ಸಿನಿಮಾದಲ್ಲಿ ಒಮ್ಮೆ ಗಂಡನಾದವನು ಮತ್ತೊಮ್ಮೆ ತಂದೆಯಾಗಬಹುದು, ತಾಯಿಯಾದವಳು ಹೆಂಡತಿಯಾಗಬಹುದು, ಪೊಲೀಸ್ ಆದವನು ಕಳ್ಳನಾಗಬಹುದು, ಕಳ್ಳನಾದವನು ಮುಖ್ಯಮಂತ್ರಿಯೂ ಆಗಬಹುದು ಅಲ್ಲವೇ. ಈಗೀಗ ಅದು ವಾಸ್ತವಕ್ಕೂ ಅನ್ವಯವಾಗುತ್ತಿದೆ ಇರಲಿ. ಗಾಯಕನಾಗಿ ಇಷ್ಟು ದಿನ ವಿಶ್ವವಿಖ್ಯಾತಿ ಗಳಿಸಿದ್ದ ರಘು ದೀಕ್ಷಿತ್ ಇದೀಗ ಗುಪ್ತಚರ ಅಧಿಕಾರಿಯಂತೆ. ಹೌದು ರಘು ದೀಕ್ಷಿತ್ ನಿಜ ಜೀವನದಲ್ಲಿ ಗಾಯಕನಾಗಿ ಗುರುತಿಸಿಕೊಂಡಿದ್ದರೆ, ಮೊದಲ ಬಾರಿಗೆ ರೀಲ್ ಕಥೆಯಲ್ಲಿ ರೀಲ್ ಗುಪ್ತಚರ ಅಧಿಕಾರಿಯಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಧನು ಕುಮಾರ್ ನಿರ್ದೇಶನದ ಗರುಡ ಅನ್ನೋ ಚಿತ್ರದಲ್ಲಿ ರಘು ದೀಕ್ಷಿತ್ ತುಂಬಾ ವಿಶೇಷವಾದ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ರನ್ನು ಹೋಲುವ ಪಾತ್ರದಲ್ಲಿ ರಘು ದೀಕ್ಷಿತ್ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ರಿವೀಲ್ ಆಗಿರೋ ಚಿತ್ರದ ಸ್ಟಿಲ್ಸ್ನಲ್ಲಿ ರಘು ಸೂಟ್ ಹಾಕ್ಕೊಂಡು, ಕಪ್ಪು ಕನ್ನಡಕ ಧರಿಸಿ ಸ್ಟ್ರಿಕ್ಟ್ ಆಫೀಸರ್ನಂತೆ ಕಾಣಿಸುತ್ತಿದ್ದು, ಅವರ ಅಭಿನಯ ಹೇಗಿರುತ್ತದೆ ಎನ್ನುವ ಕುತೂಹಲ ಸದ್ಯಕ್ಕಿದೆ. ಈ ಚಿತ್ರದಲ್ಲಿ ಸಿದ್ಧಾರ್ಥ್ ಮಹೇಶ್, ಆಶಿಕಾ ರಂಗನಾಥ್, ಐಂದ್ರಿತಾ ರೇ ಮುಖ್ಯ ಭೂಮಿಕೆಯಲ್ಲಿದ್ದಾರೆ. ಹೊಸ ತಲೆಮಾರಿನ ವಿಶಿಷ್ಟ ಸಂಗೀತ ಸಂಯೋಜನೆ ಮೂಲಕ ಹೆಸರಾಗಿರೋ ರಘು ಅವರದ್ದು ಸ್ವಲ್ಪ ಇಂಡಿಪಾಪ್ ಶೈಲಿಯ ಮ್ಯೂಸಿಕ್ ಎನ್ನಬಹುದು. ತಮ್ಮ ‘ದಿ ರಘು ದೀಕ್ಷಿತ್ ಪ್ರಾಜೆಕ್ಟ್’ ಮೂಲಕ ದೇಶ ವಿದೇಶಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನ ನೀಡಿ ಹೆಸರಾಗಿರೋ ರಘು, ಈಗ ತೆರೆಮೇಲೆ ರಾರಾಜಿಸೋಕೆ ತುದಿಗಾಲಿನಲ್ಲಿದ್ದಾರೆ. ನೋಡೋಕೆ ಅಭಿಮಾನಿಗಳು ಕೂಡ.
.