ಹತ್ತು ವರ್ಷಗಳ ಹಿಂದೆ ಈಕೆ ಯಾರೆನ್ನೋದು ಜಗತ್ತಿಗೆ ಗೊತ್ತಿರಲಿಲ್ಲ. ರಾಗಿಣಿ ಮೊದಲು ನಟಿಸಿದ್ದು ‘ಹೋಳಿ ಎನ್ನುವ ಸಿನಿಮಾದಲ್ಲಿ. ಉದ್ದಕ್ಕಿದ್ದ ಈ ಹುಡುಗಿಯನ್ನು ಕಿಚ್ಚ ಸುದೀಪ ಕರೆದು ವೀರಮದಕರಿ ಸಿನಿಮಾದಲ್ಲಿ ಛಾನ್ಸು ಕೊಡದೇ ಹೋಗಿದ್ದರೆ ಬಹುಶಃ ಈಕೆ ಸ್ಟಾರ್ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ಛಾನ್ಸೇ ಇರುತ್ತಿರಲಿಲ್ಲವೇನೋ?!

ಯಾವಾಗ ಸುದೀಪ್ ಗುರುತಿಸಿ ರಾಗಿಣಿಗೆ ಅವಕಾಶ ಕೊಟ್ಟರೋ? ಈಕೆಯ ನಸೀಬೇ ಬದಲಾಗಿಹೋಗಿತ್ತು. ತಾನು ನಟಿಸಿದ ಮೊದಲ ಸಿನಿಮಾ ಹೋಳಿ ಅಂತಾ ಹೇಳೋದನ್ನೂ ಮರೆಯುವಷ್ಟು ಅವಕಾಶಗಳು ರಾಗಿಣಿ ಪಾಲಿಗೆ ಒದ್ದೊದ್ದುಕೊಂಡು ಬಂದವು. ಗೋಕುಲ, ಶಂಕರ್ ಐಪಿಎಸ್., ಆರಕ್ಷಕ, ಶಿವ, ಬಂಗಾರಿ… ಹೀಗೆ ಕನ್ನಡದ ಸಾಕಷ್ಟು ಹೀರೋಗಳ ಜೊತೆಗೆ ರಾಗಿಣಿ ತೆರೆ ಹಂಚಿಕೊಂಡಳು. ಕಳ್ಳ ಮಳ್ಳ ಸುಳ್ಳ ಸಿನಿಮಾದ ಹಾಡೊಂದು ಈಕೆಗೆ ‘ತುಪ್ಪದ ಹುಡುಗಿ ಅಂತಾ ಹೆಸರು ತಂದುಕೊಟ್ಟಿತು.

ಒಂದು ಕಾಲಕ್ಕೆ ಮಾಲಶ್ರೀ ಮಾಡುತ್ತಿದ್ದಂತಾ ಪಾತ್ರಗಳು ರಾಗಿಣಿಯ ಪಾಲಾದವು. ವೀರ ರಣಚಂಡಿ, ನಮಸ್ತೆ ಮೇಡಂ, ರಾಗಿಣಿ ಐಪಿಎಸ್., ಹೀಗೆ ಹೀರೋಯಿನ್ ಓರಿಯಂಟೆಂಡ್ ಕಮರ್ಷಿಯಲ್ ಸಿನಿಮಾಗಳಲ್ಲಿ ರಾಗಿಣಿ ನಟಿಸಿದಳು. ಈ ನಡುವೆ ಬಾಯ್ ಫ್ರೆಂಡ್ ವಿಚಾರವಾಗಿ ಆಗಾಗ ಗದ್ದಲ ಮಾಡಿಕೊಂಡಳು. ಕೆಪಿಎಲ್ ಕ್ರಿಕೆಟ್ಟಿನ ಬಳ್ಳಾರಿ ಟಸ್ಕರ್ ತಂಡದ ಪಾಲುದಾರಿಕೆ ಪಡೆದಳು. ಚುನಾವಣೆಗೆ ನಿಲ್ಲಲಿಲ್ಲ ಅನ್ನೋದು ಬಿಟ್ಟರೆ ಕಳೆದ ಹತ್ತು ವರ್ಷಗಳಲ್ಲಿ ರಾಗಿಣಿ ನಡೆದುಬಂದದ್ದು ವರ್ಣರಂಜಿತ ದಾರಿಯಲ್ಲಿ.

ರಾಗಿಣಿಗೆ ಪ್ರತಿಯೊಂದನ್ನೂ ಹೇಗೆ ಪ್ರಚಾರಕ್ಕೆ ಬಳಸಿಕೊಳ್ಬೇಕೆಂಬ ಕಲೆ ಪಕ್ಕಾ ಗೊತ್ತಿದೆ. ಈಕೆ ದಪ್ಪಗಾಗಿ ಒಡೆಯುವ ರೇಂಜಿಗೆ ಊದಿಕೊಂಡರೂ ಸುದ್ದಿ, ಏಕಾಏಕಿ ಸಣಕಲು ಕಡ್ಡಿಯಂತೆ ಪೀಚು ಪೀಚಾದರೂ ಸುದ್ದಿಯೇ. ಮಾಧ್ಯಮಗಳು ಕೂಡಾ ಆಕೆಯ ಪ್ರತಿಭೆಗೆ ಮೀರಿದ ಬಿಲ್ಡಪ್ಪು ಕೊಟ್ಟು ಬೆಳೆಸಿದವು.

ಇಂಥ ರಾಗಿಣಿ ಈಗ ಚಿತ್ರರಂಗಕ್ಕೆ ಬಂದು ಹತ್ತು ವರ್ಷವಾಯಿತು. ಈ ಅವಧಿಯಲ್ಲಿ ಈಕೆ ಇಪ್ಪತ್ತೈದು ಸಿನಿಮಾಗಳನ್ನೂ ಪೂರೈಸಿದ್ದಾಳೆ. ಇದೇ ವಾರ ತೆರೆಗೆ ಬರುತ್ತಿರುವ ಕಾಮಿಡಿ ಕಿಂಗ್ ಶರಣ್ ಅಭಿನಯದ ‘ಅಧ್ಯಕ್ಷ ಇನ್ ಅಮೆರಿಕಾ ಸಿನಿಮಾ ರಾಗಿಣಿ ನಟಿಸಿರುವ ಇಪ್ಪತ್ತೈದನೇ ಸಿನಿಮಾ. ಯೋಗಾನಂದ್ ಮುದ್ದಾನ್ ನಿರ್ದೇಶನದ ಈ ಚಿತ್ರ ದಸರಾ ಹಬ್ಬಕ್ಕೆ ಬರುತ್ತಿರುವ ಭರ್ಜರಿ ಮನರಂಜನೆಯ ಸಿನಿಮಾವಾಗಿದೆ.

ರಾಗಿಣಿಯ ಬಗೆಗಿನ ಠೀಕೆ, ವಿಮರ್ಶೆಗಳೇನೇ ಇದ್ದರೂ, ಇಷ್ಟು ವರ್ಷಗಳ ಅವಧಿಯಲ್ಲಿ ಈಕೆ ಅಚ್ಚುಕಟ್ಟಾಗಿ ಕನ್ನಡ ಮಾತಾಡೋದನ್ನ ಕಲಿತಿದ್ದಾಳೆ. ಈ ಕಾರಣಕ್ಕಾದರೂ ರಾಗಿಣಿಗೊಮ್ಮೆ ಶುಭಾಶಯ ತಿಳಿಸೋಣ!

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಕಾಜಲ್ ಅಗರ್ವಾಲ್ ಕಾಲ್ ಸೆಂಟರ್!

Previous article

ಎಕೆ 50 ಹಿಡಿದ ತಲಾ ಅಜಿತ್

Next article

You may also like

Comments

Leave a reply

Your email address will not be published.