ಈಗ ಎಲ್ಲೆಡೆ ಚುನಾವಣಾ ಪ್ರಚಾರದ ಬಿಸಿಯೇರಿಕೊಂಡಿದೆ. ಇದರ ತಾಪಮಾನ ಸ್ಯಾಂಡಲ್ವುಡ್ ನಲ್ಲಿಯೂ ಕಡಿಮೆಯೇನಿಲ್ಲ. ಈಗಾಗಲೇ ದರ್ಶನ್, ಯಶ್ ಸೇರಿದಂತೆ ಒಂದಷ್ಟು ಮಂದಿ ಅಭ್ಯರ್ಥಿಗಳ ಪರವಾಗಿ ಕಣಕ್ಕಿಳಿದಿದ್ದಾರೆ. ಇದರೊಂದಿಗೇ ಯಾವ್ಯಾವ ನಟ ನಟಿಯರು ಯಾವ್ಯಾವ ಪಕ್ಷದ ಪರವಾಗಿ ಪ್ರಚಾರಕ್ಕಿಳಿಯಲಿದ್ದಾರೆಂಬ ಬಗ್ಗೆಯೂ ಜನರಲ್ಲೊಂದು ಕುತೂಹಲವಿದೆ. ಈ ಹಿನ್ನೆಲೆಯಲ್ಲಿ ನಟಿ ರಾಗಿಣಿ ಕೂಡಾ ತಮ್ಮ ರಾಜಕೀಯ ನಡೆಯ ಬಗ್ಗೆ ಸ್ಪಷ್ಟ ಸೂಚನೆಯನ್ನೇ ಕೊಟ್ಟಿದ್ದಾರೆ!
ತಾವೂ ಕೂಡಾ ರಾಜಕೀಯಕ್ಕಿಳಿಯಲು ಉತ್ಸುಕರಾಗಿರೋದಾಗಿ ಹೇಳಿಕೊಂಡಿರೋ ರಾಗಿಣಿ, ಈ ಬಾರಿಯ ಲೀಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಸೂಚಿಸುವ ಸೂಚನೆ ನೀಡಿದ್ದಾರೆ. ಅವಕಾಶ ಸಿಕ್ಕರೆ ತಕ್ಷಣವೇ ಅಖಾಡಕ್ಕಿಳಿಯುವ ಬಗ್ಗೆಯೂ ಮಾತಾಡಿದ್ದಾರೆ. ಓರ್ವ ನಟಿಯಾಗಿ ಒಂದಷ್ಟು ಜನಪ್ರಿಯತೆ ಗಳಿಸಿರುವವರು ರಾಗಿಣಿ, “ತನ್ನನ್ನು ಅಭಿಮಾನಿಸಿ ಪ್ರೀತಿಸೋ ಜನರಿಗೆ ಏನಾದರೂ ಒಳ್ಳೆಯದನ್ನು ಮಾಡಬೇಕೆಂಬ ಆಸೆ ಇದೆ. ಅದಕ್ಕಾಗಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದರೆ ತಪ್ಪೇನಿಲ್ಲ. ಆದ್ದರಿಂದಲೇ ಈ ಬಾರಿ ಪ್ರಚಾರದಿಂದಲೇ ರಾಜಕೀಯ ಯಾತ್ರೆ ಆರಂಭಿಸೋದಾಗಿ” ರಾಗಿಣಿ ಹೇಳಿಕೊಂಡಿದ್ದಾರೆ. ಒಂದು ವೇಳೆ ಬಿಜೆಪಿ ಮುಖಂಡರು ಆಹ್ವಾನಿಸಿದರೆ ರಾಗಿಣಿ ಇಷ್ಟರಲ್ಲಿಯೇ ಅಭ್ಯರ್ಥಿಗಳ ಪರವಾಗಿ ಚುನಾವಣಾ ಕಣಕ್ಕಿಳಿಯಲಿದ್ದಾರೆ. ಅತ್ತ ರಮ್ಯಾ ಕಾಂಗ್ರೆಸ್ನಲ್ಲಿ ಮಿಂಚುತ್ತಿದ್ದರೆ, ಆಕೆಯೊಂದಿಗೆ ಎಣ್ಣೆ ಸೀಗೇಕಾಯಿಯಂಥಾ ಸಂಬಂಧ ಹೊಂದಿರೋ ರಾಗಿಣಿ ಬಿಜೆಪಿ ಪಾಳೆಯ ಸೇರಿಕೊಂಡಿದ್ದಾರೆ. ಹಳೆಯ ತಕರಾರುಗಳೆಲ್ಲವೂ ಸೇರಿಕೊಂಡು ಇವರಿಬ್ಬರ ನಡುವೆ ರಾಜಕೀಯ ಕದನ ಶುರುವಾದರೂ ಅಚ್ಚರಿಯಿಲ್ಲ!
No Comment! Be the first one.