ಲಾಕ್ ಡೌನ್ ನಂತರ ಮೊದಲು ಬಿಡುಗಡೆಯಾಗಿ ಗೆದ್ದಿರುವ ಏಕೈಕ ಸಿನಿಮಾ ಆಕ್ಟ್ 1978. ಇದರಲ್ಲಿ ʻಪವಿತ್ರ ಹೆಂಗಸಿನ ದೇಹವನ್ನು ಹೊಕ್ಕಿರುವ ಪರಮ ಪಾಪಿ ಸೈತಾನನೇ…. ನನ್ನ ರಕ್ತದ ಒಡೆಯ ಏಸುವಿನ ನಾಮದಲ್ಲಿ ಆಗ್ರಹಪಡಿಸುತ್ತಿದ್ದೇನೆ….ʼ ಎನ್ನುತ್ತಾ ಕೈಲಿ ಶಿಲುಬೆ ಹಿಡಿದು ಜಪಿಸುತ್ತಲೇ ಫೇಮಸ್ ಆಗಿರುವ ಕ್ಯಾರೆಕ್ಟರು ಬೆಂಜಮೀನ್…

ಸಿಕ್ಕಾಪಟ್ಟೆ ಸೀರಿಯಸ್ ಸಬ್ಜೆಕ್ಟಿನ ಈ ಸಿನಿಮಾದಲ್ಲಿ ಎಂಥವರನ್ನೂ ನಗಿಸುವ ಪಾತ್ರದಲ್ಲಿ ನಟಿಸಿರೋದು ವರ್ಷಗಳ ಹಿಂದೆ ರಿಲೀಸ್ ಆಗಿ ಹೆಸರು ಮಾಡಿದ್ದ ಚೂರಿಕಟ್ಟೆ ಸಿನಿಮಾದ ನಿರ್ದೇಶಕ ರಾಘು ಶಿವಮೊಗ್ಗ. ಡೈರೆಕ್ಟರ್ ಮನ್ಸೋರೆಗೆ ಅದ್ಯಾವ ಘಳಿಗೆಯಲ್ಲಿ ಬೆಂಜಮೀನ್ ಪಾತ್ರವನ್ನು ರಾಘುಗೆ ನೀಡಬೇಕು ಅನಿಸಿತೋ ಗೊತ್ತಿಲ್ಲ. ಕೆಲ ವರ್ಷಗಳಿಂದ ನಟನೆಯಿಂದ ಸ್ವಲ್ಪ ದೂರವೇ ಇದ್ದು ನಿರ್ದೇಶನದ ಕಡೆಗೆ ಹೆಚ್ಚು ಗಮನ ನೀಡುತ್ತಿದ್ದವರು ಶಿವಮೊಗ್ಗದ ರಾಘು. ಆಕ್ಟ್ ಸಿನಿಮಾದ ಕಾರಣಕ್ಕೆ ಅವರಿಗೆ ಈದೀಗ ನಟನೆಗೆ ಎಲ್ಲಿಲ್ಲದ ಬೇಡಿಕೆ ಶುರುವಾಗಿಬಿಟ್ಟಿದೆ….!

ರಾಘು ಶಿವಮೊಗ್ಗ ಇದೀಗ ಕನ್ನಡ ಚಿತ್ರರಂಗದ ಭರವಸೆಯ ಯುವ ನಿರ್ದೇಶಕ. ಈ ಹಿಂದೆ ಚೌಕಬಾರ ಎಂಬ ಕಿರು ಚಿತ್ರ ನಿರ್ದೇಶನ ಮಾಡುವ ಮೂಲಕ ಎಲ್ಲರ ಗಮನ ಸೆಳೆದವರು ರಾಘು. ಕಿರುಚಿತ್ರವಾಗಿ ಬಿಡುಗಡೆ ಕಂಡರೂ ಯಾವ ಸಿನಿಮಾಗೂ ಸರಿಸಮವಾಗಿ ಸದ್ದು ಮಾಡಿದ್ದ ಚೌಕಬಾರದ ನಂತರ ರಾಘು ಕೈಗೆತ್ತಿಕೊಂಡಿದ್ದ ಚಿತ್ರ ಚೂರಿಕಟ್ಟೆ. ಟಿಂಬರ್ ಮಾಫಿಯಾದ ಮೂಲಕವೇ ಮಲೆನಾಡಿನ ಅಗಾಧ ಸೌಂದರ್ಯ, ಅದರೊಳಗಿನ ತಲ್ಲಣ, ಬದುಕುಗಳನ್ನು ಅನಾವರಣಗೊಸಿದ್ದ ಈ ಚಿತ್ರ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆಯನ್ನೂ ಪಡೆದುಕೊಂಡಿತ್ತು.

ವಿಶೇಷವೆಂದರೆ ರಾಘು ಶಿವಮೊಗ್ಗ ಮೂಲತಃ ಪ್ರತಿಭಾವಂತ ನಟ. ಆರಂಭ ಕಾಲದಿಂದಲೂ ನಟನಾಗೋ ಕನಸು ಕಾಣುತ್ತಲೇ ಬೆಳೆದ, ಆ ಕನಸಿಗೆ ಪೂರಕವಾಗಿಯೇ ಹೆಜ್ಜೆಯಿಡುತ್ತಾ ಬಂದ ಅವರು ನಿರ್ದೇಶನದತ್ತ ಆಕರ್ಷಿತರಾದದ್ದೇ ನಿಜವಾದ ಅಚ್ಚರಿ. ಬಹುಶಃ ಕಂಡ ಕನಸಿನ ಹಾದಿಯಲ್ಲಷ್ಟೇ ಹೆಜ್ಜೆ ಇಟ್ಟಿದ್ದರೆ ಈವತ್ತಿಗೆ ರಾಘು ಕಿರುತೆರೆ ಮತ್ತು ಚಿತ್ರರಂಗದಲ್ಲಿ ಬ್ಯುಸಿ ನಟನಾಗಿರುತ್ತಿದ್ದರು. ಆದರೆ ಅವರೊಳಗಿನ ಕ್ರಿಯೇಟಿವಿಟಿ, ಹೊಸತೇನನ್ನೋ ಸೃಷ್ಟಿಸುವ ಹಂಬಲವೇ ಅವರನ್ನು ನಿರ್ದೇಶಕನನ್ನಾಗಿ ರೂಪಿಸಿದೆ.

ಈ ನಡುವೆ ಆಕ್ಟ್ 1978 ಚಿತ್ರದ ಗೆಲುವಿನಿಂದ ರಾಘು ಅವರೊಳಗೆ ವಿಶ್ರಾಂತ ಸ್ಥಿತಿಯಲ್ಲಿದ್ದ ನಟ ದಿಢೀರನೆ  ಎದ್ದು ನಿಂತು ಚಟುವಟಿಕೆ ಆರಂಭಿಸಿದ್ದಾನೆ. ಭಾಸ್ಕರ್ ನೀನಾಸಂ ನಿರ್ದೇಶನದ ಸದ್ದು! ವಿಚಾರಣೆ ನಡೆಯುತ್ತಿದೆ ಚಿತ್ರದಲ್ಲೂ ರಾಘು ಅವರಿಗೆ ಪ್ರಮುಖ ಪಾತ್ರ ದೊರೆತಿದೆ. ಇದಲ್ಲದೇ ರಾಘು ನಟನೆಯ ಸಾಕಷ್ಟು ಸಿನಿಮಾಗಳು ಸದ್ಯದಲ್ಲೇ ಆರಂಭಗೊಳ್ಳಲಿವೆ. ಗುರುದೇಶಪಾಂಡೆ ಸಾರಥ್ಯದಲ್ಲಿ ರೂಪುಗೊಳ್ಳುತ್ತಿರುವ ಐದು ಜನ ನಿರ್ದೇಶಕರ ಒಂದೇ ಸಿನಿಮಾದಲ್ಲಿ ರಾಘು ಕೂಡಾ ಒನ್ ಆಫ್ ದಿ ಡೈರೆಕ್ಟರ್ ಆಗಿದ್ದಾರೆ. ನಿರ್ದೇಶನ, ನಟನೆ ಎರಡೂ ವಿದ್ಯೆಗಳು ರಾಘು ಅವರಿಗೆ ಸಿದ್ಧಿಸಿದೆ.

ಮೂಲತಃ ಶಿವಮೊಗ್ಗದ ರಾಘು ಮಲೆನಾಡಿನ ಸೂಕ್ಷ್ಮ ಕದಲಿಕೆಗಳಿಗೆ ಕಣ್ಣಾಗುತ್ತಾ ಬೆಳೆದವರು. ಶಾಲಾ ಕಾಲೇಜು ದಿನಗಳಲ್ಲಿಯೇ ನಟನಾಗೋ ಹುಚ್ಚಿತ್ತಲ್ಲಾ? ಅದು ಸೀದಾ ಕೈ ಹಿಡಿದು ಕರೆದೊಯ್ದು ಬಿಟ್ಟಿದ್ದು ಪಕ್ಕದಲ್ಲೇ ಇದ್ದ ಹೆಗ್ಗೋಡಿನ ನೀನಾಸಂಗೆ. 2004ರಲ್ಲಿ ನೀನಾಸಂ ಸೇರಿಕೊಂಡ ರಾಘು 2005ರ ಹೊತ್ತಿಗೆಲ್ಲ ನಟನಾ ತರಬೇತಿ ಶುರು ಮಾಡಿಕೊಂಡಿದ್ದರು. ಆ ನಂತರದ್ದೆಲ್ಲವೂ ಅಭಿನಯವೇ ಉಸಿರಾದ ರಂಗಭೂಮಿಯ ಯಾನ. ಹೀಗೆ ಬಲು ಆಸ್ಥೆಯಿಂದ ನಟನೆಯಲ್ಲಿ ಪಳಗಿಕೊಂಡ ಅವರು 2005ರಲ್ಲಿ ನಟನಾಗಿ ಬೆಳೆಯುವ ಅಗಾಧ ಆಸೆ ಹೊತ್ತು ಬೆಂಗಳೂರಿಗೆ ಬಂದಿಳಿದಿದ್ದರು.

ಹಾಗೆ ಬಂದ ರಾಘು ಶಿವಮೊಗ್ಗ ಪ್ರಕಾಶ್ ಬೆಳವಾಡಿಯವರ ಗರಡಿ ಸೇರಿಕೊಂಡಿದ್ದರು. ಅಲ್ಲಿ ಥೇಟರ್ ಇಂಚಾರ್ಜ್, ಲೈಟಿಂಗ್ ಡಿಸೈನ್ ಮುಂತಾದವುಗಳ ಜೊತೆಗೇ ನಟನೆಯಲ್ಲಿಯೂ ತೊಡಗಿಸಿಕೊಂಡು ಕಿರುತೆರೆಯತ್ತ ಪಾದಾರ್ಪಣೆ ಮಾಡೋ ಹಾದಿಗಾಗಿ ಕಾದು ಕೂತಿದ್ದರು. ಕಡೇಗೂ ಕೆ.ಎಂ. ಚೈತನ್ಯ ನಿರ್ದೇಶನದಲ್ಲಿ ಈಟಿವಿಯಲ್ಲಿ ಮೂಡಿ ಬಂದಿದ್ದ ಮುಗಿಲು ಧಾರಾವಾಹಿಯಲ್ಲಿ ಮೊದಲ ಸಲ ಅವರಿಗೆ ನಟಿಸೋ ಅವಕಾಶ ಸಿಕ್ಕಿತ್ತು. ಪ್ರಕಾಶ್ ಬೆಳವಾಡಿಯವರ ಜೊತೆಗಿದ್ದುಕೊಂಡು ರಂಗಭೂಮಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳೋದರ ಜೊತೆಗೇ ಸೀರಿಯಲ್ ನಟನೆಯಲ್ಲಿಯೂ ಬ್ಯುಸಿಯಾದರು. ಮುಕ್ತ ಮುಕ್ತ ಸೇರಿದಂತೆ ಹನ್ನೆರಡಕ್ಕೂ ಹೆಚ್ಚಿನ ಧಾರಾವಾಹಿಗಳಲ್ಲಿ ಚೆಂದದ ಪಾತ್ರಗಳ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾದರು.

ಈ ನಡುವೆ ಪ್ರಕಾಶ್ ಬೆಳವಾಡಿಯವರ ಗರಡಿಯಲ್ಲಿನ ಅಪ್ಪಟ ಸಿನಿಮಾ ವಾತಾವರಣ ಅವರನ್ನು ಮೆಲ್ಲಗೆ ನಿರ್ದೇಶನದತ್ತ ಆಸಕ್ತಿ ಹೊಂದುವಂತೆ ಮಾಡಿತ್ತು. ಅಲ್ಲಿ ಪ್ರತೀ ತಿಂಗಳು ಇಪ್ಪತ್ತರಿಂದ ಮೂವತ್ತು ಶ್ರೇಷ್ಠ ಸಿನಿಮಾಗಳ ಪ್ರದರ್ಶನ ನಡೆಯುತ್ತಿತ್ತು. ಜಗತ್ತಿನ ಎಲ್ಲಾ ಚೆಂದದ ಸಿನಿಮಾ ಪ್ರದರ್ಶನ ಮಾತ್ರವಲ್ಲದೇ ಆ ಬಗ್ಗೆ ಸಂವಾದವೂ ನಡೆಯುತ್ತಿತ್ತು. ಅದೆಲ್ಲದರಲ್ಲಿಯೂ ರಾಘು ಶಿವಮೊಗ್ಗ ಭಾಗಿಯಾಗುತ್ತಿದ್ದರು. ಈ ನಡುವೆ ಫಿಲಂ ಮೇಕಿಂಗ್ ಕೋರ್ಸ್ ಒಂದನ್ನು ಬೆಳವಾಡಿ ಆರಂಭಿಸಿದ್ದರು. ಆ ತರಗತಿಗಳಲ್ಲಿ ಅದೇನೇ ಕೆಲಸ ಇದ್ದರೂ ಭಾಗಿಯಾಗುವಂತೆ ಪ್ರಕಾಶ್ ಬೆಳವಾಡಿಯವರೇ ಆಜ್ಞಾಪಿಸಿದ್ದರು. ಅದನ್ನು ಪರಿಪಾಲಿಸಿದ ರಾಘು ಅವರೊಳಗೆ ನಿರ್ದೇಶನದ ಕನಸು ಮತ್ತಷ್ಟು ಬಲವಾಗಿತ್ತು.

ಈ ನಡುವೆ ಮಕ್ಕಳ ರಂಗಭೂಮಿ ಬಗ್ಗೆ ಒಂದು ಡಾಕ್ಯುಮೆಂಟರಿ ಮಾಡಿದ ರಾಘು ನಂತರ ಮಲೆಯಾಳಂನ ಖ್ಯಾತ ಸಾಹಿತಿ ವೈಕಂ ಅವರ ಪ್ರೇಮಲೇಖನಂ ಎಂಬ ಪುಸ್ತಕ ಆಧರಿಸಿ ನಿರೀಕ್ಷೆ ಎಂಬ ಕಿರುಚಿತ್ರ ಒಂದನ್ನು ತಯಾರಿಸಿದ್ದರು. ಇದರ ಟ್ರೈಲರ್ ಅನ್ನು ಫೇಸ್ ಬುಕ್ಕಲ್ಲಿ ಹಾಕಿದಾಗ ಅದನ್ನು ಮೆಚ್ಚಿಕೊಂಡವರು ಖ್ಯಾತ ನಿರ್ದೇಶಕ ಬಿ ಸುರೇಶ್. ಆಗ ಉದಯ ಟೀವಿಯಲ್ಲಿ ಬಿ. ಸುರೇಶ್ ಅವರ ಸಾರಥ್ಯದಲ್ಲಿ ಪ್ರೀತಿ ಪ್ರೇಮ ಎಂಬ ಟೆಲಿಫಿಲಂ ಸರಣಿ ನಿರ್ದೇಶನ ಮಾಡೋ ಜವಾಬ್ದಾರಿ ವಹಿಸಿದ್ದರು.

ಇಪ್ಪತ್ತಕ್ಕೂ ಹೆಚ್ಚಿನ ಟೆಲಿ ಫಿಲಂ ನಿರ್ದೇಶನ ಮಾಡಿದ ರಾಘು ಆ ನಂತರ ಬಿ. ಸುರೇಶ್ ಅವರ ನಿರ್ಮಾಣದ ಮದರಂಗಿ ಎಂಬ ಧಾರಾವಾಹಿ ನಿರ್ದೇಶನ ಮಾಡೋ ಅವಕಾಶವನ್ನೂ ಗಿಟ್ಟಿಸಿಕೊಂಡಿದ್ದರು. ಆ ನಂತರ ಅವರು ನಿರ್ದೇಶಿಸಿದ್ದು ಚೌಕಾ ಬಾರ ಎಂಬ ಕಿರು ಚಿತ್ರವನ್ನು. ಇದು ಮೊಟ್ಟ ಮೊದಲ ಬಾರಿ ಥೇಟರಿನಲ್ಲಿ ಬಿಡುಗಡೆಯಾದ ಕಿರುಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿ ರಾಜ್ಯ ಪ್ರಶಸ್ತಿ, ಸೈಮಾ ಸೇರಿದಂತೆ ನಾನಾ ಪ್ರಶಸ್ತಿಗಳಿಗೆ ಭಾಜನವಾಗಿತ್ತು.

ಸಿನಿಮಾವಲಯದಲ್ಲಷ್ಟೇ ಪರಿಚಿತರಾಗಿದ್ದ ರಾಘು ಆಕ್ಟ್ ಸಿನಿಮಾದ ನಟನೆಯಿಂದ ಸಾಮಾನ್ಯ ಜನಕ್ಕೂ ಗೊತ್ತಾಗಿದ್ದಾರೆ. ಇನ್ನು  ತಮ್ಮ ನಿರ್ದೇಶನ ಮತ್ತು ನಟನೆಯ ಮುಖಾಂತರ ಎಲ್ಲರ ಮನಸ್ಸಿನಲ್ಲಿ ಪರ್ಮನೆಂಟು ಜಾಗ ಪಡೆಯೋದೊಂದೇ ರಾಘು ಪಾಲಿನ ಕೆಲಸ!

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಭಾರತದ ಹೆಮ್ಮೆ ಸಂದೀಪ್‌ ಉನ್ನಿಕೃಷ್ಣನ್‌…

Previous article

ಅಥಿರಾ ಅಂತರಂಗ!

Next article

You may also like

Comments

Leave a reply

Your email address will not be published. Required fields are marked *