ಕುಟುಂಬವನ್ನು ಅಪಾರವಾಗಿ ಪ್ರೀತಿಸುವ, ತಮ್ಮ ಸಿನಿಮಾಗಳಲ್ಲೂ ಬಾಂಧವ್ಯಕ್ಕೇ ಮಹತ್ವ ಕೊಡುವ ನಿರ್ದೇಶಕ, ನಟ ಡಿ.ಪಿ. ರಘುರಾಮ್. ವರ್ಷದ ಹಿಂದೆ ತಾಯಿ ಇಂದ ದೂರವಾದ ಮಗ, ಮತ್ತೆ ತಾಯಿಯನ್ನು ಸೇರುವ ʻಮಿಸಿಂಗ್ ಬಾಯ್ʼ ಚಿತ್ರವನ್ನು ತೆರೆಗೆ ತಂದಿದ್ದರು. ಆ ಸಿನಿಮಾ ರಿಲೀಸಾಗುವ ಮುಂಚೆಯೇ ಅವರ ತಾಯಿ ವಿಧಿವಶರಾಗಿದ್ದರು. ಆ ನೋವಿನಿಂದಲೇ ಇನ್ನೂ ಹೊರಬರದ ರಘುರಾಮ್ ಪಾಲಿಗೆ ನಿನ್ನೆ ಮತ್ತೊಂದು ನೋವು ಆವರಿಸಿಕೊಂಡಿದೆ. ಕಳೆದ ಕೆಲವು ವರ್ಷಗಳಿಂದ ಸರ್ವೈಕಲ್ ಮೈಲೋಪತಿ ನ್ಯೂರಾಲಾಜಿಕಲ್ ಡಿಸಾರ್ಡರ್ ಗೆ ಒಳಗಾಗಿದ್ದ ರಘು ಅವರ ತಂದೆ ಡಿ.ಆರ್. ಪುಣ್ಯಮೂರ್ತಿಯವರು ಕೊನೆಯುಸಿರೆಳೆದಿದ್ದಾರೆ.
ಅನಾರೋಗ್ಯದಿಂದ ಮಲಗಿದ್ದ ತಂದೆಯನ್ನು ರಘುರಾಮ್ ದಂಪತಿ ತೀರಾ ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದರು. ಎಪ್ಪತ್ತಾರರ ತಂದೆಯನ್ನು ಇನ್ನಷ್ಟು ಕಾಲ ಉಳಿಸಿಕೊಳ್ಳಬೇಕು ಅನ್ನೋದು ರಘುರಾಮ್ ಬಯಕೆಯಾಗಿತ್ತು. ಆದರೆ ಮಗ, ಸೊಸೆಯ ಬಯಕೆಗಳಿಗೆ ಸ್ಪಂದಿಸದ ಪುಣ್ಯಮೂರ್ತಿಗಳು ನಿನ್ನೆ ಎದ್ದು ನಡೆದಿದ್ದಾರೆ.
ಸದ್ಯ ಕೊವಿಡ್ ಸಮಸ್ಯೆ ಇರುವುದರಿಂದ ಪುಣ್ಯಮೂರ್ತಿಯವರ ನಿರ್ಗಮನದ ವಿಚಾರವನ್ನು ಹೆಚ್ಚು ಮಂದಿಗೆ ತಿಳಿಸಲಾಗಿಲ್ಲ. ನಿನ್ನೆ ಮಧ್ಯಾಹ್ನ ಹನ್ನೆರಡೂ ಮುಕ್ಕಾಲರ ಸುಮಾರಿಗೆ ತೀರಿಕೊಂಡ ಪುಣ್ಯಮೂರ್ತಿಯವರ ಪಾರ್ಥೀವ ಶರೀರಕ್ಕೆ ಸಂಜೆಯ ಹೊತ್ತಿಗೆ ಚಾಮರಾಜಪೇಟೆಯ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ. ರಘುರಾಮ್ ತಂದೆ ಇಹಲೋಕ ತ್ಯಜಿಸಿದ ವಿಚಾರ ತಿಳಿದ ಚಿತ್ರರಂಗದ ಗಣ್ಯರು, ರಘುರಾಮ್ ಅವರ ಆತ್ಮೀಯರು ಕಂಬನಿ ಮಿಡಿದಿದ್ದಾರೆ.
ಜೋಗಿ ಸಿನಿಮಾ, ಅದರಲ್ಲಿ ಬರುವ ತಾಯಿ-ಮಗನ ಸೆಂಟಿಮೆಂಟು, ಅವರಿಬ್ಬರ ನಡುವೆ ನಿಲ್ಲುವ ಯೋಗಿಯ ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿದ್ದವರು ರಘುರಾಮ್. ನಿಜ ಜೀವನದಲ್ಲೂ ತಾಯಿ, ತಂದೆಯನ್ನು ಕಳೆದುಕೊಂಡು ರಘುರಾಮ್ ಅನುಭವಿಸುತ್ತಿರುವ ನೋವು ಅಪಾರ. ಈ ವ್ಯಾಕುಲಗಳಿಂದ ಹೊರಬರುವ ಶಕ್ತಿ ರಘುರಾಮ್ ಕುಟುಂಬಕ್ಕೆ ದಕ್ಕಲಿ.
Comments