ದೇಶಿಸಿದ್ದೆ. 2012 ರ ಜೂನ್ ತಿಂಗಳಲ್ಲಿ Zee ವಾಹಿನಿಗೆ ಒಂದು ಧಾರಾವಾಹಿ ಮಾಡೋಣ ಎಂಬ ಸಾಹಸಕ್ಕೆ ಕೈ ಹಾಕಿದೆ. ಆ ಯೋಜನೆಯ ಮೊದಲ Meeting ಕತ್ತರಿಗುಪ್ಪೆ Coffee Day ನಲ್ಲಿ Fix ಮಾಡಿದ್ರು Sunder Veena ಅವರು. ನಾನು ಹಾಗೂ Mounesh L Badiger ಹೋದೆವು. ಅವತ್ತು Coffee Day ನಲ್ಲಿ Coffee ಕುಡಿಯುವ ನನ್ನ ಆಸೆ ಈಡೇರಿತು. ಅಲ್ಲಿ meeting ಆದ ನಂತರ ಕಾರಣಾಂತರಗಳಿಂದ ಆ ಧಾರಾವಾಹಿ ಶುರುವಾಗಲಿಲ್ಲ. ನಂತರ ಅದೇ ವರ್ಷ ನವೆಂಬರ್ ನಲ್ಲಿ Bombay ಮೂಲದ ನಿರ್ಮಾಪಕರೂಬ್ಬರು Colours Kannada ವಾಹಿನಿಗೆ ಧಾರಾವಾಹಿಯೊಂದನ್ನು ನಿರ್ದೇಶಿಸುವ ಆಫರ್ ಕೊಟ್ಟರು. ಆ project ನ ಮೊದಲ Meeting ಬ್ರಿಗೇಡ್ ರಸ್ತೆಯಲ್ಲಿನ Coffee Day ನಲ್ಲಿ ನಡೆಯಿತು. ನಂತರ ಕಾರಣಾಂತರಗಳಿಂದ ಆ ಧಾರಾವಾಹಿಯನ್ನು ನಾನು ನಿರ್ದೇಶನ ಮಾಡಲಿಲ್ಲ. 2013 ರಲ್ಲಿ ಬಿ. ಸುರೇಶ್ ಸರ್ ಮದರಂಗಿ ಧಾರಾವಾಹಿ ನಿರ್ದೇಶನ ಮಾಡುವ ಜವಾಬ್ದಾರಿಯನ್ನು ವಹಿಸಿದರು.
ಮದರಂಗಿಯ ಜೊತೆಗೆ ಆಗಾಗ Tele Film ಗಳನ್ನು ಕೂಡ ನಿರ್ದೇಶಿಸುತ್ತಿದ್ದೆ. 2014 ರಲ್ಲಿ Advaitha Gurumurthy ಪರಿಚಯವಾದರು. ಆಗ ಒಂದು ವಿಶೇಷವಾದ ಕಥೆಯನ್ನು Tele Film ಮಾಡೋಣ ಎಂದು ಇಬ್ಬರೂ Phone ನಲ್ಲಿ ಮಾತಾಡಿಕೊಂಡೆವು. ಆ project ನ ಮೊದಲ ಮಾತುಕತೆ ನಡೆದದ್ದು R R Nagar Coffee Day ನಲ್ಲಿ. ನಂತರ ಕಾರಣಾಂತರಗಳಿಂದ ಆ Tele film ನಾವು ಮಾಡಲಿಲ್ಲ.
2015 ರಲ್ಲಿ ಮದರಂಗಿ ಧಾರಾವಾಹಿ ಮುಗಿಯುವ ಹೊತ್ತಿಗೆ ಪವನ್ ಒಡೆಯರ್ ಅವರು ಮತ್ತು ನಾನು Suvarna ವಾಹಿನಿಗೆ ಧಾರಾವಾಹಿಯೊಂದನ್ನು ಮಾಡುವ ಬಗ್ಗೆ RPC Layout Coffee Day ನಲ್ಲಿ ಮೊದಲ ಮಾತುಕತೆ ನಡೆಸಿದೆವು. ಆ Serial ಕೂಡ ಶುರುವಾಗಲಿಲ್ಲ.
ನಂತರ ಅದೇ ವರ್ಷ ಚೌಕಬಾರ ಕಿರುಚಿತ್ರ ಮಾಡುವ ಬಗ್ಗೆ ಅದ್ವೈತ ಅವರಿಗೆ call ಮಾಡಿದೆ. BSK 2nd Stage Coffee Day ನಲ್ಲಿ Meet ಮಾಡೋಣ ಅಂದರು ಅದ್ವೈತ. ನನಗೆ ಏನನ್ನಿಸಿತೋ ಗೊತ್ತಿಲ್ಲ. Coffee Day ಬೇಡ, ಅಲ್ಲಿ meeting ಮಾಡಿದ ನನ್ನ ಯಾವ Project ಕೂಡ ಶುರುವಾಗಲಿಲ್ಲ, ಬೇರೆ ಎಲ್ಲಾದರೂ ಸಿಗೋಣ ಅಂದೆ. ಅದ್ವೈತ ಕೂಡ ಒಪ್ಪಿದರು. ನಂತರ ಪದ್ಮನಾಭ ನಗರದಲ್ಲಿದ್ದ ಅಗರವಾಲ್ ಎಂಬ Hotel ನಲ್ಲಿ ಭೇಟಿ ಮಾಡಿ ಮಾತಾಡಿದೆವು. ಆಮೇಲೆ ಚೌಕಬಾರ ಕಿರುಚಿತ್ರ ಮಾಡಿದೆವು. ಅದು ಯಶಸ್ವಿಯೂ ಆಯಿತು, ಪ್ರಶಸ್ತಿಯೂ ಸಿಕ್ಕಿತು. ಅಲ್ಲಿಂದ ನನ್ನ ತಲೆಯೊಳಗೆ Coffee Day ಗೂ ನನಗೂ ಆಗಿಬರಲ್ಲ ಎಂಬ ಮೂಢ ನಂಬಿಕೆ ಆಳವಾಗಿ ಬೇರೂರಿತು. ಚೌಕಬಾರದ ನಂತರ 2016 ರಲ್ಲಿ ಚೂರಿಕಟ್ಟೆ ಸಿನಿಮಾಗಾಗಿ ನಿರ್ಮಾಪಕರ ಹುಡುಕಾಟದಲ್ಲಿದ್ದಾಗ ಒಬ್ಬ ನಿರ್ಮಾಪಕರು ಪುಟ್ಟೇನಹಳ್ಳಿ Coffee Day ಗೆ ಬರಲು ಹೇಳಿದರು. Coffee Day ಬೇಡ Sir, ನನಗೂ ಆ ಜಾಗಕ್ಕೂ ಆಗಲ್ಲ ಎಂದು ಹೇಳಬೇಕೆನಿಸಿದರೂ, ನಿರ್ಮಾಪಕರಲ್ಲವಾ, ಆಮೇಲೆ meeting cancel ಮಾಡಿಬಿಟ್ಟಾರು ಅನ್ನೋ ಭಯದಿಂದ ಸರಿ ಎಂದು ತೆಪ್ಪಗೆ ಹೋದೆ. ಕಾಕತಾಳೀಯ ಎಂಬಂತೆ ಆ ನಿರ್ಮಾಪಕರ ಜೊತೆ ನಾನು ಚೂರಿಕಟ್ಟೆ ಮಾಡಲಿಲ್ಲ. ಆವಾಗಿನಿಂದ ಇಲ್ಲಿಯವರೆಗೂ Coffee Day ನಲ್ಲಿ meet ಮಾಡೋಣ ಎಂದು ಯಾರಾದರೂ ಹೇಳಿದರೆ, ಇದು ಆಗಿ ಹೋಗೋದಲ್ಲ ಅಂತ ನಾನು ಮೊದಲೇ ಅಂದುಕೊಂಡು ಹೋಗುತ್ತೇನೆ. ನನ್ನ ಮೂಢ ನಂಬಿಕೆಯಂತೆ ಅದು ಹಾಗೇ ಆಗುತ್ತದೆ ಕೂಡ. ಉದಾಹರಣೆಗೆ ತಿಂಗಳ ಹಿಂದೆ ಕೂಡ ಒಬ್ಬ ನಿರ್ಮಾಪಕರು Coffee Day ಗೆ ಕರೆಸಿ ಮಾತಾಡಿದ್ರು. ಕಥೆ ಹೇಳಿದೆ. ಆ ಕಥೆಗೆ ಅವರೇ Hero ಆಗಬೇಕು ಅಂದ್ರು, ಅದಾಗಲ್ಲ ಅನಿಸಿ ವಾಪಾಸ್ ಬಂದೆ.
ಇಷ್ಟೆಲ್ಲಾ ನೆನಪಾಗೋಕೆ ಕಾರಣ, ನೆನ್ನೆ ರಾತ್ರಿ 3 ಗಂಟೆ 50 ನಿಮಿಷಕ್ಕೆ ನನ್ನ ಹೆಂಡತಿ mobile ring ಆಯ್ತು. ಇಷ್ಟೊತ್ತಲ್ಲಿ ಯಾರು ಎಂದು ಇಬ್ಬರಿಗೂ ಎಚ್ಚರ ಆಯ್ತು. ಆ ಕಡೆಯಿಂದ ಅವಳ ಸಹೋದ್ಯೋಗಿಯೊಬ್ಬರು, Coffee Day Owner ಸಿದ್ಧಾರ್ಥ ಅವರು ಕಾಣೆಯಾಗಿದ್ದಾರೆ ಎಂಬ ವಿಷಯ ತಿಳಿಸಿ, ತಕ್ಷಣ ಅದನ್ನು ಬರೆದು ಕಳುಹಿಸಿ ಎಂದರು. ಇವಳೂ ಕಣ್ಣುಜ್ಜಿಕೊಂಡು ಆ ಪ್ರಕರಣದ ವಿವರ ಸಂಗ್ರಹಿಸಿ ಬರೆದು ಕಳಿಸಿದಳು.
ಈಗ ಸ್ವಲ್ಪ ಹೊತ್ತಿನ ಮುಂಚೆ Facebook ನಲ್ಲಿ, ಸಿದ್ಧಾರ್ಥ ಅವರು ವ್ಯಾಪಾರದಲ್ಲಿ ನಷ್ಟ ಆಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ವದಂತಿಯೊಂದನ್ನು ಓದಿದೆ. ತುಂಬಾ ಬೇಜಾರಾಯಿತು. ವ್ಯಾಪಾರದಲ್ಲಿ ನಷ್ಟ ಹೊಂದಿ ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿ ಅವರಲ್ಲ ಎಂಬುದು ನನ್ನ ನಂಬಿಕೆ. ಯಾಕಂದ್ರೆ ನಾನು ಕೇಳಿಪಟ್ಟಂತೆ ಅವರೊಬ್ಬ Successful Businessman. ಜತೆಗೆ ಸಾಕಷ್ಟು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅವರ ಸಾವಿಗೆ ಕಾರಣ ಏನೇ ಇರಬಹುದು. ಆದರೆ ಒಬ್ಬ ಯಶಸ್ವಿ ಉದ್ಯಮಿಯನ್ನು ಕಳೆದುಕೊಂಡೆವು ಎಂದಷ್ಟೇ ನಾನು ವಿಷಾಧ ವ್ಯಕ್ತಪಡಿಸಬಹುದು. ಅವರ ಆತ್ಮಕ್ಕೆ ಶಾಂತಿ ದೊರೆಯಲಿ…